Friday, August 1, 2025
Homeರಾಜ್ಯಆಗಸ್ಟ್‌ ಮೊದಲ ವಾರದಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಸಾಧ್ಯತೆ

ಆಗಸ್ಟ್‌ ಮೊದಲ ವಾರದಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಸಾಧ್ಯತೆ

Less than usual rainfall likely in the first week of August

ಬೆಂಗಳೂರು, ಜು.30-ನೈರುತ್ಯ ಮುಂಗಾರು ದುರ್ಬಲಗೊಂಡಿದ್ದು, ಕರಾವಳಿ, ಮಲೆನಾಡು ಭಾಗ ಹೊರತುಪಡಿಸಿ, ರಾಜ್ಯದಲ್ಲಿ ಒಣಹವೆ ಮುಂದುವರೆದಿದೆ. ಹವಾಮಾನ ಮುನ್ಸೂಚನೆ ಪ್ರಕಾರ ಆಗಸ್ಟ್‌ ಮೊದಲ ವಾರದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ.ವಾತಾವರಣದಲ್ಲಿ ಉಂಟಾಗಿರುವ ಬದಲಾವಣೆಯಿಂದಾಗಿ ಮುಂಗಾರು ದುರ್ಬಲಗೊಂಡಿದ್ದು, ಇಂದಿನಿಂದ ಮಳೆ ಪ್ರಮಾಣ ಕಡಿಮೆಯಾಗಲಿದೆ.

ಭಾರಿ ಮಳೆಯಾಗುತ್ತಿದ್ದ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಮಳೆ ಪ್ರಮಾಣ ಇಳಿಕೆಯಾಗಿದೆ. ಹೀಗಾಗಿ ನದಿಗಳ ಪ್ರವಾಹ ಹಾಗೂ ಜಲಾಶಯಗಳ ಒಳ ಹರಿವು ಪ್ರಮಾಣವೂ ಗಣನೀಯವಾಗಿ ಇಳಿಕೆಯಾಗುತ್ತಿದೆ.ರಾಜ್ಯದ ಹಲವೆಡೆ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆಗಳಿವೆ. ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಸಾಧಾರಣ ಪ್ರಮಾಣದ ಮಳೆ ಮುಂದುವರೆಯಲಿದೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ, ನಿನ್ನೆ ಕೊಡಗು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ವ್ಯಾಪಕ ಪ್ರಮಾಣದ ಮಳೆಯಾಗಿದ್ದು, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಸಾಧಾರಣ ಪ್ರಮಾಣದ ಮಳೆ ಬಿದ್ದಿದೆ. ಮಡಿಕೇರಿ ತಾಲ್ಲೂಕಿನ ಮದೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ 76 ಮಿ.ಮೀ.ನಷ್ಟು, ರಾಜ್ಯದಲ್ಲೇ ಅಧಿಕ ಪ್ರಮಾಣದ ಮಳೆಯಾಗಿದೆ. ರಾಜ್ಯದ ಉಳಿದ ಜೆಲ್ಲೆಗಳಲ್ಲಿ ಅಲ್ಲಲ್ಲಿ ಹಗುರದಿಂದ ಸಾಧಾರಣ ಮಳೆ ಬಿದ್ದಿದೆ.

ಪ್ರಸಕ್ತ ಮುಂಗಾರಿನಲ್ಲಿ ಜೂನ್‌ ಒಂದರಿಂದ ಇದುವರೆಗೆ ರಾಜ್ಯದಲ್ಲಿ ವಾಡಿಕೆ ಪ್ರಮಾಣದ ಮಳೆಯಾಗಿದೆ. ಈ ಅವಧಿಯಲ್ಲಿ 454 ಮಿ.ಮೀ. ವಾಡಿಕೆ ಮಳೆಯಾಗಿದ್ದು,459 ಮಿ.ಮೀ.ನಷ್ಟು ಮಳೆ ಬಿದ್ದಿದೆ. ಆದರೆ, ದಕ್ಷಿಣ ಒಳನಾಡಿನಲ್ಲಿ ಜೂನ್‌ ಮತ್ತು ಜುಲೈ ತಿಂಗಳಲ್ಲಿ ಮಳೆ ಕೊರತೆ ಉಂಟಾಗಿದೆ. ಶೇ.19ರಷ್ಟು ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. 139 ಮಿ.ಮೀ. ವಾಡಿಕೆ ಮಳೆಗೆ 113 ಮಿ.ಮೀ.ನಷ್ಟು ಮಾತ್ರ ಮಳೆಯಾಗಿದ್ದು, ವ್ಯಾಪಕ ಪ್ರಮಾಣದಲ್ಲಿ ಎಲ್ಲೆಡೆ ಮಳೆಯಾಗಿಲ್ಲ.

ಉತ್ತರ ಒಳನಾಡಿನಲ್ಲಿ ವಾಡಿಕೆಗಿಂತ ಶೇ,3ರಷ್ಟು, ಮಲೆನಾಡಿನಲ್ಲಿ ಶೇ. 1ರಷ್ಟು ಕಡಿಮೆ ಮಳೆ ಬಿದ್ದಿದೆ. ಆದರೆ, ಕರಾವಳಿ ಭಾಗದಲ್ಲಿ ವಾಡಿಕೆಗಿಂತ ಶೇ.10ರಷ್ಟು ಹೆಚ್ಚು ಮಳೆಯಾಗಿದೆ.ಮುಂಗಾರು ದುರ್ಬಲಗೊಂಡಿರುವ ಪರಿಣಾಮ ಕರಾವಳಿ ಹಾಗೂ ಕರಾವಳಿಗೆ ಹೊಂದಿಕೊಂಡಂತಿರುವ ಜಿಲ್ಲೆಗಳನ್ನು ಹೊರತುಪಡಿಸಿ ರಾಜ್ಯದಲ್ಲಿ ಮಳೆ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕೇಂದ್ರದ ನಿರ್ದೇಶಕ ಸಿ.ಎಸ್‌‍.ಪಾಟೀಲ್‌ ತಿಳಿಸಿದ್ದಾರೆ. ಸರಾಸರಿ ರಾಜ್ಯದಲ್ಲಿ ಒಣಹವೆ ಮುಂದುವರೆಯಲಿದ್ದು, ಆಗಸ್ಟ್‌ 12ರವರೆಗೆ ವಾಡಿಕೆಗಿಂತ ಕಡಿಮೆ ಪ್ರಮಾಣದ ಮಳೆಯಾಗುವ ಮುನ್ಸೂಚನೆಗಳಿವೆ ಎಂದು ಅವರು ಹೇಳಿದ್ದಾರೆ.

RELATED ARTICLES

Latest News