Tuesday, August 5, 2025
Homeರಾಜ್ಯಆನ್‌ಲೈನ್‌ನಲ್ಲಿ ನಕಲಿ ಕಾನೂನು ಸೇವೆ ನೀಡುತ್ತಿದ್ದ ಜಾಲ ಬಯಲಿಗೆ

ಆನ್‌ಲೈನ್‌ನಲ್ಲಿ ನಕಲಿ ಕಾನೂನು ಸೇವೆ ನೀಡುತ್ತಿದ್ದ ಜಾಲ ಬಯಲಿಗೆ

Online fake legal service network exposed

ಬೆಂಗಳೂರು,ಆ.4-ಆನ್‌ಲೈನ್‌ನಲ್ಲಿ ನಕಲಿ ಕಾನೂನು ಸೇವೆ ಒದಗಿಸುತ್ತಿದ್ದ ಇಬ್ಬರು ಸಹೋದರರ ದೊಡ್ಡ ಸೈಬರ್‌ ಅಪರಾಧ ಜಾಲವನ್ನು ಸಿಸಿಬಿ ಪೊಲೀಸರು ಭೇದಿಸಿ ಒಬ್ಬನನ್ನು ಬಂಧಿಸಿದ್ದಾರೆ.ಆರೋಪಿ ಸಹೋದರ ದುಬೈನಲ್ಲಿದ್ದು, ಹಲವಾರು ನಕಲಿ ಕಂಪನಿಗಳನ್ನು ಸ್ಥಾಪಿಸಿ ಆನ್‌ಲೈನ್‌ ವಂಚನೆ ನಡೆಸಲು ಸಾಂದರ್ಭಿಕ ಜಾಲವೊಂದನ್ನು ನಿರ್ಮಿಸಿದ್ದನು ಎಂಬುವುದು ಪೊಲೀಸರ ತನಿಖೆಯಿಂದ ಬಹಿರಂಗವಾಗಿದೆ.

ನಗರದ ಕಸ್ತೂರಿನಗರದಲ್ಲಿ ಇಂಡಿಯನ್‌ ಲೀಗಲ್‌ಎಂಬ ನಕಲಿ ಕಂಪನಿಯನ್ನು ಸ್ಥಾಪಿಸಿ 12 ಟೆಲಿಕಾಲರ್‌ಗಳನ್ನು ನೇಮಿಸಿ ಸೈಬರ್‌ ವಂಚನೆ ಗೊಳಗಾದವರಿಗೆ ಹಣ ಮರಳಿ ನೀಡುವುದಾಗಿ ಭರವಸೆ ನೀಡಿ ವಂಚಿಸುತ್ತಿದ್ದರು.ದೂರುದಾರರಿಗೆ ಸೋಲಾರ್‌ ಪ್ಲಾಂಟ್‌ ಅವಳಡಿಸುವುದಾಗಿ ಆರೋಪಿಗಳು ಆಮಿಷವೊಡ್ಡಿ 1.5 ಕೋಟಿ ರೂ.ಗಳಷ್ಟು ವಂಚಿಸಲಾಗಿದೆ. ಅಲ್ಲದೇ ಈ ಹಣವನ್ನು ಮರಳಿ ಪಡೆಯಲು ಆನ್‌ಲೈನ್‌ನಲ್ಲಿ ಕಾನೂನು ನೆರವಿನ ಬಗ್ಗೆ ಹುಡುಕುತ್ತಿದ್ದಾಗ, ಕ್ವಿಕ್‌ಮೋಟೋ ಲೀಗಲ್‌ ಸರ್ವಿಸ್‌‍ ಎಂಬ ವೆಬ್‌ಸೈಟ್‌ ನೋಡಿ ಸಂಪರ್ಕಿಸಿದಾಗ ಕಾನೂನು ಸೇವೆ ಒದಗಿಸುವುದಾಗಿ ಟೆಲಿಕಾಲರ್‌ಗಳು ಹೇಳಿದ್ದಾರೆ.

ಕಾನೂನು ಸೇವೆ ಒದಗಿಸುವುದಾಗಿ ಭರವಸೆ ನೀಡಿದ್ದರಿಂದ ಅವರ ಮಾತನ್ನು ನಂಬಿ ದೂರುದಾರರು ಹಂತ ಹಂತವಾಗಿ 12.5 ಲಕ್ಷ ರೂ. ಹಣವನ್ನು ನೀಡಿದ್ದಾರೆ.
ನಂತರ ದಿನಗಳಲ್ಲಿ ಆ ಕಂಪನಿ ನಕಲಿ ಎಂಬುವುದು ಗೊತ್ತಾಗಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ರಾಮಮೂರ್ತಿನಗರ ಪೊಲೀಸ್‌‍ ಠಾಣೆಯಲ್ಲಿ ರಾಷ್ಟ್ರೀಯ ಸೈಬರ್‌ ಕ್ರೈಂ ಪೋರ್ಟಲ್‌ ಮೂಲಕ ದಾಖಲಾದ ದೂರಿನ ಮೇರೆಗೆ ಸಿಸಿಬಿ ಪೊಲೀಸರು ತನಿಖೆ ಕೈಗೊಂಡರು.
ವಂಚಕರ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಲಾಗಿತ್ತು. ಈ ತಂಡ ಹಲವು ಆಯಾಮಗಳಲ್ಲಿ ಮಾಹಿತಿ ಕಲೆಹಾಕಿದಾಗ ಕ್ವಿಕ್‌ಮೋಟೋ ಲೀಗಲ್‌ ಕಂಪನಿಯು ಯಾವುದೇ ವಿಳಾಸದಲ್ಲಿ ಇಲ್ಲದೇ ಇರುವುದು ಬೆಳಕಿಗೆ ಬಂದಿದೆ.

ತನಿಖೆ ಮುಂದುವರೆಸಿದಾಗ ಕಸ್ತೂರಿ ನಗರದಲ್ಲಿ ಇಂಡಿಯನ್‌ ಲೀಗಲ್‌ ಸರ್ವಿಸ್‌‍ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾಲ್‌ಸೆಂಟರ್‌ ಪತ್ತೆಯಾಗಿದೆ.ಈ ಕಂಪನಿಯಲ್ಲಿ ಹಲವಾರು ಟೆಲಿಕಾಲರ್‌ಗಳನ್ನು ನೇಮಿಸಿಕೊಂಡು, ಸೈಬರ್‌ ವಂಚನೆಗೆ ಒಳಗಾದವರ ನಾಗರಿಕರನ್ನು ಕರೆ ಮಾಡಿ ಹಣ ಹಿಂದಿರುಗಿಸಿಕೊಡುವ ಭರವಸೆ ನೀಡಿ ಹಣ ಪಡೆದು ವಂಚಿಸಲಾಗುತ್ತಿತ್ತು ಎಂಬುವುದು ಗೊತ್ತಾಗಿದೆ.

ಕಾಲ್‌ಸೆಂಟರ್‌ನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಆರೋಪಿಯ ಸಹೋದರ ದುಬೈನಲ್ಲಿದ್ದು ಹಲವಾರು ನಕಲಿ ಕಂಪನಿಗಳನ್ನುಸ್ಥಾಪಿಸಿ ಆನ್‌ಲೈನ್‌ ವಂಚನೆ ನಡೆಸುವ ಜಾಲವೊಂದನ್ನು ನಿರ್ಮಿಸಿದ್ದನು ಎಂಬುವುದು ತನಿಖೆಯಿಂದ ಬೆಳಕಿಗೆ ಬಂದಿದೆ.

ಕಾಲ್‌ಸೆಂಟರ್‌ನಲ್ಲಿದ್ದ 10 ಕಂಪ್ಯೂಟರ್‌ ಹಾರ್ಡ್‌ ಡಿಸ್ಕ್‌ಗಳು, 7 ನಕಲಿ ಕಂಪನಿಗಳ ಸೀಲುಗಳು, ಬಾಡಿಗೆ ಒಪ್ಪಂದ ಪತ್ರಗಳು, ಚೆಕ್‌ಬುಕ್‌ಗಳು, ದಾಖಲೆಗಳು, ಮೊಬೈಲ್‌ ಫೋನ್‌, ಸಿಪಿಯು,11 ಸಿಮ್‌ ಕಾರ್ಡ್‌ಗಳು ಸೇರಿದಂತೆ ಎಸ್‌‍ಐಪಿ ಟ್ರಂಕ್‌ ಸರ್ವರ್‌ ವ್ಯವಸ್ಥೆಯ ಡೇಟಾ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.ಈ ಸಂಸ್ಥೆಯು 1.50 ಕೋಟಿ ರೂಗಳ ಅಕ್ರಮ ಹಣಕಾಸು ವ್ಯವಹಾರದಲ್ಲಿ ತೊಡಗಿರುವುದು ದೃಢಪಟ್ಟಿದ್ದು, ದೇಶದಾದ್ಯಂತ 29 ಕ್ಕೂ ಹೆಚ್ಚು ಪ್ರಕರಣಗಳು ಸೈಬರ್‌ ಕ್ರೈಂ ಪೋರ್ಟಲ್‌ನಲ್ಲಿ ದಾಖಲಾಗಿವೆ.ಈ ಜಾಲದಲ್ಲಿ ತೊಡಗಿರುವ ಉಳಿದ ಆರೋಪಿಗಳನ್ನು ಪತ್ತೆಹಚ್ಚಲು ತನಿಖೆ ಮುಂದುವರೆದಿದೆ.

RELATED ARTICLES

Latest News