ಬೆಂಗಳೂರು,ಆ.11-ಬೆಂಗಳೂರಿನ ಸೆಂಟ್ರಲ್ ಲೋಕಸಭಾ ಕ್ಷೇತ್ರದ ಮಹಾದೇವಪುರದಲ್ಲಿ ಚುನಾವಣೆಯಲ್ಲಿ ಮತಗಳ್ಳತನ ಆಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ದಾಖಲೆ ಕೊಡುವಂತೆ ರಾಹುಲ್ ಗಾಂಧಿಗೆ ಚುನಾವಣಾ ಆಯೋಗ ನೋಟಿಸ್ ಕೊಟ್ಟಿದೆ.
ಮತಗಳ್ಳತನಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಆಗಸ್ಟ್ 7ರಂದು ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ದಾಖಲೆಗಳನ್ನು ಬಿಡುಗಡೆ ಮಾಡಿದ್ದರು. ಹೀಗಾಗಿ, ರಾಜ್ಯ ಚುನಾವಣಾ ಆಯೋಗ ಈ ದಾಖಲೆಗಳನ್ನು ನೀಡುವಂತೆ ಸೂಚನೆ ನೀಡಿದೆ.
ಇದರಿಂದ ಈ ಕಚೇರಿಯಿಂದ ವಿವರವಾದ ವಿಚಾರಣೆಯನ್ನು ಕೈಗೊಳ್ಳಬಹುದು. ಹೀಗಾಗಿ ಸಂಬಂಧಿಸಿದ ಆರೋಪಗಳಿಗೆ ದಾಖಲೆಗಳನ್ನು ಒದಗಿಸಿ ಎಂದು ಕರ್ನಾಟಕ ರಾಜ್ಯ ಮುಖ್ಯ ಚುನಾವಣಾಧಿಕಾರಿಯವರು ರಾಹುಲ್ ಗಾಂಧಿ ಅವರಿಗೆ ನೊಟೀಸ್ ನೀಡಿದ್ದಾರೆ.
ಮತಗಟ್ಟೆ ಅಧಿಕಾರಿ ನೀಡಿದ ದಾಖಲೆಗಳ ಪ್ರಕಾರ, ಶಕುನ್ ರಾಣಿ ಎರಡು ಬಾರಿ ಮತ ಚಲಾಯಿಸಿದ್ದಾರೆ ಎಂದು ನೀವು ಹೇಳಿದ್ದೀರಿ. ಈಸ್ ಐಡಿ ಕಾರ್ಡ್ ಪರ್ ದೋ ಬಾರ್ ವೋಟ್ ಲಗಾಹೈ, ವೋ ಜೋ ಟಿಕ್ ಹೈ, ಪೋಲಿಂಗ್ ಬೂತ್ ಕೆ ಆಫೀಸರ್ ಕಿಹೈ ಎಂದು ಹೇಳಿದ್ದೀರಿ. ಆದರೆ, ಶಕುನ್ ರಾಣಿ ಅವರು ನೀವು ಆರೋಪಿಸಿದಂತೆ ಎರಡು ಬಾರಿ ಅಲ್ಲ, ಒಮ್ಮೆ ಮಾತ್ರ ಮತ ಚಲಾಯಿಸಿದ್ದಾರೆ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.
ಪ್ರಾಥಮಿಕ ವಿಚಾರಣೆಯಲ್ಲಿ, ನೀವು ಪ್ರಸ್ತುತಿಯಲ್ಲಿ ತೋರಿಸಿರುವ ಟಿಕ್ ಗುರುತು ಮಾಡಿದ ದಾಖಲೆಯು ಮತಗಟ್ಟೆ ಅಧಿಕಾರಿ ನೀಡಿದ ದಾಖಲೆಯಲ್ಲ. ಹಾಗಾಗಿ, ಶಕುನ್ ರಾಣಿಯೋ ಅಥವಾ ಬೇರೆ ಯಾರಾದರೂ ಎರಡು ಬಾರಿ ಮತ ಚಲಾಯಿಸಿದ್ರೆ ನೀವು ದಾಖಲೆಗಳನ್ನು ಒದಗಿಸಿ. ಆಗ ಚುನಾವಣಾ ಆಯೋಗ ವಿಚಾರಣೆ ನಡೆಸಲಿದೆ ಎಂದು ತಿಳಿಸಿದೆ.
ಆದರೆ, ಈ ಆರೋಪಕ್ಕೆ ಸಂಬಂಧಿಸಿದಂತೆ ಶಕುನ್ ರಾಣಿ ಅವರು ತಾವು ಕೇವಲ ಒಮ್ಮೆ ಮಾತ್ರ ಮತ ಚಲಾಯಿಸಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಅವರು ಎರಡು ಬಾರಿ ಮತ ಚಲಾಯಿಸಿದ ಆರೋಪವನ್ನು ನಿರಾಕರಿಸಿದ್ದಾರೆ.
ಈ ಬಗ್ಗೆ ಚುನಾವಣಾ ಆಯೋಗದ ಕಚೇರಿಯಿಂದ ನಡೆಸಲಾದ ಪ್ರಾಥಮಿಕ ತನಿಖೆಯಲ್ಲಿ, ಪತ್ರಿಕಾಗೋಷ್ಠಿಯಲ್ಲಿ ತೋರಿಸಲಾದ ಗುರುತಿನ ಚೀಟಿಯ ದಾಖಲೆಯು ಮತಗಟ್ಟೆ ಅಧಿಕಾರಿಯಿಂದ ನೀಡಲಾದ ದಾಖಲೆಯಲ್ಲ ಎಂದು ತಿಳಿದುಬಂದಿದೆ.ಈ ಹಿನ್ನೆಲೆಯಲ್ಲಿ, ಶಕುನ್ ರಾಣಿ ಅಥವಾ ಬೇರೆ ಯಾರಾದರೂ ಎರಡು ಬಾರಿ ಮತ ಚಲಾಯಿಸಿದ್ದಾರೆ ಎಂಬ ಆರೋಪವನ್ನು ಆಧರಿಸಿ, ಸಂಬಂಧಿತ ದಾಖಲೆಗಳನ್ನು ಸಲ್ಲಿಸುವಂತೆ ಚುನಾವಣಾ ಆಯೋಗವು ರಾಹುಲ್ ಗಾಂಧಿಗೆ ಕೋರಿದೆ.
ಈ ದಾಖಲೆಗಳ ಆಧಾರದ ಮೇಲೆ ವಿವರವಾದ ತನಿಖೆಯನ್ನು ಕೈಗೊಳ್ಳಲಾಗುವುದು ಎಂದು ಆಯೋಗ ತಿಳಿಸಿದೆ.ಆ ಬಳಿಕ ಈ ಆರೋಪಗಳ ಸತ್ಯಾಸತ್ಯತೆಯನ್ನು ಖಚಿತಪಡಿಸಲು ಚುನಾವಣಾ ಆಯೋಗವು ಸಂಬಂಧಿತ ದಾಖಲೆಗಳನ್ನು ಪರಿಶೀಲಿಸಲಿದ್ದು, ತನಿಖೆಯ ಫಲಿತಾಂಶವನ್ನು ಶೀಘ್ರದಲ್ಲಿ ಬಹಿರಂಗಪಡಿಸಲಾಗುವುದು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.