ಬೆಂಗಳೂರು,ಜು.19- ಜಿಎಸ್‌ಟಿ ನೋಟಿಸ್ ಬಂದಿದೆ ಎಂಬ ಕಾರಣಕ್ಕೆ ವರ್ತಕರು ಡಿಜಿಟಲ್ ಪಾವತಿ ಗೇಟ್ ವೇಗಳ ಬಳಕೆ ನಿಲ್ಲಿಸಲು ಮುಂದಾಗಿದ್ದು, ಈ ಹಿನ್ನೆಲೆಯಲ್ಲಿ ವಾಣಿಜ್ಯ ತೆರಿಗೆ ಇಲಾಖೆಯು ಗೊಂದಲಗಳಿಗೆ ಸ್ಪಷ್ಟನೆ ನೀಡಿ, ಕೆಲ ಸೂಚನೆಗಳನ್ನೂ ನೀಡಿದೆ. ಈ ಸಂಬಂಧ ಪ್ರಕಟಣೆ ನೀಡಿರುವ ಇಲಾಖೆ, ಜಿಎಸ್‌ಟಿ ಸಂಬಂಧಿಸಿದ ನಿಯಮಗಳು ಮತ್ತು ಪರಿಹಾರಗಳನ್ನು ವ್ಯಾಪಾರಿಗಳಿಗೆ ಅಧಿಕಾರಿಗಳು ತಿಳಿಸಿ, ತೆರಿಗೆ ವಿನಾಯಿತಿ ಇರುವ ಸರಕು ಮತ್ತು ಸೇವೆಗಳನ್ನು ಹೊರತುಪಡಿಸಿ ತೆರಿಗೆದಾಯಕ ವಹಿವಾಟಿಗೆ ಮಾತ್ರ ಅನ್ವಯಿಸುವ ದರಗಳ ಅನ್ವಯ ತೆರಿಗೆ ವಿಧಿಸುತ್ತಾರೆಂದು ವಾಣಿಜ್ಯ ತೆರಿಗೆ ಇಲಾಖೆ ತಿಳಿಸಿದೆ.
ಸಮಗ್ರ ವಹಿವಾಟಿನಲ್ಲಿ ತೆರಿಗೆ ವಿಧಿಸಬಹುದಾದ ಮತ್ತು ತೆರಿಗೆ ವಿನಾಯಿತಿ ಪಡೆದ ಸರಕು ಮತ್ತು ಸೇವೆಗಳು ಸೇರಿರುತ್ತವೆ. ವರ್ತಕರು ಜಿಎಸ್‌ಟಿ ಅಡಿಯಲ್ಲಿ ಸಾಮಾನ್ಯ ನೋಂದಣಿ ಪಡೆದಿದ್ದೇ ಆದರೆ ತೆರಿಗೆ ಬಾಧ್ಯತೆಯು ತೆರಿಗೆ ವಿಧಿಸಬಹುದಾದ ಸರಕು ಮತ್ತು ಸೇವೆಗಳಿಗೆ ಮಾತ್ರ ಅನ್ವಯವಾಗುತ್ತದೆ. ನೋಂದಾಯಿತ ವರ್ತಕರು ತಾವು ಖರೀದಿಸಿದ ವಸ್ತುಗಳ ಮೇಲೆ ಹೂಡುವಳಿ ತೆರಿಗೆಯನ್ನು ಮಾರಾಟದ ಮೇಲೆ ಪಾವತಿಸಬೇಕಾದ ತೆರಿಗೆಗೆ ಹೊಂದಾಣಿಕೆ ಮಾಡಿಕೊಂಡು ನಿವ್ವಳ ತೆರಿಗೆಯನ್ನು ಪಾವತಿಸಬೇಕು. ಆದುದರಿಂದ ಮೌಲ್ಯವರ್ಧನೆಯ ಮೇಲೆ ಪಾವತಿಸಬೇಕಾದ ತೆರಿಗೆ ಮೊತ್ತವು ಅಲ್ಪ ಪ್ರಮಾಣದಲ್ಲಿರುತ್ತದೆ ಎಂದು ಸ್ಪಷ್ಟಪಡಿಸಿದೆ.
ಯಾವುದೇ ವ್ಯಾಪಾರಿಗಳು ತಮ ವಾರ್ಷಿಕ ವಹಿವಾಟು 1.50 ಕೋಟಿ ರೂ.ಗಿಂತ ಕಡಿಮೆ ಇದ್ದಲ್ಲಿ ಜಿಎಸ್‌ಟಿ ಅಡಿ ನೋಂದಣಿಯನ್ನು ಪಡೆದು ರಾಜಿ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡಿಕೊಂಡು ವಹಿವಾಟಿನ ಮೇಲೆ ಶೇ 0.5 ಎಸ್.ಜಿ.ಎಸ್.ಟಿ ತೆರಿಗೆಯನ್ನು ಪಾವತಿಸಬಹುದು. ಆದರೆ, ನೋಂದಣಿ ಪಡೆಯದೇ ನಡೆಸಿರುವ ವಹಿವಾಟಿಗೆ ರಾಜಿ ತೆರಿಗೆ ಪದ್ಧತಿಯು ಅನ್ವಯಿಸುವುದಿಲ್ಲ ಎಂದು ಹೇಳಿದೆ.
ವಾಣಿಜ್ಯ ತೆರಿಗೆ ಇಲಾಖೆಯ ಎಲ್ಲಾ ಅಧಿಕಾರಿಗಳಿಗೆ ಈ ನಿಟ್ಟಿನಲ್ಲಿ ವರ್ತಕರಲ್ಲಿ ಸೂಕ್ತ ಮಾರ್ಗದರ್ಶನ, ಸಹಕಾರ ಹಾಗೂ ಅರಿವು ಮೂಡಿಸಲು ಸೂಚಿಸಲಾಗಿದೆ. ಹಾಗೂ ಹೊಸದಾಗಿ ನೀಡಲಾಗುವ ನೋಂದಣಿಯನ್ನು ತೆರಿಗೆದಾರರಿಗೆ ಯಾವುದೇ ರೀತಿಯಲ್ಲೂ ತೊಂದರೆಯಾಗದಂತೆ ಸುಸೂತ್ರವಾಗಿ ನೀಡಲು ಸಹ ಸೂಚಿಸಲಾಗಿದೆ ಎಂದು ತಿಳಿಸಿದೆ.
ಈಗಾಗಲೇ ರಾಜ್ಯದಲ್ಲಿ 98,915 ವರ್ತಕರು ರಾಜಿ ತೆರಿಗೆ ಪದ್ಧತಿಯಡಿ ನೋಂದಣಿ ಪಡೆದು ವ್ಯಾಪಾರ ನಡೆಸುತ್ತಿರುತ್ತಾರೆ. ಈಗಾಗಲೇ ವಾರ್ಷಿಕ ವಹಿವಾಟು 40 ಲಕ್ಷ ರೂ.ಗಳು (ಸರಕುಗಳ ಪೂರೈಕೆದಾರರು), 20 ಲಕ್ಷ ರೂ.ಗಳು (ಸೇವೆಗಳ ಪೂರೈಕೆದಾರರು) ಮೀರಿರುವ ನೋಂದಣಿ ಪಡೆಯದೇ ಇರುವ ವರ್ತಕರಿಗೆ ನೋಟೀಸ್ ನೀಡುವ ಪ್ರಕ್ರಿಯೆ ನಡೆಯುತ್ತಿದೆ. ನೋಂದಾಯಿತ ವರ್ತಕರು ಇನ್ನು ಮುಂದೆ ರಾಜಿ ತೆರಿಗೆ ಪದ್ಧತಿಯಡಿ ಶೇ.1 ರಂತೆ ತೆರಿಗೆ ಪಾವತಿಸುವುದು ಕಷ್ಟಕರವಾಗಲಾರದು. ಈಗಾಗಲೇ ಶೇ. 90 ರಷ್ಟು ವರ್ತಕರು ರಾಜಿ ತೆರಿಗೆ ಪದ್ಧತಿಯಡಿ ತೆರಿಗೆ ಪಾವತಿಸುತ್ತಿರುವುದರಿಂದ ಉಳಿಕೆ ಶೇ. 10 ರಷ್ಟು ವರ್ತಕರು ತೆರಿಗೆ ಪಾವತಿಸದಿರುವುದು ತರವಲ್ಲ. ಜಿಎಸ್ಟಿ ಕಾಯ್ದೆಯು ಇಂತಹ ತಾರತಮ್ಯಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದೆ.
ನೋಟೀಸ್ ನೀಡಿದ ಬೆನ್ನಲ್ಲೇ ಕೆಲವು ವರ್ತಕರು ಯು.ಪಿ.ಐ ಮೂಲಕ ಹಣಪಡೆಯುವುದನ್ನು ನಿಲ್ಲಿಸಿ, ಗ್ರಾಹಕರಿಂದ ನಗದು ರೂಪದಲ್ಲಿ ಹಣ ಸ್ವೀಕರಿಸುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದೆ. ವರ್ತಕರು ತಾವು ಮಾಡಿದ ವಹಿವಾಟಿನ ಪ್ರತಿಫಲವನ್ನು ಯಾವುದೇ ರೂಪದಲ್ಲಿ ಪಡೆದಿದ್ದರೂ ಜಿ.ಎಸ್.ಟಿ. ತೆರಿಗೆ ಅನ್ವಯವಾಗುತ್ತದೆ.
ಯುಪಿಐ ಈ ರೀತಿ ಪ್ರತಿಫಲ ಪಡೆಯುವ ಒಂದು ಮಾರ್ಗ ಮಾತ್ರ. ವರ್ತಕರು ಯಾವುದೇ ರೂಪದಲ್ಲಾಗಲೀ ವಹಿವಾಟು ನಡೆಸಿದ್ದಲ್ಲಿ ಅಂತಹ ವರ್ತಕರಿಂದ ಜಿ.ಎಸ್.ಟಿ ಕಾಯ್ದೆಯಡಿ ಅನ್ವಯಿಸುವ ತೆರಿಗೆಯನ್ನು ತೆಗೆದುಕೊಳ್ಳುತ್ತದೆ. ಸಂಗ್ರಹಿಸಲು ಇಲಾಖೆಯು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದೆ.
- ಮದುವೆಯಾಗದಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆ
- ಉದ್ಯಮಿಯನ್ನು ಕಟ್ಟಿ ಹಾಕಿ ಚಿನ್ನ,ಹಣ ಲೂಟಿ
- ಸಣ್ಣ ವ್ಯಾಪಾರಿಗಳಿಗೆ ಜಿಎಸ್ಟಿ ನೋಟಿಸ್ ಗೊಂದಲಕ್ಕೆ ಕೇಂದ್ರ ಸರ್ಕಾರವೇ ಹೊಣೆ : ಸಿಎಂ ಸ್ಪಷ್ಟನೆ
- ಉದ್ಧಟತನ ತೋರುವ ಸಚಿವರನ್ನು ಸಂಪುಟದಿಂದ ಕೈಬಿಡುವಂತೆ ಡಿಕೆಶಿಗೆ ‘ಕೈ’ಕಮಾಂಡ್ ಸೂಚನೆ
- ಒಬ್ಬ ಮಹಿಳೆಯೊಂದಿಗೆ ಇಬ್ಬರು ಪುರುಷರ ಮದುವೆ : ಹಿಮಾಚಲದಲ್ಲಿ ಮರುಜೀವ ಪಡೆದ ಬಹುಪತಿತ್ವ