ನವದೆಹಲಿ,ಜು.24– ಗುಜರಾತ್ ಭಯೋತ್ಪಾದನಾ ನಿಗ್ರಹದಳ (ಎಟಿಎಸ್) ಬಂಧಿಸಿದ ನಾಲ್ವರು ಅಲ್-ಖೈದಾ ಭಯೋತ್ಪಾದಕರು, ಮೇ ತಿಂಗಳಲ್ಲಿ ನಡೆದ ಆಪರೇಷನ್ ಸಿಂಧೂರ್ ವೇಳೆ ಪಾಕಿಸ್ತಾನ ಸೇನೆ ಮತ್ತು ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‌ಐ) ಜೊತೆ ನಿಯಮಿತವಾಗಿ ಸಂಪರ್ಕದಲ್ಲಿದ್ದು, ಕೆಲವು ಪ್ರಮುಖ ಮಾಹಿತಿಯನ್ನು ವಿನಿಮಯ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಆರೋಪಿಗಳು ಸಾಮಾಜಿಕ ಜಾಲತಾಣದಲ್ಲಿ ಆಪರೇಷನ್ ಸಿಂಧೂರ್ ವಿರುದ್ಧ ಯುವಕರನ್ನು ಗುರಿಯಾಗಿಸಿಕೊಂಡು ಮೂಲಭೂತವಾದಿಗಳನ್ನಾಗಿ ಪರಿವರ್ತಿಸಲು ಯತ್ನಿಸಿದ್ದರು. ಇಸ್ಲಾಮಾಬಾದ್‌ನ ಮಿಲಿಟರಿ ಕಾರ್ಯಾಚರಣೆಯ ಸಂಕೇತನಾಮವಾದ ಆಪರೇಷನ್ ಬನ್ವನ್ ಉನ್ ಮಾರ್ಸೂಸ್ ಪರವಾಗಿ ವಾತಾವರಣ ಸೃಷ್ಟಿಸಲು ಪ್ರಯತ್ನಿಸಿದ್ದರು. ಆಪರೇಷನ್ ಸಿಂಧೂರ್ ಸಮಯದಲ್ಲಿ ಭಯೋತ್ಪಾದಕ ಮಾಡ್ಯೂಲ್ ಅತ್ಯಂತ ಸಕ್ರಿಯವಾಗಿತ್ತು ಎಂದು ಮೂಲಗಳು ತಿಳಿಸಿವೆ.
ಕೆಲವು ಇನ್‌ಸ್ಟಾಗ್ರಾಮ್ ಖಾತೆದಾರರು ಭಾರತೀಯ ಉಪಖಂಡದಲ್ಲಿ ಆಲ್-ಖೈದಾದ ಉಗ್ರಗಾಮಿ ಸಿದ್ಧಾಂತವನ್ನು ಹರಡುತ್ತಿದ್ದು, ಭಾರತೀಯ ನಾಗರಿಕರ ವಿರುದ್ಧ ಹಿಂಸಾಚಾರ ಅಥವಾ ಭಯೋತ್ಪಾದಕ ಕೃತ್ಯಗಳಿಗೆ ಕರೆ ನೀಡುವ ಪ್ರಚೋದನಕಾರಿ ವಿಷಯವನ್ನು ಹಂಚಿಕೊಳ್ಳುತ್ತಿದ್ದಾರೆ ಎಂಬ ಸುಳಿವು ದೊರೆತ ನಂತರ ಎಟಿಎಸ್ ಬುಧವಾರ ಭಯೋತ್ಪಾದಕರನ್ನು ಬಂಧಿಸಿದೆ.
ನಾಲ್ವರು ಆರೋಪಿಗಳನ್ನು ದೆಹಲಿ ನಿವಾಸಿ ಮೊಹಮ್ಮದ್ ಫೈಜ್, ಉತ್ತರ ಪ್ರದೇಶದ ನೋಯ್ದಾದ ಜೀಶನ್ ಅಲಿ, ಅರ್ವಳ್ಳಿ ಜಿಲ್ಲೆಯ ಮೊದಸಾ ಪಟ್ಟಣದ ನಿವಾಸಿ ಸೈಫುಲ್ಲಾ ಖುರೇಷ ಮತ್ತು ಅಹಮದಾಬಾದ್ ನಿವಾಸಿ ಮೊಹಮ್ಮದ್ ಫರ್ದೀನ್ ಶೇಖ್ ಎಂದು ಗುರುತಿಸಲಾಗಿದೆ. ನಾಲ್ವರು ವ್ಯಕ್ತಿಗಳು ಅಪರೇಷನ್ ಸಿಂಧೂರ್‌ಗೆ ಸಂಬಂಧಿಸಿದ ಮಾಹಿತಿಯನ್ನು ಪಾಕಿಸ್ತಾನದ ಎರಡು ಸಾಮಾಜಿಕ ಮಾಧ್ಯಮ ಖಾತೆಗಳೊಂದಿಗೆ ನಿರಂತರವಾಗಿ ಹಂಚಿಕೊಂಡಿದ್ದಾರೆ. ಅವರಿಗೆ ಇ ಖಾತೆಗಳಿಂದ ಆದೇಶಗಳು ಸಹ ಬಂದಿವೆ.
ಗುಂಪಿನ ನೇತೃತ್ವ ವಹಿಸಿದ್ದ ಮೊಹಮ್ಮದ್ ಫೈಜ್ ದೆಹಲಿಯ ಫಾಸ್ಟ್ ಫುಡ್ ಸರಪಳಿಯ ಔಟ್ ಲೇಟ್‌ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಅವರು ಉನ್ನತ ಶಿಕ್ಷಣ ಪಡೆದಿದ್ದಾರೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಯುವಕರನ್ನು ಗುರಿಯಾಗಿಸಿಕೊಳ್ಳುತ್ತಿದ್ದರು.ಜೀಶನ್ ಅಲಿ ನೋಯ್ದಾದ ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಉಳಿದ ಇಬ್ಬರು ಆರೋಪಿಗಳು ಗುಜರಾತ್‌ನಲ್ಲಿ ಟೈಲರಳಾಗಿ ಕೆಲಸ ಮಾಡುತ್ತಿದ್ದರು.
ಗುಜರಾತ್ ಎಟಿಎಸ್ ಉಪ ಪೊಲೀಸ್ ಮಹಾನಿರ್ದೇಶಕ (ಡಿಐಜಿ) ಸುನಿಲ್ ಜೋಶಿ ಅವರ ಪ್ರಕಾರ, ಶೇಖ್ ಅವರ ಮನೆಯಲ್ಲಿ ನಡೆದ ದಾಳಿಯ ಸಂದರ್ಭದಲ್ಲಿ ಭಾರತದ ವಿರುದ್ಧ ಜಿಹಾದ್ ಅನ್ನು ಉತ್ತೇಜಿಸುವ ಕತ್ತಿ ಮತ್ತು ಎಕ್ಯೂಐಎಸ್ ಸಾಹಿತ್ಯ ಪತ್ತೆಯಾಗಿದೆ. ಅವರ ಇನ್ಸ್ಟಾಗ್ರಾಮ್ ಪೋಸ್ಟ್‌ಗಳಲ್ಲಿ ಎಕ್ಯೂ ಐಎಸ್ ಸಾಹಿತ್ಯ, ಷರಿಯಾ ಸ್ಥಾಪಿಸುವ ಕರೆಗಳು ಮತ್ತು ಕೋಮು ದ್ವೇಷವನ್ನು ಸೃಷ್ಟಿಸುವ ಸಾಮರ್ಥ್ಯವಿರುವ ಇತರ ಮೂಲಭೂತ ಹೇಳಿಕೆಗಳು ಇದ್ದವು ಎಂದು ಐಪಿಎಸ್ ಅಧಿಕಾರಿ ಹೇಳಿದರು.
ಆರೋಪಿಯು ಎಕ್ಯೂಐಎಸ್‌ಗೆ ಸೇರಿ 2019 ರಲ್ಲಿ ಅಫ್ಘಾನಿಸ್ತಾನದಲ್ಲಿ ಕೊಲ್ಲಲ್ಪಟ್ಟ ಭಾರತೀಯ ಆಸಿಮ್ ಉಮರ್ ಅವರ ವಿಡಿಯೊವನ್ನು ಸಹ ಪೋಸ್ಟ್ ಮಾಡಿದ್ದಾನೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಅವರೆಲ್ಲರನ್ನೂ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) – ಭಯೋತ್ಪಾದನಾ ವಿರೋಧಿ ಕಾನೂನು ಮತ್ತು ಭಾರತೀಯ ನ್ಯಾಯ ಸಂಹಿತಾ (ಬಿಎನ್ ಎಸ್) ನ ಸೆಕ್ಷನ್ 113 (ಭಯೋತ್ಪಾದನಾ ಕಾಯ್ದೆ), 152 (ಭಾರತದ ಸಾರ್ವಭೌಮತ್ವ, ಏಕತೆ ಮತ್ತು ಸಮಗ್ರತೆಗೆ ಅಪಾಯವನ್ನುಂಟುಮಾಡುವ ಕೃತ್ಯಗಳು) ಮತ್ತು 196ರ (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಅಡಿಯಲ್ಲಿ ಬಂಧಿಸಲಾಗಿದೆ.
- ಬೆಂಗಳೂರು : ಟೆಕ್ಕಿ ಮನೆಯಲ್ಲಿ 30 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು
- ಕುಡುಕ ಗಂಡನ ಕಾಟ ಮತ್ತು ಬಡತನಕ್ಕೆ ಬೇಸತ್ತು ಮೂವರು ಹೆಣ್ಣು ಮಕ್ಕಳಿಗೆ ವಿಷವಿಟ್ಟು ಕೊಂದ ತಾಯಿ
- SHOCKING : ಮೈಸೂರಿನಲ್ಲಿ ಡ್ರಗ್ಸ್ ಫ್ಯಾಕ್ಟರಿ ಪತ್ತೆ, ಕೋಟ್ಯಂತರ ರೂ. ಬೆಲೆಯ ಮಾದಕ ವಸ್ತು ವಶ
- ಅಮೆರಿಕದಲ್ಲಿ 11 ಮಂದಿಗೆ ಇರಿದ ಯುವಕ, 6 ಜನರ ಸ್ಥಿತಿ ಗಂಭೀರ
- ರಾಜ್ಯದಲ್ಲಿ ಗೊಬ್ಬರ ಅಭಾವ : ನಾಳೆಯಿಂದ ಬಿಜೆಪಿ ಹೋರಾಟ