ಬೆಂಗಳೂರು, ಜು.27- ಸಿಂಥೆಟಿಕ್ ಡ್ರಗ್ಸ್ ಎಂಡಿಎಂಎ ತಯಾರಿಕಾ ಘಟಕ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಪತ್ತೆಯಾಗಿದ್ದು, ಕೋಟ್ಯಂತರ ರೂ. ಬೆಲೆಯ ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಕೋಟ್ಯಂತರ ರೂ. ಮೌಲ್ಯದ ಎಂಡಿಎಂಎ ಹಾಗೂ ಅದರ ತಯಾರಿಕೆಗೆ ಬಳಕೆ ಮಾಡಲು ಸಂಗ್ರಹಿಸಿಟ್ಟಿದ್ದ ಕಚ್ಚಾ ಸರಕುಗಳನ್ನು ಮೈಸೂರು ಪೊಲೀಸರ ಸಹಯೋಗದಲ್ಲಿ ಮಹಾರಾಷ್ಟ್ರ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಕರ್ನಾಟಕವನ್ನು ಮಾದಕ ವ್ಯಸನ ಮುಕ್ತ ರಾಜ್ಯ ಮಾಡುವುದಾಗಿ ಪಣತೊಟ್ಟು ರಾಜ್ಯ ಪೊಲೀಸರು 2020ರಿಂದಲೂ ಸಮಾರೋಪಾದಿಯ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಮಾದಕ ವಸ್ತುಗಳ ಸರಬರಾಜು ಹಾಗೂ ಮಾರಾಟದ ಮೇಲೆ ರಾಜ್ಯ ಪೊಲೀಸರು ತೀವ್ರ ನಿಗಾ ಇರಿಸಿದ್ದಾರೆ. ಪದೇಪದೇ ಕಾರ್ಯ ನಡೆಸಿ, ಆರೋಪಿಗಳನ್ನು ಬಂಧಿಸಿ ಮಾದಕ ವಸ್ತುಗಳನ್ನು ಜಪ್ತಿ ಮಾಡುತ್ತಿರುತ್ತಾರೆ.
ಈ ನಡುವೆಯೂ ಸಿದ್ದರಾಮಯ್ಯ ಅವರ ತವರೂರು ಮೈಸೂರಿನಲ್ಲಿ ಸಿಂಥೆಟಿಕ್ಡ್ರಗ್ ತಯಾರಿಕಾ ಘಟಕ ಪತ್ತೆಯಾಗಿರುವುದು ಮತ್ತು ಇಲ್ಲಿಂದ ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಗೆ ಎಂಡಿಎಂಎ ಸರಬರಾಜು ಮಾಡುತ್ತಿರುವುದು ಬೆಚ್ಚಿಬೀಳುವಂತೆ ಮಾಡಿದೆ. ಮೈಸೂರಿನ ರಿಂಗ್ರಸ್ತೆಯಲ್ಲಿ ಎಂಡಿಎಂಎ ತಯಾರಿಕಾ ಘಟಕವನ್ನು ಮಹಾರಾಷ್ಟ್ರದ ಪೊಲೀಸರು ಪತ್ತೆ ಹಚ್ಚಿ ದಾಳಿ ನಡೆಸಿ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಬಂಧಿತ ಡ್ರಗ್ ಪೆಡ್ಲರ್ ಒಬ್ಬ ತಮಗೆ ಮೈಸೂರಿನಿಂದ ಎಂಡಿಎಂಎ ಸರಬರಾಜು ಆಗುತ್ತಿರುವುದಾಗಿ ಮಾಹಿತಿ ನೀಡಿದ್ದಾನೆ. ಅದನ್ನು ಆಧರಿಸಿ ಮೈಸೂರಿಗೆ ಆಗಮಿಸಿದ ಮಹಾರಾಷ್ಟ್ರ ಪೊಲೀಸರು ಸ್ಥಳೀಯ ಪೊಲೀಸರ ಸಹಾಯದಿಂದ ಕಾರ್ಯಾಚರಣೆ ನಡೆಸಿದಾಗ ತಯಾರಿಕಾ ಅಡ್ಡೆ ಪತ್ತೆಯಾಗಿದೆ.
ಮೇಲ್ನೋಟಕ್ಕೆ ಗ್ಯಾರೇಜ್ನಂತೆ ಕಂಡು ಬರುವ ತಾತ್ಕಾಲಿಕ ಶೆಡ್ನಲ್ಲಿ ಎರಡು ವಿಭಾಗಗಳನ್ನು ನಿರ್ಮಿಸಿ, ಒಂದು ಭಾಗದಲ್ಲಿ ವಾಹನಗಳನ್ನು ರಿಪೇರಿ ಮಾಡುತ್ತಿದ್ದರೆ, ಮತ್ತೊಂದು ಭಾಗದ ಒಳಾಂಗಣದಲ್ಲಿ ಸಿಂಥೆಟಿಕ್ಡ್ರಗ್್ಸ ತಯಾರಿಕೆ ಮಾಡುತ್ತಿರುವುದು ಕಂಡು ಬಂದಿದೆ. ಇಲ್ಲಿಂದಲೇ ದೇಶದ ನಾನಾ ಭಾಗಗಳಿಗೆ ಸಿಂಥೆಟಿಕ್ಡ್ರಗ್್ಸ ಸರಬರಾಜು ಆಗುತ್ತಿತ್ತು ಎಂದು ಹೇಳಲಾಗುತ್ತಿದೆ. ಬೆಂಗಳೂರು, ಮಂಗಳೂರು, ಬಳ್ಳಾರಿ, ಬೆಳಗಾವಿ, ಉತ್ತರ ಕನ್ನಡ ಮುಂತಾದ ಜಿಲ್ಲೆಗಳಲ್ಲಿ ಮಾದಕ ವಸ್ತುಗಳ ಹಾವಳಿ ತೀವ್ರವಾಗಿ ಕಂಡು ಬರುತ್ತಿದೆ.
ಈ ಹಿಂದೆ ಬೆಂಗಳೂರಿನ ಹೊರವಲಯದಲ್ಲಿನ ನಗರ ಪ್ರದೇಶಗಳಲ್ಲಿ ಮಾದಕ ವಸ್ತುಗಳ ಜಾಲಗಳು ಸಕ್ರಿಯವಾಗಿರುವುದು ಪತ್ತೆಯಾಗುತ್ತಿತ್ತು. ಅದರಲ್ಲೂ ವಿದೇಶಿ ಪ್ರಜೆಗಳು ಮಾದಕ ವಸ್ತುಗಳ ಪೂರೈಕೆ ಹಾಗೂ ಸರಬರಾಜಿನಲ್ಲಿ ತೊಡಗಿಸಿಕೊಳ್ಳುತ್ತಿದ್ದರು.
ಕೆಲವು ಮನೆಗಳಲ್ಲಿ ಮಾದಕ ವಸ್ತುಗಳ ತಯಾರಿಕೆ ಮಾಡುತ್ತಿದ್ದದ್ದು ಪತ್ತೆಯಾಗಿತ್ತು. ಕಾಲಕಾಲಕ್ಕೆ ಪೊಲೀಸರು ಕಾರ್ಯಾಚರಣೆ ನಡೆಸಿ ಈ ದಂಧೆಯನ್ನು ಮಟ್ಟ ಹಾಕಿದ್ದರು. ಆದರೆ ಈಗ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಉತ್ಪಾದಕ ಘಟಕ ಪತ್ತೆಯಾಗಿರುವುದು ಗುಪ್ತ ದಳದ ಪೊಲೀಸರ ಕಾರ್ಯಕ್ಷಮತೆಯನ್ನು ಪ್ರಶ್ನಿಸುವಂತೆ ಮಾಡಿದೆ.
ಮಾದಕ ವಸ್ತುಗಳ ವಿರುದ್ಧ ಸಮರ ಸಾರಿರುವುದಾಗಿ ಹೇಳಿಕೊಳ್ಳುತ್ತಿರುವ ಪೊಲೀಸರ ಕಣ್ಣಿಗೆ ಮೈಸೂರಿನ ರಿಂಗ್ ರಸ್ತೆಯಲ್ಲಿದ್ದ ತಯಾರಿಕಾ ಅಡ್ಡೆ ಕಾಣದೇ ಇದ್ದದ್ದು ಹೇಗೆ ಎಂಬ ಪ್ರಶ್ನೆಗಳು ಉದ್ಭವಿಸಲಾರಂಭಿಸಿವೆ.ಮೈಸೂರಿನ ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
- ಬೆಂಗಳೂರು : ಟೆಕ್ಕಿ ಮನೆಯಲ್ಲಿ 30 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು
- ಕುಡುಕ ಗಂಡನ ಕಾಟ ಮತ್ತು ಬಡತನಕ್ಕೆ ಬೇಸತ್ತು ಮೂವರು ಹೆಣ್ಣು ಮಕ್ಕಳಿಗೆ ವಿಷವಿಟ್ಟು ಕೊಂದ ತಾಯಿ
- SHOCKING : ಮೈಸೂರಿನಲ್ಲಿ ಡ್ರಗ್ಸ್ ಫ್ಯಾಕ್ಟರಿ ಪತ್ತೆ, ಕೋಟ್ಯಂತರ ರೂ. ಬೆಲೆಯ ಮಾದಕ ವಸ್ತು ವಶ
- ಅಮೆರಿಕದಲ್ಲಿ 11 ಮಂದಿಗೆ ಇರಿದ ಯುವಕ, 6 ಜನರ ಸ್ಥಿತಿ ಗಂಭೀರ
- ರಾಜ್ಯದಲ್ಲಿ ಗೊಬ್ಬರ ಅಭಾವ : ನಾಳೆಯಿಂದ ಬಿಜೆಪಿ ಹೋರಾಟ