ಚೆನ್ನೈ,ಆ.8- ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ)ಗೆ ಪರ್ಯಾಯವಾಗಿ ತಮಿಳುನಾಡು ಸರ್ಕಾರ ದ್ವಿಭಾಷಾ ನೀತಿ ಒಳಗೊಂಡಿರುವ ರಾಜ್ಯ ಶಿಕ್ಷಣ ನೀತಿ(ಎಸ್‌ಇಪಿ)ಯನ್ನು ಹೊರತಂದಿದೆ.
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಶುಕ್ರವಾರ ಕೊಟ್ಟೂರುಪುರಂನ ಅಣ್ಣಾ ಶತಮಾನೋತ್ಸವ ಗ್ರಂಥಾಲಯ ಸಭಾಂಗಣದಲ್ಲಿ ರಾಜ್ಯ ಶಿಕ್ಷಣ ನೀತಿಯನ್ನು ಬಿಡುಗಡೆ ಮಾಡಿದ್ದಾರೆ.
ರಾಜ್ಯ ಹೊಸ ಶಿಕ್ಷಣ ನೀತಿಯನ್ನು ರೂಪಿಸಲು ನಿವೃತ್ತ ನ್ಯಾಯಮೂರ್ತಿ ಮುರುಗೇಶನ್ ನೇತೃತ್ವದಲ್ಲಿ 14 ಸದಸ್ಯರ ಸಮಿತಿಯನ್ನು 2022ರಲ್ಲಿ ರಚಿಸಲಾಗಿತ್ತು. ಸಮಿತಿಯು ಕಳೆದ ವರ್ಷ ಜುಲೈನಲ್ಲಿ ಮುಖ್ಯಮಂತ್ರಿಗೆ ತನ್ನ ಶಿಫಾರಸುಗಳನ್ನು ಸಲ್ಲಿಸಿತ್ತು. ಈಗ ದಾಖಲೆಯನ್ನು ಔಪಚಾರಿಕವಾಗಿ ಬಿಡುಗಡೆ ಮಾಡಲಾಗಿದೆ.
ಮೂಲಗಳ ಪ್ರಕಾರ, ಎಸ್‌ಇಪಿಯು ರಾಜ್ಯದ ದ್ವಿಭಾಷಾ ನೀತಿಯನ್ನು ಉಳಿಸಿಕೊಂಡಿದ್ದು, ಎನ್‌ಇಪಿಯ ತ್ರಿಭಾಷಾ ಸೂತ್ರವನ್ನು ತಿರಸ್ಕರಿಸಿದೆ.ಸಾಮಾನ್ಯ ಪ್ರವೇಶ ಪರೀಕ್ಷೆಯ ಬದಲಿಗೆ 11 ಮತ್ತು 12ನೇ ತರಗತಿಗಳ ಕ್ರೋಢೀಕೃತ ಅಂಕಗಳ ಆಧಾರದ ಮೇಲೆ ಕಲಾ ಮತ್ತು ವಿಜ್ಞಾನ ಕೋರ್ಸ್‌ಗಳಿಗೆ ಪದವಿಪೂರ್ವ ಪ್ರವೇಶವನ್ನು ಶಿಫಾರಸು ಮಾಡಿದೆ.
3, 5 ಮತ್ತು 8ನೇ ತರಗತಿಗಳಲ್ಲಿ ಸಾರ್ವಜನಿಕ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಎನ್‌ಇಪಿಯ ಪ್ರಸ್ತಾವನೆಯನ್ನು ಇದು ವಿರೋಧಿಸಿದೆ. ಇದು ಪ್ರತಿಗಾಮಿ, ಸಾಮಾಜಿಕ ನ್ಯಾಯ ವಿರೋಧಿ ಮತ್ತು ಹೆಚ್ಚಿನ ಡ್ರಾಪ್‌ಔಟ್ ದರಗಳು ಮತ್ತು ಶಿಕ್ಷಣದ ವಾಣಿಜ್ಯೀಕರಣಕ್ಕೆ ಸಂಭಾವ್ಯ ಕಾರಣ ಎಂದು ಕರೆದಿದೆ.
ವಿಜ್ಞಾನ, ಕೃತಕ ಬುದ್ಧಿಮತ್ತೆ ಮತ್ತು ಇಂಗ್ಲಿಷ್‌ಗೆ ಹೆಚ್ಚಿನ ಒತ್ತು ನೀಡುವುದರ ಜೊತೆಗೆ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಗಣನೀಯ ಹೂಡಿಕೆಯನ್ನು ಸಮಿತಿ ಪ್ರಸ್ತಾಪಿಸಿದೆ. ಶಿಕ್ಷಣವನ್ನು ಸಮಕಾಲೀನ ಪಟ್ಟಿಯಿಂದ ರಾಜ್ಯ ಪಟ್ಟಿಯ ಅಡಿಯಲ್ಲಿ ಮರಳಿ ತರುವಂತೆಯೂ ಸಮಿತಿ ಶಿಫಾರಸು ಮಾಡಿದೆ.
ರಾಜ್ಯ ಮತ್ತು ಕೇಂದ್ರದ ನಡುವಿನ ಹಣಕಾಸಿನ ವಿಚಾರದಲ್ಲಿ ಉದ್ವಿಗ್ನತೆ ಇರುವ ನಡುವೆಯೇ ಈ ನೀತಿಯನ್ನು ಬಿಡುಗಡೆ ಮಾಡಲಾಗಿದೆ. ಎನ್‌ಇಪಿ ಜಾರಿಗೆ ತರಲು ನಿರಾಕರಿಸಿದ ಕಾರಣ ಕೇಂದ್ರವು ಸಮಗ್ರ ಶಿಕ್ಷಾ ಯೋಜನೆಯಡಿ 2,152 ಕೋಟಿ ರೂ.ಗಳನ್ನು ತಡೆಹಿಡಿದಿದೆ ಎಂದು ತಮಿಳುನಾಡು ಸರ್ಕಾರ ಆರೋಪಿಸಿದೆ.
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜ್ಯವು ನೀಟ್ ಅನ್ನು ಅಳವಡಿಸಿಕೊಂಡರೆ ಮಾತ್ರ ಹಣವನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದರು. ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಚಿವ ಉದಯನಿಧಿ ಸ್ಟಾಲಿನ್, ಅವರು 1,000 ಕೋಟಿ ರೂ. ನೀಡಿದರೂ ತಮಿಳುನಾಡು ಎನ್‌ಇಪಿಯನ್ನು ಜಾರಿಗೆ ತರುವುದಿಲ್ಲ.ತಮಿಳುನಾಡು ಯಾವುದೇ ರೂಪದಲ್ಲಿ ಹೇರಿಕೆಯನ್ನು ಇಷ್ಟಪಡುವುದಿಲ್ಲ ಎಂದು ಕೇಂದ್ರ ಸರ್ಕರಕ್ಕೆ ತಿರುಗೇಟು ಕೊಟ್ಟರು.