Tuesday, July 29, 2025
Homeರಾಷ್ಟ್ರೀಯ | Nationalಉಪರಾಷ್ಟ್ರಪತಿ ಹುದ್ದೆಗೆ ಮುಸ್ಲಿಂ ಅಭ್ಯರ್ಥಿ..? ಕರ್ನಾಟಕದ ಎಸ್‌‍.ಅಬ್ದುಲ್‌ ನಜೀರ್‌ ಕಣಕ್ಕಿಳಿಯುವ ಸಾಧ್ಯತೆ

ಉಪರಾಷ್ಟ್ರಪತಿ ಹುದ್ದೆಗೆ ಮುಸ್ಲಿಂ ಅಭ್ಯರ್ಥಿ..? ಕರ್ನಾಟಕದ ಎಸ್‌‍.ಅಬ್ದುಲ್‌ ನಜೀರ್‌ ಕಣಕ್ಕಿಳಿಯುವ ಸಾಧ್ಯತೆ

Muslim candidate for the post of Vice President..? Karnataka's S. Abdul Nazir's name in the foreground

ನವದೆಹಲಿ,ಜು.28- ಮುಸ್ಲಿಂ ವಿರೋಧಿ ಹಣೆಪಟ್ಟಿಯಿಂದ ಹೊರಬರಲು ಮುಂದಾಗಿರುವ ಬಿಜೆಪಿ, ಈ ಬಾರಿ ಅಚ್ಚರಿ ಎಂಬಂತೆ ದೇಶದ 2ನೇ ಅತ್ಯುನ್ನತ ಉಪರಾಷ್ಟ್ರಪತಿ ಹುದ್ದೆಗೆ ಕರ್ನಾಟಕದವರೇ ಆದ, ಹಾಲಿ ಆಂಧ್ರಪ್ರದೇಶದ ರಾಜ್ಯಪಾಲರಾಗಿರುವ ಎಸ್‌‍.ಅಬ್ದುಲ್‌ ನಜೀರ್‌ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ.

ಉಪರಾಷ್ಟ್ರಪತಿಯಾಗಿದ್ದ ಜಗದೀಪ್‌ ಧನ್ಕರ್‌ ತಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನಲೆಯಲ್ಲಿ ತೆರವಾಗಿರುವ ಈ ಸ್ಥಾನಕ್ಕೆ ಅಬ್ದುಲ್‌ ನಜೀರ್‌ ಅವರನ್ನು ಅಭ್ಯರ್ಥಿ ಮಾಡುವ ಬಗ್ಗೆ ಆರ್‌ಎಸ್‌‍ಎಸ್‌‍ ಬಿಜೆಪಿಗೆ ಸಲಹೆ ಕೊಟ್ಟಿದೆ.

ಮುಂಬರುವ ಬಿಹಾರ ವಿಧಾನಸಭೆ ಚುನಾವಣೆ ಹಾಗೂ ಉತ್ತರಪ್ರದೇಶ ಸೇರಿದಂತೆ ಮತ್ತಿತರ ರಾಜ್ಯಗಳ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ ನಜೀರ್‌ ಅವರನ್ನು ಅಭ್ಯರ್ಥಿ ಮಾಡಿದರೆ ಎನ್‌ಡಿಎ ಮಿತ್ರಪಕ್ಷಗಳು ಕೂಡ ಯಾವುದೇ ಆಲೋಚನೆ ಮಾಡದೆ ಬೆಂಬಲ ನೀಡುವ ಸಾಧ್ಯತೆಗಳಿವೆ.

ಬಿಜೆಪಿ ಮುಸ್ಲಿಂ ವಿರೋಧಿ ಎಂಬ ಹಣೆಪಟ್ಟಿಯಿಂದ ಹೊರಬರಲು ಯಾವುದೇ ವಿವಾದವನ್ನು ಎಳೆದುಕೊಳ್ಳದೇ ಸೌಮ್ಯ ಸ್ವಭಾವದ ಅಬ್ದುಲ್‌ ನಜೀರ್‌ ಅವರನ್ನು ದೇಶದ 2ನೇ ಅತ್ಯುನ್ನತ ಸಾಂವಿಧಾನಿಕ ಹುದ್ದೆ ಎನಿಸಿದ ಉಪರಾಷ್ಟ್ರಪತಿಗೆ ಆಯ್ಕೆ ಮಾಡುವ ಚಿಂತನ-ಮಂಥನ ಆರಂಭವಾಗಿದೆ.

ಹಾಗೊಂದು ವೇಳೆ ಅಬ್ದುಲ್‌ ನಜೀರ್‌ ಅಭ್ಯರ್ಥಿಯಾದರೆ ಕರ್ನಾಟಕದಿಂದ ಈ ಉನ್ನತ ಹುದ್ದೆಗೆ ಆಯ್ಕೆಯಾದ 2ನೇ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದ್ದಾರೆ. ಈ ಹಿಂದೆ ಕರ್ನಾಟಕದವರೇ ಆದ ಬಿ.ಡಿ.ಜತ್ತಿ ಅವರು ಉಪರಾಷ್ಟ್ರಪತಿಯಾಗಿದ್ದರು. ಒಂದು ಸಂದರ್ಭದಲ್ಲಿ ಅವರು ಹಂಗಾಮಿ ರಾಷ್ಟ್ರಪತಿಯಾಗಿಯೂ ಸೇವೆ ಸಲ್ಲಿಸಿದ್ದರು.

ಯಾರು ಅಬ್ದುಲ್‌ ನಜೀರ್‌ ?
ಅಯೋಧ್ಯೆ ವಿವಾದದಲ್ಲಿ ತೀರ್ಪು ನೀಡಿದ ನ್ಯಾಯಪೀಠದಲ್ಲೊಬ್ಬರಾಗಿ ಸೇವೆ ಸಲ್ಲಿಸಿದ ಹೆಗ್ಗಳಿಕೆ ಇವರದ್ದು. ಇದಲ್ಲದೆ, ತ್ರಿವಳಿ ತಲಾಖ್‌, ನೋಟು ಅಮಾನ್ಯೀಕರಣ ಪ್ರಕರಣಗಳಲ್ಲಿನ ನ್ಯಾಯಪೀಠಗಳಲ್ಲೂ ಅವರು ಸೇವೆ ಸಲ್ಲಿಸಿದ್ದರು.

ಈ ಹಿಂದೆ 2003, ಜ.4ರಂದು ಅವರು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಹುದ್ದೆಯಿಂದ ನಿವೃತ್ತರಾಗಿದ್ದರು.ನಿವೃತ್ತ ನ್ಯಾ.ಅಬ್ದುಲ್‌ ನಜೀರ್‌ ಅವರು, ಕನ್ನಡನಾಡಿನ ಕರಾವಳಿ ಭಾಗದವರು. 1958ರ ಜ.5ರಂದು ದಕ್ಷಿಣ ಕನ್ನಡದ ಮೂಡುಬಿದಿರೆಯಲ್ಲಿನ ಮುಸ್ಲಿಂ ಕುಟುಂಬದಲ್ಲಿ ಜನಿಸಿದ ಅವರು ಮೂಡುಬಿದಿರೆಯಲ್ಲೇ ಪದವಿ ಶಿಕ್ಷಣದವರೆಗೆ ಓದಿದರು. ಆನಂತರ, ಮಂಗಳೂರಿನ ಎಸ್‌‍ ಡಿಎಂ ಕಾನೂನು ಮಹಾ ವಿದ್ಯಾಲಯದಲ್ಲಿ ಕಾನೂನು ಪದವಿ ಪಡೆದರು.

1983ರಲ್ಲಿ ಅಡ್ವೊಕೇಟ್‌ ಆಗಿ ತಮ ವೃತ್ತಿಜೀವನವನ್ನು ಕರ್ನಾಟಕ ಹೈಕೋರ್ಟ್‌ನಲ್ಲಿ ಆರಂಭಿಸಿದರು. 2003ರಲ್ಲಿ ಕರ್ನಾಟಕ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ಅವರು ನೇಮಕಗೊಂಡರು. ಆನಂತರ, ಕರ್ನಾಟಕ ಹೈಕೋರ್ಟ್‌ ನಲ್ಲೇ ಶಾಶ್ವತ ನ್ಯಾಯಮೂರ್ತಿಗಳಾಗಿ ನೇಮಕವಾಗಿದ್ದರು.

ಇದಾದ ಬಳಿಕ, 2017ರ ಫೆಬ್ರವರಿಯಲ್ಲಿ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳಾಗಿ ನೇಮಕಗೊಂಡಿದ್ದರು. ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗದೇ ನೇರವಾಗಿ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಯಾಗಿ ನೇಮಕವಾಗಿದ್ದು ವಿಶೇಷ. ದೇಶದ ಇತಿಹಾಸದಲ್ಲಿ ಈ ರೀತಿಯಾಗಿದ್ದು ಮೂರನೇ ಬಾರಿ.

ಸುಪ್ರೀಂಕೋರ್ಟ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾಗ, ನಜೀರ್‌ 2017 ರಲ್ಲಿ ವಿವಾದಾತಕ ತ್ರಿವಳಿ ತಲಾಖ್‌ ಪ್ರಕರಣವನ್ನು ಆಲಿಸಿದ ಬಹು-ಧರ್ಮದ ಪೀಠದಲ್ಲಿ ಏಕೈಕ ಮುಸ್ಲಿಂ ನ್ಯಾಯಾಧೀಶರಾಗಿದ್ದರು. ಮುಸ್ಲಿಂ ಷರಿಯಾ ಕಾನೂನಿನಡಿಯಲ್ಲಿ ತ್ರಿವಳಿ ತಲಾಖ್‌ (ತಲಾಖ್‌-ಇ-ಬಿದ್ದತ್‌) ಪದ್ಧತಿಯು ಅನುಮತಿಸಲ್ಪಟ್ಟಿದೆ ಎಂಬ ಅಂಶದ ಆಧಾರದ ಮೇಲೆ ನಜೀರ್‌ ಮತ್ತು ಇನ್ನೊಬ್ಬ ನ್ಯಾಯಾಧೀಶರು ಅದರ ಸಿಂಧುತ್ವವನ್ನು ಎತ್ತಿಹಿಡಿದರೂ, ಪೀಠವು 3-2 ಬಹುಮತದಿಂದ ನಿಷೇಧಿಸಿತ್ತು.

ಮುಸ್ಲಿಂ ಸಮುದಾಯದಲ್ಲಿ ಮದುವೆ ಮತ್ತು ವಿಚ್ಛೇದನವನ್ನು ನಿಯಂತ್ರಿಸಲು ಆರು ತಿಂಗಳಲ್ಲಿ ಶಾಸನ ತರುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ಕೊಟ್ಟಿತ್ತು. ಅಯೋಧ್ಯಾ ವಿವಾದದ ಕುರಿತಾದ 2019ರ ಸುಪ್ರೀಂಕೋರ್ಟ್‌ ತೀರ್ಪಿನ ಐದು ನ್ಯಾಯಾಧೀಶರ ಪೀಠದ ಭಾಗವೂ ಅವರಾಗಿದ್ದರು. . ವಿವಾದಿತ ಪ್ರದೇಶದಲ್ಲಿ ಹಿಂದೂ ರಚನೆಯ ಅಸ್ತಿತ್ವವನ್ನು ಹೇಳುವ ಎಎಸ್‌‍ಐ ವರದಿಯನ್ನು ಅವರು ಎತ್ತಿಹಿಡಿದಿದ್ದರು. ಅವರು ರಾಮ ಮಂದಿರದ ಪರವಾಗಿ ತೀರ್ಪು ನೀಡಿದ್ದರು.

ನಿವೃತ್ತಿಗೆ ಮುಂಚಿನ ತಿಂಗಳುಗಳಲ್ಲಿ ನಜೀರ್‌ ಅವರು ಭಾರತ ಸರ್ಕಾರವು ನಡೆಸಿದ 2016 ರ ಭಾರತೀಯ ನೋಟು ಅಮಾನ್ಯೀಕರಣದ ಕುರಿತಾದ ಪ್ರಕರಣಗಳನ್ನು ಆಲಿಸಿದ ಸಾಂವಿಧಾನಿಕ ಪೀಠದ ನೇತೃತ್ವ ವಹಿಸಿದ್ದರು. ಅವರು ಜನವರಿ 4, 2023 ರಂದು ನಿವೃತ್ತರಾದರು. ಫೆಬ್ರವರಿ 12, 2023ರಂದು, ಭಾರತದ ರಾಷ್ಟ್ರಪತಿಗಳು ಬಿಸ್ವಭೂಷಣ್‌ ಹರಿಚಂದನ್‌ ಅವರ ಉತ್ತರಾಧಿಕಾರಿಯಾಗಿ ನಜೀರ್‌ ಅವರನ್ನು ಆಂಧ್ರಪ್ರದೇಶದ 24 ನೇ ರಾಜ್ಯಪಾಲರನ್ನಾಗಿ ನೇಮಿಸಿತ್ತು.

RELATED ARTICLES

Latest News