Wednesday, July 23, 2025
Homeರಾಷ್ಟ್ರೀಯ | Nationalಉಪ ರಾಷ್ಟ್ರಪತಿ ಹುದ್ದೆಗೆ ಪೈಪೋಟಿ, ರೇಸ್‌ನಲ್ಲಿ ಇರೋರು ಯಾರ್ಯಾರು..?

ಉಪ ರಾಷ್ಟ್ರಪತಿ ಹುದ್ದೆಗೆ ಪೈಪೋಟಿ, ರೇಸ್‌ನಲ್ಲಿ ಇರೋರು ಯಾರ್ಯಾರು..?

Competition for the post of Vice President, who are in the race..?

ನವದೆಹಲಿ,ಜು.22- ಉಪರಾಷ್ಟ್ರಪತಿ ಜಗದೀಪ್‌ ಧನ್ಕರ್‌ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಪ್ರಮುಖವಾಗಿ ಮೂರು ಹೆಸರುಗಳು ಕೇಳಿಬರುತ್ತಿವೆ. ಬಿಹಾರದ ಮುಖ್ಯಮಂತ್ರಿ ನಿತೀಶ್‌ಕುಮಾರ್‌, ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹಾಗೂ ತಿರುವನಂತಪುರ ಸಂಸದ ಮತ್ತು ಕಾಂಗ್ರೆಸ್‌‍ ಭಿನ್ನಮತೀಯ ನಾಯಕ ಶಶಿ ತರೂರ್‌ ಹೆಸರುಗಳು ಮುಂಚೂಣಿಯಲ್ಲಿವೆ.

ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಅಗತ್ಯ ಬಹುಮತ ಹೊಂದಿರುವ ಎನ್‌ಡಿಎ ಮಿತ್ರಪಕ್ಷಗಳ ವಿಶ್ವಾಸ ತೆಗೆದುಕೊಂಡು ರಾಜ್ಯಸಭೆಯ ಸಭಾಪತಿ ಸ್ಥಾನಕ್ಕೆ ಅಭ್ಯರ್ಥಿಯನ್ನು ಅಖೈರುಗೊಳಿಸಲಿದೆ. ಮೂಲಗಳ ಪ್ರಕಾರ ರಾಜನಾಥ್‌ ಸಿಂಗ್‌, ನಿತೀಶ್‌ಕುಮಾರ್‌ ಮತ್ತು ಶಶಿ ತರೂರ್‌ ಅವರುಗಳಲ್ಲಿ ಯಾರಾದರೂ ಒಬ್ಬರನ್ನು ಅಭ್ಯರ್ಥಿ ಮಾಡುವ ಲೆಕ್ಕಾಚಾರದಲ್ಲಿ ಬಿಜೆಪಿ ಇದೆ.

ನಿತೀಶ್‌ಕುಮಾರ್‌:
ಬಿಹಾರದಲ್ಲಿ ನಾಲ್ಕು ಬಾರಿ ಮುಖ್ಯಮಂತ್ರಿಯಾಗಿರುವ ನಿತೀಶ್‌ಕುಮಾರ್‌ ಹೆಸರು ಉಪರಾಷ್ಟ್ರಪತಿ ಹುದ್ದೆಗೆ ಪ್ರಬಲವಾಗಿ ಕೇಳಿಬರುತ್ತಿದೆ. ಈ ವರ್ಷದ ಅಂತ್ಯದೊಳಗೆ ವಿಧಾನಸಭೆ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಕುರ್ವಿ ಸಮುದಾಯದ ಪ್ರಭಾವಿ ನಾಯಕನಾಗಿರುವ ಅವರನ್ನು ಈ ಹುದ್ದೆಗೆ ಆಯ್ಕೆ ಮಾಡಿದರೆ ಚುನಾವಣೆ ಗೆಲುವಿಗೆ ಸಹಕಾರಿ ಆಗಬಹುದೆಂಬ ದೂರದೃಷ್ಟಿ ಇದೆ.

ಈವರೆಗೂ ನಿತೀಶ್‌ಕುಮಾರ್‌ ಗುಟ್ಟನ್ನು ರಟ್ಟು ಮಾಡಿಲ್ಲ. ವಿಧಾನಸಭೆ ಚುನಾವಣೆ ಎದುರಿಸಿ ಪುನಃ ಎನ್‌ಡಿಎ ಅಧಿಕಾರಕ್ಕೆ ಬಂದರೂ ಈ ಬಾರಿ ಅವರನ್ನು ಸಿಎಂ ಮಾಡುವ ಸಾಧ್ಯತೆಗಳಿಲ್ಲ. ಕಳೆದಬಾರಿ ಚುನಾವಣೆಯಲ್ಲಿ ಜೆಡಿಯು ಕಡಿಮೆ ಸ್ಥಾನ ಗೆದ್ದಿದ್ದರೂ ಹೆಚ್ಚು ಸ್ಥಾನ ಗೆದ್ದಿದ್ದ ಬಿಜೆಪಿ ಸಿಎಂ ಸ್ಥಾನವನ್ನು ತ್ಯಾಗ ಮಾಡಿತ್ತು. ಪದೇ ಪದೇ ತಮ ನಿರ್ಧಾರವನ್ನು ಬದಲಾಯಿಸುವ ನಿತೀಶ್‌ಕುಮಾರ್‌ ಅವರನ್ನು ಉಪರಾಷ್ಟ್ರಪತಿ ಸ್ಥಾನದಲ್ಲಿ ಕೂರಿಸಿದರೆ ಜೆಡಿಯು ಪಕ್ಷವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಬಹುದೆಂಬ ದೂರದೃಷ್ಟಿಯೂ ಇದೆ.

ರಾಜನಾಥ್‌ ಸಿಂಗ್‌:
ಕೇಂದ್ರ ರಕ್ಷಣಾ ಸಚಿವರಾಗಿರುವ ರಾಜನಾಥ್‌ ಸಿಂಗ್‌, ಆರ್‌ಎಸ್‌‍ಎಸ್‌‍, ಸಂಘಪರಿವಾರ ಹಾಗೂ ಬಿಜೆಪಿಯ ನಿಷ್ಠಾವಂತರು. ರಾಜಕೀಯ ವಲಯದಲ್ಲಿ ಅಜಾತಶತ್ರು ಎಂದೇ ಗುರುತಿಸಿಕೊಂಡಿರುವ ಅವರನ್ನು ಕೂಡ ಉಪರಾಷ್ಟ್ರಪತಿ ಅಭ್ಯರ್ಥಿ ಮಾಡಲಿದ್ದಾರೆಂಬ ಗುಸುಗುಸು ಹಬ್ಬಿದೆ.

ಈ ಹಿಂದೆ ಕೇಂದ್ರದಲ್ಲಿ ಸಚಿವರಾಗಿದ್ದ ವೆಂಕಯ್ಯನಾಯ್ಡು ಅವರನ್ನು ಅಚ್ಚರಿ ಬೆಳವಣಿಗೆಯಂತೆ ಉಪರಾಷ್ಟ್ರಪತಿ ಹುದ್ದೆಗೆ ಆಯ್ಕೆ ಮಾಡಲಾಗಿತ್ತು. ಈಗ ರಾಜನಾಥ್‌ ಸಿಂಗ್‌ ಅವರನ್ನು ಇದೇ ರೀತಿ ಎನ್‌ಡಿಎ ಅಭ್ಯರ್ಥಿ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಒಂದು ವೇಳೆ ರಾಜನಾಥ್‌ ಸಿಂಗ್‌ ಅಭ್ಯರ್ಥಿಯಾದರೆ ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆಗಳಿವೆ. ಏಕೆಂದರೆ ಕಾಂಗ್ರೆಸ್‌‍ ಜೊತೆ ಅವರು ಉತ್ತಮವಾದ ಒಡನಾಟ ಹೊಂದಿರುವುದರಿಂದ ಪ್ರತಿಪಕ್ಷಗಳು ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಾಧ್ಯತೆ ಕಡಿಮೆ.

ಶಶಿತರೂರ್‌:
ಕಾಂಗ್ರೆಸ್‌‍ನಲ್ಲಿದ್ದುಕೊಂಡೇ ಸ್ವಪಕ್ಷೀಯರಿಗೆ ಮುಜುಗರ ಸೃಷ್ಟಿಸುತ್ತಿರುವ ಕೇಂದ್ರದ ಮಾಜಿ ಸಚಿವ ಹಾಗೂ ತಿರುವನಂತರಪುರದ ಸಂಸದರಾಗಿರುವ ಶಶಿ ತರೂರ್‌ ಅವರು ಕೊನೆ ಕ್ಷಣದಲ್ಲಿ ಅಭ್ಯರ್ಥಿಯಾಗಬಹುದೆಂದು ಹೇಳಲಾಗುತ್ತಿದೆ.

ಇತ್ತೀಚೆಗೆ ಪಾಕಿಸ್ತಾನ ಮತ್ತು ಪಿಒಕೆ ಮೇಲೆ ನಡೆದ ಆಪರೇಷನ್‌ ಸಿಂಧೂರ್‌ ಕಾರ್ಯಾಚರಣೆ ಕುರಿತು ವಿವರಿಸಲು ವಿದೇಶಕ್ಕೆ ತೆರಳಿದ್ದ ಸಂಸದರ ನಿಯೋಗದಲ್ಲಿ ಶಶಿ ತರೂರ್‌ ಕೂಡ ಇದ್ದರು.
ಪಾಕಿಸ್ತಾನವನ್ನು ಅಕ್ಷರಶಃ ವಿದೇಶದಲ್ಲಿ ದಾಖಲೆಗಳ ಸಮೇತ ಬೆತ್ತಲು ಮಾಡಿದ್ದರು. ಅತ್ಯುತ್ತಮ ಸಂಸದೀಯಪಟು, ಇಂಗ್ಲೀಷ್‌ ವಾಗಿ ಹಾಗೂ ವಿದೇಶಾಂಗ ವ್ಯವಹಾರಗಳ ಬಗ್ಗೆ ತಮದೇ ಆದ ಜ್ಞಾನ ಹೊಂದಿರುವ ತರೂರ್‌ ಅವರನ್ನು ಎನ್‌ಡಿಎ ಅಭ್ಯರ್ಥಿ ಮಾಡಬಹುದೆಂಬ ಮಾತು ದೆಹಲಿ ಮಟ್ಟದಲ್ಲಿ ಕೇಳಿ ಬರುತ್ತಿದೆ. ಸದ್ಯಕ್ಕೆ ಉಪಸಭಾಪತಿಯಾಗಿರುವ ಹರಿವಂಶ ನಾರಾಯಣ ಸಿಂಗ್‌ ಅವರು ಚುನಾವಣೆ ನಡೆಯುವವರೆಗೂ ಕಲಾಪನಡೆಸಿಕೊಡಲಿದ್ದಾರೆ.

RELATED ARTICLES

Latest News