ಬೆಂಗಳೂರು,ಜು.29- ಧರ್ಮಸ್ಥಳ ಪೊಲೀಸ್ ಠಾಣೆ ವ್ಯಾಪ್ತಿಯ ಸುತ್ತಮುತ್ತಲ ಭಾಗಗಳಲ್ಲಿ ಶವಗಳನ್ನು ಹೂತಿಟ್ಟ ಜಾಗಗಳ ಉತ್ಖನನ ಪ್ರಕ್ರಿಯೆಯನ್ನು ವಿಶೇಷ ತನಿಖಾ ದಳ (ಎಸ್‌ಐಟಿ)ಆರಂಭಿಸಿದ್ದು, ಪ್ರಕರಣ ಮಹತ್ವದ ಘಟ್ಟ ತಲುಪಿದೆ.
ಧರ್ಮಸ್ಥಳದ ಮಾಜಿ ನೌಕರ ಎಂದು ಹೇಳಲಾದ ಅನಾಮಧೇಯ ವ್ಯಕ್ತಿಯ ಹೇಳಿಕೆಗಳನ್ನು ಆಧರಿಸಿ ನಿನ್ನೆ ಎಸ್‌ಐಟಿ ಅಧಿಕಾರಿಗಳು ಸ್ಥಳ ಮಹಜರು ನಡೆಸಿ 13 ಜಾಗಗಳನ್ನು ಗುರುತಿಸಿದರು. ರಸ್ತೆಬದಿಯಲ್ಲಿನ ಖಾಲಿ ಜಾಗವೂ ಸೇರಿದಂತೆ 13 ಕಡೆ ಕೊಲೆಯಾದ ಶವಗಳನ್ನು ಹೂತಿಟ್ಟಿದ್ದಾಗಿ ಅನಾಮಧೇಯ ವ್ಯಕ್ತಿ ತಿಳಿಸಿದ್ದರು. ಅದನ್ನು ಆಧರಿಸಿ ಇಂದು ಬೆಳಿಗ್ಗೆ ನೇತ್ರಾವತಿ ನದಿಯ ದಡದಲ್ಲಿರುವ ಜಾಗವೊಂದರಲ್ಲಿ ಉತ್ಖನನ ನಡೆಸಲಾಯಿತು.
ಎಫ್‌ಎಸ್‌ಎಲ್ ಅಧಿಕಾರಿಗಳು, ನಾಲ್ವರು ವೈದ್ಯಾಧಿಕಾರಿಗಳು, ಸಹಾಯಕ ಸಿಬ್ಬಂದಿಗಳು, ಅರಣ್ಯಾಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳನ್ನು ಬೆಳಿಗ್ಗೆ ತಹಸೀಲ್ದಾರ್ ಕಚೇರಿಗೆ ಕರೆಸಿಕೊಂಡು ತಂಡಗಳನ್ನಾಗಿ ರಚಿಸಲಾಯಿತು. ಶವ ಹೂತಿಟ್ಟ ಸ್ಥಳಗಳನ್ನು ಅಗೆಯಲು 12 ಕಾರ್ಮಿಕರ ತಂಡವೊಂದನ್ನು ಗ್ರಾ.ಪಂ. ವತಿಯಿಂದ ವ್ಯವಸ್ಥೆ ಮಾಡಲಾಗಿದೆ.
ಈ ಎಲ್ಲರನ್ನೂ ಒಂದೇ ವಾಹನದಲ್ಲಿ ಬಿಗಿ ಪೊಲೀಸ್ ಭದ್ರತೆಯೊಂದಿಗೆ ಎಸ್‌ಐಟಿ ಅಧಿಕಾರಿಗಳು ಸ್ಥಳಕ್ಕೆ ಕರೆದುಕೊಂಡು ಹೋದರು. ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಗಳ ನೇತೃತ್ವದಲ್ಲಿ ಬಿಗಿ ಭದ್ರತೆ ಒದಗಿಸಲಾಗಿತ್ತು. ಕೆಎಸ್‌ಆರ್‌ಪಿ, ಸಿಎಆರ್ ತುಕಡಿಗಳನ್ನು ಸ್ಥಳದಲ್ಲಿ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ.
ಎಸ್‌ಐಟಿ ಅಧಿಕಾರಿಗಳು ತಾಲ್ಲೂಕು ಆಡಳಿತದ ತಹಸೀಲ್ದಾರ್ ಹಾಗೂ ಉಪವಿಭಾಗಾಧಿಕಾರಿ ಸ್ಟೆಲಾ ವರ್ಗಿಸ್‌ರವರ ಸಮುಖದಲ್ಲಿ ಶವಗಳನ್ನು ಹೂತಿಡಲಾಗಿದೆ ಎಂದು ಹೇಳಲಾದ ಸ್ಥಳಗಳಲ್ಲಿ ಪರಿಶೋಧನೆ ನಡೆಸಿದರು.
ಪ್ರತಿಯೊಂದು ಗುರುತಿಸಿದ ಸ್ಥಳಕ್ಕೂ ಸಂಖ್ಯೆಗಳನ್ನು ನೀಡಲಾಗಿದ್ದು, ಟೇಪ್‌ಗಳನ್ನು ಬಳಸಿ 8 ರಿಂದ 10 ಅಡಿ ವಿಸ್ತೀರ್ಣದ ಗಡಿಗಳನ್ನು ನಿಗದಿಪಡಿಸಲಾಗಿದೆ. ಅನಾಮಧೇಯ ವ್ಯಕ್ತಿ ಹೇಳಿದ ಸ್ಥಳಗಳನ್ನು ಗುದ್ದಲಿ, ಹಾರೆ, ಪಿಕಾಸಿಗಳನ್ನು ಬಳಸಿ ಕಾರ್ಮಿಕರು ಅಗೆದರು. ಪೊಲೀಸ್, ಕಂದಾಯ, ಅರಣ್ಯ ಇಲಾಖಾ ಅಧಿಕಾರಿಗಳು ಪ್ರತಿ ಹಂತದಲ್ಲೂ ತೀವ್ರ ನಿಗಾ ವಹಿಸಿದ್ದರು.
ಜೊತೆಗೆ ವೈದ್ಯಾಧಿಕಾರಿಗಳು ಅಲ್ಲಲ್ಲಿ ದೊರೆಯಬಹುದಾದ ಅವಶೇಷಗಳನ್ನು ಪರಿಶೀಲನೆಗೊಳಪಡಿಸುತ್ತಿದ್ದರು. ವಿಧಿ ವಿಜ್ಞಾನ ಪ್ರಯೋಗಾಲಯ ತಜ್ಞರು ಪ್ರಕರಣಕ್ಕೆ ಪೂರಕವಾದ ಪ್ರತಿಯೊಂದು ಅಂಶಗಳನ್ನೂ ಸಂಗ್ರಹಿಸಿ ಸಾಕ್ಷ್ಯಗಳ ಮಾದರಿಯಲ್ಲಿ ಕಲೆ ಹಾಕುತ್ತಿದ್ದರು.
ಕಾರ್ಯಾಚರಣೆ ವೇಳೆ ಬಿರುಮಳೆ ಆರಂಭವಾಯಿತು. ಅದನ್ನು ಲೆಕ್ಕಿಸದೆ ಛತ್ರಿಗಳನ್ನು ಹಿಡಿದು ಕಾರ್ಯಾಚರಣೆಯನ್ನು ಮುಂದುವರೆಸಲಾಯಿತು. ಪ್ರತಿಯೊಂದು ಸ್ಥಳ ವಿಶ್ಲೇಷಣೆಗೂ ಸಾಕಷ್ಟು ಸಮಯಾವಕಾಶ ಹಿಡಿದಿತ್ತು. ಆ ವೇಳೆ ಹಿರಿಯ ಅಧಿಕಾರಿಗಳು ಸ್ಥಳದಲ್ಲೇ ಬೀಡು ಬಿಟ್ಟಿದ್ದರು.
ಇಡೀ ದೇಶದ ಗಮನ ಸೆಳೆದಿರುವ ಈ ಪ್ರಕರಣ ತೀವ್ರ ಕುತೂಹಲ ಕೆರಳಿಸಿದೆ. ಅನಾಮಧೇಯ ವ್ಯಕ್ತಿ ಹೇಳಿದ ಸ್ಥಳದಲ್ಲಿ ಸಹಜವಾಗಿ ಮಾನವ ಕಳೇಬರಗಳ ಅವಶೇಷಗಳು ಪತ್ತೆಯಾದರೆ ಪ್ರಕರಣ ಮಹತ್ವದ ಘಟ್ಟ ತಲುಪಲಿದೆ. ಅವಶೇಷಗಳ ಮೂಲ ಪತ್ತೆ ಹಾಗೂ ಅಪರಾಧದ ತನಿಖೆ ಮತ್ತೊಂದು ರೀತಿಯ ಸವಾಲಿನದಾಗಿದೆ. ಹೀಗಾಗಿ ಎಸ್‌ಐಟಿ ನೇತೃತ್ವ ವಹಿಸಿರುವ ಹಿರಿಯ ಅಧಿಕಾರಿಗಳು ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ. ಪ್ರತಿಯೊಂದನ್ನೂ ಕಾನೂನುಬದ್ಧವಾಗಿ ಹಾಗೂ ಕ್ರಮಬದ್ಧವಾಗಿ ನಿರ್ವಹಣೆ ಮಾಡಲಾಗುತ್ತಿದೆ.
ಉತ್ಖನನ ಸ್ಥಳದಿಂದ ಮಾಧ್ಯಮದವರನ್ನು ದೂರ ಇಡಲಾಗಿತ್ತು. ಹಿರಿಯ ಅಧಿಕಾರಿಗಳು ಹಾಗೂ ತಾಲ್ಲೂಕು ಮ್ಯಾಜಿಸ್ಟ್ರೇಟ್‌ರ ಸಮುಖದಲ್ಲಿ ಪಂಚನಾಮೆ ಚಟುವಟಿಕೆಗಳು ನಡೆಯುತ್ತಿವೆ. ಅನಾಮೇಧಯ ವ್ಯಕ್ತಿ ಒಟ್ಟು 15 ಸ್ಥಳಗಳಲ್ಲಿ ಶವಗಳನ್ನು ಹೂತಿಟ್ಟಿದ್ದಾಗಿ ಪ್ರಾಥಮಿಕ ಹೇಳಿಕೆ ನೀಡಿದ್ದು, ನಿನ್ನೆ 13 ಸ್ಥಳಗಳನ್ನು ಧರ್ಮಸ್ಥಳದ ನೇತ್ರಾವತಿ ನದಿಯ ದಡ ಹಾಗೂ ಸ್ನಾನಘಟ್ಟದ ಎರಡು ಬದಿಗಳಲ್ಲಿ ಗುರುತಿಸಲಾಗಿದೆ. ಅಜಿಕುರಿ ರಸ್ತೆಯ ಪಕ್ಕದಲ್ಲೂ ಶವ ಹೂತಿಟ್ಟಿರುವುದಾಗಿ ತಿಳಿಸಿದ್ದಾರೆ. ಬಾಕಿ ಇರುವ ಸ್ಥಳಗಳ ಮಹಜರಿಗೂ ಎಸ್‌ಐಟಿ ಅಧಿಕಾರಿಗಳು ಮುಂದಾಗಿದ್ದಾರೆ.
- ಡಿ.ಕೆ. ಸುರೇಶ ಕೆಎಂಎಫ್ ಅಧ್ಯಕ್ಷಗಾದಿ ಕನಸಿಗೆ ನಾನಾ ವಿಘ್ನ
- “ದಿ ರಾಮೇಶ್ವರಂ ಕೆಫೆ” ವತಿಯಿಂದ ಉತ್ತರ ಭಾರತದ ಶೈಲಿಯ “ತೀರ್ಥ” ಕೆಫೆ ಆರಂಭ
- ಆ.1 ರಿಂದ ಬೆಸ್ಕಾಂ ಬಿಲ್ ಪಾವತಿಯ ATP ಸೇವೆ ಸ್ಥಗಿತ
- ಮನೆಯ ಟೆರೇಸ್ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಗರ್ಭಿಣಿ ಶವ ಮಹಿಳೆ
- ಪಹಲ್ಗಾಮ್ ದಾಳಿಗೆ ಅವಕಾಶ ಮಾಡಿಕೊಟ್ಟಿದ್ದೇಕೆ..? : ಗುಂಡೂರಾವ್ ಪ್ರಶ್ನೆ