ಬೆಂಗಳೂರು,ನ.21- ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ವಿಪಕ್ಷ ನಾಯಕ ಸ್ಥಾನಕ್ಕೆ ವಿಜಯೇಂದ್ರ ಹಾಗೂ ಆರ್.ಅಶೋಕ್ ನೇಮಕದ ಬಳಿಕ ರಾಜ್ಯದಲ್ಲಿ ಹಿಂದುತ್ವ ಪ್ರತಿಪಾದಿಸುವ ನಾಯಕರಿಗೆ ಹೈಕಮಾಂಡ್ ಅನ್ಯಾಯ ಮಾಡಿತೇ? ಎಂಬ ಪ್ರಶ್ನೆ ಸೃಷ್ಟಿಯಾಗಿದ್ದು, ಅಡ್ಜೆಸ್ಟ್ಮೆಂಟ್ ರಾಜಕಾರಣವನ್ನು ದೆಹಲಿ ವರಿಷ್ಠರೂ ಒಪ್ಪಿ ಬಿಟ್ಟರೇ ಎಂಬ ಸಂಶಯ ಮೊಳಕೆಯೊಡೆದಿದೆ.
ಬಿಜೆಪಿ ಹೈಕಮಾಂಡ್ ಅದರಲ್ಲೂ ಪ್ರಧಾನಿ ನರೇಂದ್ರಮೋದಿ ಹೊಂದಾಣಿಕೆ ಹಾಗೂ ಕುಟುಂಬ ರಾಜಕಾರಣವನ್ನು ಸಮಯ ಸಿಕ್ಕಾಗಲೆಲ್ಲ ವಿರೋಧಿಸಿದ್ದಾರೆ. ಆದರೆ ಈ ಎರಡು ನೇಮಕಗಳು ಮಾತ್ರ ಅವರ ವಾದಕ್ಕೆ ವ್ಯತಿರಿಕ್ತವಾಗಿದ್ದು, ಬಿಜೆಪಿ ಹಾಗೂ ಅದರ ಮಾತೃ ಸಂಸ್ಥೆ ಬೆಳೆಸಿದ ಸಿದ್ಧಾಂತ ಬದ್ಧ ರಾಜಕಾರಣಿಗಳನ್ನು ಅಕ್ಷರಶಃ ನೇಪಥ್ಯಕ್ಕೆ ಸರಿಸಿದೆ. ಹಿಂದುತ್ವದ ಕಟ್ಟರ್ ಪ್ರತಿಪಾದಕರು ಈ ಬೆಳವಣಿಗೆಯೊಂದಿಗೆ ಸಂಪೂರ್ಣವಾಗಿ ಮೂಲೆಗುಂಪಾಗುವ ಸಾಧ್ಯತೆಗಳು ಸ್ಪಷ್ಟವಾಗಿ ಗೋಚರಿಸುತ್ತಿದ್ದು ಅಸಮಾಧಾನ ಮಡುಗಟ್ಟಿದೆ.
ಪ್ರಖರ ಹಿಂದುತ್ವದ ಭಾಷಣ ಹಾಗೂ ಹೋರಾಟ ಮಾಡುವವರು ಸದ್ಯಕ್ಕೆ ಯುದ್ಧ ಗೆದ್ದುಕೊಡುವ ಶಕ್ತಿ ಹೊಂದಿಲ್ಲಎಂಬ ನಿರ್ಧಾರಕ್ಕೆ ಬಿಜೆಪಿ ಹೈಕಮಾಂಡ್ ಬಂದಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಯಾರಿಗೆ ಹೆಚ್ಚು ಸ್ಥಾನಗಳನ್ನು ತಂದುಕೊಡುವ ಶಕ್ತಿ ಇದೆಯೋ ಅವರಿಗೆ ಆದ್ಯತೆ. ಸಿದ್ಧಾಂತವೆಲ್ಲ ಮಣ್ಣಾಂಗಟ್ಟಿ ಎಂದು ಕೇಸರಿ ಹೈಕಮಾಂಡ್ ಭಾವಿಸಿದೆ.
ಭಾರತೀಯ ಮೂಲದ ಜೈಲು ವಾರ್ಡನ್‍ಗೆ ಸಿಂಗಾಪುರದಲ್ಲಿ ಶಿಕ್ಷೆ
ಹೀಗಾಗಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಸೋಲಿಗೆ ಯಡಿಯೂರಪ್ಪನವರ ಕೊಡುಗೆ ಎಷ್ಟಿದೆ ಎಂಬುದು ಗೊತ್ತಿದ್ದೂ ವಿಜಯೇಂದ್ರ ಅವರಿಗೆ ಅವಕಾಶ ನೀಡಿದೆ. ಅದೇ ರೀತಿ ಕಳೆದ ಚುನಾವಣೆ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್‌ಗೆ ಠಕ್ಕರ್ ನೀಡಲು ಕನಕಪುರದಿಂದ ಸ್ಪರ್ಧೆಗಿಳಿದು ಹೀನಾಯವಾಗಿ ಸೋತ ಆರ್.ಅಶೋಕ್ ಬಿಜೆಪಿಯ ಅಡ್ಜೆಸ್ಟ್‍ಮೆಂಟ್ ರಾಜಕಾರಣದ ಪಿತಾಮಹರ ಪೈಕಿ ಒಬ್ಬರು.
ಆದರೆ ಈ ಗೆಲುವಷ್ಟೇ ಮಾನದಂಡವೆಂಬ ನಿರ್ಣಯ ಬಿಜೆಪಿ ಹಾಗೂ ಸಂಘ-ಪರಿವಾರವೇ ಬೆಳೆಸಿದ ನಾಯಕರು ಸಂಪೂರ್ಣವಾಗಿ ಕಡೆಗಣನೆಗೆ ಗುರಿಯಾಗಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಸಂಸದ ಅನಂತಕುಮಾರ ಹೆಗಡೆ, ನಳೀನ್‍ಕುಮಾರ್ ಕಟೀಲ್, ಕೇಂದ್ರದ ಮಾಜಿ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್, ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಮಾಜಿ ಸಚಿವ ವಿ.ಸುನೀಲ್‍ಕುಮಾರ್, ಶಾಸಕ ಅರವಿಂದ ಬೆಲ್ಲದ್ ಮುಂತಾದವರನ್ನು ವರಿಷ್ಠರು ಪಕ್ಕಕ್ಕೆ ಇಟ್ಟಿದ್ದು, ಇವರೆಲ್ಲರೂ ಈಗ ಪಕ್ಷದಲ್ಲಿ ಬೇಡದ ವಸ್ತುಗಳಾಗಿದ್ದಾರೆ.
ಹಾಗಾದರೆ ಇವರೆಲ್ಲರೂ ಮಾಡಿದ ಅಪಚಾರವಾದರೂ ಏನು? ಹೊಂದಾಣಿಕೆ ರಾಜಕಾರಣ ನಡೆಸದಿರುವುದೇ ಅಥವಾ ಕುಟುಂಬ ರಾಜಕಾರಣದ ಕುಡಿಗಳಾಗದೇ ಇರುವುದೇ? ಸದನದ ಒಳಗೆ ಹಾಗೂ ಹೊರಗೆ ಇವರು ಬಿಜೆಪಿಯ ತತ್ವಾದರ್ಶಗಳನ್ನು ಪ್ರತಿಪಾದಿಸಿದ್ದು ತಪ್ಪೇ? ಯತ್ನಾಳ್, ಸಿ.ಟಿ.ರವಿಯವರ ಆಕ್ರೋಶದ ನುಡಿಗಳಲ್ಲಿ ಅನಂತಕುಮಾರ್, ಸುನಿಲ್ ಕುಮಾರ್ ಅವರ ಮೌನ ಪ್ರತಿಭಟನೆಯಲ್ಲಿ ಯಾವುದಾದರೂ ತಪ್ಪಿದೆಯೇ ಎಂದು ಕಾರ್ಯಕರ್ತರು ಪ್ರಶ್ನಿಸುವಂತಾಗಿದೆ.
ದೇಶದಲ್ಲೇ ಅತಿ ಹೆಚ್ಚು ಮತಗಳ ಅಂತರದಿಂದ ಗೆದ್ದ ಸಂಸದರ ಪೈಕಿ ಒಬ್ಬರಾಗಿದ್ದು, ಜಾತಿ ಲೆಕ್ಕಾಚಾರವನ್ನು ಮೀರಿ ಕರ್ನಾಟಕದಲ್ಲಿ ಹಿಂದುತ್ವದ ಅಲೆ ಎಬ್ಬಿಸಿದ್ದ ಅನಂತಕುಮಾರ ಹೆಗಡೆಯವರ ಪ್ರಸ್ತಾಪ ಔಪಚಾರಿಕವಾಗಿಯೂ ಪಕ್ಷ ಮಾಡುತ್ತಿಲ್ಲ. ಕಟು ಸತ್ಯ ಹೇಳುವ ಬಸನಗೌಡ ಪಾಟೀಲ್ ಯತ್ನಾಳ್ ಹೈಕಮಾಂಡ್ಗೆ ಬೇಕಿಲ್ಲ.
ಅಪ್ಪಟ ಸೈದ್ಧಾಂತಿಕ ನೆಲೆಯಲ್ಲೇ ಬೆಳೆದು ಪಕ್ಷದ ಎರಡನೇ ಶ್ರೇಣಿಯ ನಾಯಕರೆಂದು ಪರಿಗಣಿಸಲ್ಪಟ್ಟಿದ್ದ ಸಿ.ಟಿ.ರವಿ, ಸುನೀಲ್ ಕುಮಾರ್, ಅರವಿಂದ ಬೆಲ್ಲದ್ ಕೂಡ ಈ ಬೆಳವಣಿಗೆಯೊಂದಿಗೆ ಆದ್ಯತೆ ಕಳೆದುಕೊಳ್ಳುವಂತಾಗಿದೆ.
ಇನ್ನು ಮುಂದೆ ಅತ್ಯುತ್ತಮ ವೆಬ್‍ಸರಣಿಗೂ ಪ್ರಶಸ್ತಿ
ಇವರೆಲ್ಲರೂ ಪಕ್ಷ ಹಾಗೂ ಸಂಘಟನೆ ಏನನ್ನು ಬಯಸಿದೆಯೋ ಅದನ್ನು ಮಾತನಾಡಿದ್ದರು. ಆದರೆ ಈಗ ಜಾತಿ ಹಾಗೂ ಹೊಂದಾಣಿಕೆ ರಾಜಕಾರಣದ ಕಾರಣಕ್ಕಾಗಿ ಪಕ್ಷ ಹಾಗೂ ಸಂಘಟನೆಯೇ ಇವರನ್ನು ನಿರ್ಲಕ್ಷಿಸುವುದು ಎಷ್ಟು ಸರಿ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.