ನವದೆಹಲಿ,ಜು.9- ಮಹದಾಯಿ ನದಿಗೆ ಅಡ್ಡಲಾಗಿ ಕಳಸಾ ಬಂಡೂರಿ ಅಣೆಕಟ್ಟು ನಿರ್ಮಿಸಲು ರಾಜ್ಯಸರ್ಕಾರ ಕೆಲಸ ಆರಂಭಿಸಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ನಿನ್ನೆ ದೆಹಲಿಯಲ್ಲಿ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವ ಭೂಪೇಂದ್ರ ಯಾದವ್, ಜಲಶಕ್ತಿ ಸಚಿವ ಸಿ.ಆರ್.ಪಾಟೀಲ್, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್ ಜೋಷಿ, ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದೇನೆ ಎಂದು ತಿಳಿಸಿದರು.
ಪ್ರಮುಖವಾಗಿ ಕಳಸಾ ಬಂಡೂರಿ, ಮೇಕೆದಾಟು, ಕೃಷ್ಣಾ ನ್ಯಾಯಾಧಿಕರಣದ ವಿಚಾರಗಳ ಕುರಿತು ಚರ್ಚೆ ನಡೆಸಲಾಗಿದ್ದು, 11 ಸಾವಿರ ಕೋಟಿ ರೂ. ಮೊತ್ತದ ಹೊಸ ಪ್ರಸ್ತಾವನೆಗಳನ್ನು ಸಲ್ಲಿಸಿರುವುದಾಗಿ ಹೇಳಿದರು.
ಎತ್ತಿನಹೊಳೆ ಯೋಜನೆಯಡಿ ತುಮಕೂರು, ಹಾಸನದಲ್ಲಿ ಕಾಮಗಾರಿ ನಡೆಯುತ್ತಿದೆ. ಕಂದಾಯ ಇಲಾಖೆಯಿಂದ 40 ವರ್ಷಗಳ ಹಿಂದೆ ಮಂಜೂರಾಗಿದ್ದ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಪರಿಹಾರ ನೀಡಿ ಕೆಲಸ ಮುಂದುವರೆಸುವ ಹಂತದಲ್ಲಿ ಅರಣ್ಯ ಇಲಾಖೆ ತಮ ಭೂಮಿ ಎಂದು ಹಕ್ಕು ಪ್ರತಿಪಾದಿಸಿದೆ. ತಕರಾರು ಮುಂದುವರೆಯುವುದು ಬೇಡ ಎಂಬ ಕಾರಣಕ್ಕೆ ಪರ್ಯಾಯ ಭೂಮಿಯಡಿ ಸೌಹಾರ್ದಯುತ ಇತ್ಯರ್ಥಕ್ಕೆ ಪ್ರಯತ್ನಿಸಿದ್ದೇವೆ. ಅದಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿಲ್ಲ. ಸಣ್ಣಪುಟ್ಟ ತಕರಾರುಗಳನ್ನು ತೆಗೆದು ಅಡ್ಡಿಪಡಿಸುತ್ತಿದೆ. ಹಲವು ಬಾರಿ ಈ ಬಗ್ಗೆಯೇ ಮನವಿ ಮಾಡಿದ್ದೇವೆ ಎಂದರು.
ಕಳಸಾ ಬಂಡೂರಿ ಅಣೆಕಟ್ಟು ನಿರ್ಮಾಣಕ್ಕೆ ಅನುಮತಿ ಸಿಕ್ಕಿದೆ ಎಂದು ಹಿಂದಿನ ಬಿಜೆಪಿ ಸರ್ಕಾರದಲ್ಲೇ ಹೇಳಲಾಗಿತ್ತು. ಟೆಂಡರ್ ಕೂಡ ಕರೆಯಲಾಗಿತ್ತು. ಈ ನಡುವೆ ಗೋವಾ ಸರ್ಕಾರ 2023ರ ಜನವರಿ 9 ರಂದು ಕರ್ನಾಟಕಕ್ಕೆ ಶೋಕಾಸ್ ನೋಟಿಸ್ ನೀಡಿದಾಗ ಅದಕ್ಕೆ ತೀವ್ರ ಪ್ರತಿಕ್ರಿಯೆಯನ್ನು ನಮ ಸರ್ಕಾರ ನೀಡಿದೆ. ತಪ್ಪುಗಳಿದ್ದರೆ ಕೇಂದ್ರ ಸರ್ಕಾರ ಮಾರ್ಗದರ್ಶನ ಮಾಡಬಹುದು. ಒಂದು ರಾಜ್ಯ ಮತ್ತೊಂದು ರಾಜ್ಯಕ್ಕೆ ಶೋಕಾಸ್ ನೋಟಿಸ್ ನೀಡಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ನಮಗೆ ನೋಟೀಸ್ ನೀಡಲು ಗೋವಾ ಯಾರು? ಎಂದು ಇದೇ ವೇಳೆ ಪ್ರಶ್ನಿಸಿದರು.
ನೋಟೀಸ್ ಅನ್ನು ವಿರೋಧಿಸಿ ನಾವು ಸುಪ್ರೀಂಕೋರ್ಟ್ ಮೊರೆ ಹೋಗಿದ್ದೇವೆ. ಈಗ ಆ ಪ್ರಕರಣವನ್ನು ಹಿಂಪಡೆದು ಕಳಸಾ ಬಂಡೂರಿ ಅಣೆಕಟ್ಟು ಕೆಲಸವನ್ನು ಪ್ರಾರಂಭ ಮಾಡುತ್ತಿದ್ದೇವೆ. ಈ ಕಾರಣಕ್ಕೆ ಕಾನೂನು ತಜ್ಞರಿಂದ ಅಭಿಪ್ರಾಯವನ್ನು ಕೇಳಲಾಗಿದೆ. ವಾರದೊಳಗೆ ವರದಿ ಬರಲಿದ್ದು, ಅನಂತರ ಕೆಲಸ ಆರಂಭಿಸುವುದಾಗಿ ಹೇಳಿದರು.
ಕೇಂದ್ರ ಸರ್ಕಾರ ಈ ಯೋಜನೆಯನ್ನು ಕುಡಿಯುವ ನೀರಿನ ಆದ್ಯತೆ ಮೇರೆಗೆ ಪರಿಗಣಿಸಿ ಅನುಮತಿ ನೀಡಬೇಕೆಂದು ಒತ್ತಾಯಿಸುವುದಾಗಿ ತಿಳಿಸಿದರು.ಮೇಕೆದಾಟು ಅಣೆಕಟ್ಟು ನಿರ್ಮಾಣದಿಂದ ತಮಿಳುನಾಡಿಗೆ ಹೆಚ್ಚಿನ ಅನುಕೂಲವಾಗಲಿದೆ. ಈ ವಿಚಾರವಾಗಿ ಕೇಂದ್ರ ಸರ್ಕಾರ ಅಪ್ರೈಸಲ್ ವರದಿ ನೀಡಬೇಕಿದೆ.
ಅದನ್ನು ಶೀಘ್ರವೇ ಕೇಂದ್ರ ನೀರಾವರಿ ಸಮಿತಿಗೆ ಕೊಟ್ಟರೆ ರಾಜ್ಯಕ್ಕೆ ಅನುಕೂಲವಾಗಲಿದೆ. ಸುಪ್ರೀಂಕೋರ್ಟ್ ಮುಂದಿನ ಪ್ರಕರಣದಲ್ಲಿ ಕೇಂದ್ರ ಸರ್ಕಾರ ತನ್ನ ಅಭಿಪ್ರಾಯ ಮಂಡಿಸಬೇಕಿದ್ದು, ಅಲ್ಲಿ ಏನಾದರೂ ಹೇಳಲಿ ನಮಗೆ ಅಪ್ರೈಸಲ್ ವರದಿ ಮೂಲಕ ಅನುಕೂಲ ಮಾಡಿಕೊಡಿ ಎಂದು ಮನವಿ ಮಾಡಿರುವುದಾಗಿ ತಿಳಿಸಿದರು.
ಮೇಕೆದಾಟು ಯೋಜನೆಯಿಂದ 7 ಜಿಲ್ಲೆ, 29 ತಾಲ್ಲೂಕು, 6,657 ಹಳ್ಳಿ, 38 ನಗರ ಪ್ರದೇಶ ಸೇರಿ 75 ಲಕ್ಷ ಜನಸಂಖ್ಯೆಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.ಕೃಷ್ಣಾ ನ್ಯಾಯಾಧಿಕರಣದ ತೀರ್ಪು ಪ್ರಕಟಗೊಂಡು ಹತ್ತು ವರ್ಷಗಳಾಗಿವೆ. ಈವರೆಗೂ ಅಧಿಸೂಚನೆ ಇಲ್ಲದೆ ನನೆಗುದಿಗೆ ಬಿದ್ದಿದೆ. 1.40 ಲಕ್ಷ ಎಕರೆಗೆ ನೀರಾವರಿ ಕಲ್ಪಿಸಲು ರಾಜ್ಯಸರ್ಕಾರ ಯೋಜನೆಗಳನ್ನು ಆರಂಭಿಸಿದೆ. ನಮ ನೀರು ನಮ ಹಕ್ಕು. ಹೀಗಾಗಿ ನಾವು ಕೆಲಸ ಆರಂಭಿಸುತ್ತೇವೆ. ಕೇಂದ್ರ ಸರ್ಕಾರ ಆಂಧ್ರಪ್ರದೇಶ, ತೆಲಂಗಾಣ ಹಾಗೂ ಮಹಾರಾಷ್ಟ್ರದ ಜೊತೆ ಚರ್ಚೆ ನಡೆಸಿ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದರು.
ಜೊತೆಗೆ ಭದ್ರಾ ಮೇಲ್ದಂಡೆ ಯೋಜನೆಗೆ ಈ ಹಿಂದೆ ಕೇಂದ್ರ ಬಜೆಟ್‌ನಲ್ಲಿ ಭರವಸೆ ನೀಡಿದಂತೆ 5,400 ಕೋಟಿ ರೂ.ಗಳನ್ನು ಬಿಡುಗಡೆ ಮಾಡಬೇಕು. ಕೇಂದ್ರ ಸಚಿವರು ಭಾಗಶಃ ಹಣ ನೀಡುವುದಾಗಿ ಭರವಸೆ ನೀಡಿದ್ದಾರೆ. ಅದು ಪೂರ್ತಿ ಈಡೇರಿದ ಬಳಿಕವಷ್ಟೇ ನಮಗೆ ಭರವಸೆ ಬರುತ್ತದೆ. ಕೇಂದ್ರ ಸರ್ಕಾರ ಕೇಳಿರುವ ಎಲ್ಲಾ ದಾಖಲೆಗಳನ್ನು ನಾವು ಒದಗಿಸಿದ್ದೇವೆ ಎಂದು ಹೇಳಿದರು.
ಜೊತೆಗೆ ಹಿಂದಿ ಬ್ರಾಂಚ್ ಕೆನಾಲ್, ಕೃಷ್ಣಾ ಮೇಲ್ದಂಡೆ 2 ನೇ ಹಂತ, ತುಂಗಭದ್ರಾ, ಮಲಪ್ರಭಾ, ನಾರಾಯಣ ಅಣೆಕಟ್ಟು ಸೇರಿದಂತೆ 6 ಹೊಸ ಪ್ರಸ್ತಾವನೆಗಳನ್ನು ಕೇಂದ್ರಕ್ಕೆ ಸಲ್ಲಿಸಲಾಗಿದ್ದು, 11 ಸಾವಿರ ಕೋಟಿ ರೂ.ಗಳ ಅನುದಾನಕ್ಕೆ ಮನವಿ ಮಾಡಲಾಗಿದೆ. ಮೇಕೆದಾಟು ಯೋಜನೆಗೂ ಶೇ.25 ರಷ್ಟು ಆರ್ಥಿಕ ನೆರವು ನೀಡುವಂತೆ ಪ್ರಸ್ತಾವನೆ ಸಲ್ಲಿಸುವುದಾಗಿ ತಿಳಿಸಿದರು.
- ನವದೆಹಲಿಯಲ್ಲಿ MSTC ಕಾರ್ಪೊರೇಟ್ ಕಚೇರಿ ಉದ್ಘಾಟಿಸಿದ ಕೇಂದ್ರ ಸಚಿವ ಕುಮಾರಸ್ವಾಮಿ
- SHOCKING : 4ನೇ ತರಗತಿ ವಿದ್ಯಾರ್ಥಿ ಪಾಠ ಕೇಳುತ್ತಿರುವಾಗಲೇ ಹೃದಯಾಘಾತದಿಂದ ಸಾವು
- ವಾಯು ಪಡೆ ವಿಮಾನ ಪತನ, ಇಬ್ಬರು ಪೈಲೆಟ್ ಸಾವು
- ಕಳಸಾ-ಬಂಡೂರಿ ಅಣೆಕಟ್ಟು ನಿರ್ಮಾಣ ಆರಂಭ : ಡಿಕೆಶಿ
- ಕರ್ನಾಟಕದ ವಿಷಯದಲ್ಲಿ ಕೇಂದ್ರ ಸರ್ಕಾರದ ದ್ವೇಷ-ತಾರತಮ್ಯ ನೀತಿ ವಿರುದ್ಧ ಸಿಎಂ, ಡಿಸಿಎಂ ಹೋರಾಟ : ಸುರ್ಜೇವಾಲ