Saturday, July 12, 2025
Homeರಾಜ್ಯಈ ಅವಧಿಗೆ 2ನೇ ಮುಖ್ಯಮಂತ್ರಿ ಇಲ್ಲ : ಪರಂ

ಈ ಅವಧಿಗೆ 2ನೇ ಮುಖ್ಯಮಂತ್ರಿ ಇಲ್ಲ : ಪರಂ

No second Chief Minister for this period: Parameshwar

ಮೈಸೂರು,ಜು.11- ಮುಂದಿನ ಐದು ವರ್ಷಗಳ ಕಾಲ ತಾವೇ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಹೇಳಿಕೊಂಡಿದ್ದಾರೆ. ಅಲ್ಲಿಗೆ ಎರಡನೇ ಮುಖ್ಯಮಂತ್ರಿ ಈ ಅವಧಿಗೆ ಇಲ್ಲ ಎಂಬುದು ಸ್ಪಷ್ಟವಾದಂತಾಯಿತು ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದ್ದಾರೆ.

ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವಸ್ಥಾನದಲ್ಲಿ ತಾವು ರಾಜಕೀಯದ ಮಾತನಾಡಲು ಬಯಸುವುದಿಲ್ಲ. ಆದರೆ ಎಲ್ಲಾ ಬೆಳವಣಿಗೆಗಳು ಸುಖಾಂತ್ಯವಾಗುತ್ತದೆ. ಸಿದ್ದರಾಮಯ್ಯ ನಾನೇ ಐದು ವರ್ಷ ಮುಖ್ಯಮಂತ್ರಿ ಎಂದು ಹೇಳಿದ್ದಾರೆ. ಅಲ್ಲಿಗೆ ಎಲ್ಲವೂ ಸ್ಪಷ್ಟವಾದಂತಾಗಿದೆ ಎಂದರು.

ಕಾಂಗ್ರೆಸ್‌‍ನಲ್ಲಿ ಹೈಕಮಾಂಡ್‌ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ. ಸಿದ್ದರಾಮಯ್ಯ ಈ ಮೊದಲು ನಂದಿಬೆಟ್ಟದ ಭೋಗನಂದೀಶ್ವರ ದೇವಸ್ಥಾನದಲ್ಲೂ ಹೇಳಿಕೆ ನೀಡಿ 5 ವರ್ಷ ಆಡಳಿತ ಪೂರೈಸುವುದಾಗಿ ತಿಳಿಸಿದರು. ಆ ಸಂದರ್ಭದಲ್ಲಿ ನಾನೂ ಉಪಸ್ಥಿತನಿದ್ದೆ. ದೆಹಲಿಯಲ್ಲೂ ಅದನ್ನೇ ಪುನರುಚ್ಚರಿಸಿದ್ದಾರೆ ಎಂದು ಹೇಳಿದರು.

ಎರಡೂವರೆ ವರ್ಷಗಳ ಅಧಿಕಾರ ಹಂಚಿಕೆ ಕುರಿತು ಯಾರೂ ಹೇಳಿಲ್ಲ. ಶಾಸಕಾಂಗ ಸಭೆಯಲ್ಲೂ ಈ ಬಗ್ಗೆ ಚರ್ಚೆಯಾಗಿಲ್ಲ. ಹೈಕಮಾಂಡ್‌ ನಾಯಕರು ಯಾವುದೇ ಸ್ಪಷ್ಟನೆಗಳನ್ನು ಈ ಸಂಬಂಧಪಟ್ಟಂತೆ ನೀಡಿಲ್ಲ ಎಂದರು.

ಆಷಾಢ ಶುಕ್ರವಾರ ಬಹಳ ಪವಿತ್ರವಾದುದು ಎಂಬ ಪ್ರತೀತಿಯಿದೆ. ಅದಕ್ಕಾಗಿ ಕುಟುಂಬ ಸಮೇತರಾಗಿ ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದಿದ್ದೇನೆ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಬೇಡಿಕೊಂಡಿದ್ದೇನೆ. ಅದರಲ್ಲಿ ನನಗೂ ಒಳ್ಳೆಯದಾಗಲಿ ಎಂದು ಕೇಳಿಕೊಂಡಿದ್ದೇನೆ ಎಂದು ಮಾರ್ಮಿಕವಾಗಿ ಹೇಳಿದರು.

ರಾಜ್ಯದಲ್ಲಿ ಉತ್ತಮವಾಗಿ ಮಳೆ-ಬೆಳೆಯಾಗಲಿ ಎಂದು ಪ್ರಾರ್ಥಿಸಿದ್ದೇನೆ. ಮಳೆಬೆಳೆ ವ್ಯತ್ಯಾಸಗಳಾದರೆ ಸಮಸ್ಯೆಗಳಾಗುತ್ತವೆ. ಸರ್ಕಾರಕ್ಕೂ ಸವಾಲಿನ ಸನ್ನಿವೇಶ ಎದುರಾಗುತ್ತದೆ. ಹೀಗಾಗಿ ಒಳ್ಳೆಯದಾಗಲಿ ಎಂದು ಬೇಡಿಕೊಂಡಿದ್ದೇನೆ ಎಂದರು.

RELATED ARTICLES

Latest News