ಬೆಂಗಳೂರು,ಜು.30– ಧರ್ಮಸ್ಥಳ ಸುತ್ತಮುತ್ತ ಭಾಗದಲ್ಲಿ ಶವಗಳನ್ನು ಹೂತಿಟ್ಟಿರುವ ಆರೋಪದ ತನಿಖೆಗಾಗಿ ರಚಿಸಲಾಗಿರುವ ಎಸ್‌ಐಟಿಯ ಮುಖ್ಯಸ್ಥ ಪ್ರಣಬ್ ಮೊಹಾಂತಿಯವರನ್ನು ಕೇಂದ್ರ ಸೇವೆಗೆ ಕರೆಸಿಕೊಂಡರೆ ಎಸ್‌ಐಟಿಗೆ ಬೇರೆ ಅಧಿಕಾರಿಯನ್ನು ನೇಮಿಸಲಾಗುವುದು ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಣಬ್ ಮೊಹಂತಿ ಕೇಂದ್ರ ಸೇವೆಗೆ ಆಯ್ಕೆಯಾಗುವುದಾದರೆ ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಿ ಮುಂದುವರೆಯುವುದಾಗಿ ಪರಮೇಶ್ವರ್ ಹೇಳಿದರು.
ಕಾನೂನು ಪ್ರಕಾರ, ಯಾವೆಲ್ಲಾ ಅಂಶಗಳಿವೆ ಎಂಬುದನ್ನು ಪರಿಶೀಲಿಸಲಾಗುತ್ತದೆ. ಪ್ರಣಬ್ ಮೊಹಂತಿ ಕೇಂದ್ರ ಸೇವೆಗೆ ನಿಯೋಜನೆಗೊಂಡರೂ ಕೂಡ ಎಸ್‌ಐಟಿ ತನಿಖೆಯನ್ನು ಮುಂದುವರೆಸಬಹುದೇ ಎಂಬುದರ ಬಗ್ಗೆಯೂ ಪರಿಶೀಲಿಸಲಾಗುತ್ತಿದೆ ಎಂದರು.
ಧರ್ಮಸ್ಥಳದ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ಮುಂದುವರೆಯುತ್ತಿದೆ. ಈ ಹಂತದಲ್ಲಿ ಯಾವುದೇ ರೀತಿಯ ಹೇಳಿಕೆಗಳನ್ನು ನೀಡಬಾರದು ಎಂದು ನಿರ್ಧರಿಸಿದ್ದೇವೆ. ತನಿಖೆಯ ಬಳಿಕ ಎಲ್ಲಾ ಮಾಹಿತಿಗಳೂ ಸಿಗುತ್ತವೆ ಎಂದು ಸ್ಪಷ್ಟಪಡಿಸಿದರು.
ನಟಿ ರಮ್ಯಾ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ನಿಂದನೆ ಪ್ರಕರಣವನ್ನು ಈಗಾಗಲೇ ತನಿಖೆ ನಡೆಸಲಾಗುತ್ತಿದೆ. ಪ್ರಜಾಪ್ರಭುತ್ವದಲ್ಲಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಎಲ್ಲರೂ ಸ್ವತಂತ್ರರು. ಆದರೆ ಇನ್ನೊಬ್ಬರ ತೇಜೋವಧೆ ಮಾಡಬಾರದು ಎಂದು ತಿಳಿಸಿದರು.ಮುಖ್ಯಮಂತ್ರಿಗಳು ನಡೆಸುತ್ತಿರುವ ಶಾಸಕರ ಸಭೆಯಲ್ಲಿ ಒಡೆದುಹೋಗಿರುವ ಮನಸ್ಸುಗಳನ್ನು ಸರಿಪಡಿಸಲಾಗುತ್ತಿದೆ ಎಂದು ಪರಮೇಶ್ವರ್ ಹೇಳಿದರು.
ತುಮಕೂರು ಜಿಲ್ಲೆಗೆ ಸೀಮಿತವಾಗಿ ಹೇಳುವುದಾದರೆ ಹಾಲು ಒಕ್ಕೂಟದ ಅಧ್ಯಕ್ಷರ ನೇಮಕಾತಿಗೆ ಸಂಬಂಧಪಟ್ಟಂತೆ ವೈಷಮ್ಯಗಳಿದ್ದವು. ನಿನ್ನೆ ಮುಖ್ಯಮಂತ್ರಿಯವರ ಸಭೆಯಲ್ಲಿ ಅದು ಚರ್ಚೆಯಾಯಿತು. ಹಾಲು ಒಕ್ಕೂಟ ರಚನೆಯಾದ ದಿನದಿಂದಲೂ ಅಧ್ಯಕ್ಷ ಸ್ಥಾನ ದಲಿತರಿಗೆ ಸಿಕ್ಕಿರಲಿಲ್ಲ.
ಈ ಕಾರಣಕ್ಕೆ ಪಾವಗಡದ ಶಾಸಕ ವೆಂಕಟೇಶ್ ಅವರನ್ನು ಒಕ್ಕೂಟಕ್ಕೆ ನಾಮನಿರ್ದೇಶನ ಮಾಡಿ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಇತರ ಶಾಸಕರಿಗೆ ಈ ಹಿನ್ನೆಲೆಯನ್ನು ಮನವರಿಕೆ ಮಾಡಿಕೊಡಲಾಯಿತು. ಸಮಸ್ಯೆ ಬಗೆಹರಿದಿದೆ ಎಂದರು.
ಹೇಮಾವತಿ ಲಿಂಕ್ ಕೆನಾಲ್ ಬಗ್ಗೆ ಯಾವುದೇ ಚರ್ಚೆಗಳಾಗಿಲ್ಲ. ಮುಖ್ಯಮಂತ್ರಿಯವರ ಬಳಿ ಸಮಸ್ಯೆ ಹೇಳಿದರೆ ಪರಿಹಾರ ಸಿಗುತ್ತದೆ ಎಂಬುದು ಎಲ್ಲರ ವಿಶ್ವಾಸ. ಹೀಗಾಗಿ ಸಭೆ ಯಶಸ್ವಿಯಾಗುತ್ತಿದೆ ಎಂದು ಹೇಳಿದರು.
ಮೈಸೂರಿನಲ್ಲಿ ಮಾದಕ ವಸ್ತುಗಳ ತಯಾರಿಕಾ ಘಟಕ ಪತ್ತೆಯಾಗಿರುವುದಕ್ಕೆ ಬಿಜೆಪಿಯವರು ಪ್ರತಿಭಟನೆ ಮಾಡುವುದಾದರೆ ಮಾಡಲಿ. ಈ ವಿಚಾರದ ಕುರಿತು ಎಷ್ಟು ಜಾಗೃತಿ ಮೂಡಿಸಿದರೂ ಒಳ್ಳೆಯದೇ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ತಪ್ಪಿತಸ್ಥರನ್ನು ಬಂಧಿಸಲಾಗಿದೆ. ರಾಜ್ಯಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದರು.
- 35 ವರ್ಷಗಳ ಸುದೀರ್ಘ ಸೇವೆ ತೃಪ್ತಿ ತಂದಿದೆ : ಡಿಜಿಪಿ ಮಾಲಿನಿ ಕೃಷ್ಣಮೂರ್ತಿ
- 2035ರ ವೇಳೆಗೆ 20 ಶತಕೋಟಿ ಡಾಲರ್ ಕ್ವಾಂಟಮ್ ಆರ್ಥಿಕ ರಾಜ್ಯವಾಗಿಸುವ ಗುರಿ : ಸಚಿವ ಭೋಸರಾಜು
- ಶ್ರಾವಣಕ್ಕೆ ದುಬಾರಿಯಾದ ತೆಂಗಿನಕಾಯಿ
- ಬೆಂಗಳೂರಲ್ಲಿ ಪೊಲೀಸರಿಂದ ವಾಹನ ಟೋಯಿಂಗ್ : ಗೃಹ ಸಚಿವ ಪರಮೇಶ್ವರ್
- ಬೆಂಗಳೂರು : ಗಂಡನ ಮೇಲಿನ ಕೋಪಕ್ಕೆ ವಿಷವುಣಿಸಿ ಮಗುವನ್ನು ಕೊಂದ ತಾಯಿ