ಬೆಂಗಳೂರು,ಜು.18- ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕೇಳಿಬರುತ್ತಿದ್ದ ಶಾಲೆಗಳಿಗೆ ಬಾಂಬ್ ಬೆದರಿಕೆ ಇದೀಗ ಬೆಂಗಳೂರಿಗೂ ಹಬ್ಬಿದ್ದು, ಒಂದೇ ದಿನ 20ಕ್ಕೂ ಹೆಚ್ಚು ಖಾಸಗಿ ಶಾಲೆಗಳಿಗೆ ಬೆದರಿಕೆ ಸಂದೇಶಗಳು ಬಂದಿವೆ. ನಗರದ ಭಾರತಿನಗರ, ಕಬ್ಬನ್‌ಪಾರ್ಕ್ ಸೇರಿದಂತೆ ಇನ್ನಿತರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿನ 20 ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶ ಬಂದಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾ ಶಾಲೆಗಳಲ್ಲಿ ಪೊಲೀಸರು ಬಿಗಿಭದ್ರತೆಯನ್ನು ಕೈಗೊಂಡಿದ್ದಾರೆ.
ಬೆಳಿಗ್ಗೆ 9 ಗಂಟೆಗೆ ಅನಾಮಧೇಯ ಸ್ಥಳದಿಂದ ನಗರದ ಹಲವಾರು ಶಾಲೆಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಬಂದಿದ್ದು, ಶಾಲೆಗಳನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಲಾಗಿದೆ.
ಶಾಲೆಯೊಳಗೆ ಬಾಂಬ್‌ಗಳು ಎಂಬ ಶೀರ್ಷಿಕೆಯ ಇ-ಮೇಲ್‌ಗಳನ್ನು roadkill333@atomicmail.io ಈ ಐಡಿಯಿಂದ 20ಕ್ಕೂ ಹೆಚ್ಚು ಶಾಲೆಗಳಿಗೆ ಕಳುಹಿಸಲಾಗಿದೆ. ತರಗತಿ ಕೊಠಡಿಗಳಲ್ಲಿ ಟ್ರೆನಿಟ್ರೊಟೊಲೈನ್‌್ಸ ಎಂಬ ಸುಧಾರಿತ ಸ್ಫೋಟಕ ವಸ್ತುವನ್ನು ಇಡಲಾಗಿದ್ದು, ಯಾವುದೇ ಕ್ಷಣ ಅದು ಸ್ಫೋಟಗೊಳ್ಳಬಹುದೆಂದು ಎಚ್ಚರಿಸಲಾಗಿತ್ತು.
ಅಳಿಸಿ ಹಾಕುತ್ತೇನೆ : ಇ-ಮೇಲ್ ಬೆದರಿಕೆಯಲ್ಲಿ ಸ್ಫೋಟಕಗಳನ್ನು ಕಪ್ಪುಬಣ್ಣದ ಪ್ಲಾಸ್ಟಿಕ್ ಚೀಲಗಳಲ್ಲಿ ಇಡಲಾಗಿದ್ದು, ಯಾವುದೇ ವೇಳೆ ಸ್ಫೋಟಗೊಳ್ಳಲಿದೆ. ನಿಮಲ್ಲಿ ಪ್ರತಿಯೊಬ್ಬರನ್ನೂ ನಾನು ಈ ಪ್ರಪಂಚದಿಂದ ಅಳಿಸಿ ಹಾಕುತ್ತೇನೆ. ಒಂದೇ ಒಂದು ಆತವೂ ಬದುಕುಳಿಯುವುದಿಲ್ಲ. ಸ್ಫೋಟಗೊಂಡ ಸುದ್ದಿಯನ್ನು ಕೇಳಿ ಸಂತೋಷದಿಂದ ನಗುತ್ತೇನೆ. ಪೋಷಕರು ಶಾಲೆಗಳಲ್ಲಿ ಕಾಣಿಸಿಕೊಳ್ಳುವುದನ್ನು ಮತ್ತು ಅವರ ಮಕ್ಕಳ ದೇಹಗಳು ಛಿದ್ರಗೊಂಡು ಸ್ವಾಗತಿಸುವುದನ್ನು ಮಾತ್ರ ನೋಡುತ್ತೇನೆ.
ನೀವೆಲ್ಲರೂ ಇದರಿಂದ ದುಃಖಿತರಾಗಬೇಕು. ನನಗೆ ನನ್ನ ಜೀವನ ನಿಜಕ್ಕೂ ಇಷ್ಟವಿಲ್ಲ. ಸುಧಾರಿತ ಸ್ಫೋಟಕ ಸ್ಫೋಟಗೊಂಡಿದೆ ಎಂಬ ಸುದ್ದಿ ಬಂದ ನಂತರ ನಾನು ಆತಹತ್ಯೆ ಮಾಡಿಕೊಳ್ಳುತ್ತೇನೆ. ನಾನು ನನ್ನ ಗಂಟಲು ಮತ್ತು ಮಣಿಕಟ್ಟುಗಳನ್ನು ಕತ್ತರಿಸಿಕೊಳ್ಳುತ್ತೇನೆ. ನನಗೆ ನಿಜವಾಗಿಯೂ ಬದುಕಲು ಇಷ್ಟವಿಲ್ಲ. ನನ್ನ ಬಗ್ಗೆ ಮನೋವೈದ್ಯರು, ಮನಃ ಶಾಸ್ತ್ರಜ್ಞರು, ವೈದ್ಯರು ಯಾರೂ ಕೂಡ ಕಾಳಜಿ ವಹಿಸಿಲ್ಲ. ನೀವು ಅಸಹಾಯಕ ಮತ್ತು ಸುಳಿವು ಇಲ್ಲದ ಮನುಷ್ಯನಿಗೆ ಔಷಧಿ ನೀಡುವುದರ ಬಗ್ಗೆ ಮಾತ್ರ ಕಾಳಜಿ ವಹಿಸುತ್ತೀರಿ. ಹೀಗೆಂದು ಇ-ಮೇಲ್‌ನಲ್ಲಿ ಅನಾಮಧೇಯ ವ್ಯಕ್ತಿ ಬೆದರಿಕೆ ಹಾಕಿದ್ದಾನೆ.
ದೌಡಾಯಿಸಿದ ಪೊಲೀಸರು :
ಯಾವಾಗ ಖಾಸಗಿ ಶಾಲೆಗಳಿಗೆ ಬಾಂಬ್ ಇಡಲಾಗಿದೆ ಎಂಬ ಇ-ಮೇಲ್ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿತೋ ತಕ್ಷಣವೇ ಎಚ್ಚೆತ್ತುಕೊಂಡ ಶಾಲಾ ಆಡಳಿತ ಮಂಡಳಿಯವರು ತಮ ಹತ್ತಿರದಲ್ಲಿರುವ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಿದರು.
ದೂರವಾಣಿ ಕರೆ ಬರುತ್ತಿದ್ದಂತೆ ಸ್ಥಳಕ್ಕೆ ಶ್ವಾನದಳ, ಬಾಂಬ್ ನಿಷ್ಕ್ರಿಯ ದಳ, ಮೆಟಲ್‌ಡಿಟೆಕ್ಟರ್ ಸೇರಿದಂತೆ ಸುಧಾರಿತ ಸಾಧನಗಳಿಂದ ಶಾಲೆಯ ಎಲ್ಲಾ ಕೊಠಡಿಗಳನ್ನೂ ತಪಾಸಣೆ ನಡೆಸಲಾಯಿತು. ಒಂದು ಕ್ಷಣ ಕೊಠಡಿಯಲ್ಲಿದ್ದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರನ್ನು ಆಚೆ ಕಳುಹಿಸಿ ಶೋಧ ನಡೆಸಲಾಯಿತು.
ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದಿದೆ ಎಂಬ ಸುದ್ದಿ ಕೇಳಿದ ಪೋಷಕರು ತಕ್ಷಣವೇ ತಮ ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಶಾಲೆಗೆ ದೌಡಾಯಿಸಿದರು. ಕೆಲವು ಪೋಷಕರು ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ.
ಮೇಲ್ನೋಟಕ್ಕೆ ಇದೊಂದು ಹುಸಿ ಬಾಂಬ್ ಕರೆ ಎಂದು ಶಂಕಿಸಲಾಗಿದೆ. ಆದರೂ ಮಕ್ಕಳ ಹಿತದೃಷ್ಟಿಯಿಂದ ಯಾವ ಸ್ಥಳದಿಂದ ಇ-ಮೇಲ್ ಬಂದಿದೆ ಎಂಬುದನ್ನು ಪತ್ತೆ ಮಾಡಲು ನಗರ ಪೊಲೀಸರು ಮುಂದಾಗಿದ್ದಾರೆ.ಇದೀಗ ಶಾಲೆಗಳಲ್ಲಿ ಪೊಲೀಸ್ ಭದ್ರತೆಯನ್ನು ಕಲ್ಪಿಸಲಾಗಿದ್ದು, ಅನಗತ್ಯವಾಗಿ ಪೋಷಕರು, ಮಕ್ಕಳು ಆತಂಕಕ್ಕೆ ಒಳಗಾಗಬಾರದು ಎಂದು ಶಾಲಾ ಆಡಳಿತ ಮಂಡಳಿಯವರು ಮನವಿ ಮಾಡಿದ್ದಾರೆ.
ಬೆಳಿಗ್ಗೆ 8 ಗಂಟೆಗೆ ಶಾಲೆಗಳು ಆರಂಭವಾಗುತ್ತಿದ್ದಂತೆ ಶಾಲಾ ಸಿಬ್ಬಂದಿಗಳು ಕಾರ್ಯಾರಂಭಿಸಿ ಇ-ಮೇಲ್ ಪರಿಶೀಲಿಸುತ್ತಿದ್ದಾಗ ಈ ಸಂದೇಶ ಕಂಡುಬಂದಿದೆ.