ಬೆಂಗಳೂರು,ಆ.6- ದ್ವೇಷದಿಂದ ಹತ್ತು ಬೈಕ್, ಏಳು ಸೈಕಲ್ ಮತ್ತು ಅಂಗಡಿಯೊಂದಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಹಲಸೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಕ್ಸೂದ್ ಅಹದ್ (26),ಇಜಾರ್ ಪಾಷಾ (24),ಹಮಿತ್ ತಬ್ರೇಜ್ (26) ಬಂಧಿತ ಆರೋಪಿಗಳು.
ಜು.28 ರಂದು ಬೆಳಗಿನ ಜಾವ 3.30 ರ ಸುಮಾರಿನಲ್ಲಿ ಹಲಸೂರಿನ ಕಾಳಿಯಮ ಸ್ಟ್ರೀಟ್‌ನ 4ನೇ ಬೀದಿಯ ರಸ್ತೆಯಲ್ಲಿ ನಿಲ್ಲಿಸಿದ್ದ ಹತ್ತು ಬೈಕ್‌ಗಳು, ಏಳು ಸೈಕಲ್‌ಗಳಿಗೆ ಪೆಟ್ರೋಲ್ ಸುರಿದು ಆರೋಪಿಗಳು ಬೆಂಕಿ ಹಚ್ಚಿದ್ದರು.
ಅದೇ ದಿನ ಮತ್ತೊಂದು ಪ್ರಕರಣದಲ್ಲಿ ಕೈಕಾ ಎಂಬ ಅನ್ಯ ಧರ್ಮದ ಪೌಂಡೇಶನ್‌ಗೆ ಸೇರಿದ ಕಾರಿನ ಮುಂದೆ ಮತ್ತು ಅಳಗೇಶ್ ಎಂಬುವವರ ತರಕಾರಿ ಅಂಗಡಿಯ ಮುಂಭಾಗದ ಸ್ಟ್ಯಾಂಡ್‌ಗೆ ಪೆಟ್ರೋಲ್ ಹಾಕಿ ಬೆಂಕಿ ಇಟ್ಟು ಆರೋಪಿಗಳು ಪರಾರಿಯಾಗಿದ್ದರು.
ಈ ಬಗ್ಗೆ ಇಬ್ಬರು ಬೈಕ್ ಸವಾರರಾದ ಅಮಿತ್ ಕುಮಾರ್ ಮತ್ತು ಪೈರೋಜ್ ಎಂಬುವವರು ಹಲಸೂರು ಠಾಣೆ ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡು ಸ್ಥಳ ಪರಿಶೀಲನೆ ನಡೆಸಿ ತನಿಖೆ ಕೈಗೊಂಡ ಪೊಲೀಸರು ಘಟನಾ ಸ್ಥಳದ ಸುತ್ತಮುತ್ತಲಿನ ರಸ್ತೆಗಳಲ್ಲಿನ ಸಿಸಿ ಕ್ಯಾಮೆರಾ ಗಳನ್ನು ಪರಿಶೀಲಿಸಿ ಮೂವರು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಆರೋಪಿ ಮಕ್ಸೂದ್ ಅಹಮದ್ ಎಂಬಾತ ಈ ಹಿಂದೆ ಹಲಸೂರಿನ ಬಜಾರ್ ಸ್ಟ್ರೀಟ್‌ನಲ್ಲಿ ತರಕಾರಿ ವ್ಯಾಪಾರ ಮಾಡುತ್ತಿದ್ದನು. ಆ ಸಂದರ್ಭದಲ್ಲಿ ಕೊಲೆ ಪ್ರಕರಣವೊಂದರಲ್ಲಿ ಜೈಲಿನಲ್ಲಿರುವ ಪಹಾದ್ ಮತ್ತು ಸರ್ಫುದ್ದೀನ್ ಸೇರಿಕೊಂಡು ಮಕ್ಸೂದ್ ಮೇಲೆ ಸಾರ್ವಜನಿಕರೆದುರೇ ಹಲ್ಲೆ ಮಾಡಿದ್ದರು.
ಇದರಿಂದ ಅವಮಾನವಾಯಿತು ಎಂದು ಮಕ್ಸೂದ್ ಅವರಿಬ್ಬರ ಮೇಲೆ ದ್ವೇಷ ಸಾಧಿಸುತ್ತಿದ್ದನು. ಜೈಲಿನಲ್ಲಿರುವ ಅವರುಗಳಿಗೆ ಮಾಹಿತಿ ತಲುಪಲಿ ಎಂಬ ದುರುದ್ದೇಶದಿಂದ ಅಂದು ತನ್ನ ಇಬ್ಬರು ಸಹಚರರೊಂದಿಗೆ ಸೇರಿಕೊಂಡು ವಾಹನಗಳು ಮತ್ತು ಅಂಗಡಿಗೆ ಬೆಂಕಿ ಹಚ್ಚಿರುವುದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.