ಬೆಂಗಳೂರು,ಜು.24– ಮಹದಾಯಿ ನದಿಗೆ ಅಡ್ಡಲಾಗಿ ಕಳಸಾ ಬಂಡೂರಿ ಅಣೆಕಟ್ಟು ನಿರ್ಮಾಣ ಮಾಡಲು ಅವಕಾಶ ನೀಡುವುದಿಲ್ಲ ಎಂಬ ಕೇಂದ್ರ ಸರ್ಕಾರದ ಧೋರಣೆಗೆ ರಾಜ್ಯಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಗೋವಾದ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿಕೆ ನೀಡಿ ಕಳಸಾ ಬಂಡೂರಿ ಅಣೆಕಟ್ಟು ನಿರ್ಮಾಣಕ್ಕೆ ಕೇಂದ್ರ ಪರಿಸರ ಇಲಾಖೆಯಿಂದ ಅನುಮತಿ ನೀಡುವುದಿಲ್ಲ ಎಂದು ಕೇಂದ್ರ ಸಚಿವ ಭೂಪೇಂದ್ರ ಯಾದವ್ ತಮಗೆ ಹೇಳಿರುವುದಾಗಿ ತಿಳಿಸಿದ್ದಾರೆ. ಈ ಹೇಳಿಕೆಗೆ ಭಾರೀ ವಿರೋಧಗಳು ಕೇಳಿಬಂದಿವೆ. ಕನ್ನಡಪರ ಸಂಘಟನೆಗಳು ಪ್ರತಿಭಟನೆಗೆ ಮುಂದಾಗಿವೆ.
ವಿವಿಧ ಪಕ್ಷಗಳ ರಾಜಕೀಯದ ಹಪಾಹಪಿಯಿಂದಾಗಿ ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳು ನನೆಗುದಿಗೆ ಬೀಳುತ್ತಿವೆ ಎಂಬ ಟೀಕೆಗಳು ಕೇಳಿಬಂದಿವೆ.ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯಾದಾಗಿಯಾಗಿ ಬಹಳಷ್ಟು ಸಚಿವರು ಕೇಂದ್ರ ಸಚಿವರನ್ನು ಹಲವಾರು ಬಾರಿ ಭೇಟಿ ಮಾಡಿ ಮೇಕೆದಾಟು, ಕಳಸಾ ಬಂಡೂರಿಗೆ ಅನುಮತಿ ನೀಡುವಂತೆ ಮನವಿ ಮಾಡುತ್ತಲೇ ಬಂದಿದ್ದಾರೆ. ಆದರೆ ಕೇಂದ್ರ ಸಚಿವರು ಯೋಜನೆಗೆ ಅನುಮತಿ ನೀಡುವುದಿಲ್ಲ ಎಂದು ಬಿಜೆಪಿ ಆಡಳಿತದಲ್ಲಿರುವ ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಬಳಿ ಹೇಳಿಕೊಂಡಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.
ಈ ಹಿಂದೆ ವಿಧಾನಸಭೆ ಚುನಾವಣೆಗೂ ಮುನ್ನ 2022 ರಲ್ಲಿ ಕೇಂದ್ರ ಸರ್ಕಾರ ಮಹದಾಯಿ ಯೋಜನೆಗೆ ಅನುಮತಿ ನೀಡಿದೆ ಎಂದು ಆಗಿನ ಮುಖ್ಯಮಂತ್ರಿ ಬಸವರಾಜು ಬೊಮಾಯಿ ನೇತೃತ್ವದ ಸರ್ಕಾರ ಪ್ರಕಟಣೆ ನೀಡಿತ್ತು. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಸೇರಿದಂತೆ ಬಿಜೆಪಿಯ ಅನೇಕರು ಸಿಹಿ ಹಂಚಿ ಸಂಭ್ರಮಿಸಿದ್ದರು. ಮಹದಾಯಿ ಯೋಜನೆಯ ಹಲವು ವರ್ಷಗಳ ಕನಸು, ಹೋರಾಟ ಕೈಗೂಡಿದೆ ಎಂಬ ವ್ಯಾಖ್ಯಾನಗಳನ್ನು ಬಿಜೆಪಿ ಮಾಡಿತ್ತು.
ಈಗ ಕೇಂದ್ರ ಸಚಿವರು ಯೋಜನೆಗೆ ಅರಣ್ಯ ಮತ್ತು ಪರಿಸರ ಇಲಾಖೆಯಿಂದ ಅನುಮತಿ ನೀಡುವುದಿಲ್ಲ ಎಂದು ಹೇಳಿಕೊಂಡಿರುವ ವರದಿ ವ್ಯಾಪಕ ಟೀಕೆಗೆ ಗುರಿಯಾಗಿದೆ.
ವಿಧಾನಸೌಧದ ಬಳಿ ಇಂದು ಮಾತನಾಡಿರುವ ಹಲವಾರು ಮಂದಿ ಸಚಿವರು ಕೇಂದ್ರ ಸರ್ಕಾರದ ಧೋರಣೆ ಬಗ್ಗೆ ಕಿಡಿಕಾರಿದ್ದಾರೆ.
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಮಾತನಾಡಿ, ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಗೋವಾದ ಮುಖ್ಯಮಂತ್ರಿ ಹೇಳಿಕೆ ಖಂಡನೀಯ. ಕಳಸಾ ಬಂಡೂರಿಗೆ ಕೇಂದ್ರ ಸರ್ಕಾರ ಅನುಮತಿ ನೀಡದೇ ವಿಳಂಬ ಧೋರಣೆ ಮಾಡುತ್ತಿತ್ತು. ಈ ಮೂಲಕ ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಪ್ರವೃತ್ತಿಯನ್ನು ಅನುಸರಿಸಲಾಗುತ್ತಿದೆ. ಜನಸಾಮಾನ್ಯರ ಆಶಯದಂತೆ ಕೇಂದ್ರ ಸರ್ಕಾರ ರಾಜಕೀಯ ಬದಿಗಿಟ್ಟು ಯೋಜನೆಗೆ ಅನುಮತಿ ನೀಡಬೇಕು ಎಂದು ಆಗ್ರಹಿಸಿದರು.
ರಾಜ್ಯದ ಅರಣ್ಯ ಮತ್ತು ಪರಿಸರ ಸಚಿವ ಈಶ್ವರಖಂಡ್ರೆ ಗೋವಾದ ಮುಖ್ಯಮಂತ್ರಿ ಹೇಳಿಕೆ ಖಂಡನೀಯ. ರಾಜ್ಯದಿಂದ ಕೇಂದ್ರ ಪರಿಸರ ಇಲಾಖೆಯ ಅನುಮತಿಗಾಗಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅನುಮತಿ ಸಿಗುವುದಿಲ್ಲ ಎಂದು ಗೋವಾದ ಸಿಎಂ ಹೇಳಿದ್ದಾರೆ. ಇದು ರಾಜ್ಯದ ರೈತರ ಮೇಲೆ ಕೇಂದ್ರದ ಪ್ರಹಾರವಾಗಿದೆ. ಪ್ರತಿಯೊಂದು ವಿಷಯದಲ್ಲೂ ಕರ್ನಾಟಕಕ್ಕೆ ಕೇಂದ್ರದಿಂದ ಪದೇಪದೇ ಅನ್ಯಾಯವಾಗುತ್ತಿದೆ, ಒಕ್ಕೂಟ ವ್ಯವಸ್ಥೆಗೂ ಧಕ್ಕೆಯಾಗುತ್ತಿದೆ. ಹಣಕಾಸಿನ ಹಂಚಿಕೆಯಲ್ಲೂ ತಾರತಮ್ಯ ಮಾಡಲಾಗಿತ್ತು. ಮಹದಾಯಿಗೆ ಸಂಬಂಧಪಟ್ಟಂತೆ ಅಗತ್ಯಬಿದ್ದರೆ ಸುಪ್ರೀಂಕೋರ್ಟ್ ಮೊರೆ ಹೋಗುವುದೂ ಸೇರಿದಂತೆ ಹೋರಾಟದ ಎಲ್ಲಾ ಅಂಶಗಳನ್ನೂ ಮುಕ್ತವಾಗಿರಿಸಿಕೊಂಡಿದ್ದೇವೆ ಎಂದರು.
ಸಚಿವ ರಾಮಲಿಂಗರೆಡ್ಡಿ ಮಾತನಾಡಿ, ನ್ಯಾಯಾಧಿಕರಣದಿಂದ ನಮಗೆ ಹಂಚಿಕೆಯಾಗಿರುವ ನೀರನ್ನು ಬಳಕೆ ಮಾಡಿಕೊಳ್ಳಲು ಕೇಂದ್ರ ಸರ್ಕಾರ ಅವಕಾಶ ನೀಡುತ್ತಿಲ್ಲ. ಗೋವಾ ಸರ್ಕಾರ ಮೊದಲಿನಿಂದಲೂ ವಿರೋಧಿಸುತ್ತಲೇ ಬಂದಿದೆ. ನಮ ರಾಜ್ಯದ ಸಂಸದರು ಬಾಯಿ ಬಿಡುತ್ತಿಲ್ಲ. ಇವರನ್ನು ಆಯ್ಕೆ ಮಾಡಿ ಕಳುಹಿಸಿದ್ದು ಏಕೆ? ಎಂದು ಪ್ರಶ್ನಿಸಿದರು.
ಕೆಲಸಕ್ಕೆ ಬಾರದ ವಿಚಾರಗಳನ್ನೆಲ್ಲಾ ಮಾತನಾಡುವ ಸಂಸದರು ರಾಜ್ಯದ ನೆಲ-ಜಲ, ಭಾಷೆ, ಹಿತಾಸಕ್ತಿ ವಿಚಾರ ಬಂದಾಗ ಮಾತನಾಡುವುದಿಲ್ಲ. ಇಂತಹ ಸಂಸದರಿಗೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು. ಕೇಂದ್ರ ಸರ್ಕಾರ ಪ್ರತಿಬಾರಿಯೂ ಪ್ರತಿ ಚುನಾವಣೆಯಲ್ಲೂ ಕಳಸಾ ಬಂಡೂರಿ ಮತ್ತು ಮೇಕೆದಾಟು ಯೋಜನೆಗಳ ಬಗ್ಗೆ ಸಕಾರಾತಕವಾಗಿ ಮಾತನಾಡುತ್ತದೆ. ಮತದಾನ ಮುಗಿದ ಮೇಲೆ ವರಸೆ ಬದಲಾಯಿಸುತ್ತದೆ ಎಂದು ಆಕ್ಷೇಪಿಸಿದರು.
ಶಾಸಕ ಕೋ.ನ.ರೆಡ್ಡಿ ಮಾತನಾಡಿ, ಸುಪ್ರೀಂಕೋರ್ಟ್‌ನಲ್ಲಿ ಕರ್ನಾಟಕದ ಪರವಾಗಿ ತೀರ್ಪು ಬಂದಿದೆ. ಈಗಾಗಲೇ ಟೆಂಡರ್ ಕರೆದು ಯೋಜನೆಯ ಗುತ್ತಿಗೆ ನೀಡಲಾಗಿದೆ. ಈ ಹಂತದಲ್ಲಿ ಅನುಮತಿ ನೀಡುವುದಿಲ್ಲ ಎಂದು ಹೇಳಿರುವುದು ಸರಿಯಲ್ಲ. ಗೋವಾದಿಂದ ಕೇವಲ ಇಬ್ಬರು ಸಂಸದರಿದ್ದಾರೆ. ಕರ್ನಾಟಕ 28 ಸದಸ್ಯರನ್ನು ಹೊಂದಿದೆ. ಲೋಕಸಭೆಯಲ್ಲಿ ಈ ಬಗ್ಗೆ ಬಲವಾದ ಪ್ರತಿಪಾದನೆ ಮಾಡಬೇಕು ಎಂದರು.
ಕರ್ನಾಟಕದಿಂದ ಹಾಲು, ಹಣ್ಣು, ತರಕಾರಿ ನಿಲ್ಲಿಸಿದರೆ ಗೋವಾಕ್ಕೆ ತೊಂದರೆಯಾಗಲಿದೆ. ಮಹದಾಯಿ ಯೋಜನೆಯ ಬಗ್ಗೆ ಚರ್ಚಿಸಲು ಸರ್ವಪಕ್ಷ ಸಭೆ ಕರೆಯುವಂತೆ ಮುಖ್ಯಮಂತ್ರಿಯವರಿಗೆ ತಾವು ಪತ್ರ ಬರೆಯುವುದಾಗಿ ಹೇಳಿದರು.