ಬೆಂಗಳೂರು,ಜು.25- ರಾಜ್ಯದಲ್ಲಿ ವರ್ಷಧಾರೆ ಚುರುಕು ಪಡೆದುಕೊಂಡಿದ್ದು, ಕರಾವಳಿ, ಮಲೆನಾಡು, ಉತ್ತರಕರ್ನಾಟಕದ ಬೀದರ್, ರಾಯಚೂರು ಜಿಲ್ಲೆಗಳಲ್ಲಿ ಮಳೆಯಾಗುತ್ತಿದ್ದು, ಭಾರೀ ಅವಾಂತರವನ್ನೇ ಸೃಷ್ಟಿಸಿದೆ.
ಕಳೆದ ಕೆಲವು ದಿನಗಳಿಂದ ಬಿಡುವು ನೀಡಿದ್ದ ಮಳೆರಾಯ ಮತ್ತೆ ಆರ್ಭಟಿಸಿದ್ದು, ಮಲೆನಾಡು ಭಾಗದಲ್ಲಿ ಸುರಿದ ಭಾರೀ ಮಳೆಗೆ ಮನೆಗಳಿಗೆ ಹಾನಿಯಾಗಿದ್ದು, ತೆಂಗು, ಅಡಿಕೆ ಬೆಳೆಗಳಿಗೆ ಹಾನಿಯಾಗಿದೆ. ಮತ್ತೆ ಕೆಲವಡೆ ಗುಡ್ಡಕುಸಿತವಾಗಿದ್ದು, ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ.
ಸೊರಬ ತಾಲೂಕಿನ ಬೆಲವಂತಕೊಪ್ಪದಲ್ಲಿ ರೈತರ ಜಮೀನೊಂದರಲ್ಲಿ ಬೃಹತ್ ಗಾತ್ರದ ಮರ ಉರುಳಿಬಿದ್ದಿದೆ. ಅಡಿಕೆ ಸಸಿ, ಟೊಮ್ಯಾಟೊ ಬೆಳೆ ಹಾನಿಯಾಗಿದೆ.ಭಾರೀ ಮಳೆಯಾಗುತ್ತಿರುವುದರಿಂದ ಕರಾವಳಿಯಾದ್ಯಂತ ರೆಡ್ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಇಂದು ರಜೆ ಘೋಷಿಸಲಾಗಿದೆ.
ಉಡುಪಿ ಜಿಲ್ಲೆಯಲ್ಲಿ ಬಿರುಗಾಳಿಯೊಂದಿಗೆ ಧಾರಕಾರ ಮಳೆ ಸುರಿಯುತ್ತಿದ್ದು, ಕಾರ್ಕಳ, ಎರ್ಲಪಾಡಿ, ಬೆಳ್ಳಣ್ ಗ್ರಾಮಗಳಲ್ಲಿ ಮನೆಗಳಿಗೆ ನೀರು ಇಳಿದು ಭಾಗಶಃ ಹಾನಿಯಾಗಿವೆ.
ಉಡುಪಿ ಜಿಲ್ಲೆಯ ಕಾರ್ಕಳ ಮಾರ್ಗದಿಂದ ಕುದುರೆಮುಖ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತವಾಗಿದೆ. ಶಿವಮೊಗ್ಗದಲ್ಲಿ ಮಳೆಯ ಆರ್ಭಟಕ್ಕೆ 7 ಮನೆಗಳಿಗೆ ಹಾನಿಯಾಗಿದೆ. ಹೊಸನಗರ, ತೀರ್ಥಹಳ್ಳಿ, ಸಾಗರ ತಾಲ್ಲೂಕಿನಲ್ಲಿ ಮಳೆಯಾಗುತ್ತಿದೆ. ಲಿಂಗನಮಕ್ಕಿ ಜಲಾಶಯದಲ್ಲಿ ಒಳಹರಿವಿನ ಪ್ರಮಾಣ ಹೆಚ್ಚಳವಾಗಿದೆ. 30 ಸಾವಿರ ಕ್ಯೂಸೆಕ್್ಸ ನೀರನ್ನು ಹೊರಬಿಡಲಾಗಿದೆ.
ಕಾಫಿನಾಡು ಚಿಕ್ಕಮಗಳೂರಿನಲ್ಲೂ ಸಹ ಮಳೆಯಾಗುತ್ತಿದ್ದು, ಶೃಂಗೇರಿ, ಎನ್.ಆರ್.ಪುರ, ಮೂಡಿಗೆರೆ, ಭದ್ರಾವತಿ ಸೇರಿದಂತೆ ವಿವಿಧೆಡೆ ಮಳೆಯಾಗುತ್ತಿದೆ.ಉತ್ತರಕರ್ನಾಟಕದ ಬೀದರ್, ರಾಯಚೂರು, ಕಲಬುರಗಿ ಜಿಲ್ಲೆಗಳಲ್ಲಿ ಮಳೆ ಸುರಿಯುತ್ತಿದ್ದು, ರಾಯಚೂರು ತಾಲ್ಲೂಕಿನ ಫತ್ತೇಪುರ ಗ್ರಾಮದ ಹಳ್ಳಕ್ಕೆ ತಾತ್ಕಾಲಿಕವಾಗಿ ನಿರ್ಮಾಣ ಮಾಡಲಾಗಿದ್ದ ರಸ್ತೆ ಸಂಪೂರ್ಣವಾಗಿ ಕೊಚ್ಚಿಹೋಗಿದ್ದು, ಮಾರ್ಗವಿಲ್ಲದೆ ಗ್ರಾಮಸ್ಥರು ಪರದಾಡುವಂತಾಗಿದೆ.
ನೀರಿನ ರಭಸಕ್ಕೆ ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ನೀರಿನ ಟ್ಯಾಂಕರ್ ಕೂಡ ಕೊಚ್ಚಿಹೋಗಿದೆ. ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನಲ್ಲಿ ಹಳ್ಳಕೊಳ್ಳಗಳು ತುಂಬಿಹರಿಯುತ್ತಿದ್ದು, ಸಾಕಷ್ಟು ಗ್ರಾಮಗಳಲ್ಲಿ ಸಂಪರ್ಕ ಕಡಿತಗೊಂಡಿದೆ.ಜು.30ರೊಳಗೆ ದಕ್ಷಿಣಕನ್ನಡ, ಉತ್ತರಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬಯಲುಸೀಮೆಗೆ ಕೃಪೆ ತೋರದ ಮಳೆ :
ಬೆಂಗಳೂರು, ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ, ಚಿತ್ರದುರ್ಗ, ಮೈಸೂರು ಸೇರಿದಂತೆ ಬಯಲುಸೀಮೆ ಪ್ರದೇಶಗಳಲ್ಲಿ ಮೋಡ ಕವಿದ ವಾತಾವರಣವಿದ್ದು, ಕೇವಲ ತುಂತುರು ಮಳೆಯಾಗುತ್ತಿದೆ. ರೈತರು ಮಳೆಗಾಗಿ ಕಾಯುತ್ತಾ ಜಮೀನನ್ನು ಹಸನು ಮಾಡಿಕೊಂಡು ಬಿತ್ತನೆಗಾಗಿ ಮುಗಿಲು ನೋಡುತ್ತಿದ್ದಾರೆ. ಈಗಾಗಲೇ ಬಿತ್ತನೆ ಮಾಡಬೇಕಾಗಿದ್ದು, ಜುಲೈ ಕಳೆದರೂ ಬಹುತೇಕ ಭಾಗಗಳಲ್ಲಿ ಬಿತ್ತನೆಯಾಗಿಲ್ಲ.
- ಬೆಂಗಳೂರು : ಟೆಕ್ಕಿ ಮನೆಯಲ್ಲಿ 30 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು
- ಕುಡುಕ ಗಂಡನ ಕಾಟ ಮತ್ತು ಬಡತನಕ್ಕೆ ಬೇಸತ್ತು ಮೂವರು ಹೆಣ್ಣು ಮಕ್ಕಳಿಗೆ ವಿಷವಿಟ್ಟು ಕೊಂದ ತಾಯಿ
- SHOCKING : ಮೈಸೂರಿನಲ್ಲಿ ಡ್ರಗ್ಸ್ ಫ್ಯಾಕ್ಟರಿ ಪತ್ತೆ, ಕೋಟ್ಯಂತರ ರೂ. ಬೆಲೆಯ ಮಾದಕ ವಸ್ತು ವಶ
- ಅಮೆರಿಕದಲ್ಲಿ 11 ಮಂದಿಗೆ ಇರಿದ ಯುವಕ, 6 ಜನರ ಸ್ಥಿತಿ ಗಂಭೀರ
- ರಾಜ್ಯದಲ್ಲಿ ಗೊಬ್ಬರ ಅಭಾವ : ನಾಳೆಯಿಂದ ಬಿಜೆಪಿ ಹೋರಾಟ