ಬೆಂಗಳೂರು,ಆ.10– ನಗರದ ಆರ್.ವಿ.ರಸ್ತೆ-ಬೊಮಸಂದ್ರ ದವರೆಗೆ ಸಂಪರ್ಕ ಕಲ್ಪಿಸುವ ಹಳದಿ ಮಾರ್ಗದ ಮೆಟ್ರೋ ರೈಲಿಗೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿಯವರು ಸ್ವತಃ ಪ್ರಯಾಣಿಸುವ ಮೂಲಕ ನಮ ಮೆಟ್ರೋದ ಅನುಭವ ಪಡೆದುಕೊಂಡರು.
ರಾಗಿಗುಡ್ಡದಿಂದ ಕೋನಪ್ಪನ ಅಗ್ರಹಾರದವರೆಗೆ ಕ್ಯೂಆರ್ ಕೋಡ್ ಮೂಲಕ ತಮ ಸ್ವಂತ ಹಣದಲ್ಲೇ ಟಿಕೆಟ್ ಖರೀದಿಸಿ ಮೆಟ್ರೋ ರೈಲಿನಲ್ಲಿ ಸಾಮಾನ್ಯರಂತೆ ನಿಂತುಕೊಂಡೇ ಪ್ರಯಾಣಿಸಿದ ಅವರು, ಪ್ರಯಾಣಿಕರಿಂದ ಕೆಲವು ಮಾಹಿತಿಯನ್ನು ಪಡೆದುಕೊಂಡರು. ಮೆಟ್ರೋ ಕಾರ್ಮಿಕರು, ಸಾರ್ವಜನಿಕರು, ಸರ್ಕಾರಿ ಶಾಲೆಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸೇರಿದಂತೆ ಕೆಲವು ಆಯ್ದ ವ್ಯಕ್ತಿಗಳ ಜೊತೆ ನಿಂತುಕೊಂಡೇ 10 ನಿಮಿಷಕ್ಕೂ ಹೆಚ್ಚು ಕಾಲ ಸಂವಾದ ನಡೆಸಿದರು.
ಆರ್.ವಿ.ರಸ್ತೆಯಿಂದ ಬೊಮಸಂದ್ರದವರೆಗೆ ಸುಮಾರು 19.05 ಕಿ.ಮೀ. ಮೆಟ್ರೋ ರೈಲು ನಿರ್ಮಾಣ ಮಾಡಿದ್ದ ಕಾರ್ಮಿಕರ ಜೊತೆ ಮೂರು ನಿಮಿಷಗಳ ಕಾಲ ಸಂವಾದವನ್ನು ನಡೆಸಿದ್ದು ವಿಶೇಷವಾಗಿತ್ತು.
ಇದೇ ಸಂದರ್ಭದಲ್ಲಿ ಸರ್ಕಾರಿ ಶಾಲೆಯ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರ ಜೊತೆಯೂ ಮುಕ್ತವಾಗಿ ಸಂವಾದ ನಡೆಸಿದ ಮೋದಿಯವರು ಮೆಟ್ರೋ ರೈಲು ಸಂಚಾರದಿಂದ ನಗರದ ಸಂಚಾರದಟ್ಟಣೆ ನಿವಾರಣೆಯಾಗಲಿದೆಯೇ?, ಇತರ ನಗರಗಳಿಗೆ ಹೋಲಿಸಿದರೆ ಹೇಗೆ ವಿಭಿನ್ನ? ಎಂದು ಪ್ರಶ್ನಿಸಿದರು.
ವಿದ್ಯಾರ್ಥಿಗಳು ಕೂಡ ಮುಕ್ತವಾಗಿ ತಮ ಅನುಭವವನ್ನು ಹಂಚಿಕೊಂಡರು. ಈ ವೇಳೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವರಾದ ಅಶ್ವಿನ್ ವೈಷ್ಣವ್, ಮನೋಹರ್ ಲಾಲ್ ಖಟ್ಟರ್, ಶೋಭಾ ಕರಂದ್ಲಾಜೆ, ವಿ.ಸೋಮಣ್ಣ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಂಸದರಾದ ಡಾ.ಸಿ.ಎನ್.ಮಂಜುನಾಥ್ ಮತ್ತಿತರರು ಮೋದಿಯವರಿಗೆ ಸಾಥ್ ನೀಡಿದರು.