ಬೆಂಗಳೂರು, ನ.9- ದಿನಸಿ ಪದಾರ್ಥಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಗ್ರಾಹಕರಿಗೆ ಇದೀಗ ತರಕಾರಿಗಳ ಬೆಲೆ ಏರಿಕೆ ಗಾಯದ ಮೇಲೆ ಬರೆ ಎಳೆದಿದೆ. ಕಳೆದ ಕೆಲ ದಿನಗಳ ಹಿಂದೆ ಉಂಟಾದ ಮೊಂಥಾ ಚಂಡಮಾರುತದ ಪರಿಣಾಮ ರಾಜ್ಯದ ಮೇಲೂ ಬೀರಿದ್ದು, ತರಕಾರಿ ಬೆಳೆಯುವ ಬಯಲು ಸೀಮೆ ಪ್ರದೇಶಗಳಲ್ಲಿ ಹೆಚ್ಚಾಗಿ ಮಳೆಯಾದ್ದರಿಂದ ಬೆಳೆನಾಶವಾಗಿ ಮಾರುಕಟ್ಟೆಗೆ ನಿಗದಿತ ಪ್ರಮಾಣದಲ್ಲಿ ಮಾಲು ಬಾರದಿರುವುದರಿಂದ ಬೇಡಿಕೆ ಹೆಚ್ಚಾಗಿದ್ದು, ಬೆಲೆ ಏರಿಕೆಗೆ ಕಾರಣವಾಗಿದೆ.
ಮಳೆ ಪರಿಣಾಮ ಒಂದೆಡೆಯಾದರೆ ಗ್ರಾಮೀಣ ಭಾಗದಲ್ಲಿ ವ್ಯಾಪಕ ಮಳೆ ಬೀಳುತ್ತಿದ್ದು, ತರಕಾರಿ ಬೆಳೆಗೆ ಪೂರಕ ವಾತಾವರಣವಿಲ್ಲದೆ ಇಳುವರಿ ಕುಂಠಿತವಾಗಿದೆ. ಕೊರೆ ಪ್ರಮಾಣ ಹೆಚ್ಚಾದ್ದರಿಂದ ರೋಗ ಬಾಧೆಯಿಂದಲೂ ಸಹ ಇಳುವರಿ ಕುಂಠಿತವಾಗಿದೆ. ಕಾರ್ತೀಕ ಮಾಸದಲ್ಲಿ ಹೆಚ್ಚಾಗಿ ಶುಭ ಕಾರ್ಯಗಳು ನಡೆಯುತ್ತಿದ್ದು, ತರಕಾರಿಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿದೆ. ಇದು ಕೂಡ ಬೆಲೆ ಏರಿಕೆಗೆ ಕಾರಣವಾಗಿದೆ.
ಹುರುಳಿಕಾಯಿ (ಬೀನ್‌್ಸ) ಶತಕದತ್ತ ಮುನ್ನುಗುತ್ತಿದೆ. ಮಾರುಕಟ್ಟೆಯಲ್ಲಿ ಕೆಜಿ ನಾಟಿ ಬೀನ್‌್ಸ 80 ರಿಂದ 90 ರೂ.ಗೆ ಮಾರಾಟ ವಾಗುತ್ತಿದ್ದರೆ ಚಿಲ್ಲರೆ ವ್ಯಾಪಾರಿಗಳು ಶತಕ ಮುಟ್ಟಿಸಿದ್ದಾರೆ.
ರಿಂಗ್ ಬೀನ್‌್ಸ 80ರೂ.ಗೆ ಮಾರಾಟವಾಗುತ್ತಿದ್ದರೆ, ಹೀರೇಕಾಯಿ, 50 ರೂ., ನುಗ್ಗೆಕಾಯಿ ಕೆಜಿಗೆ 150ರೂ., ಟೊಮ್ಯಾಟೋ 30ರೂ., ಅವರೆಕಾಯಿ 100 ರೂ.ಗೆ ಎರಡು ಕೆಜಿ, ಕ್ಯಾರೆಟ್ 80ರೂ., ಆಲೂಗೆಡ್ಡೆ 50ರೂ., ಬೀಟ್ರೂಟ್ 70ರೂ., ಹಸಿ ಬಟಾಣಿ 250 ರಿಂದ 270ರೂ., ಮೈಸೂರು ಬದನೆಕಾಯಿ 50 ರಿಂದ 60ರೂ., ಕ್ಯಾಪ್ಸಿಕಂ 100ರೂ., ತೋಗರಿಕಾಯಿ 60ರೂ., ಹಸಿ ಮೆಣಸಿನ ಕಾಯಿ 100 ರಿಂದ 120 ರೂ.ಗೆ ಮಾರಾಟ ವಾಗುತ್ತಿದ್ದರೆ ಸೊಪ್ಪುಗಳ ಬೆಲೆಯೂ ಸಹ ಏರಿಕೆಯಾಗಿದೆ.
ಕೊತ್ತಂಬರಿ ಒಂದು ಕಟ್ಟಿಗೆ 50ರೂ., ಮೆಂತ್ಯೆ 40ರೂ., ಪಾಲಾಕ್ 30ರೂ., ಸಬ್ಬಕ್ಕಿ 30ರೂ., ದಂಟು 30ರೂ., ಪುದೀನ 20ರೂ.ಗೆ ಮಾರಾಟವಾಗುತ್ತಿದೆ. ಗ್ರಾಹಕರು ತರಕಾರಿ ಬೆಲೆ ನೋಡಿ ಕಂಗಾಲಾಗಿದ್ದು, ಕೆಜಿ ಲೆಕ್ಕದಲ್ಲಿ ಕೊಳ್ಳುತ್ತಿದ್ದವರು ಈಗ ಕಾಲು ಕೆಜಿ, ಹಾಗೂ ಗ್ರಾಂ. ಲೆಕ್ಕದಲ್ಲಿ ಕೊಳ್ಳುತ್ತಿದ್ದಾರೆ.
