ಬೆಂಗಳೂರು,ಆ.6-ನಿಮ ಆಧಾರ್ ನಂಬರ್‌ನಿಂದ ಜೆಟ್ ಏರ್‌ವೇಸ್ ಸಂಸ್ಥೆಯ ವ್ಯಕ್ತಿಯೊಬ್ಬರ ಹೆಸರಿಗೆ ಕೋಟ್ಯಾಂತರ ಹಣ ವರ್ಗಾವಣೆಯಾಗಿದೆ ಎಂದು ಸೈಬರ್ ವಂಚಕರು ವೃದ್ದರೊಬ್ಬರಿಗೆ ಕರೆ ಮಾಡಿ, ಆತಂಕ ಹುಟ್ಟಿಸಿ ಡಿಜಿಟಲ್ ಅರೆಸ್ಟ್ ಮಾಡಿ 1.77 ಕೋಟಿ ರೂ. ಸುಲಿಗೆ ಮಾಡಿರುವುದು ನಗರದಲ್ಲಿ ಬೆಳಕಿಗೆ ಬಂದಿದೆ.
ಸದಾನಂದನಗರದ ಎನ್‌ಜಿಇಎಫ್ ಲೇಔಟ್ ನಿವಾಸಿ ಜಿ. ವಸಂತ್‌ಕುಮಾರ್ (81) ಸೈಬರ್ ವಂಚನೆಗೆ ಒಳಗಾಗಿ ಹಣ ಕಳೆದುಕೊಂಡ ವೃದ್ದರು. ಜು.5 ರಂದು ಸೈಬರ್ ವಂಚಕ ಸಂದೀಪ್ ಜಾಧವ್ ಎಂಬಾತ ಮುಂಬೈನ ಕೊಲಾಬಾ ಪೊಲೀಸರ ಹೆಸರಿನಲ್ಲಿ ವಸಂತ್‌ಕುಮಾರ್ ಅವರಿಗೆ ಮೊಬೈಲ್ ಕರೆ ಮಾಡಿ ನಿಮ ಆಧಾರ್ ನಂಬರ್‌ನಿಂದ ಜೆಟ್ ಏರ್‌ವೇಸ್ ಸಂಸ್ಥೆಯ ನರೇಶ್ ಗೋಯಲ್ ಅವರಿಗೆ ಕೋಟ್ಯಾಂತರ ಹಣ ವರ್ಗಾವಣೆಯಾಗಿದೆ ಎಂದು ಬೆದರಿಸಿ ಜು.9 ರಿಂದ 15 ರವರೆಗೆ ಮನೆಯಲ್ಲೇ ಡಿಜಿಟಲ್ ಅರೆಸ್ಟ್ ಮಾಡಿದ್ದಾನೆ.
ತದ ನಂತರದಲ್ಲಿ ವಿಡಿಯೋ ಕರೆ ಮಾಡಿದ ವಂಚಕ ವಾಟ್‌್ಸಆ್ಯಪ್‌ನಲ್ಲಿ ಬಂಧನದ ವಾರೆಂಟ್‌ತೋರಿಸಿ ಬೆದರಿಸಿದ್ದಾನೆ.ವಸಂತ್‌ಕುಮಾರ್ ಅವರು ಮುಂಬೈ ಪೊಲೀಸರೆಂದು ತಿಳಿದು ಆತಂಕಗೊಂಡು ಆತ ಸೂಚಿಸಿದ ತಮ ಐದು ಬ್ಯಾಂಕ್ ಖಾತೆಗಳ ವಿವರಗಳನ್ನು ನೀಡಿದ್ದಾರೆ.
ನಿಮ ಖಾತೆಯಲ್ಲಿರುವ ಹಣವನ್ನು ಬೇರೊಂದು ಖಾತೆಗೆ ಸುರಕ್ಷಿತವಾಗಿಟ್ಟು ತನಿಖೆ ನಡೆಸಬೇಕಾಗಿದೆ ಹಾಗಾಗಿ ನಿಮ ಹಣವನ್ನು ಬ್ಯಾಂಕ್ ಖಾತೆಗೆ ವರ್ಗಾಹಿಸಲಾಗುವುದೆಂದು ವೃದ್ದರಿಗೆ ತಿಳಿಸಿ 1.77 ಕೋಟಿ ಹಣವನ್ನು ವರ್ಗಾವಣೆ ಮಾಡಿಸಿಕೊಂಡು ವಿಚಾರಣೆ ಮುಗಿದ ಬಳಿಕ ಈ ಹಣವನ್ನು ನಿಮ ಖಾತೆಗೆ ವರ್ಗಾಹಿಸುವುದಾಗಿ ಹೇಳಿ ಹಣವನ್ನು ಹಾಕಿಸಿಕೊಂಡು ಮೋಸ ಮಾಡಿದ್ದಾನೆ.
ನಂತರದ ದಿನಗಳಲ್ಲಿ ತಮ ಖಾತೆಗಳಿಗೆ ಹಣ ವರ್ಗಾವಣೆಯಾಗದಿದ್ದಾಗ ತಾನು ಮೋಸ ಹೋಗಿರಬಹುದೆಂದು ತಿಳಿದು ತಕ್ಷಣ ಅವರು ಪೂರ್ವವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸೈಬರ್ ವಂಚಕನಿಗಾಗಿ ಮೊಬೈಲ್ ಕರೆಗಳು ಹಾಗೂ ತಾಂತ್ರಿಕ ಆಧಾರದಲ್ಲಿ ತನಿಖೆ ಕೈಗೊಂಡಿದ್ದಾರೆ.
ಸೈಬರ್ ವಂಚಕರ ಬಗ್ಗೆ ನಗರ ಪೊಲೀಸ್ ಆಯುಕ್ತರು ಆಗಾಗ್ಗೆ ಸಾರ್ವಜನಿಕರಿಗೆ ಎಚ್ಚರದಿಂದಿರಲು ಜಾಗೃತಿ ಮೂಡಿಸುತ್ತಿದ್ದಾರೆ. ಅಲ್ಲದೇ ಡಿಜಿಟಲ್ ಅರೆಸ್ಟ್ ಎಂಬುವುದು ಪೊಲೀಸ್ ಇಲಾಖೆಯಲ್ಲಿ ಇಲ್ಲ ಎಂಬ ಬಗ್ಗೆಯೂ ಸಹ ಮಾಹಿತಿ ನೀಡಿದ್ದಾರೆ. ಆದರೂ ಸಹ ಸೈಬರ್ ವಂಚಕರ ಗಾಳಕ್ಕೆ ಸಿಕ್ಕಿ ಹಣ ಕಳೆದು ಕೊಳ್ಳುತ್ತಿರುವುದು ವಿಷಾದಕರ.