Saturday, July 12, 2025
Homeರಾಜ್ಯಪಾಲಿಕೆ ನೌಕರರ ಬೇಡಿಕೆ ಈಡೇರಿಸಿ ಇಲ್ಲವೇ ಅಧಿಕಾರ ಬಿಟ್ಟು ತೊಲಗಿ : ಬಿಜೆಪಿ

ಪಾಲಿಕೆ ನೌಕರರ ಬೇಡಿಕೆ ಈಡೇರಿಸಿ ಇಲ್ಲವೇ ಅಧಿಕಾರ ಬಿಟ್ಟು ತೊಲಗಿ : ಬಿಜೆಪಿ

Govt must Fulfill the demands of the corporation employees

ಬೆಂಗಳೂರು,ಜು.12– ಕಳೆದ ಐದು ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ರಾಜ್ಯದ ಮಹಾನಗರ ಪಾಲಿಕೆ ನೌಕರರ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಾಗದಿದ್ದರೆ ತಕ್ಷಣವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರ ಬಿಟ್ಟು ತೊಲಗಲಿ ಎಂದು ಪ್ರತಿಪಕ್ಷ ಬಿಜೆಪಿ ಒತ್ತಾಯಿಸಿದೆ. ಈ ಸಂಬಂಧ ರಾಜ್ಯಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಆಶೋಕ್‌ ಅವರು ಪ್ರತ್ಯೇಕವಾಗಿ ಎಕ್ಸ್ ನಲ್ಲಿ ಪೋಸ್ಟ್‌ನಲ್ಲಿ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.

ಐದು ವರ್ಷ ನಾನೇ ಸಿಎಂ ಎಂದು ಹಳ್ಳಿಯಿಂದ ದಿಲ್ಲಿವರೆಗೆ ಹಾದಿಬೀದಿಯಲ್ಲಿ ಬೊಬ್ಬೆ ಹೊಡೆಯುವ ಸಿಎಂ ಸಿದ್ದರಾಮಯ್ಯ ಅವರಿಗೆ ರಾಜ್ಯಾದ್ಯಂತ 10 ಪಾಲಿಕೆಗಳ 25,000ಕ್ಕೂ ಹೆಚ್ಚು ಸಿಬ್ಬಂದಿಗಳು 5 ದಿನಗಳಿಂದ ಮಾಡುತ್ತಿರುವ ಮುಷ್ಕರ ಕಣ್ಣಿಗೆ ಕಾಣುತ್ತಿಲ್ಲ, ಕಿವಿಗೆ ಬೀಳುತ್ತಿಲ್ಲ ಎಂದು ಆರ್‌.ಅಶೋಕ್‌ ಟೀಕಿಸಿದ್ದಾರೆ.

ಕುರ್ಚಿ ಕಿತ್ತಾಟದಲ್ಲಿ, ಬಣ ಬಡಿದಾಟದಲ್ಲಿ ಸಂಪೂರ್ಣವಾಗಿ ಮೈಮರೆತಿರುವ ಕಾಂಗ್ರೆಸ್‌‍ ಸರ್ಕಾರದ ಯಾವ ಮಂತ್ರಿಗಳೂ ಇದುವರೆಗೂ ಪ್ರತಿಭಟನಾನಿರತ ಪಾಲಿಕೆ ಸಿಬ್ಬಂದಿಗಳನ್ನು ಭೇಟಿ ಮಾಡುವ ಗೋಜಿಗೇ ಹೋಗಿಲ್ಲ.ಸಿದ್ದರಾಮಯ್ಯ ಅವರೇ, ಊಟಕ್ಕಿಲ್ಲದ ಉಪ್ಪಿನಕಾಯಿ ಎಂಬಂತೆ ಅಧಿಕಾರವಿಲ್ಲದ ಕುರ್ಚಿಯಲ್ಲಿ ಎಷ್ಟು ದಿನ ಅಂಟಿಕೊಂಡು ಕೂರುತ್ತೀರಿ ಸ್ವಾಮಿ? ರಾಜೀನಾಮೆ ಕೊಟ್ಟು ಹೊರಡಿ. ಒಂದು ಸುಭದ್ರ, ಸುಸ್ಥಿರ, ಜನಪರ ಆಡಳಿತ ಕೊಡಬಲ್ಲ ಬಲಿಷ್ಠ ಮುಖ್ಯಮಂತ್ರಿಗಾಗಿ ಕನ್ನಡಿಗರು ಕಾಯುತ್ತಿದ್ದಾರೆ. ರಾಜೀನಾಮೆ ಕೊಟ್ಟು ಕನ್ನಡಿಗರ ಆಶಯ ಈಡೇರಿಸಿ ಎಂದು ಒತ್ತಾಯಿಸಿದ್ದಾರೆ.

ಇನ್ನು ರಾಜ್ಯಾಧ್ಯಕ್ಷ ವಿಜೆಯೇಂದ್ರ ಕೂಡ ಪೋಸ್ಟ್‌ ಮಾಡಿದ್ದು, ರಾಜ್ಯದ 10 ಮಹಾನಗರ ಪಾಲಿಕೆಗಳು ಸ್ಥಬ್ಧವಾಗಿ ಜನಜೀವನ ಅಸ್ತವ್ಯಸ್ತಗೊಳ್ಳುತ್ತಿದ್ದರೂ ನಿಷ್ಕ್ರಿಯಗೊಂಡಿರುವ ಕಾಂಗ್ರೆಸ್‌‍ ಸರ್ಕಾರ ಕಣ್ಣು, ಕಿವಿ ಮುಚ್ಚಿಕೊಂಡು ಮೊಂಡುತನ ಹಾಗೂ ಹೊಣೆಗೇಡಿತನ ಪ್ರದರ್ಶಿಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

30 ಸಾವಿರ ನೌಕರರು ತಮ ನ್ಯಾಯಯುತ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಲು ರಾಜ್ಯ ಸರ್ಕಾರದ ತಾರತಮ್ಯ ನೀತಿಯೇ ಕಾರಣ. ನಗರ ಪಾಲಿಕೆ ನೌಕರರ ನ್ಯಾಯಯುತ ಬೇಡಿಕೆಗೆ ಈ ಕೂಡಲೇ ಸರ್ಕಾರ ಸ್ಪಂದಿಸಿ ಮುಷ್ಕರ ಸ್ಥಗಿತಗೊಳ್ಳುವಂತಾಗಲು ಮುಖ್ಯಮಂತ್ರಿಗಳು ಜವಾಬ್ದಾರಿಯ ನಡೆ ಅನುಸರಿಸಬೇಕೆಂದು ಒತ್ತಾಯಿಸಿದ್ದಾರೆ.

ಅನಿರ್ದಿಷ್ಟಾವಧಿಯವರೆಗೆ ನಡೆಯುತ್ತಿರುವ ನೌಕರರ ಹೋರಾಟ ಮುಂದುವರೆದಲ್ಲಿ ಪಾಲಿಕೆಗಳ ವ್ಯಾಪ್ತಿಯ ನಗರಗಳ ಸ್ಥಿತಿ ಕಲ್ಪಿಸಿಕೊಳ್ಳಲೂ ಸಾಧ್ಯವಾಗದ ರೀತಿಯಲ್ಲಿ ಅಸ್ತವ್ಯಸ್ತಗೊಳ್ಳಲಿದೆ, ಸ್ವಚ್ಛತೆ ಸೇರಿದಂತೆ ದೈನಂದಿನ ಮೂಲಭೂತ ಸೌಕರ್ಯಗಳು ಹಾಗೂ ಸ್ಥಳೀಯ ಸಂಸ್ಥೆಗಳ ಆಡಳಿತಾತಕ ಸೇವೆ ದೊರೆಯದೇ ಜನ ಸಂಕಷ್ಟಕ್ಕೀಡಾಗಲಿದ್ದಾರೆ, ಈಗಾಗಲೇ ನಾಗರಿಕರಿಗೆ ಬಿಸಿ ತಟ್ಟುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಒಂದು ಕಣ್ಣಿಗೆ ಬೆಣ್ಣೆ-ಮತ್ತೊಂದು ಕಣ್ಣಿಗೆ ಸುಣ್ಣ ಎನ್ನುವ ರೀತಿಯಲ್ಲಿ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು, ಸಿಬ್ಬಂದಿ ಸಮೂಹ ಹಾಗೂ ಸರ್ಕಾರಿ ನೌಕರರ ನಡುವೆ ಸವಲತ್ತು ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಅನುಸರಿಸಿರುವ ತಾರತಮ್ಯ ನೀತಿಯನ್ನು ಯಾರೂ ಒಪ್ಪಲು ಸಾಧ್ಯವಿಲ್ಲ. ಪಾಲಿಕೆ ಸಿಬ್ಬಂದಿಗಳ ನ್ಯಾಯಯುತ ಬೇಡಿಕೆಗಳನ್ನು ಈ ಕೂಡಲೇ ಈಡೇರಿಸುವುದು ಸರ್ಕಾರದ ನೈತಿಕ ಜವಾಬ್ದಾರಿಯಾಗಿದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್‌‍ ಸರ್ಕಾರದಲ್ಲಿ ಮುಖ್ಯಮಂತ್ರಿ ಸ್ಥಾನದ ಬಡಿದಾಟದಲ್ಲಿ ಈಗಾಗಲೇ ವಿಧಾನಸೌಧ ಬಹುತೇಕ ಬಣಗುಡುತ್ತಿದೆ, ಇದರ ಪರಿಣಾಮದಿಂದಾಗಿ ಸರ್ಕಾರದ ಆಡಳಿತ ವ್ಯವಸ್ಥೆಯೂ ನಿದ್ದೆಗೆ ಜಾರಿದೆ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿಯ ಕೆಲಸಗಳು ತಲೆ ಎತ್ತಿ ವರ್ಷಗಳೇ ಕಳೆಯುತ್ತಿದೆ, ಬೆಲೆ ಏರಿಕೆಯ ತತ್ತರದಿಂದ ಹಾಗೂ ಸರ್ಕಾರಿ ಕೆಲಸಗಳು ಸುಲಲಿತವಾಗಿ ಸಾಗದೇ ಜನಸಾಮಾನ್ಯರು ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ.

ನಗರ ಪಾಲಿಕೆಯಂತಹ ಸ್ಥಳೀಯ ಸಂಸ್ಥೆಗಳೂ ಕೂಡ ಸ್ಥಗಿತಗೊಂಡರೆ ರಾಜ್ಯದಲ್ಲಿ ಅರಾಜಕತೆ ತಾಂಡವವಾಡುವುದರಲ್ಲಿ ಅನುಮಾನ ಕಾಣುತ್ತಿಲ್ಲ. ಈ ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಮೊದಲು ನಗರ ಪಾಲಿಕೆ ನೌಕರರ ಬೇಡಿಕೆ ಈಡೇರಿಸಿ ನಗರ ಪಾಲಿಕೆಗಳ ಆಡಳಿತ ಸಹಜ ಸ್ಥಿತಿಗೆ ಮರಳುವಂತಾಗಲು ಕ್ರಮವಹಿಸಲಿ ಎಂದು ಆಗ್ರಹಿಸಿದ್ದಾರೆ.

RELATED ARTICLES

Latest News