Wednesday, July 23, 2025
Homeಬೆಂಗಳೂರುಬಿಬಿಎಂಪಿಯನ್ನು ಐದು ಪಾಲಿಕೆಗಳನ್ನು ಮಾಡಿ ಮೂಲ ನಿವಾಸಿಗಳನ್ನು ನೇಪಥ್ಯಕ್ಕೆ ಸರಿಸುವ ದೊಡ್ಡ ಸಂಚು : ಎನ್‌.ಆರ್‌.ರಮೇಶ್‌...

ಬಿಬಿಎಂಪಿಯನ್ನು ಐದು ಪಾಲಿಕೆಗಳನ್ನು ಮಾಡಿ ಮೂಲ ನಿವಾಸಿಗಳನ್ನು ನೇಪಥ್ಯಕ್ಕೆ ಸರಿಸುವ ದೊಡ್ಡ ಸಂಚು : ಎನ್‌.ಆರ್‌.ರಮೇಶ್‌ ಆರೋಪ

big conspiracy to divide BBMP into five corporations : NR Ramesh

ಬೆಂಗಳೂರು, ಜು.22– ನಾಡಪ್ರಭು ಕೆಂಪೇಗೌಡರು ನಿರ್ಮಿಸಿರುವ ಬೆಂಗಳೂರು ಮಹಾನಗರವನ್ನು ಗ್ರೇಟರ್‌ ಬೆಂಗಳೂರು ರಚನೆ ಹೆಸರಿನಲ್ಲಿ ಐದು ಪಾಲಿಕೆಗಳನ್ನಾಗಿ ಮಾಡಲು ಹೊರಟಿರುವ ಸಿದ್ಧರಾಮಯ್ಯ ಸರ್ಕಾರದ ನಿರ್ಣಯವು ಅತ್ಯಂತ ಅವೈಜ್ಞಾನಿಕವಾಗಿದೆ ಮತ್ತು ಇಲ್ಲಿನ ಮೂಲ ನಿವಾಸಿಗಳನ್ನು ಸಂಪೂರ್ಣವಾಗಿ ನೇಪಥ್ಯಕ್ಕೆ ಸರಿಸುವ ದೊಡ್ಡ ಸಂಚು ಎಂದು ಬಿಜೆಪಿ ಮುಖಂಡ ಎನ್‌.ಆರ್‌.ರಮೇಶ್‌ ಆರೋಪಿಸಿದ್ದಾರೆ.

ರಾಷ್ಟ್ರ ರಾಜಧಾನಿ ನವ ದೆಹಲಿಯನ್ನು ಮೂರು ಪಾಲಿಕೆಗಳನ್ನಾಗಿ ಮಾಡಿದ ನಂತರ ಅಲ್ಲಿ ಉಂಟಾದ ಆರ್ಥಿಕ ಅಸಮತೋಲನ, ನಿರುದ್ಯೋಗ ಸಮಸ್ಯೆ, ರಿಯಲ್‌ ಎಸ್ಟೆಟ್‌ ಮೊದಲಾದ ಸಮಸ್ಯೆಗಳಿಂದ ಪಾರಾಗಲು ಪುನಃ ಆ ಮೂರು ಪಾಲಿಕೆಗಳನ್ನು ಒಂದು ಮಾಡಿರುವ ವಿಷಯ ನಮ್ಮ ಕಣ್ಮುಂದೆಯೇ ಇದೆ.

ಮೂರು ಕೋಟಿ ನಲವತ್ತು ಲಕ್ಷ ಜನಸಂಖ್ಯೆ ಹೊಂದಿರುವ ದೇಶದ ರಾಜಧಾನಿ ನವ ದೆಹಲಿ, ಎರಡು ಕೋಟಿ ಹದಿನೇಳು ಲಕ್ಷ ಜನಸಂಖ್ಯೆ ಹೊಂದಿರುವ ಮುಂಬೈ, ಒಂದು ಕೋಟಿ ಐವತ್ತಾರು ಲಕ್ಷ ಜನಸಂಖ್ಯೆ ಹೊಂದಿರುವ ಕೊಲ್ಕತ್ತಾ, ಒಂದು ಕೋಟಿ ಇಪ್ಪತ್ತೆರಡು ಲಕ್ಷ ಜನಸಂಖ್ಯೆ ಹೊಂದಿರುವ ಚೆನ್ನೈ ಮತ್ತು ಒಂದು ಕೋಟಿ ಹನ್ನೆರಡು ಲಕ್ಷ ಜನಸಂಖ್ಯೆ ಹೊಂದಿರುವ ಹೈದರಾಬಾದ್‌ ನಗರಗಳಲ್ಲಿ ಒಂದೊಂದೇ ಮಹಾನಗರ ಪಾಲಿಕೆಗಳಿರುವಾಗ, ಒಂದು ಕೋಟಿ ನಲವತ್ತು ಲಕ್ಷ ಜನಸಂಖ್ಯೆ ಹೊಂದಿರುವ ಬೆಂಗಳೂರು ಮಹಾನಗರವನ್ನು ಐದು ಭಾಗಗಳನ್ನಾಗಿ ಮಾಡುವ ಅವಶ್ಯಕತೆ ಏನಿತ್ತು ಎಂದು ಅವರು ಪ್ರಶ್ನಿಸಿದ್ದಾರೆ.

ಬೆಂಗಳೂರು ಮಹಾನಗರವನ್ನು ಐದು ತುಂಡುಗಳನ್ನಾಗಿ ಮಾಡಿ ಪುರಸಭೆಗಳ ರೀತಿಯಲ್ಲಿ ಐದು ಪಾಲಿಕೆಗಳನ್ನಾಗಿ ವಿಭಜಿಸಿರುವ ಸಿದ್ಧರಾಮಯ್ಯ ಸರ್ಕಾರದ ಉದ್ದೇಶ ತಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲೇಬೇಕೆಂಬ ಹಪಾಹಪಿಯಲ್ಲಿ – ದೊಡ್ಡ ಸಂಚನ್ನು ರೂಪಿಸಿರುವುದು ಎಂತಹ ಮೂರ್ಖನಿಗೂ ಅರ್ಥವಾಗುವ ಸತ್ಯ ವಾಗಿದೆ !!!1)ನಡೆಸಿರುವ ಸಂಚಾಗಿದೆ ಎಂದು ಅವರು ದೂರಿದ್ದಾರೆ.

ಸಿದ್ಧರಾಮಯ್ಯ ಸರ್ಕಾರವು ರಚಿಸಿರುವ ಐದು ಪಾಲಿಕೆಗಳಿಗೆ ವಾರ್ಷಿಕ ಆಸ್ತಿ ತೆರಿಗೆ ಸಂಗ್ರಹದ ತಲಾ ಆದಾಯ ನೋಡುವುದಾದರೆ ಕೇಂದ್ರ ಪಾಲಿಕೆಯಲ್ಲಿ 400 ಕೋಟಿ, ಉತ್ತರ ಪಾಲಿಕೆಯಲ್ಲಿ 600 ಕೋಟಿ, ದಕ್ಷಿಣ ಪಾಲಿಕೆಯಲ್ಲಿ 700 ಕೋಟಿ, ಪೂರ್ವ ಪಾಲಿಕೆಯಲ್ಲಿ 1,500 ಕೋಟಿ ಮತ್ತು ಪಶ್ಚಿಮ ಪಾಲಿಕೆಯಲ್ಲಿ 600 ಕೋಟಿ ರೂಪಾಯಿಗಳಷ್ಟಿರುತ್ತದೆ. ಇವುಗಳ ಪೈಕಿ ಪೂರ್ವ ಪಾಲಿಕೆಯು ಆರ್ಥಿಕವಾಗಿ ಬಹಳ ಶ್ರೀಮಂತ ಪಾಲಿಕೆ ಎನಿಸಿಕೊಂಡರೆ, ಕೇಂದ್ರ ಪಾಲಿಕೆಯು ಆರ್ಥಿಕವಾಗಿ ಬಹಳ ಸಂಕಷ್ಟಕ್ಕೀಡಾಗುವ ಬಡ ಪಾಲಿಕೆಯಾಗುತ್ತದೆ. ಇದು ಐದು ಪಾಲಿಕೆಗಳ ನಡುವಿನ ದೊಡ್ಡ ಆರ್ಥಿಕ ಅಸಮತೋಲನ ಕ್ಕೆ ಕಾರಣವಾಗುತ್ತದೆ.

ಸರ್ಕಾರದ ಈ ನಿರ್ಣಯ ಪ್ರಾದೇಶಿಕ ಅಸಮತೋಲನಕ್ಕೂ ಕಾರಣವಾಗಲಿದೆ. ನಗರದ ಮೂಲ ನಿವಾಸಿಗಳನ್ನು ಮತ್ತು ಮೂಲ ಭಾಷೆಯನ್ನು ಮೂಲೆಗುಂಪು ಮಾಡುವ ಸಿದ್ಧರಾಮಯ್ಯ ಸರ್ಕಾರದ ಕನ್ನಡ ವಿರೋಧಿ ನಿರ್ಣಯದಿಂದಾಗಿ ಕೇಂದ್ರ ಪಾಲಿಕೆಯು ಸಂಪೂರ್ಣವಾಗಿ ಉರ್ದು ಮತ್ತು ತಮಿಳುಮಯ, ಉತ್ತರ ಪಾಲಿಕೆಯು ಸಂಪೂರ್ಣವಾಗಿ ಉರ್ದು ಮತ್ತು ತೆಲುಗುಮಯ, ದಕ್ಷಿಣ ಪಾಲಿಕೆಯು ಉರ್ದು, ತೆಲುಗು ಮತ್ತು ಭಾಗಶಃ ಕನ್ನಡಮಯ, ಪೂರ್ವ ಪಾಲಿಕೆಯು ಸಂಪೂರ್ಣವಾಗಿ ತೆಲುಗು ಮತ್ತು ಉತ್ತರ ಭಾರತೀಯ ಭಾಷಾಮಯ ಹಾಗೂ ಪಶ್ಚಿಮ ಪಾಲಿಕೆಯು ಮಾತ್ರವೇ ಕನ್ನಡಮಯ ಪಾಲಿಕೆಗಳಾಗಿ ರೂಪುಗೊಳ್ಳಲಿವೆ.

ಎಲ್ಲಾ ಪಾಲಿಕೆಗಳಲ್ಲೂ ಹಿಡಿತ ಸಾಧಿಸಬೇಕೆಂಬ ಕಾಂಗ್ರೆಸ್‌‍ ಪಕ್ಷದ ದುರುದ್ದೇಶ ಕನ್ನಡಿಗರನ್ನು ನಿಜಕ್ಕೂ ಅನಾಥರನ್ನಾಗಿಸಲಿದೆ 2007 ರಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು ರಚನೆಯಾದ ನಂತರ ನಡೆದ ಎರಡು ಚುನಾವಣೆಗಳಲ್ಲಿ – 198 ವಾರ್ಡ್‌ ಗಳ ಪೈಕಿ, ಒಮ್ಮೆ 58 ಸ್ಥಾನಗಳನ್ನು ಮತ್ತೊಮ್ಮೆ 76 ಸ್ಥಾನಗಳನ್ನು ಮಾತ್ರವೇ ಗೆಲ್ಲಲು ಸಾಧ್ಯವಾಗಿದ್ದ ಕಾಂಗ್ರಸ್‌‍ ಪಕ್ಷವು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಹಿಡಿತವನ್ನು ಕೊನೆಗಾಣಿಸುವ ಉದ್ದೇಶ ಹೊಂದಿದೆ.

ಸಿದ್ಧರಾಮಯ್ಯ ಸರ್ಕಾರದ ಈ ನಿರ್ಣಯದಿಂದಾಗಿ ಐದು ಪಾಲಿಕೆಗಳ ಪೈಕಿ, ನಾಲ್ಕು ಪಾಲಿಕೆಗಳಲ್ಲಿ ಕನ್ನಡ ಭಾಷಿಕ ಸದಸ್ಯರಿಗೆ ಮಹಾಪೌರ ಸ್ಥಾನವು ಎಂದೆಂದಿಗೂ ದೊರಕುವುದೇ ಇಲ್ಲ. ಎರಡು ಪಾಲಿಕೆಗಳಲ್ಲಿ ಉರ್ದು ಭಾಷಿಕರು, ಒಂದು ಪಾಲಿಕೆಯಲ್ಲಿ ತೆಲುಗು ಅಥವಾ ಉರ್ದು ಭಾಷಿಕರು, ಒಂದು ಪಾಲಿಕೆಯಲ್ಲಿ ತಮಿಳು ಅಥವಾ ಉರ್ದು ಭಾಷಿಕರು ಮಾತ್ರವೇ ಮಹಾಪೌರರಾಗುವಂತ ಕನ್ನಡ ವಿರೋಧೀ ನಿರ್ಣಯವನ್ನು ಸಿದ್ಧರಾಮಯ್ಯ ಸರ್ಕಾರವು ತೆಗೆದುಕೊಳ್ಳುವ ಮೂಲಕ ಕನ್ನಡಿಗರಿಗೆ ಮುಂದೆಂದೂ ಸರಿಪಡಿಸಲಾಗದಂತಹ ಅನ್ಯಾಯವನ್ನು ಅವರ ಪಕ್ಷ ಮತ್ತು ಅವರ ಸರ್ಕಾರ ಮಾಡಿದೆ. ನಿಜಕ್ಕೂ ಇದು ಜಾರಿಗೆ ಬಂದಿದ್ದೇ ಆದಲ್ಲಿ, ಬೆಂಗಳೂರು ಮಹಾನಗರವು ಆದಷ್ಟು ಶೀಘ್ರದಲ್ಲಿಯೇ ಪ್ರಸ್ತುತ ಲಂಡನ್‌ ಮಹಾನಗರವು ಎದುರಿಸುತ್ತಿರುವ ಕ್ಲಿಷ್ಟಕರ ಸಮಸ್ಯೆಗಳನ್ನು ಎದುರಿಸಲಿದೆ.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ 2024 ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ 90,000 ಕ್ಕೂ ಹೆಚ್ಚು ಮುನ್ನಡೆ ಕೊಟ್ಟ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರವನ್ನು ಹರಿದು ಮೂರು ಪಾಲಿಕೆಗಳಿಗೆ ಹಂಚುವ ಮೂಲಕ ಅಲ್ಲಿನ ಮತದಾರರ ವಿರುದ್ಧ ಸೇಡನ್ನು ತೀರಿಸಿಕೊಂಡಂತಿದೆ ಹಾಗೂ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ನಿರಂತರವಾಗಿ ಗೆಲುತ್ತಿರುವ ಆರ್‌. ಅಶೋಕ್‌ ಮೇಲಿನ ಅಸೂಯೆಯಿಂ ಆ ಕ್ಷೇತ್ರವನ್ನು ಎರಡು ಭಾಗಗಳನ್ನಾಗಿ ವಿಭಜಿಸಲಾಗುತ್ತಿದೆ.

ನಿಜಕ್ಕೂ ನಿಮಗೆ ಬೆಂಗಳೂರು ಮಹಾನಗರವನ್ನಾಗಿ ಉದ್ಧಾರ ಮಾಡಬೇಕೆಂಬ ಇಚ್ಛಾಶಕ್ತಿ ಇದ್ದಲ್ಲಿ, ಹಾಲಿ ಬಿಬಿಎಂಪಿಯನ್ನು ಉಳಿಸಿಕೊಂಡು, ಆರರಿಂದ ಹತ್ತು ವಲಯಗಳನ್ನಾಗಿ ವಿಭಜಿಸುವುದಲ್ಲದೇ, ಪ್ರತೀ ವಲಯಕ್ಕೆ ಪ್ರಧಾನ ಕಾರ್ಯದರ್ಶಿ ಶ್ರೇಣಿಯ ಅಧಿಕಾರಿಗಳನ್ನು ವಲಯ ಆಯುಕ್ತರನ್ನಾಗಿ ನೇಮಿಸುವ ಮತ್ತು ಅಧಿಕಾರ ವಿಕೇಂದ್ರೀಕರಣ ಮಾಡಿ ಎಂದು ರಮೇಶ್‌ ಅವರು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

RELATED ARTICLES

Latest News