ಬೆಂಗಳೂರು,ನ.21- ನಗರದ ಪಿಜಿಗಳಲ್ಲಿ ವಾಸಿಸುವವರ ಬಗ್ಗೆ ಮಾಹಿತಿ ಸಂಗ್ರಹಿಸಲು ವೆಬ್ ಪೋರ್ಟಲ್ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೇರೆ ರಾಜ್ಯಗಳಿಂದ ಬಂದು ಇಲ್ಲಿ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವವರ ಬಗ್ಗೆ ನಿಗಾ ಇಡಲು ಪ್ರಾಯೋಗಿಕವಾಗಿ ವೆಬ್ ಪೋರ್ಟಲ್‍ನ್ನು ಜಾರಿಗೊಳಿಸಲು ಸಿದ್ದತೆ ಮಾಡಿಕೊಡಲಾಗಿದೆ. ಇದರಿಂದ ಪಿಜಿ ಮಾಲೀಕರಿಗೆ ಅನುಕೂಲವಾಗಲಿದ್ದು, ಯಾರು ಎಲ್ಲಿಂದ ಬಂದಿದ್ದಾರೆ? ಮತ್ತವರ ಹಿನ್ನಲೆ ಬಗ್ಗೆ ದಾಖಲಿಸಲು ಸುಲಭವಾಗುತ್ತದೆ ಎಂದರು.
ಇದರಿಂದ ಪೊಲೀಸರಿಗೂ ಯಾರಾದರೂ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರೆ ಅಂಥವರ ಪತ್ತೆ ಕಾರ್ಯಕ್ಕೂ ಅನುಕೂಲವಾಗಲಿದೆ ಎಂದು ಆಯುಕ್ತರು ಹೇಳಿದರು. ಇದನ್ನು ಪ್ರಾಯೋಗಿಕವಾಗಿ ಮಾರತ್ತಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ 167 ಪಿಜಿ ಕೇಂದ್ರಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಈ ವ್ಯವಸ್ಥೆ ಕಡ್ಡಾಯವಾಗಲಿಲ್ಲದಿದ್ದರೂ ಪಿಜಿ ಮಾಲೀಕರಿಗೂ ಅನುಕೂಲವಾಗುವುದರಿಂದ ಅವರೇ ಸ್ವಯಂಪ್ರೇರಿತವಾಗಿ ಈ ವ್ಯವಸ್ಥೆಯನ್ನು ಬಳಕೆ ಮಾಡಿಕೊಳ್ಳಬೇಕು ಎಂದರು.
ನಗರ ವ್ಯಾಪ್ತಿಯಲ್ಲಿ ಸುಮಾರು 5 ಸಾವಿರ ಪಿಜಿಗಳಿದ್ದು, ಅಂದಾಜು ನಾಲ್ಕುವರೆ ಲಕ್ಷ ಮಂದಿ ವಾಸಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಹೆಚ್ಚಾಗಿ ಪೂರ್ವ, ಆಗ್ನೇಯ ಹಾಗೂ ವೈಟ್‍ಫೀಲ್ಡ್ ವಿಭಾಗಗಳಲ್ಲಿ ಪಿಜಿ ಕೇಂದ್ರಗಳು ಇವೆ. ಇವುಗಳಲ್ಲಿ ಐಟಿ ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು ತಂಗಿರುತ್ತಾರೆ ಎಂದು ದಯಾನಂದ ಅವರು ವಿವರಿಸಿದರು.
ಪಶ್ಚಿಮ ವಿಭಾಗ ಪೊಲೀಸರ ಕಾರ್ಯಾಚರಣೆ: 1.15 ಕೋಟಿ ರೂ. ಮೌಲ್ಯದ ಚಿನ್ನಾಭರಣ, ನಗದು ಜಪ್ತಿ
ಪಿಜಿಗಳಲ್ಲಿನ ಸುರಕ್ಷತೆ ಕ್ರಮಗಳ ಬಗ್ಗೆ ಬಿಬಿಎಂಪಿ ಈಗಾಗಲೇ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಪಬ್ಲಿಕ್ ಸೇಫ್ಟಿ ಆ್ಯಕ್ಟ್ ಅನ್ವಯ ಕಡ್ಡಾಯ ಸಿಸಿಟಿವಿ, ಭದ್ರತಾ ಸುರಕ್ಷತೆಗಳನ್ನು ಒದಗಿಸಲು ಸೂಚನೆ ನೀಡಲಾಗಿದೆ ಎಂದು ಆಯುಕ್ತರು ಹೇಳಿದರು.