ಬೆಂಗಳೂರು, ಜು.18- ನಗರದಲ್ಲಿ ಜಾಹೀರಾತು ಮಾಫಿಯಾಗೆ ಮತ್ತೆ ಮಣೆ ಹಾಕಲಾಗುತ್ತಿದೆ.ಖಾಲಿಯಾಗಿರುವ ಸರ್ಕಾರದ ಖಜಾನೆ ಭರ್ತಿ ಮಾಡಲು ಕಾಂಗ್ರೆಸ್ ಸರ್ಕಾರ ಮತ್ತೆ ಜಾಹೀರಾತು ಮೊರೆ ಹೋಗುತ್ತಿದೆ. ಜಾಹೀರಾತು ಬೈಲಾಗೆ ತಿದ್ದುಪಡಿ ಮಾಡಿ ಹೊಸ ಬೈಲಾದೊಂದಿಗೆ ನಿಯಮ ಜಾರಿ ಮಾಡಲು ತೀರ್ಮಾನಿಸಲಾಗಿದ್ದು, ಈಗಾಗಲೇ ಕಾಯ್ದೆ ತಿದ್ದುಪಡಿ ಮಾಡಿ ಕೋರ್ಟಗೆ ಕರಡು ಪ್ರತಿ ಸಲ್ಲಿಕೆ ಮಾಡಲಾಗಿದೆ.
ಕಳೆದ ವಾರ ಹೈಕೋರ್ಟ್ ಕೂಡ ತಿದ್ದುಪಡಿ ಕರಡಿಗೆ ಅನುಮತಿ ನೀಡಿರುವುದರಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ಹೊಸ ಜಾಹೀರಾತು ನಿಯಮ ಜಾರಿಗೆ ತರಲಾಗುತ್ತಿದೆ.ನಗರದಲ್ಲಿ ಫ್ಲೆಕ್‌್ಸ, ಬ್ಯಾನರ್ ಗೆ ನಿಷೇಧ ಹೇರಿದ್ದರೂ ಹಲವೆಡೆ ಅನಧಿಕೃತ ಜಾಹೀರಾತು ಪ್ರದರ್ಶನಗೊಳ್ಳುತ್ತಿರುವುದರಿಂದ ಈ ಎಲ್ಲಾ ಸಮಸ್ಯೆ ನಿವಾರಣೆಗಾಗಿ ಬಿಬಿಎಂಪಿ ಹೊಸ ಜಾಹೀರಾತು ನೀತಿ ಜಾರಿಗೆ ತರಲು ತೀರ್ಮಾನಿಸಿದೆ.
ಹೊಸ ಜಾಹೀರಾತು ನೀತಿ ಪ್ರಕಾರ ಮಾರ್ಗಸೂಚಿ ದರದ ಮೇಲೆ ಜಾಹೀರಾತು ಶುಲ್ಕ ನಿಗದಿ ಮಾಡಲಾಗುವುದು. ರಸ್ತೆ, ಸರ್ಕಲ್ ಮತ್ತು ವಲಯವಾರು ಟೆಂಡರ್ ಮೂಲಕ ಜಾಹಿರಾತು ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗುವುದು. ಟೆಂಡರ್‌ನಲ್ಲಿ ಭಾಗವಹಿಸಲು ಕಡ್ಡಾಯ 5 ಲಕ್ಷ ರೂ. ಶುಲ್ಕ ಪಾವತಿಸಬೇಕು. ಮುಖ್ಯವಾಗಿ ಪರಿಸರ ಸ್ನೇಹಿ ಇರುವ ವಸ್ತುಗಳನ್ನು ಬಳಕೆ ಮಾಡಿಕೊಳ್ಳಬೇಕು. ಅನಧಿಕೃತ ಜಾಹೀರಾತು ಪ್ರದರ್ಶನಕ್ಕೆ ಗುತ್ತಿಗೆ ಪಡೆದ ದರದ ಎರಡು ಪಟ್ಟು ದಂಡ ಪಾವತಿಸಬೇಕಾಗುತ್ತದೆ.
ಅನಧಿಕೃತ ಜಾಹೀರಾತು ತೆರವು ಜವಾಬ್ದಾರಿಯನ್ನು ವಲಯ ಆಯುಕ್ತರಿಗೆ ನೀಡಲಾಗಿದೆ. ನಗರದಲ್ಲಿರುವ ಅಂಗಡಿ- ಮಳಿಗೆಗಳು 150 ಚದರಡಿವರೆಗೆ ಉಚಿತವಾಗಿ ಜಾಹೀರಾತು ಫಲಕ ಅಳವಡಿಕೆಗೆ ಅವಕಾಶ ನೀಡಲಾಗಿದೆ. ಅದಕ್ಕಿಂತ ಹೆಚ್ಚಿನ ವಿಸ್ತೀರ್ಣದ ಫಲಕ ಅಳವಡಿಕೆ ಮಾಡಿದರೆ ಶುಲ್ಕ ಪಾವತಿಸಬೇಕು. ಬಿಎಂಟಿಸಿ ಹಾಗೂ ಖಾಸಗಿ ಬಸ್, ಆಟೋ ಸೇರಿದಂತೆ ಇತರೆ ವಾಹನಗಳ ಮೇಲೆ ಪ್ರದರ್ಶಿಸುವ ಜಾಹೀರಾತುಗಳಿಗೆ ಬಿಬಿಎಂಪಿಯಿಂದ ಅನುಮೋದನೆ ಪಡೆದು ಶುಲ್ಕ ಪಾವತಿಸಬೇಕಿದೆ.
ವಿಧಾನಸೌಧ ಮತ್ತು ಹೈಕೋರ್ಟ್ ಸುತ್ತಮುತ್ತಲಿನ ರಸ್ತೆಗಳಲ್ಲಿ ಯಾವುದೇ ರೀತಿಯ ಜಾಹೀರಾತು ಅಳವಡಿಕೆಗೆ ಅವಕಾಶ ಇಲ್ಲ. ಕುಮಾರ ಕೃಪಾ ರಸ್ತೆ, ರಾಜಭವನ ರಸ್ತೆ, ಸ್ಯಾಂಕಿ ರಸ್ತೆ, ಪೋಸ್ಟ್ ಆಪೀಸ್ ರಸ್ತೆ, ಚಾಲುಕ್ಯ ವೃತ್ತ, ಮಹಾರಾಣಿ ಕಾಲೇಜು ರಸ್ತೆ, ಕೆಆರ್ ವೃತ್ತ, ಕಬ್ಬನ್ ಪಾರ್ಕ್, ಲಾಲ್‌ಬಾಗ್ ಆವರಣ, ನೃಪತುಂಗ ರಸ್ತೆ, ಹಡ್ಸನ್ ವೃತ್ತ, ಅರಮನೆ ರಸ್ತೆ ಹಾಗೂ ದೇವಸ್ಥಾನ, ಗುರುದ್ವಾರ, ಚರ್ಚು, ಮಸೀದಿಗೆ ಹೋಗುವ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಜಾಹೀರಾತು ಪ್ರದರ್ಶನ ನಿಷೇಧಿಸಲಾಗಿದೆ.
ಇನ್ನು ಪ್ರತಿ ಚದರಡಿ ಮಾರ್ಗಸೂಚಿಸ ದರ ಆಧರಿಸಿ ದರ ಪಟ್ಟಿ ನಿಗದಿ ಮಾಡಲಾಗಿದೆ. ಖಾಸಗಿ ಮತ್ತು ಸಾರ್ವಜನಿಕ ಬಸ್‌ಗಳ ಮೇಲೂ 10 ಅಡಿ ಜಾಹೀರಾತು ಪ್ರರ್ದಶಿಸಬಹುದು. ಪ್ರತಿ ಚದರಡಿಗೆ 50 ರೂ. ಅಥವಾ ಮಾಸಿಕ 500 ರೂ. ಮೆಟ್ರೋ ರೈಲು ಜಾಹೀರಾತಿನ ಪ್ರತಿ ಚದರಡಿಗೆ 50 ರೂ. ಅಥವಾ ಇಡೀ ಬೋಗಿಗೆ ಮಾಸಿಕ 750 ರೂ. ವಿತರಣಾ ವಾಹನ ಮತ್ತು ಸೇವಾ ವಾಹನ 6 ಅಡಿ ಪ್ರರ್ದಶಿಸಬಹುದು.
ಪ್ರತಿ ಚದರಡಿಗೆ 75 ರೂ. ಅಥವಾ ಮಾಸಿಕ 750 ರೂ. ಟ್ಯಾಕ್ಸಿ, ಆಟೋ, ಸಾರ್ವಜನಿಕ ಸಂಚಾರಿ ವಾಹನದಲ್ಲಿ 6 ಅಡಿ ಪ್ರರ್ದಶಿಸಬಹುದು. ಪ್ರತಿ ಚದರಡಿಗೆ ಮಾಸಿಕ 50 ರೂ ಅಥವಾ ಮಾಸಿಕ 500 ರೂ.ಗಳನ್ನು ಪಾವತಿಸಬೇಕಾಗುತ್ತದೆ.ಪಾಲಿಕೆಯ ಈ ಹೊಸ ಜಾಹೀರಾತಿನಿಂದ ಸುಮಾರು 750 ಕೋಟಿ ರು. ವಾರ್ಷಿಕ ಆದಾಯ ನಿರೀಕ್ಷೆ ಮಾಡಲಾಗಿದೆ.