Monday, August 11, 2025
Homeರಾಜ್ಯಸರ್ಕಾರದ ವೈಫಲ್ಯದ ವಿರುದ್ಧ ಬಿಜೆಪಿ-ಜೆಡಿಎಸ್‌‍ ಶಾಸಕರ ಪ್ರತಿಭಟನೆ

ಸರ್ಕಾರದ ವೈಫಲ್ಯದ ವಿರುದ್ಧ ಬಿಜೆಪಿ-ಜೆಡಿಎಸ್‌‍ ಶಾಸಕರ ಪ್ರತಿಭಟನೆ

BJP-JDS MLAs protest against government failure

ಬೆಂಗಳೂರು,ಆ.11– ಆರ್‌ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದ ನೈತಿಕ ಹೊಣೆಯನ್ನು ರಾಜ್ಯಸರ್ಕಾರ ಹೊರಬೇಕು ಎಂದು ಆಗ್ರಹಿಸಿ ಬಿಜೆಪಿ, ಜೆಡಿಎಸ್‌‍ ಶಾಸಕರು ವಿಧಾನಸೌಧದ ಆವರಣದಲ್ಲಿರುವ ಮಹಾತಗಾಂಧೀಜಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು.

ಮಳೆಗಾಲದ ಅಧಿವೇಶನದ ಮೊದಲ ದಿನವಾದ ಇಂದು ಉಭಯ ಪಕ್ಷಗಳ ಶಾಸಕರು ಗಾಂಧಿ ಪ್ರತಿಮೆ ಬಳಿ ಸರ್ಕಾರದ ವಿರುದ್ಧ ಘೋಷಣೆಯುಳ್ಳ ಫಲಕಗಳನ್ನು ಪ್ರದರ್ಶಿಸಿ ಪ್ರತಿಭಟನೆ ಮಾಡಿದ್ದಲ್ಲದೆ, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ರಾಜ್ಯ ಕಾಂಗ್ರೆಸ್‌‍ ಸರ್ಕಾರದ ವಿರುದ್ಧ ಬಿಜೆಪಿ, ಜೆಡಿಎಸ್‌‍ ಜಂಟಿ ಪ್ರತಿಭಟನೆ ನಡೆಸಿದ್ದು, ಸದನದಲ್ಲೂ ಸರ್ಕಾರದ ವಿರುದ್ಧ ಹೋರಾಟ ನಡೆಸುವುದಾಗಿ ಉಭಯ ಪಕ್ಷಗಳ ನಾಯಕರು ಘೋಷಿಸಿದರು.

ಪ್ರತಿಭಟನೆ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ.ವಿಜಯೇಂದ್ರ, ಜೆಡಿಎಸ್‌‍ ಮತ್ತು ಬಿಜೆಪಿ ಶಾಸಕರು ಅಧಿವೇಶನದ ಮೊದಲ ದಿನವೇ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದೇವೆ. ಸದನದಲ್ಲೂ ನಾವು ಹೋರಾಟ ಮಾಡುತ್ತೇವೆ ಎಂದರು.

ಆರ್‌ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತದ ಪ್ರಕರಣದ ಜವಾಬ್ದಾರಿಯನ್ನು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹೊರಬೇಕು. ಜವಾಬ್ದಾರಿಯಿಂದ ನುಣಚಿಕೊಳ್ಳಲು ಪೊಲೀಸ್‌‍ ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡಿದ್ದಾರೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ರಸಗೊಬ್ಬರದ ಕೊರತೆ ಉಂಟಾಗಿದ್ದು ರೈತರು ಪ್ರತಿಭಟನೆ ನಡೆಸಿ ಹೋರಾಟ ಮಾಡುತ್ತಿದ್ದಾರೆ, ಉತ್ತರ ಕರ್ನಾಟಕದ ನೀರಾವರಿ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತಿಲ್ಲ, ಪೊಲೀಸ್‌‍ ಸಬ್‌ಇನ್‌್ಸಪೆಕ್ಟರ್‌ ನೇಮಕಾತಿ ಪೂರ್ಣಗೊಂಡಿದ್ದರೂ ನೇಮಕಾತಿ ಆದೇಶ ನೀಡುತ್ತಿಲ್ಲ, ರಾಜ್ಯದಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿ ಇವೆ, ಆದರೂ ನೇಮಕಾತಿ ಮಾಡುತ್ತಿಲ್ಲ, ರಾಜ್ಯ ಕಾಂಗ್ರೆಸ್‌‍ ಸರ್ಕಾರದ ವಿರುದ್ಧ ಸದನದ ಒಳ-ಹೊರಗು ಉಭಯಪಕ್ಷಗಳಿಂದ ಹೋರಾಟ ಮಾಡುತ್ತೇವೆ. ಇಂದು ಸಾಂಕೇತಿಕವಾಗಿ ಗಾಂಧಿಪ್ರತಿಮೆ ಬಳಿ ಪ್ರತಿಭಟನೆ ಮಾಡಿದ್ದೇವೆ ಎಂದು ಅವರು ತಿಳಿಸಿದರು.

60 ಪರ್ಸೆಂಟ್‌ ಸರ್ಕಾರ :
ವಿಧಾನಸಭೆ ವಿರೋಧಪಕ್ಷದ ನಾಯಕ ಆರ್‌.ಅಶೋಕ್‌ ಮಾತನಾಡಿ, 60 ಪರ್ಸೆಂಟ್‌ ಸರ್ಕಾರ ಎಂದು ಕಾಂಗ್ರೆಸ್‌‍ ಸರ್ಕಾರ ಬ್ರಾಂಡ್‌ ಆಗಿದೆ. ಕಾಟಾಚಾರಕ್ಕೆ 9 ದಿನ ಅಧಿವೇಶನ ನಡೆಸಲಾಗುತ್ತಿದೆ. ಕನಿಷ್ಠ 20 ದಿನವಾದರೂ ಅಧಿವೇಶನ ನಡೆಸಬೇಕಿತ್ತು. ಬಿಜೆಪಿ, ಜೆಡಿಎಸ್‌‍ ನಾಯಕರು ನಿನ್ನೆ ಸಭೆ ಮಾಡಿದ್ದು, ಸರ್ಕಾರದ ವಿರುದ್ಧ ಹೋರಾಟ ಮಾಡಲು ತೀರ್ಮಾನಿಸಿದ್ದೇವೆ ಎಂದರು.

ಆರ್‌ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ಕುಟುಂಬದವರ ಫೋಟೊ ತೆಗೆಸಿಕೊಳ್ಳಲು ಮುಗಿ ಬಿದ್ದರು. ಆದರೆ ಕಾಲ್ತುಳಿತದ ದುರಂತದಲ್ಲಿ 11 ಜನರ ಅಮಾಯಕರ ಸಾವಾಯಿತು. ಅವರ ಕುಟುಂಬದವರು ಫೋಟೊ ಇಟ್ಟು ಪೂಜೆ ಮಾಡುವಂತೆ ಸರ್ಕಾರ ಮಾಡಿತು. ಆರ್‌ಸಿಬಿ ವಿಜಯೋತ್ಸವದ ಕಾಲ್ತುಳಿದ ಪ್ರಕರಣ ಸರ್ಕಾರದ ಪ್ರಾಯೋಜಿತ ಕೊಲೆ ಎಂದು ಅವರು ಆರೋಪಿಸಿದರು.

ಕಾಲ್ತುಳಿತ ಸಂಭವಿಸಿದ್ದರೂ ಮುಖ್ಯಮಂತ್ರಿ ದೋಸೆ ತಿನ್ನಲು ಹೋಗಿದ್ದರು. ಉಪಮುಖ್ಯಮಂತ್ರಿ ಆರ್‌ಸಿಬಿ ಕಪ್‌ಗೆ ಮುತ್ತಿಕ್ಕುತ್ತಿದ್ದರು. ವಿಧಾನಸೌಧದ ಮುಂದೆ ಕಾನೂನು ಸುವ್ಯವಸ್ಥೆ ಕಾಪಾಡಲಾಗದವರು ರಾಜ್ಯದಲ್ಲಿ ಕಾನೂನು ಕಾಪಾಡುತ್ತಾರೆಯೇ? ಎಂದು ಪ್ರಶ್ನಿಸಿದರು. ಕಾಲ್ತುಳಿತದಲ್ಲಿ ಮೃತಪಟ್ಟ 11 ಜನರ ಸಾವಿಗೆ ನ್ಯಾಯ ಕೇಳಲು ಸದನದಲ್ಲಿ ಹೋರಾಟ ಮಾಡುತ್ತೇವೆ. ದಲಿತರ ಜಮೀನು ಉಳಿಸಬೇಕಿದೆ. ರೈತರಿಗೂ ತೊಂದರೆ ಆಗುತ್ತಿದೆ ಎಂದು ಆಪಾದಿಸಿದರು.

ವಿಧಾನಪರಿಷತ್‌ನ ಜೆಡಿಎಸ್‌‍ ನಾಯಕ ಎಸ್‌‍.ಎಲ್‌.ಭೋಜೇಗೌಡ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್‌‍ ಸರ್ಕಾರ ಇದೆಯೋ, ಇಲ್ಲವೋ ಎಂಬ ಪರಿಸ್ಥಿತಿ ಇದೆ ಎಂಬ ಬಗ್ಗೆ ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ. ಆರ್‌ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ಕ್ರಿಡಾಂಗಣದ ಬಳಿ ಉಂಟಾದ ಕಾಲ್ತುಳಿತದಲ್ಲಿ 11 ಜನ ಮೃತಪಟ್ಟ ಸುದ್ದಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳಿಗೆ ಗೊತ್ತಿತ್ತು. ವಿಧಾನಸೌಧದ ಮುಂಭಾಗದಲ್ಲಿ ಕಾರ್ಯಕ್ರಮ ನಿಗಧಿತ ಸಮಯಕ್ಕಿಂತ ತಡವಾಗಿ ಆರಂಭವಾಯಿತು. ಆದರೆ ಮುಖ್ಯಮಂತ್ರಿ ವಿಧಾನಸೌಧದ ಆವರಣದಲ್ಲಿ ಕಾಲ್ತುಳಿತ ನಡೆದಿರಲಿಲ್ಲ ಎಂದು ಹೇಳಿರುವುದು ಅಕ್ಷಮ್ಯ. ಕ್ರೀಡಾಂಗಣದಲ್ಲಿ ನಡೆದ ದುರಂತಕ್ಕೂ, ನಮಗೂ ಸಂಬಂಧವಿಲ್ಲ ಎಂದು ಹಾರಿಕೆ ಉತ್ತರ ನೀಡಿದ್ದು ತರವಲ್ಲ. ಅಧಿಕಾರಿಗಳನ್ನು ಅಮಾನತು ಮಾಡಿದರೆ ಸಾಲದು, ಇದರ ನೈತಿಕ ಹೊಣೆಯನ್ನು ಸಿಎಂ, ಡಿಸಿಎಂ ಹೊರಬೇಕು. ದುರಂತಕ್ಕೆ ಕಾರಣದವರಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.

ವಿಧಾನಪರಿಷತ್‌ನ ವಿರೋಧಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಮಾತನಾಡಿ, ಆರ್‌ಸಿಬಿ ವಿಜಯೋತ್ಸವ ಕ್ರೆಡಿಟ್‌ ತೆಗೆದುಕೊಳ್ಳಲು ಸರ್ಕಾರ ಮುಂದಾಗಿ ದುರಂತಕ್ಕೆ ಕಾರಣವಾಯಿತು. ಆರ್‌ಸಿಬಿದು ಕಪ್‌ ಆದರೆ ಸರ್ಕಾರದ್ದು ತಪ್ಪು. ಸಡಗರ ಸಂಭ್ರಮಿಸಲು ಹೋಗಿ 11 ಜನರ ಸಾವಿಗೆ ಕಾರಣವಾಯಿತು. 5 ಅಧಿಕಾರಿಗಳನ್ನು ದುರಂತದ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿತ್ತು. ಈ ಬಗ್ಗೆ ಸರ್ಕಾರ ಸಮರ್ಪಕ ಉತ್ತರ ಕೊಡಬೇಕು. 11 ಜನರ ಸಾವಿಗೆ ನ್ಯಾಯ ಕೊಡಬೇಕು.

ಅರಣ್ಯದ ಹೆಸರಿನಲ್ಲಿ ದಲಿತರು, ರೈತರಿಗೆ ತೊಂದರೆಯಾಗುತ್ತಿದೆ. ಇದನ್ನು ತಪ್ಪಿಸಬೇಕು. ಭ್ರಷ್ಟಾಚಾರದಲ್ಲಿ ಸರ್ಕಾರ ಮುಳುಗಿದೆ. 60 ಪರ್ಸೆಂಟ್‌ ಕಮಿಷನ್‌ ಸರ್ಕಾರ ಎಂದು ಆರೋಪಿಸಿದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿವೆ. ಸಾವು-ನೋವುಗಳಾಗುತ್ತಿವೆ. ಈ ಎಲ್ಲಾ ವಿಚಾರಗಳ ಬಗ್ಗೆ ಸದನದಲ್ಲಿ ಪ್ರಸ್ತಾಪಿಸುತ್ತೇವೆ ಎಂದು ಅವರು ಹೇಳಿದರು.

RELATED ARTICLES

Latest News