ಬೆಂಗಳೂರು.ನ.9- ಜೈಲಿನಲ್ಲಿ ಆರೋಪಿಗಳು ಹಾಗೂ ಶಿಕ್ಷಾಧೀನ ಖೈದಿಗಳಿಗೆ ರಾಜಾತಿಥ್ಯ ನೀಡುವ ಪ್ರಕರಣಗಳನ್ನು ಸಹಿಸುವುದಿಲ್ಲ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.ಅಗತ್ಯವಿದ್ದರೆ ವಿಶೇಷ ಸಮಿತಿ ರಚಿಸಿ, ತನಿಖೆ ನಡೆಸುವುದಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳು 2023ಕ್ಕಿಂತಲೂ ಮೊದಲಿನವು ಎಂಬ ಚರ್ಚೆಗಳಿವೆ. ಅದೇನೇ ಇದ್ದರೂ, ವಿಡಿಯೋಗಳು ಯಾವ ಕಾಲದಲ್ಲೇ ಆಗಿದ್ದರೂ, ಇಂತಹದ್ದೆಲ್ಲ ಜೈಲಿನಲ್ಲಿ ನಡೆಯಬಾರದು. ಸರ್ಕಾರ ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಿದೆ ಎಂದರು.
ಹಿಂದೆ ಬೆಂಗಳೂರು, ಬೆಳಗಾವಿ ಸೇರಿದಂತೆ ಹಲವು ಬಂಧೀಖಾನೆಗಳಲ್ಲಿ ಈ ರೀತಿ ಪ್ರಕರಣಗಳು ವರದಿಯಾದಾಗ ಕಠಿಣ ಕ್ರಮ ಕೈಗೊಂಡಿದ್ದೇವೆ.ಬೆಂಗಳೂರಿನ ಜೈಲಿನಲ್ಲಿ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಕ್ಕಾಗಿ ಬಹಳಷ್ಟು ಅಧಿಕಾರಿಗಳನ್ನು ಅಮಾನತು ಗೊಳಿಸಲಾಗಿತ್ತು.ಬಂಧೀಖಾನೆಯ ಮುಖ್ಯಸ್ಥರಾದ ಬಿ.ದಯಾನಂದ್ ಅವರು ನಿನ್ನೆ ರಜೆಯಲ್ಲಿದ್ದಾರೆ.ಅವರ ಜೊತೆಯಲ್ಲಿ ಮಾತನಾಡುವ ಪ್ರಯತ್ನ ಮಾಡಿದ್ದೆ.ಜೈಲಿನ ಅಧೀಕ್ಷಕರು ಸೇರಿ ಕೆಳಗಿನ ಹಂತದ ಅಧಿಕಾರಿಗಳು ಯಾರೇ ತಪ್ಪು ಮಾಡಿದ್ದರೂ ತಕ್ಷಣ ಕ್ರಮ ಕೈ ಗೊಳ್ಳುವಂತೆ ಸೂಚನೆ ನೀಡಿದ್ದು, ಘಟನೆಯ ಬಗ್ಗೆ ಸಮಗ್ರ ವರದಿ ನೀಡಲು ಆದೇಶಿಸಲಾಗಿದೆ ಎಂದರು.
ಪದೇ ಪದೇ ಈ ರೀತಿಯ ಪ್ರಕರಣಗಳು ವರದಿಯಾಗುತ್ತಿವೆ.ಇದಕ್ಕೆ ಯಾರು ಹೊಣೆಯಾಗುತ್ತಾರೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ್ದೇನೆ.ಐ ವಿಲ್ ನಾಟ್ ಟಾಲರೇಟ್ ದೀಸ್ ನಾನ್ಸೆನ್್ಸ. ಎನಾಫ್ ಈಸ್ ಎನಾಫ್ (ನಾನು ಇಂತಹ ಮೂರ್ಖತನಗಳನ್ನು ಸಹಿಸುವುದಿಲ್ಲ, ಆಗಿರುವುದೇ ಸಾಕಾಗಿದೆ.) ಈ ರೀತಿ ಆಗಬಾರದಿತ್ತು ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಜೈಲಿನಲ್ಲಿ ಸಿಬ್ಬಂದಿಗಳ ಕೊರತೆ ಇದೆ ಎಂದು ಹೇಳಲಾಗುತ್ತಿದೆ.ಇರುವ ಸಿಬ್ಬಂದಿಗಳು ಸರಿಯಾಗಿ ಕೆಲಸ ಮಾಡಬೇಕು. ಇಂತಹ ಘಟನೆಗಳಿಗೆ ಸಿಬ್ಬಂದಿ ಕೊರತೆ ಕಾರಣ ಹೇಳಲಾಗುವುದಿಲ್ಲ. ಆರೋಪಿಗಳಿಗೆ ಟಿವಿ ಒದಗಿಸುವುದು, ಮೊಬೈಲ್ ಸೌಲಭ್ಯ ಕಲ್ಪಿಸುವುದು ಮಾಡಿದರೆ ಅದು ಜೈಲು ಎನಿಸಿಕೊಳ್ಳುವುದಿಲ್ಲ. ಹಿರಿಯ ಅಧಿಕಾರಿಗಳನ್ನು ವರದಿ ಕೇಳಿದ್ದೇನೆ. ಜೊತೆಗೆ ತಕ್ಷಣ ನಾನೇ ಸಭೆ ನಡೆಸಿ, ಲೋಪಗಳನ್ನು ಸರಿಪಡಿಸಲು ಆದ್ಯತೆ ನೀಡುತ್ತೇನೆ ಎಂದರು. ಸಿಸಿಟಿವಿ, ಜಾಮರ್ ಸೇರಿದಂತೆ ಎಲ್ಲಾ ಸಲಕರಣೆಗಳ ಖರೀದಿಗೆ ಸರ್ಕಾರ ಅನುಮೋದನೆ ನೀಡಿದೆ. ಕೆಲವು ಕಡೆ ಇವುಗಳನ್ನು ಅಳವಡಿಸಲಾಗಿದೆ.ಇನ್ನೂ ಕೆಲವು ಕಡೆ ಬಾಕಿ ಇದೆ.ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ಜೊತೆ ಚರ್ಚಿಸುವುದಾಗಿ ಹೇಳಿದರು.
ಜೈಲಿನ ಅಧಿಕಾರಿಗಳು ನೀಡುವ ವರದಿಯಿಂದ ಸಮಾಧಾನವಾಗದಿದ್ದರೆ, ವಿವಿಧ ಹಂತದ ಅಧಿಕಾರಿಗಳನ್ನು ನಿಯೋಜಿಸಿ ಪ್ರತ್ಯೇಕ ಸಮಿತಿಯನ್ನು ರಚಿಸಿ, ತನಿಖೆ ನಡೆಸಲಾಗುವುದು ಎಂದರು.
ಜೈಲಿನಲ್ಲಿರುವ ಉಗ್ರರು ಸೇರಿದಂತೆ ಯಾರ ಕೈಯಲ್ಲೂ ಮೊಬೈಲ್ಗಳಿರಬಾರದು.ಎಲ್ಲಾ ಸೌಲಭ್ಯಗಳನ್ನು ಒದಗಿಸುವುದಾದರೆ ಅದು ಜೈಲು ಹೇಗಾಗುತ್ತದೆ.ಬೆಂಗಳೂರು, ಬೆಳಗಾವಿ, ಮಂಗಳೂರು ಜೈಲುಗಳಲ್ಲಿ ಏಕೆ ಇಂತಹ ಪ್ರಕರಣಗಳು ನಡೆಯುತ್ತಿವೆ?ಈ ಹಿಂದೆ ಬೆಳಗಾವಿಯ ಪ್ರಕರಣದಲ್ಲಿ ಹಳೆಯ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿತ್ತು.ವಿಡಿಯೋಗಳು ಹಳೆಯವಾಗಲೀ ಅಥವಾ ಹೊಸದಾಗಿರಲಿ ಖೈದಿಗಳಿಗೆ ರಾಜಾತಿಥ್ಯ ಸೌಲಭ್ಯ ಕಲ್ಪಿಸುವುದಂತೂ ಸರಿಯಲ್ಲ ಎಂದರು.
ಕೊಲೆ ಆರೋಪದಲ್ಲಿ ಜೈಲಿನಲ್ಲಿರುವ ದರ್ಶನ್ಗೆ ಹಾಸಿಗೆ, ದಿಂಬಿಗಾಗಿ ನ್ಯಾಯಾಲಯದಲ್ಲಿ ವಿಚಾರಣೆೆ ನಡೆಯುತ್ತಿರುವುದನ್ನು ನಾನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ.ಇಂತಹ ಎಲ್ಲಾ ವಿಚಾರಗಳನ್ನು ಅಧಿಕಾರಿಗಳ ಸಭೆಯಲ್ಲಿ ಚರ್ಚಿಸುವುದಾಗಿ ಭರವಸೆ ನೀಡಿದರು. ಬಿಜೆಪಿಯವರು ನನ್ನ ಸಾಮರ್ಥ್ಯದ ಬಗ್ಗೆ ಪ್ರಶ್ನೆ ಮಾಡುತ್ತಾರೆ. ಅವರು ಇದ್ದಾಗ ಏನೆಲ್ಲಾ ನಡೆದಿತ್ತು ಎಂದು ನಾನು ಹೇಳುತ್ತಾ ಹೋದರೆ, ಅದು ರಾಜಕೀಯವಾಗುತ್ತದೆ.ವಿಷಯದ ಗಂಭೀರತೆ ಹಾಳಾಗುತ್ತದೆ. ಅದಕ್ಕಾಗಿ ವಿರೋಧ ಪಕ್ಷಗಳ ಟೀಕೆಗೆ ಪ್ರತಿಕ್ರಿಯಿಸುವುದಿಲ್ಲ.
ಲೋಪಗಳನ್ನು ಸರಿಪಡಿಸುವ ದಿಕ್ಕಿನತ್ತ ಹೆಜ್ಜೆ ಇಡುತ್ತೇನೆ ಎಂದು ಹೇಳಿದರು, ಕನ್ನಡಪರ ಸಂಘಟನೆಗಳ ಹೋರಾಟಗಾರರ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯುವ ಸಂಬಂಧಪಟ್ಟಂತೆ ಸರ್ಕಾರದ ಮಟ್ಟದಲ್ಲಿ ಪರಿಶೀಲನೆ ನಡೆಸಲಾಗುವುದು.ಒಳ್ಳೆಯ ಉದ್ದೇಶಕ್ಕಾಗಿ ಕನ್ನಡಪರ, ರೈತಪರ ಸಂಘಟನೆಗಳು ಹೋರಾಟ ಮಾಡಿದ್ದರೆ, ಅಂತಹ ಪ್ರಕರಣಗಳಲ್ಲಿ ಸಾರ್ವಜನಿಕರ ಆಸ್ತಿಗಳಿಗೆ ಹಾನಿಯಾಗದಿದ್ದರೆ ಪ್ರಕರಣವನ್ನು ಹಿಂಪಡೆಯಲಾಗುವುದು.ಏಕಾಏಕಿ ಅರ್ಜಿ ಕೊಟ್ಟ ತಕ್ಷಣ ಪ್ರಕರಣಗಳನ್ನು ಹಿಂಪಡೆಯಲಾಗುವುದಿಲ್ಲ. ಸಚಿವ ಸಂಪುಟ ಉಪ ಸಮಿತಿ ಪರಿಶೀಲನೆ ಮಾಡಬೇಕು.ಕಾನೂನಿನ ವಿರುದ್ಧ ಪ್ರಕರಣಗಳಲ್ಲಿ ಹೆಚ್ಚಿನ ಹಾನಿಯಾಗಿಲ್ಲ ಎಂದಾದರೆ, ಅವುಗಳನ್ನು ಹಿಂಪಡೆಯಬಹುದು ಎಂದು ಅಧಿಕಾರಿಗಳು ಶಿಫಾರಸು ಮಾಡುತ್ತಾರೆ.ನಾವು ಅದನ್ನು ಪರಿಗಣಿಸುತ್ತೇವೆ ಎಂದರು.
