ಬೆಂಗಳೂರು, ಜು.31– ಶಾಸಕರೊಬ್ಬರು ನಕಲಿ ದಾಖಲೆ ಸೃಷ್ಟಿ ಮಾಡಿ 165 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ 26 ಎಕರೆ ಸರ್ಕಾರಿ ಜಮೀನನ್ನು ಕಬ್ಜಾ ಮಾಡಿರುವ ಬಗ್ಗೆ ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಅವರು ಲೋಕಾಯುಕ್ತಕ್ಕೆ ದಾಖಲೆ ಸಮೇತ ದೂರು ನೀಡಿದ್ದಾರೆ.
ಈ ಕುರಿತಂತೆ ಶಾಸಕ, ಅವರ ಧರ್ಮಪತ್ನಿ ಮತ್ತು ಒಂಬತ್ತು ಮಂದಿ ಹಾಗೂ ಮಾಜಿ ಸಚಿವರೊಬ್ಬರ ಆರು ಜನ ಆಪ್ತರ ವಿರುದ್ಧ ಹಾಗೂ ಲೋಕಾಯುಕ್ತದಲ್ಲಿ ದೂರು ದಾಖಲು ಮಾಡಿರುವುದಾಗಿ ರಮೇಶ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಇವರ ಅಕ್ರಮಕ್ಕೆ ಸಹಕಾರ ನೀಡಿರುವ ತಾವರೆಕೆರೆ ಸಮೀಪದ ಕುರುಬರಹಳ್ಳಿಯ ರಾಜಸ್ವ ನಿರೀಕ್ಷಕ ಮೋನಿಷ್, ಗ್ರಾಮ ಲೆಕ್ಕಿಗ ನಂಜೇಗೌಡ, ಬೆಂಗಳೂರು ದಕ್ಷಿಣ ತಾಲ್ಲೂಕಿನ ವಿಶೇಷ ತಹಸೀಲ್ದಾರ್ ಕೃಷ್ಣಮೂರ್ತಿ, ಬೆಂಗಳೂರು ನಗರ ಜಿಲ್ಲೆಯ ಉಪ ವಿಭಾಗಾಧಿಕಾರಿ ಅಪೂರ್ವ ಬಿದರಿ ಅವರುಗಳ ವಿರುದ್ಧವೂ ಸಹ ದೂರು ದಾಖಲು ಮಾಡಲಾಗಿದೆ.
ಶಾಸಕ ಸೇರಿದಂತೆ ಇನ್ನಿತರ ಹದಿನೈದು ಮಂದಿ ಸರ್ಕಾರಿ ನೆಲಗಳ್ಳರ ವಿರುದ್ಧ ತನಿಖೆ ನಡೆಸಲು ಅನುಮತಿ ನೀಡಬೇಕೆಂದು ಘನತೆವೆತ್ತ ರಾಜ್ಯಪಾಲರಿಗೆ ಮನವಿ ಮಾಡಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಮಾಜಿ ಸಚಿವರೊಬ್ಬರ ಆರು ಮಂದಿ ಆಪ್ತರು ಯಶವಂತಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬೆಂಗಳೂರು ದಕ್ಷಿಣ ತಾಲ್ಲೂಕು, ತಾವರೆಕೆರೆ ಹೋಬಳಿ, ಕುರುಬರ ಹಳ್ಳಿ ಗ್ರಾಮದ ಸರ್ವೆ ನಂ: 158 ರಲ್ಲಿ ಸುಮಾರು 800 ಕೋಟಿ ರೂ. ಮೌಲ್ಯದ 130.29 ಎಕರೆ ವಿಸ್ತೀರ್ಣದ ಗೋಮಾಳವನ್ನು ಕಬಳಿಸುವ ಕಾನೂನು ಬಾಹಿರ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿದ್ದಾರೆ.
ನಿಯಮಗಳನುಸಾರ, ಯಾವುದೇ ಮಂಜೂರಾತಿ ಜಮೀನನ್ನು ಕನಿಷ್ಠ 15 ವರ್ಷಗಳ ತನಕ ಮಾರಾಟ ಮಾಡುವಂತಿಲ್ಲ. ಹಾಗೆಯೇ 15 ವರ್ಷಗಳ ನಂತರವೂ ಮಾರಾಟ ಮಾಡಬೇಕಿದ್ದಲ್ಲಿ ಸರ್ಕಾರದ ಕಂದಾಯ ಇಲಾಖೆಯ ಮುಖ್ಯಸ್ಥರಿಂದ (ಮಾರಾಟಕ್ಕೆ ಅನುಮತಿ) ಪಡೆದುಕೊಳ್ಳುವುದು ಕಡ್ಡಾಯವಾಗಿರುತ್ತದೆ. ಅಲ್ಲದೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಗಡಿ ಪ್ರದೇಶದಿಂದ 18 ಕಿ. ಮೀ. ಒಳಗಿರುವ ಸರ್ಕಾರೀ ಸ್ವತ್ತನ್ನು ಮಾರಾಟ ಮಾಡುವಂತಿಲ್ಲ ಎಂಬ ನಿಯಮವಿದೆ. ಆದರೆ, ಈ ಎಲ್ಲ ನಿಯಮಗಳನ್ನು ಗಾಳಿಗೆ ತೂರಲಾಗಿದೆ.
ಮಾಜಿ ಸಚಿವರ ಆಪ್ತರಾಗಿರುವ ರಂಗಮ್ಮ, ವೆಂಕಟಮ್ಮ, ಬಿ. ವಿ. ಚಂದರ್ ರಾವ್, ಬಿ. ವಿ. ಮನೋಹರ್ ಬಾಬಡೆ, ಶಿವಣ್ಣ ಮತ್ತು ಅಬ್ದುಲ್ ಸತ್ತರ್ ಅವರುಗಳ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮಾನ್ಯ ಮುಖ್ಯಮಂತ್ರಿಗಳನ್ನು ಹಾಗೂ ಮಾನ್ಯ ಕಂದಾಯ ಸಚಿವರನ್ನು ರಮೇಶ್ ಆಗ್ರಹಿಸಿದ್ದಾರೆ.
- 14 ಜಿಲ್ಲೆಗಳ 42 ವಿಧಾನಸಭಾ ಕ್ಷೇತ್ರದಲ್ಲಿ ಪ್ರವಾಸ ಮಾಡಿದ ನಿಖಿಲ್ ಕುಮಾರಸ್ವಾಮಿ
- ನಟಿ ರಮ್ಯಾಗೆ ಅವಹೇಳನಕಾರಿ ಸಂದೇಶ ಕಳುಹಿಸಿದ್ದ ಮೂವರು ಕಿಡಿಗೇಡಿಗಳ ಬಂಧನ
- ಚುನಾವಣಾ ಆಯೋಗವನ್ನು ಬಿಜೆಪಿಯವರು ಸಮರ್ಥಿಸಿಕೊಳ್ಳುತ್ತಿರುವುದೇಕೆ..? : ಡಿ.ಕೆ. ಸುರೇಶ್
- ಅರ್ಜುನ ಆನೆ ಹೆಸರಲ್ಲಿ ವಾರ್ಷಿಕ ಪ್ರಶಸ್ತಿ ಸ್ಥಾಪನೆ : ಸಚಿವ ಖಂಡ್ರೆ
- ಗುಂಡಿ ಬಿದ್ದ ರಸ್ತೆಗಳಿಗೆ ಪ್ರಶಸ್ತಿ ನೀಡಿ ಬಿಬಿಎಂಪಿ ಕಾಲೆಳೆದ ಪ್ರಜ್ಞಾವಂತ ನಾಗರೀಕರು