Sunday, July 13, 2025
Homeರಾಜ್ಯಕೆಲವೇ ದಿನಗಳಲ್ಲಿ ಆಸ್ಟ್ರೇಲಿಯಾ, ಕೆನಡಾ ದೇಶಗಳಿಗೂ ನಂದಿನಿ ತುಪ್ಪ ಪೂರೈಕೆ

ಕೆಲವೇ ದಿನಗಳಲ್ಲಿ ಆಸ್ಟ್ರೇಲಿಯಾ, ಕೆನಡಾ ದೇಶಗಳಿಗೂ ನಂದಿನಿ ತುಪ್ಪ ಪೂರೈಕೆ

Nandini ghee to be supplied to Australia, Canada in a few days

ಮೈಸೂರು,ಜು.12- ದುಬೈ, ಸೌದಿಅರೇಬಿಯಾಕ್ಕೆ ಈಗಾಗಲೇ ನಂದಿನಿ ತುಪ್ಪ ಮಾರಾಟ ಮಾಡುತ್ತಿದ್ದು, ಕೆಲವೇ ದಿನಗಳಲ್ಲಿ ಆಸ್ಟ್ರೇಲಿಯಾ, ಕೆನಡಾ ದೇಶಗಳಿಗೂ ಪೂರೈಸಲಾಗುವುದು. ಆಗಸ್ಟ್‌ನಲ್ಲಿ ಅಲ್ಲಿ ನಡೆಯುವ ಉತ್ಸವಕ್ಕೆ 3 ಸಾವಿರ ಟನ್‌ ತುಪ್ಪಕ್ಕೆ ಬೇಡಿಕೆ ಬಂದಿದೆ ಎಂದು ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟದ (ಕೆಎಂಎಫ್‌) ವ್ಯವಸ್ಥಾಪಕ ನಿರ್ದೇಶಕ ಬಿ.ಶಿವಸ್ವಾಮಿ ತಿಳಿಸಿದರು.

ಮೈಸೂರು ಜಿಲ್ಲಾ ಸಹಕಾರಿ ಹಾಲು ಒಕ್ಕೂಟ(ಮೈಮುಲ್‌‍)ದಲ್ಲಿ ಜಿಲ್ಲಾ ಒಕ್ಕೂಟಗಳ ಅಧಿಕಾರಿಗಳ ಸಭೆಯಲ್ಲಿ ನಂದಿನಿ ತುಪ್ಪದ ವಿನೂತನ ಪ್ಯಾಕೆಟ್‌ ಬಿಡುಗಡೆ ಮಾಡಿದ ನಂತರ ಅವರು ಮಾತನಾಡಿದರು.

ರಾಜ್ಯದಿಂದ 2 ಸಾವಿರ ಮೆಟ್ರಿಕ್‌ ಟನ್‌ ತುಪ್ಪವನ್ನು ತಿರುಪತಿಯ ಟಿಟಿಡಿಗೆ ಪೂರೈಸಲಾಗಿದೆ. ಇನ್ನೂ 1,500 ಟನ್‌ ಬೇಡಿಕೆ ಇದ್ದು, ಅದನ್ನೂ ಪೂರೈಸಲಾಗುವುದು. ಬೇಡಿಕೆಯ ಅನುಸಾರವಾಗಿ ಕಳುಹಿಸಲಾಗುತ್ತಿದೆ. ತಿರುಪತಿಯ ಲಡ್ಡು ಪರಿಶುದ್ಧತೆ ಹಾಗೂ ರುಚಿಗೆ ನಂದಿನಿಯೇ ಕಾರಣ ಎಂದು ನಮಲ್ಲಿ ಬೇಡಿಕೆ ಸಲ್ಲಿಸುತ್ತಿದ್ದಾರೆ ಎಂದರು.

ದೇವಾಲಯಗಳಿಗೆ ಪೂರೈಕೆ :
ಕೇರಳ, ತಮಿಳುನಾಡು, ಆಂಧ್ರಪ್ರದೇಶಗಳಲ್ಲೂ ನಂದಿನಿ ತುಪ್ಪ ಮಾರಾಟ ಮಾಡುತ್ತಿದ್ದೇವೆ. ಮಹದೇಶ್ವರ ದೇವಸ್ಥಾನ, ಚಾಮುಂಡೇಶ್ವರಿ ದೇಗುಲಕ್ಕೂ ಬೇಡಿಕೆಗೆ ಅನುಗುಣವಾಗಿ ಪೂರೈಸುತ್ತಿದ್ದೇವೆ. ಮುಜರಾಯಿ ಇಲಾಖೆಗೆ ಒಳಪಡುವ ಎ, ಬಿ ಗ್ರೇಡ್‌ ದೇವಾಲಯಗಳಲ್ಲಿ ದಾಸೋಹ, ಪ್ರಸಾದಕ್ಕೆ ನಂದಿನಿ ತುಪ್ಪವನ್ನೇ ಬಳಸುವಂತೆ ಸರ್ಕಾರ ಆದೇಶ ಹೊರಡಿಸಿದೆ.

ಹೀಗಾಗಿ, ಯಾವೆಲ್ಲಾ ದೇವಾಲಯಗಳಿಂದ ಬೇಡಿಕೆ ಬಂದರೂ ಪೂರೈಸಲಾಗುವುದು. ಸದ್ಯ ನಮಲ್ಲಿ 3 ಸಾವಿರ ಮೆಟ್ರಿಕ್‌ ಟನ್‌ ತುಪ್ಪ ಸಿದ್ದಪಡಿಸುತ್ತಿದ್ದು, ಅಷ್ಟನ್ನೂ ಮಾರುತ್ತಿದ್ದೇವೆ ಎಂದು ತಿಳಿಸಿದರು. ರಾಜ್ಯದಲ್ಲಿ 1.50 ಕೋಟಿ ಲೀಟರ್‌ ಹಾಲು ರಾಜ್ಯದಲ್ಲಿ ಉತ್ಪಾದನೆ ಆಗುತ್ತಿದ್ದು, 50ಲಕ್ಷ ಲೀಟರ್‌ ನೇರವಾಗಿ ಮಾರಾಟವಾಗುತ್ತಿದೆ.

ಕ್ಷೀರಭಾಗ್ಯ ಯೋಜನೆಗಾಗಿ 24 ಲಕ್ಷ ಲೀಟರ್‌ ಹಾಲನ್ನು ಪುಡಿಯಾಗಿ ಪರಿವರ್ತಿಸಿ, ಅದರ ಕಬ್ಬಿಣದ ಅಂಶವನ್ನು ತುಪ್ಪವಾಗಿ ಬಳಸಿಕೊಳ್ಳುತ್ತಿದ್ದೇವೆ. ಹಾಲಿನ ಪುಡಿಯನ್ನೂ ಮಾರಿ ಸೂಕ್ತ ನಿರ್ವಹಣೆ ಮಾಡುತ್ತಿದ್ದೇವೆ ಎಂದು ಹೇಳಿದರು.

ಕ್ಯೂ ಆರ್‌ ಕೋಡ್‌ ಒಳಗೊಂಡ ನಂದಿನಿ ತುಪ್ಪದ ನೂತನ ಪ್ಯಾಕೆಟ್‌ಗಳನ್ನು ಬಿಡುಗಡೆ ಮಾಡಲಾಯಿತು. ಇದರ ಮೇಲೆ ಹಾಲೋಗ್ರಾಂ ಮುದ್ರಿಸಲಾಗಿದೆ. ಕ್ಯೂ ಆರ್‌ ಕೋಡ್‌ ಸ್ಕ್ಯಾನ್‌ ಮಾಡಿದರೆ ತಯಾರಿಸಿದ ದಿನಾಂಕ, ಯಾವ ದಿನಾಂಕದವರೆಗೆ ಬಳಸಬಹುದು ಎಂಬಿತ್ಯಾದಿ ಮಾಹಿತಿ ದೊರೆಯುತ್ತದೆ. 500 ಗ್ರಾಂ. ಮತ್ತು 1 ಲೀಟರ್‌ ಪ್ಯಾಕೆಟ್‌ ವಿನ್ಯಾಸ ಬದಲಾಗಿದೆ. ಪ್ರಮಾಣ ಹಾಗೂ ದರದಲ್ಲಿ ಯಾವುದೇ ವ್ಯತ್ಯಾಸ ಮಾಡಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಮಾರುಕಟ್ಟೆ ನಿರ್ದೇಶಕ ರಘುನಂದನ್‌, ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

RELATED ARTICLES

Latest News