Sunday, July 20, 2025
Homeರಾಜ್ಯರಾಜ್ಯದಿಂದ ರೋಹಿಂಗ್ಯಾಗಳ ಗಡೀಪಾರಿಗೆ ಶೋಭಾ ಕರದ್ಲಾಂಜೆ ಆಗ್ರಹ

ರಾಜ್ಯದಿಂದ ರೋಹಿಂಗ್ಯಾಗಳ ಗಡೀಪಾರಿಗೆ ಶೋಭಾ ಕರದ್ಲಾಂಜೆ ಆಗ್ರಹ

Shobha Karandlaje demands deportation of Rohingyas from the state

ಬೆಂಗಳೂರು,ಜು.19- ರಾಜಧಾನಿ ಬೆಂಗಳೂರು ಮತ್ತಿತರ ಕಡೆ ನಕಲಿ ಆಧಾರ್‌ ಕಾರ್ಡ್‌ ಪಡೆದುಕೊಂಡು ಕಾನೂನುಬಾಹಿರವಾಗಿ ವಾಸ ಮಾಡುತ್ತಿರುವ ರೋಹಿಂಗ್ಯಾಗಳನ್ನು
ತಕ್ಷಣವೇ ರಾಜ್ಯದಿಂದ ಗಡೀಪಾರು ಮಾಡಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರದ್ಲಾಂಜೆ ಆಗ್ರಹಿಸಿದ್ದಾರೆ.

ಹೆಬ್ಬಾಳ ಕೆಂಪಾಪುರ ಬಳಿ ಇರುವ ಕೊಳಚೆ ಪ್ರದೇಶದಲ್ಲಿ ವಾಸವಿರುವ ಅಕ್ರಮ ವಲಸಿಗರ ಪ್ರದೇಶಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭೇಟಿ ನೀಡಿ ಅಕ್ರಮ ವಲಸಿಗರ ಆಧಾರ್‌ ಕಾರ್ಡ್‌, ವೋಟರ್‌ ಕಾರ್ಡ್‌ ಪರಿಶೀಲನೆ ನಡೆಸಿದರು. ಕಳೆದ ಹತ್ತು ವರ್ಷಗಳಿಂದ ರೋಹಿಂಗ್ಯಾಗಳು ನಕಲಿಆಧಾರ್‌ ಕಾರ್ಡ್‌ ಪಡೆದು ಇಲ್ಲಿಯೇ ವಾಸ ಮಾಡುತ್ತಿದ್ದಾರೆ.

ತಗಡಿನಲ್ಲಿ ನೂರಾರು ಶೆಡ್‌ಗಳನ್ನು ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದಾರೆ. ಇದನ್ನು ಪರಿಶೀಲನೆ ನಡೆಸಿದ ವೇಳೆ ಇದು ನಕಲಿ ಎಂಬುದು ಸಾಬೀತಾಗಿದೆ ಎಂದು ಆರೋಪಿಸಿದರು. ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಇಲ್ಲಿ ಸಾವಿರಾರು ಅಕ್ರಮ ವಲಸಿಗರಿದ್ದಾರೆ. ಇವರ ಬಗ್ಗೆ ಪೊಲೀಸರು ಪರಿಶೀಲನೆ ಮಾಡಿ ಗಡಿಪಾರು ಮಾಡಬೇಕು. ಇವರ ಸಂಬಂಧ ನಾನು ಎನ್‌ಐಎ ಹಾಗೂ ಕೇಂದ್ರಕ್ಕೂ ಪತ್ರ ಬರೆಯುತ್ತೇನೆ ಎಂದು ಹೇಳಿದರು.

ಹೆಬ್ಬಾಳದ ಬಳಿ ಇರುವ ಜಾಗ ಎಸ್‌‍.ಎಂ.ಕೃಷ್ಣ ಸರ್ಕಾರ ಇದ್ದಾಗ ಕೆಐಎಡಿಬಿ ಮೂಲಕ ರೈತರಿಂದ ವಶಪಡಿಸಿಕೊಂಡಿತ್ತು. ಇದುವರೆಗೆ ರೈತರಿಗೆ ಪರಿಹಾರ ಸಿಕ್ಕಿಲ್ಲ, ಈ ಜಮೀನು ಖಾಲಿಯಾಗಿಯೇ ಇದೆ. ಇಲ್ಲಿ ಕಸ ತುಂಬಿಕೊಂಡಿದೆ. ಈಗ ಉಳಿದುಕೊಂಡಿರುವ 48 ಎಕರೆ ಮೆಟೋಗೆ ಕೊಡಬೇಕು. ಇದೇ ಮಾರ್ಗದಲ್ಲಿ ವಿಮಾನ ನಿಲ್ದಾಣಕ್ಕೆ ಮೆಟೋ ಹಾದು ಹೋಗುತ್ತದೆ.

ಇಲ್ಲಿಂದ ಹೋಗುವವರಿಗೆ ಹೋಗೋರಿಗೆ ಇಲ್ಲೇ ಬೋರ್ಡಿಂಗ್‌ ಪಾಸ್‌‍, ಇಮಿಗ್ರೇಷನ್‌ ಕಚೇರಿ ಮಾಡಿಕೊಡಬೇಕು, ಆಗ ಅನುಕೂಲ ಆಗುತ್ತದೆ ಎಂದು ಒತ್ತಾಯಿಸಿದರು. ಕಳೆದ ಮೇ 1 ರಂದು ಕಾಂಗ್ರೆಸ್‌‍ ಸರ್ಕಾರ, 48 ಎಕರೆ ಮೆಟೋಗೆ ಕೊಡುವ ತೀರ್ಮಾನ ಮಾಡಿತ್ತು .ಆದರೆ, ಒಂದೇ ತಿಂಗಳಿಗೆ ಯೂಟರ್ನ್‌ ಹೊಡೆದಿದೆ. ಯಾವ ರಿಯಲ್‌ ಎಸ್ಟೇಟ್‌ ಕಂಪನಿ ಸರ್ಕಾರಕ್ಕೆ ಸೂಟ್ಕೇಸ್‌‍ ಕೊಡ್ತು? ಸರ್ಕಾರ ಯಾಕೆ ತನ್ನ ನಿರ್ಣಯ ತಾನೇ ಕೈಬಿಡಲು ಹೊರಟಿದೆ? ಸರ್ಕಾರ ಇದಕ್ಕೆ ಸ್ಪಷ್ಟೀಕರಣ ಕೊಡಬೇಕು ಎಂದು ಮನವಿ ಮಾಡಿದರು.

ಸರ್ಕಾರಕ್ಕೆ 45 ಎಕರೆ ಭೂಮಿಗೆ ಮೆಟೋದಿಂದ ಬೇಡಿಕೆ ಇಟ್ಟಿದ್ದು, ಆದರೆ 9 ಎಕರೆ ಜಾಗ ಮಾತ್ರ ಕೊಡುವುದಾಗಿ ಸರ್ಕಾರ ಹೇಳಿದ್ದು, ಇದರಿಂದಾಗಿ ಜಟಾಪಟಿ ಸೃಷ್ಟಿಯಾಗಿದೆ. ಸರ್ಕಾರ ಖಾಸಗಿ ಡೆವೆಲಪರ್‌ ಗೆ ಭೂಮಿ ಕೊಡ್ತಿದೆ ಎಂಬುದು ಬಿಜೆಪಿ ಆರೋಪವಾಗಿದೆ. ಹೆಬ್ಬಾಳದ ಬಳಿ ನಮ ಮೆಟೋ ಕಾಮಗಾರಿಗೆ ರಾಜ್ಯ ಸರ್ಕಾರದಿಂದ ಭೂಮಿ ವಿಳಂಬ ವಿಚಾರವಾಗಿ ಸ್ಥಳಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಮೆಟೋ ಅಧಿಕಾರಿಗಳೂ ಉಪಸ್ಥಿತರಿದ್ದರು.

ಸಣ್ಣ ವರ್ತಕರಿಗೆ ಜಿಎಸ್‌‍ಟಿ ಬರೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು,ಇದರ ಬಗ್ಗೆ ನಮ ಹಣಕಾಸು ಸಚಿವರು ಮಾತನಾಡುತ್ತಾರೆ. ಇದರ ಬಗ್ಗೆ ಚರ್ಚೆ ಆಗಬೇಕು, ಜನಕ್ಕೆ ಅನುಕೂಲ ಆಗುವ ಹಾಗೆ ಯಾವ ರೀತಿ ಮಾಡಬೇಕು ಎಂದು ಸಚಿವರು ತೀರ್ಮಾನಿಸುತ್ತಾರೆ ಎಂದರು. ಶಾಸಕ ಬೈರತಿ ಬಸವರಾಜು ವಿರುದ್ಧ ಎಫ್‌ಐಆರ್‌ ವಿಚಾರವಾಗಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಶೋಭಾ ಕರಂದ್ಲಾಜೆ, ಅವರ ಮೇಲೆ ಎರಡು ಎಫ್‌ಐಆರ್‌ ಹಾಕಲಾಗಿದೆ. ಮೊದಲ ಕಾಪಿಯಲ್ಲಿ ಬೈರತಿ ಬಸವರಾಜು ಹೆಸರು ಇರಲಿಲ್ಲ. ಎರಡನೇ ಎಫ್‌ಐಆರ್‌ನಲ್ಲಿ ವಿಜಯಲಕ್ಷಿ ಅವರು ಬೈರತಿ ಬಸವರಾಜು ಹೆಸರು ಹೇಳಿದ್ದಾರೆ ಎಂದು ಪೊಲೀಸರು ಬರೆದುಕೊಂಡಿದ್ದಾರೆ. ವಿಜಯಲಕ್ಷಿ ಹೆಸರು ಹೇಳಿಲ್ಲ, ಪೊಲೀಸರೇ ಬರೆದುಕೊಂಡಿದ್ದಾರೆ ಎಂದು ಆರೋಪಿಸಿದರು.

ವಿಜಯಲಕ್ಷಿ ಅವರನ್ನೇ ಈಗ ಹೋಗಿ ಕೇಳಿದರೂ ಅವರು ಬೈರತಿ ಹೆಸರು ಹೇಳಿಲ್ಲ ಎನ್ನುತ್ತಾರೆ. ಸ್ಥಳದಲ್ಲಿ ಬೈರತಿ ಬಸವರಾಜು ಇರಲಿಲ್ಲ ಎಂದು ಅವರೇ ಸ್ಪಷ್ಟ ಮಾಡಿದ್ದಾರೆ. ಹಾಗಿದ್ದರೆ ಒಂದು ಠಾಣೆಯಲ್ಲಿ ಎರಡೆರಡು ಎಫ್‌ಐಆರ್‌ ಹೇಗೆ ದಾಖಲಾದವು? ಯಾಕೆ ದಾಖಲಾಯಿತು? ಇದನ್ನು ಸರ್ಕಾರ ಸ್ಪಷ್ಟ ಪಡಿಸಬೇಕು. ಬೈರತಿ ಬಸವರಾಜು ಅವರನ್ನು ಉದ್ದೇಶಪೂರ್ವಕವಾಗಿ ಸಿಲುಕಿಸಲು ಎರಡೆರಡು ಎಫ್‌ಐಆರ್‌ ಹಾಕಿದ್ದಾರೆ. ಇದು ಸರ್ಕಾರದ ಮಸಲತ್ತು ಎಂದು ಅನುಮಾನ ವ್ಯಕ್ತಪಡಿಸಿದರು.

RELATED ARTICLES

Latest News