Home ಇದೀಗ ಬಂದ ಸುದ್ದಿ ಗ್ಯಾರಂಟಿ ಸರ್ಕಾರದಿಂದ ಶಕ್ತಿಯೋಜನೆ ಯಶಸ್ಸಿನ ಸಂಭ್ರಮಾಚರಣೆ, ಖುದ್ದು ಉಚಿತ ಟಿಕೆಟ್‌ ವಿತರಿಸಿದ ಸಿಎಂ

ಗ್ಯಾರಂಟಿ ಸರ್ಕಾರದಿಂದ ಶಕ್ತಿಯೋಜನೆ ಯಶಸ್ಸಿನ ಸಂಭ್ರಮಾಚರಣೆ, ಖುದ್ದು ಉಚಿತ ಟಿಕೆಟ್‌ ವಿತರಿಸಿದ ಸಿಎಂ

0
ಗ್ಯಾರಂಟಿ ಸರ್ಕಾರದಿಂದ ಶಕ್ತಿಯೋಜನೆ ಯಶಸ್ಸಿನ ಸಂಭ್ರಮಾಚರಣೆ, ಖುದ್ದು ಉಚಿತ ಟಿಕೆಟ್‌ ವಿತರಿಸಿದ ಸಿಎಂ


ಬೆಂಗಳೂರು,ಜು.14– ಶಕ್ತಿ ಯೋಜನೆ ಭರ್ಜರಿ ಯಶಸ್ಸನ್ನು ಕಾಂಗ್ರೆಸ್‌‍ ಪಕ್ಷ ನಾಡಿನಾದ್ಯಂತ ಸಂಭ್ರಮಿಸುತ್ತಿದ್ದು, ಸಿಎಂ ಸಿದ್ದರಾಮಯ್ಯ ಬಿಎಂಟಿಸಿ ಬಸ್‌‍ನಲ್ಲಿ ಶಕ್ತಿ ಯೋಜನೆಯ ಐದನೂರನೇ ಕೋಟಿ ಫಲಾನುಭವಿಗೆ ಖುದ್ದು ಉಚಿತ ಟಿಕೆಟ್‌ ವಿತರಿಸಿದರು. ಮುಖ್ಯಮಂತ್ರಿ ಅವರ ಅಧಿಕೃತ ನಿವಾಸ ಕಾವೇರಿಯ ಬಳಿ ಡಿಸಿಎಂ ಡಿ.ಕೆ.ಶಿವಕುಮಾರ್‌, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಸಚಿವರಾದ ಎಚ್‌.ಸಿ.ಮಹದೇವಪ್ಪ, ಎಂ.ಬಿ.ಪಾಟೀಲ್‌, ದಿನೇಶ್‌ಗುಂಡೂರಾವ್‌, ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ಎಚ್‌.ಎಂ.ರೇವಣ್ಣ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯರೆಡ್ಡಿ ಅವರೊಂದಿಗೆ ಬಸ್‌‍ ಹತ್ತಿದ ಸಿದ್ದರಾಮಯ್ಯ ಶಕ್ತಿ ಯೋಜನೆಯ ಫಲಾನುಭವಿಗಳಿಗೆ ಟಿಕೆಟ್‌ ವಿತರಿಸಿದರು. ಶಕ್ತಿ ಯೋಜನೆಯ ಯಶಸ್ಸಿಗಾಗಿ ಬೆಂಗಳೂರಷ್ಟೇ ಅಲ್ಲ ರಾಜ್ಯಾದ್ಯಂತ ಮಹಿಳಾ ಪ್ರಯಾಣಿಕರನ್ನು ಸನಾನಿಸಲಾಗಿದೆ.

ಮಹಿಳಾ ಪ್ರಯಾಣಿಕರಿಗೆ ಸನಾನ :
ಮುಖ್ಯಮಂತ್ರಿಯವರು 30 ಮಹಿಳೆ ಹಾಗೂ ಲಿಂಗತ್ವ ಅಲ್ಪಸಂಖ್ಯಾತ ಪ್ರಯಾಣಿಕರಿಗೆ ಇಳಕಲ್‌ ಸೀರೆ ವಿತರಿಸಿದರು. ಲತಾ ಎಂಬ ಪ್ರಯಾಣಿಕರಿಗೆ ಆನೆಯ ಕಲಾಕೃತಿಯನ್ನು ನೀಡಿ, ಶ್ರೀಗಂಧದ ಹಾರ ಹಾಕಿ ಸನಾನಿಸಿದರು. ಇದೇ ವೇಳೆ ರಾಜ್ಯಾದ್ಯಂತ ಸಿಹಿ ಹಂಚಿ ಸಂಭ್ರಮಿಸಲಾಗಿದೆ.ಮುಖ್ಯಮಂತ್ರಿಯವರನ್ನು ಕಂಡು ಪುಳಕಿತರಾದ ಮಹಿಳೆಯರು ಹಸ್ತಲಾಘವ ನೀಡಿ ಸಂಭ್ರಮಿಸಿದರು.ಈ ವೇಳೆ ಮಹಿಳೆಯರನ್ನು ಸನಾನಿಸಲು ಸಿದ್ದರಾಮಯ್ಯನವರು ಡಿ.ಕೆ.ಶಿವಕುಮಾರ್‌ ಅವರನ್ನು ಜೊತೆಯಲ್ಲಿ ಕರೆದು ನಿಲ್ಲಿಸಿಕೊಂಡಿದ್ದು ವಿಶೇಷವಾಗಿತ್ತು.

ದೇಶದಲ್ಲೇ ಎಂದೂ ಇಲ್ಲದಂತಹ ಅಪರೂಪದ ಯೋಜನೆಗಳನ್ನು ಸಿದ್ದರಾಮಯ್ಯನವರ ಸರ್ಕಾರ ಜಾರಿಗೆ ತಂದಿದ್ದು, ಮಹಿಳೆಯರಿಗೆ ರಾಜ್ಯದಲ್ಲಿ ಚಾಮರಾಜನಗರದಿಂದ ಬೀದರ್‌ವರೆಗೂ, ಮಂಗಳೂರಿನಿಂದ ಕೋಲಾರದವರೆಗೂ ಯಾವ ಮೂಲೆಗಾದರೂ ಉಚಿತವಾಗಿ ಪ್ರಯಾಣಿಸುವ ಶಕ್ತಿ ಯೋಜನೆಯನ್ನು 2023 ರ ಜೂನ್‌11 ರಂದು ಜಾರಿಗೊಳಿಸಲಾಯಿತು. ಅಂದಿನಿಂದ ಇಲ್ಲಿವರೆಗೂ 500 ಕೋಟಿ ಬಸ್‌‍ ಟಿಕೆಟ್‌ಗಳನ್ನು ಉಚಿತವಾಗಿ ನೀಡಲಾಗಿದೆ. ಇದಕ್ಕಾಗಿ 12,699 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ.

ಶಕ್ತಿಗೆ ಮಹಿಳೆಯರ ಬಹುಪರಾಖ್‌ :
ಐದನೂರನೇ ಕೋಟಿ ಟಿಕೆಟ್‌ ಫಲಾನುಭವಿ ಲತಾ ಅವರು ಮುಖ್ಯಮಂತ್ರಿಯವರಿಂದ ತಾವು ಸನಾನಕ್ಕೀಡಾಗಿದ್ದು, ಸಂತಸದ ಕ್ಷಣವಾಗಿದೆ. ಕೆಲಸ ಬಿಟ್ಟು ಬಂದಿದ್ದಕ್ಕೂ ಸಾರ್ಥಕವಾಯಿತು ಎಂದು ಸಂಭ್ರಮಿಸಿದರು.
ಇದು ನನ್ನ ಅದೃಷ್ಟ ಎಂದರು. ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಸಾಕಷ್ಟು ಅನುಕೂಲವಾಗಿದೆ. ಈ ಮೊದಲು ಪ್ರಯಾಣಕ್ಕಾಗಿ ಸಾಕಷ್ಟು ಹಣ ಖರ್ಚಾಗುತ್ತಿತ್ತು. ಬಸ್‌‍ ಹಾಗೂ ಆಟೋದಲ್ಲಿ ಪ್ರಯಾಣಿಸಲು 5 ರಿಂದ 6 ಸಾವಿರ ರೂ. ಖರ್ಚಾಗುತ್ತಿತ್ತು. ಅದನ್ನು ಹಾಲು-ಹಣ್ಣಿನಂತಹ ಇತರ ವೆಚ್ಚಗಳಿಗೆ ಬಳಕೆ ಮಾಡುತ್ತಿದ್ದೇವೆ ಎಂದು ಲತಾ ಹೇಳಿದ್ದಾರೆ.

ಮಂಗಳಮುಖಿ ಪ್ರಯಾಣಿಕರೊಬ್ಬರು ತಮನ್ನು ಮೂಲೆಗುಂಪು ಮಾಡಲಾಗಿತ್ತು. ಪ್ರತಿದಿನ ಪ್ರಯಾಣಕ್ಕೆ 300 ರಿಂದ 400 ರೂ. ಖರ್ಚಾಗುತ್ತಿತ್ತು. ಶಕ್ತಿ ಯೋಜನೆಯ ಉಚಿತ ಯೋಜನೆಯಿಂದ 5 ರಿಂದ 6 ಸಾವಿರ ಪ್ರತಿ ತಿಂಗಳು ಉಳಿತಾಯವಾಗುತ್ತಿದೆ. ಜೊತೆಗೆ 2 ಸಾವಿರ ರೂ. ಗೃಹಲಕ್ಷ್ಮಿ ಯೋಜನೆಯಿಂದ ಹಣ ಬರುತ್ತಿರುವುದರಿಂದ ಸ್ವಾವಲಂಬಿಯಾಗಿ ಬದುಕಲು ಸಾಧ್ಯವಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಬಿಜಾಪುರದಿಂದ ಬಂದಿರುವ ಹಿರಿಯ ಮಹಿಳೆಯೊಬ್ಬರು, ಸಿದ್ದರಾಮಯ್ಯನವರು ತಮಗೆ ಟಿಕೆಟ್‌ ನೀಡಿದರು. ಅಷ್ಟು ದೂರದಿಂದ ಬಂದು ಮುಖ್ಯಮಂತ್ರಿಯವರನ್ನು ನೋಡಿದ್ದೇವೆ. ಉಚಿತ ಬಸ್‌‍ ಪ್ರಯಾಣ ಸೌಲಭ್ಯವಿರುವುದರಿಂದ ಅಲ್ಲಿಂದ ಇಲ್ಲಿಗೆ ಬರಲು ಸಾಧ್ಯವಾಗಿದೆ. ಇಲ್ಲವಾದರೆ ಬರುತ್ತಿರಲಿಲ್ಲ ಎಂದರು.

ಲಕ್ಷ್ಮಿ ದ್ರಾವಿಡ್‌ ಎಂಬ ಮಹಿಳೆ ಇಳಕಲ್‌ ಸೀರೆಗೆ ಪ್ರತಿಯಾಗಿ ಉಡುಗೊರೆಯಾಗಿ ಮುಖ್ಯಮಂತ್ರಿಯವರಿಗೆ ಜೋಳದ ರೊಟ್ಟಿ ಹಾಗೂ ಹೋಳಿಗೆಯನ್ನು ನೀಡಿದರು.ಆಧಾರ್‌ಕಾರ್ಡ್‌ ಒಂದಿದ್ದರೆ ಸಾಕು, ಯಾವುದೇ ಆತಂಕವಿಲ್ಲದೆ ರಾಜ್ಯದ ಎಲ್ಲಿ ಬೇಕಾದರೂ ಸಂಚರಿಸಲು ಶಕ್ತಿ ಯೋಜನೆ ಸಹಕಾರಿಯಾಗಿದೆ. ಇದನ್ನು ಜಾರಿಗೊಳಿಸಿದ ರಾಜ್ಯ ಸರ್ಕಾರಕ್ಕೆ ಕೃತಜ್ಞತೆಗಳೆಂದು ಹೇಳಿಕೊಂಡಿದ್ದಾರೆ.

ಶಕ್ತಿಯ ಸಾಧನೆ :
ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆ ಜಾರಿಗೆ ಮುನ್ನ ಪ್ರತಿದಿನ 85.84 ಲಕ್ಷ ಪ್ರಯಾಣಿಕರಿದ್ದರು. ಅದು ಶಕ್ತಿ ಯೋಜನೆಯ ಬಳಿಕ 1.17 ಕೋಟಿ ಜನರಿಗೆ ಹೆಚ್ಚಾಯಿತು. ಹೀಗಾಗಿ ಹೊಸ ಬಸ್‌‍ಗಳ ಸೇರ್ಪಡೆ ಮತ್ತು ನೇಮಕಾತಿಗೆ ರಾಜ್ಯಸರ್ಕಾರ ಚಾಲನೆ ನೀಡಿತ್ತು. 2 ವರ್ಷದಲ್ಲಿ 5,049 ಹೊಸ ಬಸ್‌‍ಗಳನ್ನು ಸೇರ್ಪಡೆ ಮಾಡಲಾಗಿದೆ.ಟ್ರಿಪ್‌ಗಳ ಸಂಖ್ಯೆ 21,164 ರಿಂದ 23,635ಕ್ಕೆ ಹೆಚ್ಚಿಸಲಾಗಿದೆ. ಬಸ್‌‍ಗಳ ಸಂಖ್ಯೆ 23,948 ರಿಂದ 26,130ಕ್ಕೆ ಹೆಚ್ಚಿಸಲಾಗಿದೆ. 2,828 ಹಳೆಯ ವಾಹನಗಳನ್ನು ಬದಲಾಯಿಸಲಾಗಿದೆ.

ಸಾರಿಗೆ ಸಂಸ್ಥೆಗೆ ನಷ್ಟವಿಲ್ಲ
ಶಕ್ತಿ ಯೋಜನೆಯಿಂದ ಸಾರಿಗೆ ಸಂಸ್ಥೆಗಳಿಗೆ ನಷ್ಟವಿಲ್ಲ. ಬದಲಾಗಿ ಲಾಭವಾಗುತ್ತಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರಂಭದಲ್ಲಿ ಒಂದಿಷ್ಟು ಸಮಸ್ಯೆಗಳಿದ್ದವು. ಅವುಗಳನ್ನು ಸರಿಪಡಿಸಿಕೊಂಡು ಯೋಜನೆ ಜಾರಿ ಮಾಡಿದ್ದೇವೆ.ಎರಡು ವರ್ಷ ಒಂದು ತಿಂಗಳಲ್ಲಿ 500 ಕೋಟಿ ಟ್ರಿಪ್‌ಗಳಾಗಿದ್ದು, ಅಷ್ಟೂ ಮಹಿಳೆಯರು ಪ್ರಯೋಜನ ಪಡೆದಿದ್ದಾರೆ ಎಂದರು.
ಕರ್ನಾಟಕ, ಭಾರತ ಅಥವಾ ಯಾವುದೇ ದೇಶದ ಸಾರಿಗೆ ವ್ಯವಸ್ಥೆಗಳು ಲಾಭಕ್ಕಾಗಿ ಸೇವೆ ನೀಡುವುದಿಲ್ಲ. ಸಾರ್ವಜನಿಕರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕಾಗಿ ಸೇವೆ ಒದಗಿಸಲಾಗುತ್ತದೆ ಎಂದು ಸಮರ್ಥಿಸಿಕೊಂಡರು.

ನಮಲ್ಲಿ ಶೇ.40 ರಷ್ಟು ಬಸ್‌‍ಗಳಲ್ಲಿ ಮೊದಲಿನಿಂದಲೂ ನಷ್ಟವಾಗುತ್ತಿದೆ. ಹಳ್ಳಿಗಳಿಂದ, ನಗರ ಪ್ರದೇಶಗಳಿಂದ ಜನ ಸಂಚರಿಸಬೇಕಾಗುತ್ತದೆ. ಇಲ್ಲಿ ಲಾಭ ನೋಡಲು ಸಾಧ್ಯವಿಲ್ಲ. ಶೇ.25 ರಷ್ಟು ಬಸ್‌‍ಗಳಲ್ಲಿ ಖರ್ಚು ವೆಚ್ಚಗಳಿಗೆ ಹೊಂದಾಣಿಕೆಯಾಗುತ್ತಿದ್ದು, ನೋ ಪ್ರಾಫಿಟ್‌, ನೋ ಲಾಸ್‌‍ ವ್ಯವಸ್ಥೆ ಇದೆ. ಶೇ.25 ರಷ್ಟು ಮಾತ್ರ ಲಾಭವಾಗಿದೆ. ಈ ಮಾದರಿ ಜಗತ್ತಿನಾದ್ಯಂತ ಸಾಮಾನ್ಯ ಎಂದು ಹೇಳಿದರು.
ಶಕ್ತಿ ಯೋಜನೆ ಯಾವುದೇ ಕಾರಣಕ್ಕೂ ಸ್ಥಗಿತಗೊಳ್ಳುತ್ತಿಲ್ಲ. ಈ ಬಗ್ಗೆ ಯಾವುದೇ ಅನುಮಾನಗಳೂ ಬೇಕಿಲ್ಲ. ಬಿಜೆಪಿಯವರಿಗೆ ಹೊಟ್ಟೆ ಉರಿ ತಡೆಯಲಾಗುತ್ತಿಲ್ಲ. ಅದಕ್ಕಾಗಿ ಸುಳ್ಳು ಪ್ರಚಾರ ಮಾಡಿ ಟೀಕೆ ಮಾಡುತ್ತಾರೆ. ಅದಕ್ಕೆಲ್ಲಾ ಪ್ರತಿಕ್ರಿಯಿಸುವುದು ಅಗತ್ಯವಿಲ್ಲ ಎಂದರು.

ಶಕ್ತಿ ಯೋಜನೆ ಘೋಷಿಸಿದಾಗ ಇದು ಚುನಾವಣಾ ಪ್ರಚಾರಕ್ಕೆ ಮಾತ್ರ ಸೀಮಿತ ಎಂದಿದ್ದರು. ಜನ ಆಶೀರ್ವಾದ ಮಾಡಿ ಮೇ 20 ರಂದು ಕಾಂಗ್ರೆಸ್‌‍ ಸರ್ಕಾರ ರಚನೆಯಾಯಿತು. ಜೂ.11 ರಂದು ಶಕ್ತಿ ಯೋಜನೆಯನ್ನು ಆರಂಭಿಸಿದ್ದೇವೆ ಎಂದು ತಿಳಿಸಿದರು.ಬಿಎಂಟಿಸಿ, ಕೆಎಸ್‌‍ಆರ್‌ಟಿಸಿ ಸೇರಿದಂತೆ ನಾಲ್ಕು ಸಾರಿಗೆ ಸಂಸ್ಥೆಗಳಲ್ಲೂ ಸಾಕಷ್ಟು ಸಮಸ್ಯೆಗಳಿದ್ದವು. ಬಸ್‌‍ಗಳ ಖರೀದಿಯಾಗಿರಲಿಲ್ಲ. ಸಿಬ್ಬಂದಿ ನೇಮಕವಾಗಿರಲಿಲ್ಲ. ಕೋವಿಡ್‌ ಸಂದರ್ಭದಲ್ಲಿ 3,800 ಬಸ್‌‍ಗಳನ್ನು ಸ್ಥಗಿತಗೊಳಿಸಲಾಗಿತ್ತು. ಇದರಿಂದ 20 ಸಾವಿರ ಷೆಡ್ಯೂಲ್‌ಗಳು ಸ್ಥಗಿತಗೊಂಡಿದ್ದವು ಎಂದು ವಿವರಿಸಿದರು.

ತಮ ಸರ್ಕಾರ ಅಧಿಕಾರಕ್ಕೆ ಬಂದಾಗ 1.54 ಲಕ್ಷ ಷೆಡ್ಯೂಲ್‌ಗಳಿದ್ದವು. 20 ಸಾವಿರ ಹೆಚ್ಚುವರಿ ಷೆಡ್ಯೂಲ್‌ಗಳನ್ನು ಆರಂಭಿಸಿದ್ದೇವೆ. ಶಕ್ತಿ ಯೋಜನೆಯನ್ನು ನಿರ್ಗಮಿತ ಮುಖ್ಯಮಂತ್ರಿ ಬಸವರಾಜ ಬೊಮಾಯಿಯವರೇ ಶ್ಲಾಘಿಸಿದ್ದರು. ಜೆಡಿಎಸ್‌‍ನವರೂ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದರು ಎಂದರು.ನಮ ಸರ್ಕಾರ 5 ಸಾವಿರ ಬಸ್‌‍ಗಳನ್ನು ಸಾರಿಗೆ ನಿಗಮಗಳಿಗೆ ಸೇರ್ಪಡೆ ಮಾಡಿದೆ. 9 ಸಾವಿರ ಸಿಬ್ಬಂದಿಗಳನ್ನು ನೇರನೇಮಕಾತಿ ಮಾಡುತ್ತಾ ಹಾಗೂ ಒಂದು ಸಾವಿರ ಹುದ್ದೆಗಳನ್ನು ಅನುಕಂಪದ ಆಧಾರದ ಮೇಲೆ ನೇಮಿಸಲಾಗಿದೆ. 3,800 ಬಸ್‌‍ಗಳ ಸೇವೆಯನ್ನು ಪುನರ್‌ ಆರಂಭಿಸಲಾಗಿದೆ ಎಂದರು.ಸಾರಿಗೆ ಬಸ್‌‍ಗಳಲ್ಲಿ 85 ಲಕ್ಷ ದೈನಂದಿನ ಪ್ರಯಾಣಿಕರ ಸಂಖ್ಯೆ ಏಕಾಏಕಿ 1 ಕೋಟಿಗೆ ಹೆಚ್ಚಾಯಿತು. ಏಕಾಏಕಿ 25 ಲಕ್ಷ ಪ್ರಯಾಣಿಕರ ಸಂಖ್ಯೆ ಏರಿಕೆಯಾದಾಗ ಸಮಸ್ಯೆಯಾಗಿದ್ದು ನಿಜ. ಶಾಲಾ ವಿದ್ಯಾರ್ಥಿಗಳ ಪ್ರಯಾಣಕ್ಕೆ ತೊಂದರೆಯಾಗಿತ್ತು. ಕ್ರಮೇಣ ಅದನ್ನು ಸರಿಪಡಿಸಲಾಗಿದೆ ಎಂದು ವಿವರಿಸಿದರು.

ನಮಲ್ಲಿನ ಗ್ಯಾರಂಟಿ ಯೋಜನೆಗಳನ್ನು ಮಹಾರಾಷ್ಟ್ರ ಸರ್ಕಾರದ ಪ್ರತಿನಿಧಿಗಳು ಬಂದು ಅಧ್ಯಯನ ನಡೆಸಿದ್ದಾರೆ. ಕೇರಳದಿಂದ ಅಧಿಕಾರಿಗಳ ತಂಡ ಬಂದು ಅಧ್ಯಯನ ನಡೆಸಿದೆ. ಆಂಧ್ರಪ್ರದೇಶದಿಂದ 3 ಸಚಿವರ ನಿಯೋಗ ಆಗಮಿಸಿ ಅಧ್ಯಯನ ಮಾಡಿದೆ. ಗ್ಯಾರಂಟಿ ಯೋಜನೆಗಳು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಸಾರಿಗೆ ಸೇವೆಯಲ್ಲಿ ಅತೀ ಹೆಚ್ಚು ಬಸ್‌‍ಗಳನ್ನು ಹೊಂದಿರುವ ಹೆಗ್ಗಳಿಕೆ ನಮ ರಾಜ್ಯಕ್ಕಿದೆ ಎಂದರು.

ಶಕ್ತಿ ಯೋಜನೆಯ ಫಲಾನುಭವಿಗಳಿಗೆ ಸಾರ್ಟ್‌ ಕಾರ್ಡ್‌ ವಿತರಿಸುವ ಪ್ರಸ್ತಾವನೆ ಹಣಕಾಸು ಇಲಾಖೆಯ ಪರಿಶೀಲನೆಯಲ್ಲಿದೆ. ಒಂದೂವರೆ ವರ್ಷಗಳ ಹಿಂದೆಯೇ ಇದನ್ನು ಅನುಷ್ಠಾನಕ್ಕೆ ತರಬೇಕಿತ್ತು. ಆದರೆ ಬಿಎಂಟಿಸಿಯ ವ್ಯವಸ್ಥಾಪಕ ನಿರ್ದೇಶಕರು ಸಮಯಕ್ಕೆ ಅವಕಾಶ ಕೇಳಿದ್ದಾರೆ. ಹಾಗಾಗಿ ವಿಳಂಬವಾಗಿದೆ ಎಂದು ಹೇಳಿದರು.ಬೆಂಗಳೂರಿನಲ್ಲಿ ಪ್ರತಿದಿನ 40 ಲಕ್ಷ ಜನ ಸಂಚರಿಸುತ್ತಾರೆ. ಬಸ್‌‍ ನಿಲ್ದಾಣಗಳು ಹತ್ತಿರ ಹತ್ತಿರದಲ್ಲಿಯೇ ಇವೆ. ನಿರ್ವಾಹಕರು ಟಿಕೆಟ್‌ ನೀಡುವ ವೇಳೆಗೆ ಪ್ರಯಾಣಿಕರು ಇಳಿದು ಹೋಗಿರುತ್ತಾರೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಮಯ ಕೇಳಿದ್ದರು. ಈಗ ಅದನ್ನು ಮತ್ತೆ ಪರಿಶೀಲನೆಗೆ ಕೈಗೆತ್ತಿಕೊಳ್ಳಲಾಗಿದೆ. ಆಧಾರ್‌ ಕಾರ್ಡ್‌ ಆಧಾರಿತವಾಗಿ ಸೌಲಭ್ಯ ನೀಡಿಕೆಯಲ್ಲಿ ಯಾವುದೇ ಸಮಸ್ಯೆಯಾಗಿಲ್ಲ ಎಂದರು.