ಮೈಸೂರು, ಆ.5– ದೇವ ಮಾನವನ ಹೆಸರೇಳಿಕೊಂಡು ನಗರದ ವ್ಯಕ್ತಿಯೊಬ್ಬರಿಂದ 2.19 ಕೋಟಿ ರೂ. ಹಣ ಹಾಗೂ 200 ಗ್ರಾಂ ಚಿನ್ನಾಭರಣವನ್ನು ವಂಚಕ ದಂಪತಿ ಲಪಟಾಯಿಸಿರುವ ಘಟನೆ ಸೆನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ದಕ್ಷಿಣ ಕನ್ನಡ ಮೂಲದ ರೂಪಶ್ರೀಕುಮಾರ್ ಹಾಗೂ ಸಂದೇಶ್ ದಂಪತಿ ನಗರದ ಜೆಎಸ್ಎಸ್ ಲೇಔಟ್ನ ನಿವಾಸಿ ಅರುಣ್ಕುಮಾರ್(54) ಅವರಿಗೆ ಕೇವಲ ವಾಟ್ಸಾಪ್ ಮೂಲಕವೇ ವಂಚಿಸಿರುವುದು ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ.
2017ರಲ್ಲಿ ಅರುಣ್ ಕುಮಾರ್ ಅವರನ್ನು ರೂಪಶ್ರೀಕುಮಾರ್ ಸಂಪರ್ಕಿಸಿದಾಗ ತಾವು ಅಪ್ಪಾಜಿ ಎಂಬ ದೇವಮಾನವನ ಹೆಸರೇಳಿ ನಂಬಿಸಿದ್ದಾರೆ.ಅಪ್ಪಾಜಿ ಅವರು ಹಿಮಾಲಯ ಹಾಗೂ ಕೇರಳದಲ್ಲಿ ತಪಸ್ಸು ಮಾಡಿ ನಮ್ಮ ಅಜ್ಜಿಗೆ ಇದ್ದ ಕ್ಯಾನ್ಸರ್ ಕಾಯಿಲೆ ಗುಣಪಡಿಸಿದ್ದಾರೆ ಎಂದು ಅರುಣ್ಕುಮಾರ್ ಅವರ ವಿಶ್ವಾಸ ಗಳಿಸಿ, ನಂತರದ ದಿನಗಳಲ್ಲಿ ಮತ್ತಷ್ಟು ಸ್ನೇಹ ಬೆಳೆಸಿದ್ದಾರೆ. ಅಪ್ಪಾಜಿ ಅವರು ದೇವಮಾನವ, ಅವರ ಮೈ ಮೇಲೆ ದೇವರು ಬರುತ್ತವೆ ಎಂದು ಹೇಳಿ ಹಲವು ವಿಡಿಯೋಗಳನ್ನು ಅರುಣ್ಕುಮಾರ್ ಅವರ ಮೊಬೈಲ್ಗೆ ರವಾನಿಸಿದ್ದಾರೆ.
ಈ ನಡುವೆ ಅರುಣ್ ಕುಮಾರ್ ಜರ್ಮನಿಗೆ ಹೋಗುವ ವಿಷಯ ತಿಳಿದುಕೊಂಡ ದಂಪತಿ, ನೀವು ಜರ್ಮನಿಗೆ ಹೋಗುತ್ತೀರಾ ಎಂದು ಭವಿಷ್ಯ ನುಡಿದಿದ್ದು, ಕಾಕತಾಳೀಯವೆಂಬಂತೆ ಅರುಣ್ ಕುಮಾರ್ ಅವರ ಪತ್ನಿ ಜರ್ಮನಿಗೆ ತೆರಳಿದ್ದು, ತದನಂತರ ಅರುಣ್ಕುಮಾರ್ ಸಹ ಮಗನೊಂದಿಗೆ ಜರ್ಮನಿಗೆ ತೆರಳಿದ್ದರಿಂದ ಇವರ ಮೇಲೆ ಮತ್ತಷ್ಟು ಬೆಳಕಿಗೆ ಬಂದಿದೆ.
ಮತ್ತೊಬ್ಬರ ಕಷ್ಟ ಪರಿಹರಿಸಲು ನೀವು ಹಣ ಕೊಡದಿದ್ದರೇ ನಿಮ್ಮ ಕುಟುಂಬಕ್ಕೆ ಸಂಕಷ್ಟ ಎದುರಾಗುತ್ತದೆ ಎಂದು ಹೆದರಿಸಿ ಹಂತ-ಹಂತವಾಗಿ ಬರೋಬ್ಬರಿ 2.19 ಕೋಟಿ ರೂ.ಗಳನ್ನು ವಿವಿಧ ಬ್ಯಾಂಕ್ಗಳ ಖಾತೆಗಳಿಗೆ ವರ್ಗಾಯಿಸಿಕೊಂಡಿರುವುದಲ್ಲದೇ, ಧಾರ್ಮಿಕ ಕಾರ್ಯಗಳ ಹೆಸರಿನಲ್ಲಿ 202 ಗ್ರಾಂ ಚಿನ್ನಾಭರಣವನ್ನು ಸಹ ಪಡೆದುಕೊಂಡಿದ್ದಾರೆ.
ಕಳೆದ ವರ್ಷ ಅಪ್ಪಾಜಿ ಅವರನ್ನು ಭೇಟಿ ಮಾಡಬೇಕು ಎಂದು ಅರುಣ್ಕುಮಾರ್ ಅವರು ಒತ್ತಡ ಹೇರಿದಾಗ ಅಪ್ಪಾಜಿ ಮೃತಪಟ್ಟಿದ್ದಾರೆ ಎಂದು ಹೇಳಿದ್ದರಿಂದ ಅವರುಗಳ ನಡವಳಿಕೆಯ ಮೇಲೆ ಅನುಮಾನಗೊಂಡುವಿಚಾರಿಸಿದಾಗ ಮೋಸ ಹೋಗಿರುವುದು ಗೊತ್ತಾಗಿದೆ.
ಇದೀಗ ಅರುಣ್ ಕುಮಾರ್ ಅವರು ನ್ಯಾಯಕ್ಕಾಗಿ ಪೊಲೀಸ್ಠಾಣೆ ಮೆಟ್ಟಿಲೇರಿದ್ದು, ದಂಪತಿ ವಿರುದ್ಧ ಕಾನೂನು ಕ್ರಮ ಕೈಗೊಂಡು ಹಣ ವಾಪಾಸ್ಸುಕೊಡಿಸುವಂತೆ ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
- 80ರ ವೃದ್ಧನಿಗೆ ಪ್ರೀತಿ ಹೆಸರಲ್ಲಿ ನಾಲ್ವರು ಮಹಿಳೆಯರಿಂದ 9 ಕೋಟಿ ವಂಚನೆ
- ಸವಿತಕ್ಕ ಪುತ್ರನ ಆತಹತ್ಯೆಗೆ “ಡೆತ್ನೋಟ್” ವೆಬ್ಸೀರಿಸ್ ಕಾರಣವಂತೆ..?
- ಎಲ್ಲಾ ರಾಜ್ಯಗಳಲ್ಲೂ ಅನರ್ಹ ಮತದಾರರಿಗೆ ಕೋಕ್
- ಆನ್ಲೈನ್ ಗೇಮ್ಗಾಗಿ ಹಣಕ್ಕೆ ಪೀಡಿಸುತ್ತಿದ್ದ ತಂಗಿ ಮಗನನ್ನೇ ಕೊಂದ ಮಾವ
- ಮತಗಳ್ಳತನದ ವಿರುದ್ಧ ಬೆಂಗಳೂರಲ್ಲಿ ರಾಹುಲ್ಗಾಂಧಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ