ಬೆಂಗಳೂರು,ಜು.30- ಕೆಲವು ಸ್ಪಷ್ಟೀಕರಣ ಬೇಕಾದ ಹಿನ್ನೆಲೆಯಲ್ಲಿ ಕೆ.ಆರ್.ನಗರ ಮಹಿಳೆಯ ಅತ್ಯಾಚಾರ ಪ್ರಕರಣದಲ್ಲಿ ಬಂಧಿತರಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಜಾಮೀನು ಅರ್ಜಿಯ ತೀರ್ಪನ್ನು ವಿಶೇಷ ನ್ಯಾಯಾಲಯ ಆಗಸ್ಟ್ 1ಕ್ಕೆ ಮುಂದೂಡಿದೆ.
ಪ್ರಕರಣ ಸಂಬಂಧ ಎಸ್‌ಐಟಿ ವಶಪಡಿ ಸಿಕೊಂಡಿದ್ದ ಸ್ಯಾಮ್‌ಸಂಗ್ ಮೊಬೈಲ್ ಅನ್ನು ಸಾಕ್ಷಿಯನ್ನಾಗಿ ಪರಿಗಣಿಸಬೇಕೇ ಬೇಡವೇ ಎಂಬುದರ ಕುರಿತು ಎರಡೂ ಕಡೆಯ ವಕೀಲರಿಂದ ಬೆಂಗಳೂರು ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಗಜಾನನ ಭಟ್ ಅವರು ಪ್ರಶ್ನೆ ಮಾಡಿದರು.
ಈ ಹಂತದಲ್ಲಿ ಸರ್ಕಾರದ ಪರವಾಗಿ ವಿಶೇಷ ಸಾರ್ವಜನಿಕ ಅಭಿಯೋಜಕರಾದ ಜಗದೀಶ್, ಅಶೋಕ್ ನಾಯಕ್ ಹಾಗೂ ರೇವಣ್ಣ ಪರ ವಕೀಲ ಅರುಣ್.ಜಿ ಅವರು, ವಾದ ಮಂಡಿಸಲು ಮುಂದಾದಾಗ ನಿಮ ವಾದ ಬೇಡ. ಕೇವಲ ಅಭಿಪ್ರಾಯ ಮಾತ್ರ ವ್ಯಕ್ತಪಡಿಸಿ. ಸ್ಪಷ್ಟೀಕರಣ ಬೇಕಾಗಿರುವ ಹಿನ್ನೆಲೆಯಲ್ಲಿ ಬುಧವಾರ ತೀರ್ಪು ಪ್ರಕಟಿಸದೆ ಆಗಸ್ಟ್ 1(ಶುಕ್ರವಾರ)ರಂದು ಆದೇಶ ನೀಡುವುದಾಗಿ ಮುಂದೂಡಿತು.
ಸ್ಥಳ ಮಹಜರು ನಡೆಸುವಾಗ ಎಸ್‌ಐಟಿಯವರು ಸ್ಯಾಮ್‌ಸಂಗ್ ಮೊಬೈಲ್‌ನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಇದರಲ್ಲಿ ನೂರಾರು ಅಶ್ಲೀಲ ಚಿತ್ರಗಳು ಸೆರೆಯಾಗಿವೆ. ಇದನ್ನು ಸಾಕ್ಷಿಯಾಗಿ ಪರಿಗಣಿಸಬೇಕೆಂದು ಜಗದೀಶ್ ನ್ಯಾಯಾಧೀಶರಿಗೆ ಮನವಿ ಮಾಡಿದರು.ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರಜ್ವಲ್ ರೇವಣ್ಣ ಪರ ವಕೀಲ ಅರುಣ್.ಜಿ ತನಿಖಾಧಿಕಾರಿಗಳು ಹೇಳುವಂತೆ ಪ್ರಕರಣ ನಡೆದಾಗ ಸ್ಯಾಮ್‌ಸಂಗ್ ಮೊಬೈಲ್ ಇರಲೇ ಇಲ್ಲ. ಇದನ್ನು ಸಾಕ್ಷಿಯನ್ನಾಗಿ ನ್ಯಾಯಾಲಯ ಹೇಗೆ ಪರಿಗಣಿಸುತ್ತದೆ ಎಂದು ಪ್ರಶ್ನಿಸಿದರು.
ಆಗ ನ್ಯಾಯಮೂರ್ತಿಯವರು ಇಲ್ಲಿ ಮೊಬೈಲ್ ಮತ್ತು ಗೂಗಲ್ ಲೊಕೆಶನ್ ಅನ್ನು ಸಾಕ್ಷಿಯನ್ನಾಗಿ ಪರಿಗಣಿಸಬೇಕೆ ಬೇಡವೇ ಎಂಬುದಷ್ಟೆ ನನ್ನ ಮುಂದಿರುವ ಪ್ರಶ್ನೆ. ಇದರ ಬಗ್ಗೆ ಸ್ಪಷ್ಟೀಕರಣ ಬೇಕಾಗಿರುವುದರಿಂದ ಆ.1ರಂದು ಆದೇಶ ನೀಡುವುದಾಗಿ ಪ್ರಕಟಿಸಿದರು.ಹೊಳೆನರಸೀಪುರದ ಕನ್ನಿಕಡದ ಮನೆಯ ಗೂಗಲ್‌ಮ್ಯಾಪ್ ನೀಡಲಾಗಿದೆ, ಗ್ಯೂಗಲ್ ಮ್ಯಾಪ್‌ನಲ್ಲಿ ಮನೆ, ಕೆಲಸದವರ ಶೆಡ್ ಎಲ್ಲವನ್ನೂ ನೀಡಲಾಗಿದೆ. ಗೂಗಲ್ ಮ್ಯಾಪ್ ಆಧರಿಸಿ ಮಹಜರು ಪ್ರಕ್ರಿಯೆ ನಡೆದಿದೆ ಎಂದು ತಿಳಿಸಿದರು.
ಅಂತಿಮವಾಗಿ ನ್ಯಾಯಾಲಯ ಮಧ್ಯಾಹ್ನದೊಳಗೆ ಸ್ಪಷ್ಟನೆ ನೀಡುವಂತೆ ಸರ್ಕಾರಿ ಪರ ವಕೀಲರಿಗೆ ಸೂಚಿಸಿತು.ಮನೆ ಕೆಲಸದಾಕೆ ಮೇಲೆ ಅತ್ಯಾಚಾರ ಎಸಗಿ ವಿಡಿಯೋ ಸೆರೆ ಮಾಡಿದ ಆರೋಪ ಪ್ರಜ್ವಲ್ ರೇವಣ್ಣ ಮೇಲಿದೆ. ನ್ಯಾಯಾಲಯ ಕಲಾಪಕ್ಕೆ ಪ್ರಜ್ವಲ್ ರೇವಣ್ಣ ಹಾಜರಾಗಿದ್ದರು.
ಏನಿದು ಪ್ರಕರಣ?:
ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾಗಿರುವ ಅಶ್ಲೀಲ ದೃಶ್ಯವಿದ್ದ ಪೆನ್ ಡ್ರೈವ್‌ಗಳನ್ನು ಹಾಸನ ಕ್ಷೇತ್ರದಾದ್ಯಂತ ಹಂಚಲಾಗಿತ್ತು. ಹೊಳೆನರಸೀಪುರದ ಮಹಿಳೆಯೊಬ್ಬರು ನೀಡಿದ್ದ ದೂರಿನ ಆಧಾರದ ತನಿಖೆ ಆರಂಭವಾಯಿತು. ಪ್ರಕರಣ ಸಂಬಂಧ 2024ರ ಮೇ 31ರಂದು ಪ್ರಜ್ವಲ್ ರೇವಣ್ಣ ಅವರನ್ನು ಪೊಲೀಸರು ಬಂಧಿಸಿದ್ದರು.
ಬಳಿಕ, ಕೆ.ಆರ್.ನಗರದ ಮನೆ ಕೆಲಸದ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿದ್ದರು.ತನಿಖೆ ನಡೆಸಿದ ಎಸ್‌ಐಟಿ ಆರೋಪಪಟ್ಟಿ ಸಲ್ಲಿಸಿತ್ತು. ಇದಾದ ಬಳಿಕ 2024ರ ಡಿಸೆಂಬರ್ 30ರಂದು ಕೇಸ್ ಮ್ಯಾಜಿಸ್ಟ್ರೇಟ್ ಕೋರ್ಟ್‌ನಿಂದ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ಗೆ ವರ್ಗಾವಣೆಯಾಗಿತ್ತು. ಪ್ರಕರಣ ವರ್ಗಾವಣೆಯಾದ 7 ತಿಂಗಳಲ್ಲೇ ಸಾಕ್ಷ್ಯ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರು ತೀರ್ಪು ಕಾಯ್ದಿರಿಸಿದ್ದರು.
ಐಪಿಸಿ ಸೆಕ್ಷನ್ 376 (2)(ಞ) ಅಡಿ ಮಹಿಳೆಯ ಮೇಲೆ ಹಕ್ಕು ಚಲಾಯಿಸುವ ಸ್ಥಿತಿಯಲ್ಲಿದ್ದು ಅತ್ಯಾಚಾರ ಎಸಗುವುದು, 376 (2) (ಕೆ) ಅಡಿ ಮಹಿಳೆಯ ಮೇಲೆ ಪದೇ ಪದೇ ಅತ್ಯಾಚಾರ ಎಸಗುವುದು, 354(ಎ) ಲೈಂಗಿಕತೆ ಬೇಡಿಕೆ ಇಡುವುದು, 354 (ಬಿ) ಮಹಿಳೆಯನ್ನು ವಿವಸ್ತ್ರಗೊಳಿಸುವುದು, 354 (ಕೆ) ಮಹಿಳೆಯ ಅಶ್ಲೀಲ ದೃಶ್ಯ ಚಿತ್ರೀಕರಿಸುವುದು, 506 ಜೀವ ಬೆದರಿಕೆ, 201 ಸಾಕ್ಷ್ಯನಾಶದ ಅಡಿ ದೋಷಾರೋಪ ಹೊರಿಸಲಾಗಿತ್ತು. ಒಂದು ವೇಳೆ ನ್ಯಾಯಾಲಯ ಪ್ರಜ್ವಲ್ ರೇವಣ್ಣ ದೋಷಿ ಎಂದು ತೀರ್ಮಾನಿಸಿದರೆ ಕನಿಷ್ಠ 10 ವರ್ಷಗಳಿಂದ ಗರಿಷ್ಠ ಜೀವಿತಾವಧಿ ವರೆಗೂ ಸೆರೆವಾಸದ ಶಿಕ್ಷೆ ವಿಧಿಸಲು ಕೋರ್ಟ್‌ಗೆ ಅವಕಾಶವಿದೆ.
ಪ್ರಾಸಿಕ್ಯೂಷನ್ ಆರೋಪ
2021ರ ಕೋವಿಡ್ ಸಂದರ್ಭದಲ್ಲಿ ಹೊಳೆನರಸೀಪುರದ ಗನ್ನಿಕಾಡಾದ ಫಾರ್ಮ್‌ಹೌಸ್‌ನಲ್ಲಿದ್ದ ಪ್ರಜ್ವಲ್ ರೇವಣ್ಣ ಮನೆಕೆಲಸಕ್ಕೆ ನೇಮಕವಾಗಿದ್ದ ಮಹಿಳೆಯನ್ನು ನೀರು ತರುವ ನೆಪದಲ್ಲಿ 1ನೇ ಮಹಡಿಗೆ ಕರೆಸಿಕೊಂಡು ಬಲವಂತವಾಗಿ ಅತ್ಯಾಚಾರ ನಡೆಸಿದ್ದಾರೆ. ಬೆಂಗಳೂರಿನ ಬಸವನಗುಡಿಯ ಮನೆ ಕ್ಲೀನ್ ಮಾಡಬೇಕೆಂದು ಪ್ರಜ್ವಲ್ ತಾಯಿ ಭವಾನಿ ರೇವಣ್ಣ ಸೂಚನೆ ಮೇರೆಗೆ ಬಂದಿದ್ದಾಗಲೂ 3ನೇ ಮಹಡಿಗೆ ಕರೆಸಿಕೊಂಡು ಅತ್ಯಾಚಾರ ಮಾಡಿದ್ದಲ್ಲದೇ ಅದನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ.
ನಂತರ ಸಾಕ್ಷ್ಯ ನಾಶ ಮಾಡುವ ಉದ್ದೇಶದಿಂದ ರೆಕಾರ್ಡ್ ಮಾಡಿಕೊಂಡ ಮೊಬೈಲ್ ನಾಶಪಡಿಸಿದ್ದಾರೆ. ಈ ವಿಚಾರವನ್ನು ಯಾರಿಗೂ ತಿಳಿಸದಂತೆ ಮಹಿಳೆಗೆ ಜೀವ ಬೆದರಿಕೆಯನ್ನೂ ಹಾಕಿದ್ದಾರೆ. ಘಟನೆಗೆ ಸಾಕ್ಷಿಯಾಗಿ ಮೊಬೈಲ್‌ನಲ್ಲಿ ಚಿತ್ರೀಕರಿಸಿದ ವಿಡಿಯೋ, ಸಂತ್ರಸ್ತೆಯ ಹೇಳಿಕೆ, ಆಕೆಯ ಒಳ ಉಡುಪಿನಲ್ಲಿ ಪ್ರಜ್ವಲ್ ರೇವಣ್ಣನ ವೀರ್ಯದ ಕಲೆ ಪತ್ತೆಯಾಗಿದೆ.
ಗನ್ನಿಕಾಡಾದ ಫಾರ್ಮ್ ಹೌಸ್ ಪ್ರಜ್ವಲ್ ರೇವಣ್ಣಗೆ ಸೇರಿದ್ದಲ್ಲ. ಅಲ್ಲಿ ಮೊದಲನೇ ಮಹಡಿಯೇ ಇರಲಿಲ್ಲ, ಆ ಫಾರ್ಮ್ ಹೌಸ್‌ನಲ್ಲಿ ಮಹಿಳೆ ಕೆಲಸದಲ್ಲಿರಲಿಲ್ಲ, ಮಹಿಳೆ ಕೆ.ಆರ್.ನಗರದ ತನ್ನ ಮನೆಯಲ್ಲಿದ್ದರು. ಗಳೂರಿನ ಬಸವನಗುಡಿಯ ಮನೆಯೂ ಪ್ರಜ್ವಲ್ ರೇವಣ್ಣಗೆ ಸೇರಿದ್ದಲ್ಲ. ಹೀಗಾಗಿ, ಅಲ್ಲಿ ಇಂತಹ ಕೃತ್ಯ ನಡೆದೇ ಇಲ್ಲ. ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿಸಲು ನಕಲಿ ದಾಖಲೆಗಳನ್ನು ಸೃಷ್ಟಿಸಲಾಗಿದೆ. ರಾಜಕೀಯ ವೈಷಮ್ಯದಿಂದ ಕೇಸ್ ದಾಖಲಿಸಲಾಗಿದೆ. ಹೀಗಾಗಿ ಪ್ರಕರಣದಿಂದ ಖುಲಾಸೆಗೊಳಿಸಬೇಕು ಎಂದು ವಾದ ಮಂಡಿಸಿದ್ದಾರೆ.
- ಜಾತಿ, ಅಪರಾಧ, ಭ್ರಷ್ಟಾಚಾರ ಸಮಾಜದ ಪಿಡುಗು : ನ್ಯಾಯಮೂರ್ತಿ ಹೆಚ್.ಪಿ. ಸಂದೇಶ್
- ಬದಲಾಗುತ್ತಿದೆ ದೇಶದ ಜನಸಂಖ್ಯಾಶಾಸ್ತ್ರ : ಪ್ರಧಾನಿ ಮೋದಿ ಕಳವಳ
- ಲಂಡನ್ನಲ್ಲಿ ವಲಸಿಗರ ವಿರುದ್ಧ ರೊಚ್ಚಿಗೆದ್ದ ಬೃಹತ್ ಬಲಪಂಥೀಯರು, ಬೃಹತ್ ಪ್ರತಿಭಟನೆ
- ಪಾನಿಪುರಿ ತಿನ್ನಲು ಹೋಗಿ ಪ್ರಾಣ ಕಳೆದುಕೊಂಡ..!
- ವಿಶ್ವ ಬಾಕ್ಸಿಂಗ್ ಚಾಂಪಿಯನ್ಶಿಪ್ ನೂಪುರ್ಗೆ ಬೆಳ್ಳಿ, ಪೂಜಾಗೆ ಕಂಚಿನ ಪದಕ ಜೈಸಿನ್ಗೆ ಚಿನ್ನ