Sunday, July 13, 2025
Homeರಾಜ್ಯರಾಜ್ಯದಲ್ಲಿ ಮತ್ತೆ ಮಳೆ ಹೆಚ್ಚಾಗುವ ಮುನ್ಸೂಚನೆ

ರಾಜ್ಯದಲ್ಲಿ ಮತ್ತೆ ಮಳೆ ಹೆಚ್ಚಾಗುವ ಮುನ್ಸೂಚನೆ

Rainfall forecast

ಬೆಂಗಳೂರು, ಜು.12-ಹವಾಮಾನದಲ್ಲಿ ಪದೇ ಪದೇ ಉಂಟಾಗಿರುವ ಬದಲಾವಣೆಯಿಂದಾಗಿ ರಾಜ್ಯದಲ್ಲಿ ಮಳೆ ಪ್ರಮಾಣ ಹೆಚ್ಚಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗುತ್ತಿದೆ. ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಕೆಲವು ಕಡೆಗಳಲ್ಲಿ ಭಾಗಶಃ ವ್ಯಾಪಕ ಪ್ರಮಾಣದ ಮಳೆಯಾಗಿದೆ.

ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ಮಧ್ಯಾಹ್ನ ಆರಂಭಗೊಂಡ ಮಳೆಯು ಸಂಜೆಯವರೆಗೂ ಆಗಾಗ್ಗೆ ಬರುತ್ತಿತ್ತು. ಸಂಜೆಯ ನಂತರ ಬಿಡುವು ಕೊಟ್ಟಿದ್ದ ಮಳೆ ಇಂದು ಮಧ್ಯಾಹ್ನ ಮತ್ತೆ ಜಿಟಿಜಿಟಿ ಮಳೆ ಆರಂಭಗೊಂಡು ಜನಜೀವನ ಅಸ್ತವ್ಯಸ್ತಗೊಳಿಸಿತು. ಮೋಡ ಕವಿದ ವಾತಾವರಣ ಉಂಟಾಗಿ ಬಿಟ್ಟು ಬಿಟ್ಟು ಬರುತ್ತಿದ್ದ ಹಗುರ ಮಳೆಯಿಂದ ವಾಹನ ಸವಾರರಿಗೆ ಹಾಗೂ ಜನರ ದೈನಂದಿನ ಕೆಲಸಗಳಿಗೆ ಅಡ್ಡಿಯುಂಟಾಯಿತು.

ಹವಾಮಾನ ಮುನ್ಸೂಚನೆ ಪ್ರಕಾರ ನೈರುತ್ಯ ಮುಂಗಾರು ಚೇತರಿಸಿಕೊಂಡಿದ್ದು, ಮಳೆಯ ಪ್ರಮಾಣ ಹೆಚ್ಚಾಗಲಿದೆ. ಮುಂದಿನ ವಾರದಿಂದ ರಾಜ್ಯದ ಬಹುತೇಕ ಕಡೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆಗಳಿವೆ. ಮತ್ತೊಂದು ಸುತ್ತಿನ ಮಳೆಯಾಗುವ ಲಕ್ಷಣಗಳಿವೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ನಿರಂತರ ಮಳೆಯಾಗಿ ಅತಿವೃಷ್ಟಿ ಉಂಟಾಗಿದ್ದ ಕರಾವಳಿ ಹಾಗೂ ಮಲೆನಾಡು ಭಾಗದ ಜಿಲ್ಲೆಗಳಲ್ಲೂ ಕಳೆದ ಮೂರು ದಿನಗಳಿಂದ ಮಳೆ ಕಡಿಮೆಯಾಗಿತ್ತು. ಆದರೆ, ಸತತ ಒಣ ಹವೆಯಿಂದಾಗಿ ಮಳೆ ಕೊರತೆ ಉಂಟಾಗಿದ ರಾಜ್ಯದ ಒಳನಾಡಿನ ಹಲವೆಡೆ ನಿನ್ನೆಯಿಂದ ಹಗುರದಿಂದ ಸಾಧಾರಣ ಮಳೆಯಾಗುತ್ತಿದೆ.

RELATED ARTICLES

Latest News