ಬೆಂಗಳೂರು, ಜುಲೈ 21: ಭಾರತ ಸರ್ಕಾರವು 2025 ನೇ ಜುಲೈ 11 ರಂದು ಸಚಿವ ಸಂಪುಟದ ನೇಮಕಾತಿ ಸಮಿತಿಯ ಮೂಲಕ ಕರ್ನಾಟಕದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಡಾ.ಎಂ.ಕೆ. ರಮೇಶ್ ಅವರನ್ನು ನವದೆಹಲಿಯ ರಾಷ್ಟ್ರೀಯ ವೈದ್ಯಕೀಯ ಆಯೋಗದ ಅಡಿಯಲ್ಲಿರುವ ನಾಲ್ಕು ಸ್ವಾಯತ್ತ ಸಂಸ್ಥೆಗಳಲ್ಲಿ ಒಂದಾದ ವೈದ್ಯಕೀಯ ಮೌಲ್ಯಮಾಪನ ಮತ್ತು ರೇಟಿಂಗ್ ಮಂಡಳಿಯ ನೂತನ ಅಧ್ಯಕ್ಷರನ್ನಾಗಿ ನಾಲ್ಕು ವರ್ಷಗಳ ಅವಧಿಗೆ ನೇಮಿಸಿದೆ. ಇದಕ್ಕೂ ಮೊದಲು ಇವರು ಎನ್.ಎಂ.ಸಿ. ಯ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮಂಡಳಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಕರ್ನಾಟಕದ ದಾವಣಗೆರೆ ಜಿಲ್ಲೆಯ ಮಾಯಕೊಂಡದವರಾದ ಡಾ. ರಮೇಶ್ ಅವರು ಒಬ್ಬ ಪ್ರಖ್ಯಾತ ಶಸ್ತ್ರಚಿಕಿತ್ಸಕ, ಶಿಕ್ಷಣ ತಜ್ಞ ಮತ್ತು ಆಡಳಿತಾಧಿಕಾರಿಯಾಗಿದ್ದರು. ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಿಂದ ಜನರಲ್ ಸರ್ಜರಿಯಲ್ಲಿ ಎಂ.ಬಿ.ಬಿ.ಎಸ್. ಮತ್ತು ಎಂ.ಎಸ್. ಪದವಿ ನಂತರ ಎಡಿನ್‍ಬರ್ಗ್‍ನ ರಾಯಲ್ ಕಾಲೇಜ್ ಆಫ್ ಸರ್ಜನ್ಸ್ ನಿಂದ ಫೆಲೋಶಿಪ್ ಪಡೆದಿದ್ದಾರೆ.
ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ತಮ್ಮ ಅದ್ಭುತ ವೃತ್ತಿಜೀವನವನ್ನು ಪ್ರಾರಂಭಿಸಿದ ಇವರು, ಉಪನ್ಯಾಸಕರಿಂದ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥರವರೆಗೆ ಕೆಲಸ ನಿರ್ವಹಿಸಿದ್ದಾರೆ. ನಂತರ ಅವರು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯಕ್ಕೆ ಸೇರಿದರು. 2017 ರಿಂದ 2018 ರವರೆಗೆ ರಿಜಿಸ್ಟ್ರಾರ್ (ಮೌಲ್ಯಮಾಪನ), ಹಂಗಾಮಿ ಉಪಕುಲಪತಿಗಳಾಗಿ ಸೇವೆ ಸಲ್ಲಿಸಿದರು. ಫೆಬ್ರವರಿ 11, 2022 ರಂದು ಮತ್ತೆ ಉಪಕುಲಪತಿಯಾಗಿ ಅಧಿಕಾರ ವಹಿಸಿಕೊಂಡರು. ಎರಡು ಬಾರಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಸೆನೆಟ್‍ಗೆ ಆಯ್ಕೆಯಾಗಿದ್ದರು ಮತ್ತು ಅದರ ಅಧ್ಯಯನ ಮಂಡಳಿಯ (ಕ್ಲಿನಿಕಲ್-ಪಿಜಿ) ಅಧ್ಯಕ್ಷರಾಗಿದ್ದರು. 2022 ರಿಂದ 2025ರವರೆಗೆ ಬ್ಲಾಕ್‍ನಲ್ಲಿ ಉಪಕುಲಪತಿಯಾಗಿದ್ದಾಗ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕಲಿಕಾ ನಿರ್ವಹಣಾ ವ್ಯವಸ್ಥೆ ಕುರಿತು 24,000 ಶಿಕ್ಷಕರನ್ನು ಒಳಗೊಂಡು ಪಿಜಿ ತರಬೇತಿ ಕಾರ್ಯಕ್ರಮವನ್ನು ಜಾರಿಗೆ ತಂದಿದ್ದಾರೆ.
2020 ರಲ್ಲಿ, ಶ್ರೀಯುತರನ್ನು ಎನ್.ಎಂ.ಸಿ. ಯ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದ್ದು, ಅಲ್ಲಿ ಅವರು ರಾಷ್ಟ್ರೀಯವಾಗಿ ಉತ್ತಮ ಅಭ್ಯಾಸಗಳೊಂದಿಗೆ ನೀತಿಯನ್ನು ರೂಪಿಸಿದರು. ಅನೇಕ ಎಂ.ಎಸ್. ಪ್ರಬಂಧಗಳನ್ನು ಮೇಲ್ವಿಚಾರಣೆ ಮಾಡಿದ್ದಾರೆ. ಬಹುಕೇಂದ್ರ ಕ್ಲಿನಿಕಲ್ ಪ್ರಯೋಗಗಳನ್ನು ಮುನ್ನಡೆಸಿದ್ದಾರೆ, ಹಲವಾರು ಅಂತರರಾಷ್ಟ್ರೀಯ ಪ್ರಕಟಣೆಗಳನ್ನು ಬರೆದಿದ್ದಾರೆ ಮತ್ತು ವೃತ್ತಿಪರ ಸಂಘಗಳಲ್ಲಿ ಪ್ರಮುಖ ಸ್ಥಾನಗಳನ್ನು ಹೊಂದಿದ್ದಾರೆ.
ರಾಜ್ಯ ಮತ್ತು ರಾಷ್ಟ್ರ ಎರಡನ್ನೂ ಪ್ರತಿನಿಧಿಸುವ ವೈದ್ಯಕೀಯ ನಿಯಂತ್ರಣದ ಅತ್ಯುನ್ನತ ಮಟ್ಟದಲ್ಲಿ ಇವರು ಇರುವುದು ಕರ್ನಾಟಕಕ್ಕೆ ಹೆಮ್ಮೆಯ ವಿಷಯವಾಗಿದೆ. ಅವರು ಸಮಗ್ರತೆ, ಪಾಂಡಿತ್ಯ ಮತ್ತು ಸಮರ್ಪಣೆಯ ಅತ್ಯುನ್ನತ ಮಾನದಂಡಗಳನ್ನು ಎತ್ತಿಹಿಡಿಯುವ ವಿಶ್ವಾಸವಿದೆ. ಕರ್ನಾಟಕ ರಾಜ್ಯ, ವಿಶೇಷವಾಗಿ ಅದರ ವೈದ್ಯಕೀಯ ಭ್ರಾತೃತ್ವ, ಡಾ.ರಮೇಶ್ ಅವರನ್ನು ರಾಷ್ಟ್ರೀಯ ವೈದ್ಯಕೀಯ ಆಯೋಗದ ವೈದ್ಯಕೀಯ ಮೌಲ್ಯಮಾಪನ ಮತ್ತು ರೇಟಿಂಗ್ ಮಂಡಳಿಯ ಮುಖ್ಯಸ್ಥರನ್ನಾಗಿ ನೇಮಿಸಿರುವುದು ಹೆಮ್ಮೆಯ ವಿಷಯ. ಅವರ ನೇಮಕಾತಿಯು ವೈದ್ಯಕೀಯ ಶ್ರೇಷ್ಠತೆ ಮತ್ತು ಸಹಾನುಭೂತಿಯ ನಾಯಕತ್ವಕ್ಕೆ ಕರ್ನಾಟಕದ ದೀರ್ಘಕಾಲದ ಬದ್ಧತೆಯನ್ನು ಪ್ರತಿಬಿಂಬಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.