ಬೆಂಗಳೂರು, ಆ.5- ಸಾರಿಗೆ ಮುಷ್ಕರದ ಪರಿಣಾಮ ಹಿರಿಯ ನಟ ಹೊನ್ನವಳ್ಳಿ ಕೃಷ್ಣ ಹಾಗೂ ಅವರ ಪತ್ನಿ ಬಿಎಂಟಿಸಿ ಬಸ್‌ನಿಲ್ದಾಣದಲ್ಲಿ ಸುಮಾರು 2-3ಗಂಟೆ ಕಾಲಹರಣ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.
ವೈಟ್‌ಫೀಲ್ಡ್ ಗೆ ಹೋಗಿದ್ದ ಹೊನ್ನವಳಿ ಕೃಷ್ಣ ಮತ್ತು ಅವರ ಪತ್ನಿ ವಾಪಾಸ್ ಮಾದನಾಯಕನಹಳ್ಳಿಗೆ ತೆರಳಲು ಇಂದು ಬೆಳಗ್ಗೆ ಕೆಂಪೇಗೌಡ ಬಸ್‌ನಿಲ್ದಾಣಕ್ಕೆ ಮೆಟ್ರೋದಲ್ಲಿ ಆಗಮಿಸಿದ್ದರು. ಇಲ್ಲಿಂದ ಮುಂದೆ ಪ್ರಯಾಣಿಸಲು ಅವರಿಗೆ ಬಸ್ ಲಭ್ಯವಿರಲಿಲ್ಲ. ಹೀಗಾಗಿ ಬಸ್ ನಿಲ್ದಾಣದ ಉಪಹಾರ ಗೃಹದಲ್ಲಿ ಕಾಫಿ ಕುಡಿದು, ತಿಂಡಿ ತಿಂದು ಸಮಯ ಕಳೆದರು. ಕೊನೆಗೆ ಬಸ್‌ಗಳಿಲ್ಲ ಎಂದು ಮನವರಿಕೆಯಾದಾಗ ಮಾದವರದವರಗೂ ಮೆಟ್ರೋದಲ್ಲಿ ಪ್ರಯಾಣಿಸಿದರು.
ಈ ಸಂದರ್ಭದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಹೊನ್ನಾವಳ್ಳಿ ಕೃಷ್ಣ ಮುಷ್ಕರ ಆಗಬಾರದು, ಜನಸಾಮಾನ್ಯರಿಗೆ ಬಾರೀ ತೊಂದರೆಗಳಾಗುತ್ತವೆ. ಮುಂದೆ ಈ ರೀತಿಯ ಮುಷ್ಕರಕ್ಕೆ ಅವಕಾಶ ಕೊಡಬಾರದು. ಜನರು ಯಾವ ರೀತಿ ಕಷ್ಟ ಅನುಭವಿಸುತ್ತಾರೆ ಎಂದು ಇಲ್ಲಿಗೆ ಬಂದು ನೋಡಿದರೆ ತಿಳಿಯುತ್ತದೆ ಎಂದರು.
ಎಲ್ಲವೂ ಸರಿಯಿದ್ದರೆ ಜೀವನ ಎನ್ನಿಸಿಕೊಳ್ಳುವುದಿಲ್ಲ. ಕಷ್ಟ-ಸುಖ, ಬೇವು-ಬೆಲ್ಲ ಎಲ್ಲವೂ ಇರಬೇಕು. ಬಸ್‌ಗಳು ಬರುತ್ತವೆ ಎಂಬ ನಿರೀಕ್ಷೆಯಲ್ಲಿ ಇನ್ನೂ ಸ್ವಲ್ಪ ಹೊತ್ತು ಕಾಯುತ್ತೇವೆ, ಯಾವುದೇ ಸೌಲಭ್ಯಗಳು ಸಿಗದೇ ಇದ್ದರೇ ಕ್ಯಾಬ್ ಅಥವಾ ಮೆಟ್ರೋದಲ್ಲಿ ಪ್ರಯಾಣ ಮುಂದುವರೆಸುತ್ತೇವೆ ಎಂದಿದ್ದಾರೆ.