Sunday, July 20, 2025
Homeರಾಜ್ಯಉದ್ಧಟತನ ತೋರುವ ಸಚಿವರನ್ನು ಸಂಪುಟದಿಂದ ಕೈಬಿಡುವಂತೆ ಡಿಕೆಶಿಗೆ 'ಕೈ'ಕಮಾಂಡ್‌ ಸೂಚನೆ

ಉದ್ಧಟತನ ತೋರುವ ಸಚಿವರನ್ನು ಸಂಪುಟದಿಂದ ಕೈಬಿಡುವಂತೆ ಡಿಕೆಶಿಗೆ ‘ಕೈ’ಕಮಾಂಡ್‌ ಸೂಚನೆ

Congress High Command slams ministers for their arrogance

ಬೆಂಗಳೂರು,ಜು.20- ರಾಜ್ಯದ ಕಾಂಗ್ರೆಸ್‌‍ ಸರ್ಕಾರಕ್ಕೆ ಮುಜುಗರ ಉಂಟು ಮಾಡುವ ಸಚಿವರನ್ನು ಸಂಪುಟದಿಂದ ಕೈಬಿಡುವ ಬಗ್ಗೆ ಗಂಭೀರ ಚಿಂತನೆ ನಡೆಸುವಂತೆ ಹೈಕಮಾಂಡ್‌ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರಿಗೆ ಸೂಚಿಸಿರುವುದು ಭಾರೀ ಸಂಚಲನ ಮೂಡಿಸಿದೆ.

ಪದೇ ಪದೇ ವ್ಯತಿರಿಕ್ತ ಹೇಳಿಕೆಗಳು ಹಾಗೂ ನಡುವಳಿಕೆಗಳ ಮೂಲಕ ಸರ್ಕಾರಕ್ಕೆ ಕೆಲವು ಸಚಿವರು ಮುಜುಗರ ಉಂಟುಮಾಡುತ್ತಿದ್ದಾರೆ. ಎಷ್ಟೇ ಬಾರಿ ಸೂಚನೆ ನೀಡಿದ್ದರೂ ಗಂಭೀರವಾಗಿ ಅದನ್ನು ತೆಗೆದುಕೊಳ್ಳುತ್ತಿಲ್ಲ. ತಮಗೆ ಗಾಡ್‌ಫಾದರ್‌ ಇದ್ದಾರೆ ಎಂಬ ಕಾರಣಕ್ಕೆ ಮನಸ್ಸಿಗೆ ಬಂದಂತೆ ನಡೆದು ಕೊಳ್ಳುತ್ತಿದ್ದಾರೆ ಎಂದು ಹೈಕಮಾಂಡ್‌ ಅಸಮಾಧಾನ ವ್ಯಕ್ತಪಡಿಸಿದೆ.

ಪಕ್ಷದಲ್ಲಿ ಹೈಕಮಾಂಡ್‌ ಮಾತ್ರ ಗಾಡ್‌ಫಾದರ್‌. ಉಳಿದಂತೆ ಯಾರೂ ದೊಡ್ಡವರಲ್ಲ ಎಂಬ ಸಂದೇಶ ರವಾನಿಸುವ ಮೂಲಕ ಗುಂಪುಗಾರಿಕೆಯಲ್ಲಿ ಮನಸ್ಸೋ ಇಚ್ಚೆ ವರ್ತಿಸುವವರಿಗೆ ಬ್ರೇಕ್‌ ಹಾಕುವಂತೆ ಹೈ ಕಮಾಂಡ್‌ ಬ್ರೇಕ್‌ಗೆ ಸೂಚಿಸಿರುವುದಾಗಿ ತಿಳಿದು ಬಂದಿದೆ.

ಸಚಿವರಾದ ಕೆ.ಎನ್‌. ರಾಜಣ್ಣ, ಜಮೀರ್‌ ಅಹಮದ್‌ ಖಾನ್‌ ಸೇರಿದಂತೆ ಅನೇಕರು ತಮ ಹೇಳಿಕೆಗಳ ಮೂಲಕ ಕಾಂಗ್ರೆಸ್‌‍ ಪಕ್ಷಕ್ಕೆ ಮುಜುಗರ ಉಂಟುಮಾಡುತ್ತಿದ್ದು, ಜೆಡಿಎಸ್‌‍ ಹಾಗೂ ಬಿಜೆಪಿ ಪಕ್ಷಗಳಿ ಗೆ ಟೀಕಾಸ್ತ್ರ ಒದಗಿಸಿಕೊಡುತ್ತಿದ್ದಾರೆ. ಎಷ್ಟು ಬಾರಿ ಸೂಚನೆ ನೀಡಿದ್ದರೂ ಸಚಿವರು ತಮ ನಡುವಳಿಕೆಗಳನ್ನು ಬದಲಾಯಿಸಿಕೊಳ್ಳುತ್ತಿಲ್ಲ. ಹೀಗಾಗಿ ಉದ್ದಟತನ ತೋರಿಸುವ ಸಚಿವರುಗಳನ್ನು ಸಂಪುಟದಿಂದ ಕೈಬಿಟ್ಟು ಕನಿಷ್ಟ ಪಕ್ಷ ಉತ್ಸಾಹಿ ಯುವಕರಿಗೆ ಅವಕಾಶ ಮಾಡಿಕೊಡುವಂತೆ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ಅವರಿಗೆ ಹೈ ಕಮಾಂಡ್‌ ತಾಕೀತು ಮಾಡಿದೆ.

ಈ ಸಂದೇಶವನ್ನು ಡಿ.ಕೆ. ಶಿವಕುಮಾರ್‌ ಸಕಾರಾತಕವಾಗಿ ಪರಿಗಣಿಸಿದ್ದು, ಸಿದ್ದರಾಮಯ್ಯ ತಮನ್ನು ಬೆಂಬಲಿಸುವ ಸಚಿವರನ್ನು ಸಂಪುಟದಿಂದ ಕೈಬಿಡಲು ನಿರಾಕರಿಸಿದ್ದು, ಸದ್ಯಕ್ಕೆ ಸಂಪುಟ ಪುನರ್‌ರಚನೆ ಪ್ರಸ್ತಾವನೆ ಇಲ್ಲ. ಅಂತಹ ಯಾವ ಬೆಳವಣಿಗೆಗೂ ತಾವು ಸಹಮತಿಸುವುದಿಲ್ಲ ಎಂದು ಸಂದೇಶ ರವಾನಿಸುವ ಮೂಲಕ ಸಡ್ಡು ಹೊಡೆದಿದ್ದಾರೆ.

ಇತ್ತೀಚೆಗೆ ಸಿದ್ದರಾಮಯ್ಯ ಅವರು ಹೈಕಮಾಂಡ್‌ ನಿಲುವಿಗೆ ಬದ್ಧ ಎಂದು ಹೇಳುತ್ತಲೇ ತಮದೇ ಆದ ದಾಟಿಯ ರಾಜಕಾರಣಕ್ಕೆ ಮುಂದಾಗಿದ್ದಾರೆ. ತಾವು ಕಾಂಗ್ರೆಸ್‌‍ ಮಟ್ಟದಲ್ಲಿ ಅತಿ ದೊಡ್ಡ ನಾಯಕರು ಎಂಬ ನಿಲುವಿನಲ್ಲಿಯೇ ವರ್ತಿಸುತ್ತಿದ್ದು ಇದನ್ನು ಸಹಿಸಿಕೊಳ್ಳಲು ಹೈಕಮಾಂಡ್‌ನ ಮುಖಂಡರಿಗೆ ಮುಜುಗರವಾಗುತ್ತಿದೆ ಎಂಬ ಮಾತುಗಳಿವೆ.

ಇತ್ತೀಚಿನ ಕೆಲ ಕಾರ್ಯಕ್ರಮಗಳಲ್ಲೂ ಅದೇ ರೀತಿಯ ನಡವಳಿಕೆ ಅನುಸರಿಸುತ್ತಿರುವುದು ಕಂಡು ಬರುತ್ತಿದೆ. ನಿಗಮ ಮಂಡಳಿಗಳ ನೇಮಕಾತಿ ಹಾಗೂ ವಿಧಾನ ಪರಿಷತ್ತಿನ ಸದಸ್ಯರ ನಿಯೋಜನೆ ಸೇರಿದಂತೆ ಹಲವಾರು ವಿಚಾರಗಳಲ್ಲಿ ಹೈಕಮಾಂಡ್‌ ಹೇಳಿದ್ದಕ್ಕಿಂತಲೂ ವ್ಯತಿರಿಕ್ತವಾದ ನಿಲುವುಗಳನ್ನು ಸಿದ್ದರಾಮಯ್ಯ ಮತ್ತು ಸಚಿವರು ಅನುಸರಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಹೀಗಾಗಿ ಸಿದ್ದರಾಮಯ್ಯ ಅವರ ಬಲಾ-ಬಲ ಕುಗ್ಗಿಸಲು ಹೈಕಮಾಂಡ್‌ ಸಂಪುಟ ಪುನರ್‌ರಚನೆ ನೆಪದಲ್ಲಿ ಸಿದ್ದರಾಮಯ್ಯ ಅವರ ಬೆಂಬಲಿಗರನ್ನು ಕೈ ಬಿಡುವ ಮೂಲಕ ಹಂತಹಂತವಾಗಿ ಸಿದ್ದರಾಮಯ್ಯ ಅವರನ್ನು ಮೂಲೆ ಗುಂಪು ಮಾಡುವ ಸಂಚು ನಡೆದಿದೆ ಎಂದು ಮೂಲಗಳು ತಿಳಿಸಿವೆ.

RELATED ARTICLES

Latest News