ಬೆಂಗಳೂರು,ಜು.11- ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯನವರಿಗೆ ಹೆಚ್ಚು ಮಣೆ ಹಾಕುತ್ತಿರುವು ದರಿಂದ ನಿರಾಶರಾಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಯಾವುದೇ ಸದ್ದು ಮಾಡದೇ ದೆಹಲಿಯಿಂದ ಬೆಂಗಳೂರಿಗೆ ಹಿಂತಿರುಗಿದ್ದಾರೆ.
ಮೂರು ದಿನಗಳ ದೆಹಲಿ ಪ್ರವಾಸದ ವೇಳೆ ನಾನಾ ರೀತಿಯ ಬೆಳವಣಿಗೆಗಳಾದವು. ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಿನ 5 ವರ್ಷ ತಾವೇ ಅಧಿಕಾರದಲ್ಲಿ ಮುಂದುವರೆಯುವುದಾಗಿ ಹೇಳುವುದಕ್ಕಷ್ಟೇ ಸೀಮಿತವಾಗದೆ, ಡಿ.ಕೆ.ಶಿವಕುಮಾರ್ ಅವರಿಗೆ ಹೆಚ್ಚಿನ ಶಾಸಕರ ಬೆಂಬಲ ಇಲ್ಲ ಎಂದು ಹೇಳಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಸಿದ್ದರಾಮಯ್ಯ ಅವರ ಬೆಂಬಲಿಗರಾದ ರಾಜಣ್ಣ ಅವರು ಸೆಪ್ಟೆಂಬರ್ ಕ್ರಾಂತಿಯ ಬಗ್ಗೆ ಬಹಿರಂಗ ಹೇಳಿಕೆ ನೀಡುವ ಮೂಲಕ ಪಕ್ಷದಲ್ಲಿ ಗೊಂದಲದ ವಾತಾವರಣ ಸೃಷ್ಟಿಸಿದರು. ಆನಂತರದ ಬೆಳವಣಿಗೆಯಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ, ನಾಯಕತ್ವದ ಬದಲಾವಣೆಯಂತಹ ಚರ್ಚೆಗಳು ಆರಂಭಗೊಂಡವು.ಸಹಜವಾಗಿಯೇ ಡಿಕೆಶಿ ಅವರ ಕೆಲ ಬೆಂಬಲಿಗ ಶಾಸಕರು ಮುಖ್ಯಮಂತ್ರಿ ಹುದ್ದೆಯ ಬದಲಾವಣೆ ಸಾಧ್ಯತೆ ಬಗ್ಗೆ ಚರ್ಚೆಯಲ್ಲಿ ಭಾಗವಹಿಸಿದ್ದರು.
ಇದು ವಿಪರೀತಕ್ಕೆ ಹೋದಾಗ ಹೈಕಮಾಂಡ್ ಮಧ್ಯಪ್ರವೇಶಿಸಿತ್ತು. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಬೆಂಗಳೂರಿಗೆ ಆಗಮಿಸಿ ಶಾಸಕರ ಅಭಿಪ್ರಾಯ ಸಂಗ್ರಹಿಸಿದ್ದರು. ಅದರ ವರದಿಯೊಂದಿಗೆ ದೆಹಲಿಗೆ ತೆರಳಿದ ಅವರು ಅಲ್ಲಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸಿದರು. ಇತ್ತ ಬೆಂಗಳೂರಿನಲ್ಲಿ ಹಲವು ಸಚಿವರು ಮಲ್ಲಿಕಾರ್ಜುನ ಖರ್ಗೆಯವರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿರುವ ದಿಢೀರ್ ಬೆಳವಣಿಗೆ ಅನುಮಾನ ಹುಟ್ಟಿಸಿತ್ತು.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ ಎಂಬುದಕ್ಕೆ ಯಾವುದೇ ತಕರಾರುಗಳಿರಲಿಲ್ಲ. ಖುದ್ದು ಡಿಕೆಶಿಯವರೇ ನನಗೆ ಬೇರೆ ಆಯ್ಕೆಗಳೇನಿವೆ ಎಂದು ಹೇಳುವ ಮೂಲಕ ರಾಜಕೀಯ ರಣರಂಗದಲ್ಲಿ ಶಸ್ತ್ರ ತ್ಯಾಗ ಮಾಡಿದ್ದರು. ಆದರೂ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಬಲಾಬಲದ ಬಗ್ಗೆ ಪ್ರಶ್ನೆ ಮಾಡುವ ಮೂಲಕ ರಾಜಕೀಯವಾಗಿ ಸವಾಲೆಸೆದಂತಾಗಿದೆ.
ಮುಖ್ಯಮಂತ್ರಿಯವರ ಹೇಳಿಕೆಗೆ ಡಿಕೆಶಿಯವರ ಪರಮಾಪ್ತ ಶಾಸಕರಾದ ಬಸವರಾಜ ಶಿವಗಂಗ ಸೂಕ್ಷ್ಮ ಸ್ವರೂಪದ ತಿರುಗೇಟು ನೀಡಿದ್ದಾರೆ.ಶಾಸಕರ್ಯಾರೂ ಕೈ ಎತ್ತಿ, ಮತ ಹಾಕಿ ಬೆಂಬಲ ಸೂಚಿಸಿಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರೆಯುವುದರ ಬಗ್ಗೆ ನಮಗೆ ಅಭ್ಯಂತರವಿಲ್ಲ. ಆದರೆ ಡಿಕೆಶಿ ಅವರಿಗೆ ಸಂಖ್ಯಾಬಲ ಇಲ್ಲ ಎಂದು ಹೇಳಿರುವುದು ಸರಿಯಲ್ಲ ಎಂದಿದ್ದಾರೆ.
ಈ ರೀತಿಯ ಹೇಳಿಕೆಗಳು ಡಿ.ಕೆ.ಶಿವಕುಮಾರ್ ಬೆಂಬಲಿಗರನ್ನು ರೊಚ್ಚಿಗೇಳುವಂತೆ ಮಾಡಿವೆ. ಸಿದ್ದರಾಮಯ್ಯ ಮತ್ತು ಅವರ ಬೆಂಬಲಿಗರು ಯಾವುದೇ ರೀತಿಯ ಹೇಳಿಕೆ ನೀಡಿದರೂ ಹೈಕಮಾಂಡ್ ಅದಕ್ಕೆ ಪ್ರತಿಕ್ರಿಯೆ ನೀಡದೇ ಬೆಂಬಲಿಸುತ್ತಿದೆ. ಡಿ.ಕೆ.ಶಿವಕುಮಾರ್ ಬೆಂಬಲಿಗರು ಮಾತನಾಡಿದರೆ ಪಕ್ಷಕ್ಕೆ ಹಾನಿಯಾಗುತ್ತದೆ ಎಂದು ಆಕ್ಷೇಪಿಸಲಾಗುತ್ತಿದೆ. ಈ ಕಾರಣಕ್ಕೆ ಡಿ.ಕೆ.ಶಿವಕುಮಾರ್ ಒಳಗೊಳಗೇ ಅಸಮಾಧಾನದಿಂದ ಕುದಿಯುತ್ತಿದ್ದು, ದೆಹಲಿಯಲ್ಲಿದ್ದರೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧಪಕ್ಷದ ನಾಯಕ ರಾಹುಲ್‌ಗಾಂಧಿಯವರನ್ನು ಭೇಟಿ ಮಾಡದೇ ಬೆಂಗಳೂರಿಗೆ ಮರಳಿದ್ದಾರೆ.
ಸಿದ್ದರಾಮಯ್ಯ ನಿನ್ನೆ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಆದರೆ ಡಿ.ಕೆ.ಶಿವಕುಮಾರ್ ಪ್ರಿಯಾಂಕ ಗಾಂಧಿಯವರನ್ನು ಹೊರತುಪಡಿಸಿದರೆ ವರಿಷ್ಠ ಮಂಡಳಿಯ ನಾಯಕರನ್ನು ಮಾತನಾಡಿಸದೆ ತಮ ಪಾಡಿಗೆ ತಾವು ವಾಪಸ್ ಆಗಿರುವುದು ಕಾಂಗ್ರೆಸ್‌ನಲ್ಲಿ ಯಾವುದೂ ಸರಿ ಇಲ್ಲ ಎಂಬ ಚರ್ಚೆಗಳಿಗೆ ಇಂಬು ನೀಡಿದೆ.ಬಹಿರಂಗವಾಗಿ ತೋರಿಸಿಕೊಂಡು ಅಶಿಸ್ತು ಹೆಚ್ಚಲು ಕಾರಣವಾಗಬಾರದು ಎಂಬ ಕಾರಣಕ್ಕೆ ಡಿ.ಕೆ.ಶಿವಕುಮಾರ್ ಒಳಗೊಳಗೇ ತಮದೇ ಆದ ಕಾರ್ಯತಂತ್ರ ರೂಪಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
- ದಾವಣಗೆರೆ : ಸಾಲ ತೀರಿಸಲಾಗದೆ ರೈಲಿಗೆ ತಲೆಕೊಟ್ಟ ತಾಯಿ -ಮಗಳು
- ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ನಾಯಕನ ಹತ್ಯೆ
- ಸಿಎಂ-ಡಿಸಿಎಂ ಕುರ್ಚಿ ಕಿತ್ತಾಟದಲ್ಲಿ ಬಡವಾದ ಕಾರ್ಯಕರ್ತರು
- ಸಂಚಾರ ನಿಯಮ ಉಲ್ಲಂಘಿಸಿದ 10 ಶಾಲಾ ವಾಹನಗಳ ಜಪ್ತಿ
- ಮನಗೂಳಿ ಕೆನರಾ ಬ್ಯಾಂಕ್ ಕಳ್ಳತನ ಪ್ರಕರಣ : 15 ಮಂದಿ ಸೆರೆ, 39.26 ರೂ.ಕೋಟಿ ಮೌಲ್ಯದ ನಗದು, ಆಭರಣ ಜಪ್ತಿ