ಬೆಂಗಳೂರು, ಜು.29- ಶ್ರಾವಣ ಮಾಸದಲ್ಲಿ ಬರುವ ಸಾಲುಸಾಲು ಹಬ್ಬಗಳ ಹಿನ್ನೆಲೆಯಲ್ಲಿ ಹೂವು, ಹಣ್ಣು, ತರಕಾರಿ ಬೆಲೆ ಗಗನಕ್ಕೇರಿದೆ.ಕಳೆದ ಕೆಲವು ತಿಂಗಳುಗಳಿಂದ ಬೆಲೆ ಕುಸಿತದಿಂದ ಸೊರಗಿದ್ದ ಟೊಮ್ಯಾಟೋ ಬೆಲೆ ದಿಢೀರನೆ ಏರಿಕೆಯಾಗಿದ್ದು, ಕಳೆದ ಒಂದು ವಾರದಿಂದೀಚೆಗೆ ಕೆಜಿಗೆ 20ರೂ. ಏರಿಕೆಯಾಗಿದೆ.
ಕಳೆದ ವಾರ ಚಿಲ್ಲರೆ ದರದಲ್ಲಿ ಕೆಜಿಗೆ 15 ರಿಂದ 20ರೂ.ಗೆ ಮಾರಾಟವಾಗುತ್ತಿತ್ತು. ಇದೀಗ 35 ರಿಂದ 40ರೂ.ಗೆ ಮಾರಾಟವಾಗುತ್ತಿದೆ. ರಾಜ್ಯದ ವಿವಿಧೆಡೆ ಮಳೆಯಾಗುತ್ತಿದ್ದು, ಇಳುವರಿ ಕುಂಠಿತಗೊಂಡಿದೆ. ಬೇಡಿಕೆ ಹೆಚ್ಚಾದ ಪರಿಣಾಮ ಬೆಲೆ ಹೆಚ್ಚಳವಾಗಿದೆ. ಲಾಟರಿ ಬೆಳೆ ಎಂದೇ ಕರೆಯಲಾಗುತ್ತಿದ್ದ ಕೆಂಪು ಸುಂದರಿ ಟೊಮ್ಯಾಟೋಗೆ ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಬೆಲೆ ಇಲ್ಲದೆ ರೈತರು ಕಂಗಾಲಾಗಿದ್ದರು.
ಇದೀಗ ಚೇತರಿಸಿಕೊಳ್ಳುತ್ತಿದ್ದು, ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಮೋಡ ಕವಿದ ವಾತಾವರಣ, ತುಂತುರು ಮಳೆಯಿಂದಾಗಿ ಮಾರುಕಟ್ಟೆಗೆ ನಿಗದಿತ ಪ್ರಮಾಣದಲ್ಲಿ ಮಾಲು ಬರುತ್ತಿಲ್ಲ. ಜತೆಗೆ ಮಹಾರಾಷ್ಟ್ರದಲ್ಲಿ ಹೆಚ್ಚು ಮಳೆಯಾಗುತ್ತಿದ್ದು, ರಾಜ್ಯದಿಂದ ಟೊಮ್ಯಾಟೋ ರವಾನೆಯಾಗುತ್ತಿದ್ದು, ಬೇಡಿಕೆ ಹೆಚ್ಚಾಗಿದೆ.
ಬಾಡಿದ ಸೊಪ್ಪು: ಸೊಪ್ಪಿನ ಬೆಲೆಯಂತೂ ಪಾತಾಳ ತಲುಪಿದ್ದು, ಕಂತೆಗೆ 10ರೂ.ನಂತೆ ಚಿಲ್ಲರೆಯಾಗಿ ಮಾರಾಟವಾಗುತ್ತಿದೆ.ಇನ್ನು ಮಾರುಕಟ್ಟೆಯಲ್ಲಿ 5ರೂ.ಗೂ ಕೇಳೋರಿಲ್ಲದಂತಾಗಿದೆ. ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪು, ದಂಡಿನ ಸೊಪ್ಪು, ಪಾಲಾಕ್ ಸೊಪ್ಪು, ಅರಿವೆ ಸೊಪ್ಪು, ಮೆಂತ್ಯ ಸೊಪ್ಪಿನ ಬೆಲೆ ಕುಸಿದಿದೆ. ತರಕಾರಿ ಬೆಲೆ ಆಷಾಢದಲ್ಲೂ ಸಹ ಸ್ಥಿರತೆ ಕಾಯ್ದುಕೊಂಡು ಶ್ರಾವಣದಲ್ಲಿಯೂ ಸಹ ಮತ್ತಷ್ಟು ಏರಿಕೆಯತ್ತ ಸಾಗಿದೆ.
ಬೀನ್ಸ್ , ಕ್ಯಾರೆಟ್ ಶತಕದ ಆಜುಬಾಜು ಇದ್ದರೆ, ಇನ್ನುಳಿದ ತರಕಾರಿಗಳು ಅರ್ಧ ಶತಕದ ಹಾದಿಯಲ್ಲಿವೆ.ಇನ್ನು ವರಮಹಾಲಕ್ಷ್ಮಿ, ಗೌರಿ-ಗಣೇಶ ಹಬ್ಬಕ್ಕೆ ಹೂವು, ಹಣ್ಣು, ತರಕಾರಿಗಳ ಬೆಲೆ ಏರಿಕೆಯಾಗಲಿದೆ.
- ಪೊಲೀಸರ ವೈಫಲ್ಯವೇ ದುರಂತಕ್ಕೆ ಕಾರಣ : ರೇವಣ್ಣ ಆಕ್ರೋಶ
- ಮೊಸಳೆಹೊಸಹಳ್ಳಿ ದುರಂತ : ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೂ ಪರಿಹಾರ ನೀಡಬೇಕು
- ಪ್ರಚೋದನಾಕಾರಿ ಭಾಷಣ ಮಾಡುವವರ ವಿರುದ್ಧ ಎಫ್ಐಆರ್ ಅನಿವಾರ್ಯ : ಸಿಎಂ
- ಗಣೇಶೋತ್ಸವ ದುರಂತ : 9 ಜನರನ್ನು ಬಲಿಪಡೆದ ಟ್ರಕ್ ಚಾಲಕನ ವಿಚಾರಣೆ
- ಹಾಸನ ಗಣೇಶೋತ್ಸವ ದುರಂತ : 10 ಲಕ್ಷ ಪರಿಹಾರಕ್ಕೆ ಅಶೋಕ್ ಆಗ್ರಹ