Monday, July 21, 2025
Homeರಾಜ್ಯತಿಂಗಳಾಂತ್ಯದಲ್ಲಿ ಮತ್ತೆ ದೆಹಲಿಗೆ ಸಿಎಂ ಸಿದ್ದರಾಮಯ್ಯ

ತಿಂಗಳಾಂತ್ಯದಲ್ಲಿ ಮತ್ತೆ ದೆಹಲಿಗೆ ಸಿಎಂ ಸಿದ್ದರಾಮಯ್ಯ

CM Siddaramaiah to visit Delhi again by month-end

ಬೆಂಗಳೂರು,ಜು.19– ಮುಖ್ಯಮಂತ್ರಿ ಸಿದ್ದರಾಮಯ್ಯ ಈ ತಿಂಗಳ ಅಂತ್ಯಕ್ಕೆ ದೆಹಲಿಗೆ ಭೇಟಿ ನೀಡುತ್ತಿದ್ದು, ಹೈಕಮಾಂಡ್‌ನೊಂದಿಗಿನ ಸಮಾಲೋಚನೆ ಜೊತೆಯಲ್ಲಿ ರಾಜ್ಯದ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಕೇಂದ್ರದ ವಿವಿಧ ಸಚಿವರನ್ನು ಭೇಟಿ ಮಾಡಿ ಚರ್ಚೆ ನಡೆಸಲಿದ್ದಾರೆ.

ಜು.30ಕ್ಕೆ ಸಿದ್ದರಾಮಯ್ಯ ಮತ್ತು ಕೆಲ ಸಚಿವರು ದೆಹಲಿಗೆ ಭೇಟಿ ನೀಡಲಿದ್ದಾರೆ. ಕನ್ನಡ ಧ್ವಜಕ್ಕೆ ಅಧಿಕೃತ ಸ್ಥಾನಮಾನ ಘೋಷಿಸುವಂತೆ ಈ ವೇಳೆ ಕೇಂದ್ರದ ಮೇಲೆ ಒತ್ತಡ ಹೇರುವ ಸಾಧ್ಯತೆ ಇದೆ. ಈಗಾಗಲೇ ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ದೊರೆತಿದೆ. ಆದರೆ ಕೇಂದ್ರದಿಂದ ದೊರೆಯುತ್ತಿರುವ ಅನುದಾನದ ಪ್ರಮಾಣ ಕಡಿಮೆ ಇದೆ. ತಮಿಳುನಾಡಿಗೆ ಸ್ಥಾನಮಾನ ಸಿಕ್ಕಿದ್ದು, ಹೆಚ್ಚಿನ ಅನುದಾನವು ದೊರೆಯುತ್ತಿದೆ. ಆದರೆ ಕರ್ನಾಟಕದ ವಿಷಯದಲ್ಲಿ ತಾರತಮ್ಯವಾಗುತ್ತಿದೆ ಎಂಬ ಆರೋಪ ಇದೆ.

ಕನ್ನಡಧ್ವಜಕ್ಕೆ ಹಳದಿ ಮತ್ತು ಕೆಂಪು ಮಿಶ್ರಿತ ಬಾವುಟವನ್ನು ರೂಢಿ ಮಾಡಿಕೊಳ್ಳಲಾಗಿದೆ. ಆದರೆ ಅದಕ್ಕೆ ಕೇಂದ್ರಸರ್ಕಾರದಿಂದ ಯಾವುದೇ ಅಧಿಕೃತ ಮಾನ್ಯತೆ ಇಲ್ಲ.ಈ ಹಿಂದೆ ಸಿದ್ದರಾಮಯ್ಯನವರ ಸರ್ಕಾರ 2015 ರಲ್ಲಿ ಈ ಬಗ್ಗೆ ಗರಿಷ್ಠ ಪ್ರಯತ್ನ ಮಾಡಿತ್ತು. ಆದರೆ ಕೇಂದ್ರ ಸರ್ಕಾರ ಅಧಿಕೃತ ಸ್ಥಾನಮಾನವನ್ನು ತಳ್ಳಿಹಾಕಿತ್ತು. ಹೀಗಾಗಿ ಎರಡನೇ ಹಂತದಲ್ಲಿ ರಾಜ್ಯಸರ್ಕಾರ ಮತ್ತೊಂದು ಸುತ್ತಿನ ಪ್ರಯತ್ನ ಮುಂದುವರೆಸಿದೆ.

ಮಹದಾಯಿ, ಮೇಕೆದಾಟು ನೀರಾವರಿ ಯೋಜನೆಗಳಿಗೆ ಕೇಂದ್ರದ ಅನುಮತಿ ಪಡೆಯಲು ರಾಜ್ಯಸರ್ಕಾರ ಸತತ ಪ್ರಯತ್ನ ನಡೆಸಿದೆ. ಈಗಾಗಲೇ ಹಲವು ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಪ್ರಧಾನಿ ಹಾಗೂ ಸಚಿವರನ್ನು ಖುದ್ದು ಭೇಟಿ ಮಾಡಿ ಒತ್ತಡ ಹೇರಿದ್ದಾರೆ. ಆದರೆ ಯಾವುದೂ ಯಶಸ್ವಿಯಾಗಿಲ್ಲ.

ಎರಡು ಯೋಜನೆಗಳಿಗೆ ಸಂಬಂಧಪಟ್ಟಂತೆ ಅರಣ್ಯ ಮತ್ತು ಪರಿಸರ ಇಲಾಖೆಯ ನಿರಕ್ಷೇಪಣೆಯ ಅಗತ್ಯವಿದೆ. ಕೇಂದ್ರ ಸರ್ಕಾರ ಇದನ್ನು ನೀಡದೇ ಸತಾಯಿಸುತ್ತಿರುವುದಾಗಿ ಆರೋಪಗಳು ಕೇಳಿಬಂದಿವೆ.

ಕೃಷ್ಣಾ ನ್ಯಾಯಾಧಿಕರಣದ ತೀರ್ಪಿನ ಅಧಿಸೂಚನೆ ಹೊರಡಿಸಲು ಕೇಂದ್ರದ ಮೇಲೆ ಒತ್ತಡ ಹೇರಲಾಗುತ್ತಿದೆ. 16ನೇ ಹಣಕಾಸಿನ ಆಯೋಗದಲ್ಲಿ ರಾಜ್ಯಕ್ಕೆ ಯಾವುದೇ ಅನ್ಯಾಯವಾಗದಂತೆ ಮುನ್ನೆಚ್ಚರಿಕೆ ವಹಿಸುವ ಸಂಬಂಧಪಟ್ಟಂತೆಯೂ ಪದೇಪದೇ ರಾಜ್ಯನಾಯಕರು ಕೇಂದ್ರದ ಸಚಿವರನ್ನು ಮನವೊಲಿಸುತ್ತಿದ್ದಾರೆ.

ಬೆಂಗಳೂರಿನಲ್ಲಿ ಸುರಂಗರಸ್ತೆ ನಿರ್ಮಾಣಕ್ಕೆ ಈಗಾಗಲೇ ಟೆಂಡರ್‌ ಪ್ರಕ್ರಿಯೆಗಳು ಚಾಲನೆಗೊಂಡಿವೆ. ಯೋಜನೆಯ ನಿರ್ವಹಣೆ ಮತ್ತು ಅನುದಾನದ ಬಗ್ಗೆ ಒಂದಿಷ್ಟು ಗೊಂದಲಗಳಿದ್ದು, ಕೇಂದ್ರ ಹೆದ್ದಾರಿ ಮತ್ತು ಭೂ ಸಾರಿಗೆ ಸಚಿವ ನಿತಿನ್‌ ಗಡ್ಕರಿಯೊಂದಿಗೆ ಚರ್ಚೆ ನಡೆಸುವ ನಿರೀಕ್ಷೆಗಳಿವೆ.

ಇವುಗಳ ನಡುವೆ ಕಾಂಗ್ರೆಸ್‌‍ ಹೈಕಮಾಂಡ್‌ ಮುಖಂಡರನ್ನು ಭೇಟಿ ಮಾಡಿ ಬಾಕಿ ಇರುವ ನಿಗಮ-ಮಂಡಳಿಗಳ ನೇಮಕಾತಿ ಮತ್ತು ವಿಧಾನಪರಿಷತ್‌ನ ನಾಲ್ಕು ಸ್ಥಾನಗಳಿಗೆ ಸದಸ್ಯರ ನೇಮಕಾತಿ ಕುರಿತಂತೆಯೂ ಚರ್ಚೆ ಮಾಡುವ ನಿರೀಕ್ಷೆ ಇದೆ.ಸೆಪ್ಟೆಂಬರ್‌ ಕ್ರಾಂತಿಯ ಬಗ್ಗೆ ಹೇಳಿಕೇಳಿ ಕಿಚ್ಚು ಹಚ್ಚಿದ್ದ ಸಚಿವ ಕೆ.ಎನ್‌.ರಾಜಣ್ಣ ಸೇರಿದಂತೆ ಹಲವರ ವಿರುದ್ಧ ಶಿಸ್ತುಕ್ರಮ ಜರುಗಿಸುವ ನಿಟ್ಟಿನಲ್ಲಿಯೂ ದೆಹಲಿ ಮಟ್ಟದಲ್ಲಿ ಮಾತುಕತೆಗಳಾಗುತ್ತಿವೆ. ಹೀಗಾಗಿ ಈ ತಿಂಗಳ ಅಂತ್ಯದಲ್ಲಿ ಮುಖ್ಯಮಂತ್ರಿ ಹಾಗೂ ಇತರ ಸಚಿವರ ದೆಹಲಿ ಭೇಟಿ ಕುತೂಹಲ ಕೆರಳಿಸಿದೆ.

ಸೆಪ್ಟೆಂಬರ್‌ ಕ್ರಾಂತಿ ಎಂದರೆ ಮುಖ್ಯಮಂತ್ರಿ ಬದಲಾವಣೆ ಎಂದು ಕೆಲವರು ವ್ಯಾಖ್ಯಾನಿಸಿದರೆ, ಇನ್ನೂ ಕೆಲವರು ಕೆಪಿಸಿಸಿ ಅಧ್ಯಕ್ಷರ ಸ್ಥಾನಪಲ್ಲಟ ಎಂಬ ವ್ಯಾಖ್ಯಾನ ಮಾಡಿದರು. ಇದರಲ್ಲಿ ಯಾವುದು ನಿಜ ಎಂಬುದು ಈವರೆಗೂ ಸ್ಪಷ್ಟವಾಗಿಲ್ಲ.ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್‌‍ ಉಸ್ತುವಾರಿ ನಾಯಕ ರಣದೀಪ್‌ ಸಿಂಗ್‌ ಸುರ್ಜೇವಾಲ ಇತ್ತೀಚೆಗೆ ಬೆಂಗಳೂರಿಗೆ ಭೇಟಿ ನೀಡಿ ಶಾಸಕರು, ಸಚಿವರ ಜೊತೆ ಸಮಾಲೋಚನೆ ನಡೆಸಿ ಹೈಕಮಾಂಡ್‌ಗೆ ವರದಿ ನೀಡಿದ್ದರು.

ಅದಕ್ಕೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರ ಜೊತೆಗೂ ಚರ್ಚೆಗಳಾಗಿದ್ದವು. ಆದರೆ ಇನ್ನಷ್ಟು ವಿಚಾರಗಳ ಸಮಾಲೋಚನೆ ಅಗತ್ಯವಿರುವ ಕಾರಣಕ್ಕಾಗಿ ದೆಹಲಿಯಲ್ಲಿ ಸಭೆಗಳು ಮುಂದುವರೆಯಲಿವೆ ಎಂದು ಮೂಲಗಳು ತಿಳಿಸಿವೆ.

RELATED ARTICLES

Latest News