Sunday, July 20, 2025
Homeರಾಜ್ಯಗಗನಕ್ಕೇರಿದ ಖಾಸಗಿ ಆಸ್ಪತ್ರೆಗಳ ಚಿಕಿತ್ಸಾದರ : ಸಚಿವ ಚೆಲುವರಾಯ ಸ್ವಾಮಿ

ಗಗನಕ್ಕೇರಿದ ಖಾಸಗಿ ಆಸ್ಪತ್ರೆಗಳ ಚಿಕಿತ್ಸಾದರ : ಸಚಿವ ಚೆಲುವರಾಯ ಸ್ವಾಮಿ

Private hospitals' treatment costs have skyrocketed: Minister Cheluvaraya Swamy

ಬೆಂಗಳೂರು,ಜು.20- ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳ ಚಿಕಿತ್ಸಾ ದರ ಗಗನಕ್ಕೇರಿದೆ ಎಂದು ಕೃಷಿ ಸಚಿವ ಎನ್‌.ಚೆಲುವರಾಯಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು. ಬಸವೇಶ್ವರನಗರದಲ್ಲಿ ಮಾತೃ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ನೂತನ ಸೆಂಟರ್‌ರ‍ಸ ಆಫ್‌ ಎಕ್ಸಲೆನ್ಸ್ ವಿಭಾಗಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಖಾಸಗಿ ಆಸ್ಪತ್ರೆಗಳಿಗೆ ಸೂಕ್ತ ನಿಯಂತ್ರಣವಿಲ್ಲದೆ ಚಿಕಿತ್ಸಾ ದರ ದುಬಾರಿಯಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಮಾತೃ ಆಸ್ಪತ್ರೆಯು ಕೋವಿಡ್‌ ಸಂದರ್ಭದಲ್ಲಿ ಉತ್ತಮ ಸೇವೆ ನೀಡಿದೆ. ಸಾರ್ವಜನಿಕರಿಗೂ ಉತ್ತಮ ಚಿಕಿತ್ಸೆ ನೀಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಬಮೂಲ್‌ ಅಧ್ಯಕ್ಷ ಹಾಗೂ ಮಾಜಿ ಸಂಸದ ಡಿ.ಕೆ.ಸುರೇಶ್‌ ಮಾತನಾಡಿ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳು ಇತ್ತೀಚೆಗೆ ದುಬಾರಿಯಾಗಿವೆ. ಉಲ್ಲಾಸ ಜೀವನಕ್ಕಾಗಿ ಆರೋಗ್ಯವನ್ನು ಹಾಳು ಮಾಡಿಕೊಳ್ಳುವುದು ಸರಿಯಲ್ಲ. ಶಿಸ್ತುಬದ್ಧ ಜೀವನ ಶೈಲಿ, ಕೆಲಸ, ಪರಿಸರವಿದ್ದರೆ ಆರೋಗ್ಯ ಸುಧಾರಿಸುವುದಲ್ಲದೆ ಆಯುಸ್ಸು ವೃದ್ಧಿಯಾಗಲಿದೆ. ಶುದ್ಧ ಗಾಳಿ, ನೀರು, ಆಹಾರ ಬಳಸಿದರೆ ಉತ್ತಮ ಆರೋಗ್ಯ ದೊರೆಯಲಿದೆ ಎಂದರು.

ಮಾಧ್ಯಮಗಳು ಹೃದಯಾಘಾತದ ಬಗ್ಗೆ ಗಾಬರಿಯಾಗುವ ರೀತಿ ಪ್ರಚಾರ ನೀಡದೇ ಧೈರ್ಯ ತುಂಬಿ ಆರೋಗ್ಯ ವೃದ್ಧಿಸಿಕೊಳ್ಳಲು ನೆರವಾಗುವಂತಹ ಸುದ್ದಿ ಪ್ರಸಾರ ಮಾಡಬೇಕು. ಎಂದು ಸಲಹೆ ಮಾಡಿದರು.
ಮಾತೃ ಆಸ್ಪತ್ರೆಯು ಮೊದಲಿನಿಂದಲೂ ಉತ್ತಮ ಆರೋಗ್ಯ ಸೇವೆಯನ್ನು ಸಾರ್ವಜನಿಕರಿಗೆ ಒದಗಿಸುತ್ತಿದೆ. ಈ ಭಾಗಕ್ಕೆ ಇನ್ನು ಹೆಚ್ಚು ಆರೋಗ್ಯ ಸೇವೆ ಒದಗಿಸಲಿ ಎಂದರು.ಕೆಎಂಎಫ್‌ ರೈತರ ಸಂಸ್ಥೆಯಾಗಿದ್ದು, ನಂದಿನಿ ಹಾಲು, ತುಪ್ಪ ಹಾಗೂ ಉತ್ಪನ್ನಗಳನ್ನು ಹೆಚ್ಚು ಬಳಸುವಂತೆ ಕರೆ ನೀಡಿದರು.

ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್‌ ಮಾತನಾಡಿ, ವೈದ್ಯರನ್ನು ದೈವ ಸ್ವರೂಪಿಯಾಗಿ ಕಾಣುತ್ತಾರೆ. ಸ್ಪರ್ಧಾತಕ ಪ್ರಪಂಚದಲ್ಲಿ ಆರೋಗ್ಯ ಕ್ಷೇತ್ರ ಹೆಚ್ಚು ಪ್ರಾಮುಖ್ಯ ಪಡೆದಿದ್ದು, ಆರೋಗ್ಯ ಸಮಸ್ಯೆ ದೊಡ್ಡದಾಗುತ್ತಿದೆ. ಮಾತೃ ಆಸ್ಪತ್ರೆಯು ಆರೋಗ್ಯ ಕ್ಷೇತ್ರಕ್ಕೆ ಉತ್ತಮ ಕೊಡುಗೆ ನೀಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಮಾಜಿ ಸಚಿವ ಹಾಗೂ ಶಾಸಕ ಕೆ.ಗೋಪಾಲಯ್ಯ ಮಾತನಾಡಿ, ಮಾತೃ ಆಸ್ಪತ್ರೆಯು ಕೋವಿಡ್‌ ಸಮಯದಲ್ಲಿ ಸೂಕ್ತ ಚಿಕಿತ್ಸೆ ನೀಡಿ ನೂರಾರು ಮಂದಿಯ ಜೀವ ಉಳಿಸಿದೆ. ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಈ ಆಸ್ಪತ್ರೆ ಇನ್ನಷ್ಟು ಎತ್ತರಕ್ಕೆ ಬೆಳೆದು ಜನರಿಗೆ ಆರೋಗ್ಯ ಸೇವೆ ಒದಗಿಸಲಿ ಎಂದು ಹಾರೈಸಿದರು.

ಮಾಜಿ ಸಂಸದ ಎಲ್‌.ಆರ್‌.ಶಿವರಾಮೇಗೌಡ ಮಾತನಾಡಿ, ರೋಗಗಳು ವೇಗವಾಗಿ ಉಲ್ಬಣಗೊಳ್ಳುತ್ತಿವೆ. ಹೊಸ ಹೊಸ ರೋಗಗಳು ಬರುತ್ತಿವೆ. ಈ ಸಂದರ್ಭದಲ್ಲಿ ಹೆಚ್ಚು ಹೆಚ್ಚು ಸಂಶೋಧನೆಗಳಾಗಬೇಕು. ಬೆಂಗಳೂರಿನಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳು ಹೆಚ್ಚೆಚ್ಚು ಪ್ರಾರಂಭವಾಗುತ್ತಿವೆ. ಈ ಆಸ್ಪತ್ರೆ ಬಹುರಾಷ್ಟ್ರೀಯ ಮಟ್ಟದ ಆಸ್ಪತ್ರೆಯಾಗಿ ಬೆಳೆಯಲಿ ಎಂದು ಹಾರೈಸಿದರು.

ಶಾಸಕ ಡಾ.ಎಚ್‌.ಡಿ.ರಂಗನಾಥ್‌ ಮಾತನಾಡಿ, ಆರೋಗ್ಯ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ ಮಹತ್ತರ ಪಾತ್ರ ವಹಿಸುತ್ತಿದೆ. ರೋಬೊಟಿಕ್‌ ತಂತ್ರಜ್ಞಾನದಿಂದ ಸಮಯ ಉಳಿಕೆಯಾದರೂ ವೆಚ್ಚ ದುಬಾರಿಯಾಗುತ್ತಿದೆ ಎಂದರು.ವಿಧಾನಪರಿಷತ್‌ ಸದಸ್ಯ ದಿನೇಶ್‌ ಗೂಳಿಗೌಡ ಮಾತನಾಡಿ, ರಾಜ್ಯದಲ್ಲಿ ಶೇ.40ರಷ್ಟು ವೈದ್ಯರು, ವೈದ್ಯಕೀಯ ಸಿಬ್ಬಂದಿ ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರತೆ ಇದ್ದು, ಖಾಸಗಿ ಆಸ್ಪತ್ರೆಗಳು ಗುಣಮಟ್ಟದ ವೈದ್ಯಕೀಯ ಸೇವೆ ನೀಡುತ್ತಿವೆ. ಗ್ರಾಮೀಣಾ ಭಾಗದಲ್ಲೂ ಇಂಥ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ತೆರೆಯಬೇಕು ಎಂದು ಸಲಹೆ ಮಾಡಿದರು.

ಕಾರ್ಯಕ್ರಮದಲ್ಲಿ ವಿಧಾನಪರಿಷತ್‌ ಸದಸ್ಯ ಮಧು.ಜಿ. ಮಾದೇಗೌಡ, ವಿಧಾನಪರಿಷತ್‌ನ ಮಾಜಿ ಉಪಸಭಾಪತಿ ಪುಟ್ಟಣ್ಣ, ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಡಾ.ಭಗವಾನ್‌.ಬಿ.ಸಿ, ಸೆನೆಟ್‌ ಸದಸ್ಯಡಾ.ಮಂಜುನಾಥ್‌ ಗೌಡ, ಬಿಬಿಎಂಪಿ ಮಾಜಿ ಉಪಮೇಯರ್‌ ಹೇಮಲತಾ ಗೋಪಾಲಯ್ಯ, ಬಿಬಿಎಂಪಿ ಮಾಜಿ ಸದಸ್ಯ ಪದರಾಜ್‌, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಸಂಸ್ಥಾಪಕ ಡಾ.ಕೃಷ್ಣ ರಾಜೇಂದ್ರ,ಅಧ್ಯಕ್ಷ ಎಚ್‌.ಕೆ.ಮಹೇಂದ್ರ, ಸಿಇಒ ಪ್ರೀತಿ ಮಹೇಂದ್ರ, ಡಾ.ಸಂಜಯ್‌ ಗೌಡ ಉಪಸ್ಥಿತರಿದ್ದರು.

RELATED ARTICLES

Latest News