ಮೈಸೂರು,ಜು.18- ಆಷಾಢ ಮಾಸದ ಕೊನೆಯ ಶುಕ್ರವಾರದ ಅಂಗವಾಗಿ ನಾಡದೇವತೆ ಚಾಮುಂಡೇಶ್ವರಿ ದೇವಿಗೆ ಇಂದು ಸಿಂಹವಾಹಿನಿ ಅಲಂಕಾರ ಮಾಡಲಾಗಿತ್ತು. ಉತ್ಸವಮೂರ್ತಿಗೆ ವಿವಿಧ ಬಗೆಯ ಹೂಗಳಿಂದ ಅಲಂಕರಿಸಿಲಾಗಿತ್ತು. ದೇವಾಲಯದ ಆವರಣದೊಳಗೆ ಕಮಲ ಸೇರಿದಂತೆ ವಿವಿಧ ಬಗೆಯ ಫಲಪುಷ್ಪ ಹಾಗೂ ನವಿಲುಗರಿಗಳಿಂದ ಅಲಂಕಾರ ಮಾಡಲಾಗಿದ್ದು, ಕಣನ ಸೆಳೆಯುವಂತಿತ್ತು.
ಮುಂಜಾನೆ 4.30 ರಿಂದಲೇ ದೇವಿಗೆ ಅಭಿಷೇಕ, ಕುಂಕುಮಾರ್ಚನೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದವು. ನಿನ್ನೆ ದೇವಿಯ ವರ್ಧಂತೋತ್ಸವ ಯಶಸ್ವಿಯಾಗಿ ನೆರವೇರಿದ್ದು, ಕೊನೆ ಶುಕ್ರವಾರದ ಅಂಗವಾಗಿ ಇಂದೂ ಸಹ ಚಾಮುಂಡಿ ಬೆಟ್ಟಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ತಂಡೋಪತಂಡವಾಗಿ ಆಗಮಿಸಿ ದೇವಿಯ ದರ್ಶನ ಪಡೆದರು.
ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರಿಂದ ಚಾಮುಂಡಿಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಮಾಮೂಲಿಯಂತೆ ಇಂದು ಮುಂಜಾನೆ 6 ಗಂಟೆಯಿಂದಲೇ ಭಕ್ತರು ಮೆಟ್ಟಿಲುಗಳನ್ನು ಹತ್ತಿ ದೇವಿಯ ಧರ್ಮದರ್ಶನ ಪಡೆದರು.
ದೇವಾಲಯದ ಆಡಳಿತ ಮಂಡಳಿ ಹಾಗೂ ಪೊಲೀಸರು ಭದ್ರತೆ ಕೈಗೊಂಡಿದ್ದರು.
ಮೋಡ ಕವಿದ ಹಾಗೂ ತುಂತುರು ಮಳೆಯ ನಡುವೆಯೂ ಭಕ್ತರು ಬೆಟ್ಟಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದು ಪುನೀತರಾದರು. ದೇವಿಯ ದರ್ಶನ ಪಡೆದ ಭಕ್ತರಿಗೆ ಇಂದು ಡ್ರೈಫ್ರೂಟ್‌್ಸ ಹಾಗೂ ಬಾದಾಮಿ ಹಾಲು ವಿತರಿಸಲಾಯಿತು.
ಗಣ್ಯರ ಭೇಟಿ :
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ ಸೇರಿದಂತೆ ಹಲವು ಜನಪ್ರತಿನಿಧಿಗಳು, ಗಣ್ಯರು, ನಟ-ನಟಿಯರು ಬೆಟ್ಟಕ್ಕೆ ಭೇಟಿ ನೀಡಿ ದೇವಿ ದರ್ಶನ ಪಡೆದರು.