ಬೆಂಗಳೂರು,ಆ.9- ವರಮಹಾಲಕ್ಷ್ಮೀ ಹಬ್ಬದ ನಿಮಿತ್ತ ಬೈಕ್‌ನಲ್ಲಿ ಪತಿಯೊಂದಿಗೆ ತವರು ಮನೆಗೆ ಹೋಗಿ ಹಿಂದಿರುಗುತ್ತಿದ್ದಾಗ ಲಾರಿ ಡಿಕ್ಕಿ ಹೊಡೆದ ಪರಿಣಾಮ ನವವಿವಾಹಿತೆ ಮೃತಪಟ್ಟಿರುವ ದಾರುಣ ಘಟನೆ ರಾಜಾಜಿನಗರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಎರಡುವರೆ ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ಗೀತಾ (23) ಮೃತಪಟ್ಟ ದುರ್ದೈವಿ. ಅಪಘಾತದಲ್ಲಿ ಪತಿ ಸುನೀಲ್ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸುನೀಲ್ ಪಾನೀಪುರಿ ವ್ಯಾಪಾರಿಯಾಗಿದ್ದು, ಗೀತಾ ಗೃಹಿಣಿ. ವರಮಹಾಲಕ್ಷ್ಮೀ ಹಬ್ಬದ ನಿಮಿತ್ತ ನಿನ್ನೆ ಅರಿಶಿಣ-ಕುಂಕುಮಕ್ಕಾಗಿ ಕೆಂಗೇರಿಯಲ್ಲಿರುವ ತವರು ಮನೆಗೆ ಪತಿಯೊಂದಿಗೆ ಹೋಗಿ ಮಧ್ಯಾಹ್ನ 3.15 ರ ಸುಮಾರಿನಲ್ಲಿ ವಾಪಸ್ ಮಲ್ಲೇಶ್ವರಂಗೆ ಹಿಂದಿರುಗುತ್ತಿದ್ದರು.
ಮಾರ್ಗಮಧ್ಯೆ ರಿಂಗ್ ರಸ್ತೆಯ ಲಗ್ಗೆರೆ ಬ್ರಿಡ್ಜ್ ಬಳಿ ಅತೀವೇಗ ಹಾಗೂ ಅಜಾಗರೂಕತೆಯಿಂದ ಬರುತ್ತಿದ್ದ ಲಾರಿ ಇವರ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ದಂಪತಿ ಕೆಳಗೆ ಬಿದ್ದರು. ಗಂಭೀರ ಗಾಯಗೊಂಡಿದ್ದ ಗೀತಾ ಅವರನ್ನು ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಪರೀಕ್ಷಿಸಿ ಮಾರ್ಗಮಧ್ಯೆ ಮೃತಪಟ್ಟಿದ್ದಾರೆಂದು ತಿಳಿಸಿದ್ದಾರೆ. ಸುದ್ದಿ ತಿಳಿದು ರಾಜಾಜಿನಗರ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಲಾರಿ ಚಾಲಕನನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.