Monday, August 11, 2025
Homeರಾಜ್ಯBIG NEWS : ಸಚಿವ ಸ್ಥಾನಕ್ಕೆ ಕೆ.ಎನ್‌.ರಾಜಣ್ಣ ರಾಜೀನಾಮೆ..!

BIG NEWS : ಸಚಿವ ಸ್ಥಾನಕ್ಕೆ ಕೆ.ಎನ್‌.ರಾಜಣ್ಣ ರಾಜೀನಾಮೆ..!

Statement against Congress: K.N. Rajanna resigns as minister

ಬೆಂಗಳೂರು,ಆ.11– ಮತಗಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್‌‍ ವಿರುದ್ಧವಾಗಿ ಹೇಳಿಕೆ ನೀಡಿದ ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಅವರ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಇಡೀ ಕಾಂಗ್ರೆಸ್‌‍ ಪಕ್ಷವೇ ಲೋಕಸಭಾ ಚುನಾವಣೆಯಲ್ಲಿನ ಮತಗಳ್ಳತನ ಪ್ರಕರಣಕ್ಕೆ ವಿರುದ್ಧವಾಗಿ ಹೋರಾಟ ನಡೆಸಿದರೆ, ಸಚಿವ ಕೆ.ಎನ್‌.ರಾಜಣ್ಣ ವ್ಯತಿರಿಕ್ತ ಹೇಳಿಕೆ ನೀಡುವ ಮೂಲಕ ಮತದಾರರ ಪಟ್ಟಿ ಪರಿಷ್ಕರಣೆ ರಾಜ್ಯಸರ್ಕಾರದ ಹೊಣೆಗಾರಿಕೆ ಕರಡು ಪಟ್ಟಿಯನ್ನು ನೀಡಿದಾಗ ಕಾಂಗ್ರೆಸಿಗರು ಕತ್ತೆ ಕಾಯುತ್ತಿದ್ದರಾ? ಎಂದು ಪ್ರಶ್ನಿಸುವ ಮೂಲಕ ರಾಜಣ್ಣ ಕಾಂಗ್ರೆಸ್‌‍ಗೆ ವಿರುದ್ಧವಾದ ನಿಲುವು ತಳೆದಿದ್ದರು.

ರಾಹುಲ್‌ಗಾಂಧಿಯವರು ಆಗಸ್ಟ್‌ 8 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿದಾಗ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯಾದಿಯಾಗಿ ಸಂಪುಟದ ಎಲ್ಲಾ ಸಚಿವರು ಭಾಗಿಯಾಗಿದ್ದರು. ಆದರೆ ರಾಜಣ್ಣ ಪ್ರತಿಭಟನೆಯಿಂದ ದೂರ ಉಳಿದಿದ್ದರು.

ರಾಜಣ್ಣ ಅವರ ಹೇಳಿಕೆ ಬಿಜೆಪಿಗೆ ಅಸ್ತ್ರವಾಗಿ ಪರಿಣಮಿಸಿತ್ತು. ಕಾಂಗ್ರೆಸ್‌‍ನ ಕೆಲವು ಪ್ರಮುಖ ಕಾರ್ಯಕರ್ತರು ಹಾಗೂ ನಾಯಕರು ರಾಜಣ್ಣ ಅವರನ್ನು ಸಚಿವ ಸಂಪುಟ ಹಾಗೂ ಪಕ್ಷದಿಂದ ಉಚ್ಛಾಟಿಸುವಂತೆ ಹೈಕಮಾಂಡ್‌ಗೆ ದೂರು ನೀಡಿದರು.

ಈ ಹಿಂದೆ ರಾಜಣ್ಣ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸೇರಿದಂತೆ ಹಲವರ ವಿರುದ್ಧ ಬಹಿರಂಗ ಹೇಳಿಕೆಗಳನ್ನು ನೀಡಿದರು. ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಯ ಸಂದರ್ಭದಲ್ಲೂ ರಾಜಣ್ಣ ಅವರ ಮುಂದಾಳತ್ವ ಪಕ್ಷಕ್ಕೆ ಮುಜುಗರ ಉಂಟು ಮಾಡಿತ್ತು.ಸಿದ್ದರಾಮಯ್ಯನವರ ನಾಯಕತ್ವಕ್ಕೆ ಸಂಬಂಧಪಟ್ಟಂತೆ ಹೈಕಮಾಂಡ್‌ ಸೂಚನೆಯನ್ನು ಧಿಕ್ಕರಿಸಿ ರಾಜಣ್ಣ ಹೇಳಿಕೆ ನೀಡುತ್ತಾ ಪಕ್ಷದ ಶಿಸ್ತನ್ನು ಉಲ್ಲಂಘಿಸಿದರು.

ರಾಹುಲ್‌ಗಾಂಧಿಯವರು ಧ್ವನಿ ಎತ್ತಿದ ವಿಚಾರದಲ್ಲೂ ರಾಜಣ್ಣ ವ್ಯತಿರಿಕ್ತ ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್‌‍ ಪಕ್ಷಕ್ಕೆ ತೀವ್ರ ಮುಜುಗರ ಉಂಟುಮಾಡಿದ್ದರು. ಈ ಹಿನ್ನೆಲೆಯಲ್ಲಿ ಅವರ ತಲೆದಂಡವಾಗುವುದು ಬಹುತೇಕ ಖಚಿತ ಎಂದು ಹೇಳಲಾಗಿದೆ.

ಇಂದು ವಿಧಾನಮಂಡಲದ ಕಲಾಪದ ಆರಂಭದಲ್ಲಿ ರಾಜಣ್ಣ ಕಾಣಿಸಿಕೊಳ್ಳಲಿಲ್ಲ. ಸಾಮಾನ್ಯವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ವಿಧಾನಸಭೆ ಕಚೇರಿಯಲ್ಲಿ ಭೇಟಿ ಮಾಡುವುದು ರಾಜಣ್ಣ ಅವರ ವಾಡಿಕೆ. ಆದರೆ ಇಂದು ಮುಖ್ಯಮಂತ್ರಿಯವರು ವಿಧಾನಸಭೆ ಕಚೇರಿಯಲ್ಲಿದ್ದರೂ ರಾಜಣ್ಣ ಅವರು ಭೇಟಿ ಮಾಡದೆ ದೂರ ಉಳಿದಿದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಪರಮಾಪ್ತರಾಗಿರುವ ರಾಜಣ್ಣ ಅವರಿಗೆ ಹಲವಾರು ವ್ಯತಿರಿಕ್ತ ಸಂದರ್ಭದಲ್ಲಿ ರಾಜಕೀಯ ರಕ್ಷಣೆ ದೊರೆತಿತ್ತು. ಆದರೆ ಈ ಸಂದರ್ಭದಲ್ಲಿ ಇದು ಕಷ್ಟಸಾಧ್ಯ ಎನ್ನುವಂತಾಗಿದೆ.

ಮಧ್ಯಾಹ್ನದ ಬಳಿಕ ಕಲಾಪದಲ್ಲಿ ಹಾಜರಾಗುವ ಮುನ್ನ ರಾಜಣ್ಣ ತಮ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆ ಚರ್ಚೆ ನಡೆಸಿದ ಬಳಿಕ ಸ್ಪಷ್ಟನೆ ನೀಡುವುದಾಗಿ ಸ್ಪಷ್ಟಪಡಿಸಿದರು.
ಮೂಲಗಳ ಪ್ರಕಾರ, ರಾಜಣ್ಣ ಅವರಿಗೆ ರಾಜೀನಾಮೆ ನೀಡುವಂತೆ ಹೈಕಮಾಂಡ್‌ ಸೂಚನೆ ನೀಡಿದೆ. ಅದನ್ನು ಅನುಸಿರಿಸಿ ಮಧ್ಯಾಹ್ನದ ವೇಳೆಗೆ ರಾಜಣ್ಣ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ತಮ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.

ಈ ಮೂಲಕ ಸಿದ್ದರಾಮಯ್ಯನವರ ಸರ್ಕಾರದಲ್ಲಿ ಎರಡನೇ ಸಚಿವರ ತಲೆದಂಡವಾಗಿದೆ. ಈ ಮೊದಲು ಮಹರ್ಷಿ ವಾಲೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಬಳ್ಳಾರಿ ಜಿಲ್ಲೆಯ ಬಿ.ನಾಗೇಂದ್ರ ಅವರ ತಲೆದಂಡವಾಗಿತ್ತು. ಮತದಾರರ ಪಟ್ಟಿಯ ಅಕ್ರಮಗಳನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ರಾಜಣ್ಣ ಅವರು ಹುದ್ದೆ ಕಳೆದುಕೊಳ್ಳುವಂತಾಗಿದೆ. ಕೆ. ಎನ್. ರಾಜಣ್ಣ ಅವರ ರಾಜಿನಾಮೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅಂಗೀಕರಿಸಿದ್ದಾರೆ.

ವಿಧಾನಸಭೆಯಲ್ಲಿ ಕೆ.ಎನ್.ರಾಜಣ್ಣ ರಾಜೀನಾಮೆ ಪ್ರತಿಧ್ವನಿಸಿ
ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬ ವಿಚಾರ ವಿಧಾನಸಭೆಯಲ್ಲಿಂದು ಪ್ರತಿಧ್ವನಿಸಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ವಾಕ್ಸಮರಕ್ಕೆ ಎಡೆ ಮಾಡಿಕೊಟ್ಟಿತ್ತು.ಭೋಜನ ವಿರಾಮದ ನಂತರ ಸದನ ಸಮಾವೇಶಗೊಂಡಾಗ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಮಾಧ್ಯಮಗಳಲ್ಲಿ ರಾಜಣ್ಣ ಅವರು ಸಚಿವ ಸ್ಥಾ ನಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬ ವಿಚಾರ ವರದಿಯಾಗುತ್ತಿದ್ದೆ. ಈ ಬಗ್ಗೆ ದಟ್ಟವಾದ ವದಂತಿ ಹರಡಿದ್ದು, ಸರ್ಕಾರ ಸ್ಪಷ್ಟಪಡಿಸಿಬೇಕು ಎಂದು ಆಗ್ರಹಿಸಿದರು.

ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ವಾಗ್ವಾದ ನಡೆಯುತ್ತಿದ್ದರೂ ಮೌನವಾಗಿ ಆಲಿಸುತ್ತಿದ್ದ ರಾಜಣ್ಣ ಅವರು, ವಿಪಕ್ಷಗಳ ಶಾಸಕರ ತೀವ್ರ ಆಗ್ರಹಕ್ಕೆ ಮಣಿದು ಮಾತನಾಡಿದರೂ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವುದನ್ನು ಖಚಿತ ಪಡಿಸಲೂ ಇಲ್ಲ, ನಿರಾಕರಿಸಲು ಇಲ್ಲ.ರಾಜಣ್ಣ ಮಾತನಾಡಿ, ಕಾನೂನು ಸಚಿವರು ಮಾತನಾಡಬಾರದು ಎಂದು ಹೇಳಿದ್ದಾರೆ. ವಿಪಕ್ಷ ನಾಯಕರು ನೀವು ಹೇಗೆ ಕುಳಿತ್ತಿದ್ದೀರಿ ಎಂದು ಹೇಳಿದ್ದಾರೆ. ಸಭಾಧ್ಯಕ್ಷರು ಸದನದಲ್ಲಿ ಆಸನ ನಿಗದಿ ಮಾಡಿದ್ದಾರೆ. ನಾನು ಕುಳಿತ್ತಿದ್ದೇನೆ. ನೀವು ಬಳಸಿದ್ದು, ಕೀಳು ಮಟ್ಟದ ಮಾತು ಎಂದು ವಿಪಕ್ಷದ ನಾಯಕರನ್ನುದ್ದೇಶಿಸಿ ಹೇಳಿದರು.

ಅಲ್ಲದೆ, ರಾಜೀನಾಮೆ ಕೊಟ್ಟಿದ್ದೇನೆಯೋ ಅಥವಾ ಬಿಟ್ಟಿದ್ದೇನೆಯೋ? ಕಾನೂನು ಸಚಿವರು ಈಗಾಗಲೇ ಹೇಳಿದ್ದಾರೆ. ಮುಖ್ಯಮಂತ್ರಿ ಸದನದಲ್ಲಿ ಆ ಬಗ್ಗೆ ಹೇಳುತ್ತಾರೆ ಎಂದು. ಅದಕ್ಕೆ ನಾನು ಬದ್ಧ ನಾಗಿದ್ದೇನೆ ಎಂದು ಹೇಳಿದರು.ಆಗ ಅಶೋಕ್ ಮಾತನಾಡಿ, ಮಂತ್ರಿ ಅಲ್ಲದವರು, ಅಲ್ಲಿ ಕೂರಬಾರದು ಎಂದಷ್ಟೇ ಹೇಳಿದೆ. ಸಚಿವರು ಮಾತನಾಡಬಾರದು ಎಂದರೆ, ಕಟ್ಟುಹಾಕಿದ್ದಾರೆಯೇ ಇದು ಪ್ರಜಾಪ್ರಭುತ್ವವೇ ಎಂದು ಪ್ರಶ್ನಿಸಿದರು.
ಆರಂಭದಲ್ಲಿ ಮಾತನಾಡಿದ ಅಶೋಕ್ ಅವರು, ರಾಜಣ್ಣ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ, ಪಕ್ಷದಿಂದ ಅವರನ್ನು ಅಮಾನತ್ತು ಮಾಡಿದ್ದಾರೆ ಎಂಬ ವದಂತಿ ಇದೆ. ಅವರ ಮೇಲೆ ಭ್ರುಷ್ಟಾಚಾರದ ಆರೋಪ ಇದೆಯೇ? ಸಚಿವರು ಇಲ್ಲೇ ಇದ್ದಾರೆ. ಪ್ರತಿದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಇದ್ದವರು ಎಂದರು.

ಬಿಜೆಪಿ ಶಾಸಕ ಸುರೇಶ್ ಕುಮಾರ್ ಅವರು ಮಾತನಾಡಿ, ಸರ್ಕಾರ ಈ ಸಂಬಂಧ ಹೇಳಿಕೆ ನೀಡಬೇಕು ಎಂದು ಆಗ್ರಹಿಸಿದರು.ವಿರೋಧ ಪಕ್ಷದ ಉಪ ನಾಯಕ ಅರವಿಂದ್ ಬೆಲ್ಲದ್ ಮಾತನಾಡಿ, ದಲಿತರಿಗೆ ಅನ್ಯಾಯವಾಗುತ್ತಿದೆ. ಆಗ ನಾಗೇಂದ್ರ ಈಗ ರಾಜಣ್ಣ ಎಂದು ಛೇಡಿಸಿದರು.ಮತ್ತೆ ಅಶೋಕ್ ಮಾತನಾಡಿ, ನಾವು ರಾಜೀನಾಮೆ ಕೇಳಿಲ್ಲ. ಮಾಧ್ಯಮ ಸಂವಿಧಾನದ ನಾಲ್ಕನೇ ಅಂಗ. ಆ ಕಾರಣಕ್ಕಾಗಿ ಸ್ಪಷ್ಟನೆ ಕೇಳುತ್ತಿದ್ದೇವೆ ಎಂದರು.ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಮಾತನಾಡಿ, ಮಾಧ್ಯಮದಲ್ಲಿ ಸುದ್ದಿ ಬರುತ್ತಿದೆ ಎಂಬ ಕಾರಣಕ್ಕೆ ಏಕಾಏಕಿ ಹೇಳಿಕೆ ನೀಡುವುದು, ಚರ್ಚೆ ಮಾಡುವುದು ಸರಿಯಾದ ಬೆಳವಣಿಗೆ ಅಲ್ಲ. ಅಂಥಾ ಬೆಳವಣಿಗೆ ಆಗಿದ್ದರೆ, ಮುಖ್ಯಮಂತ್ರಿಗಳು ಸದನಕ್ಕೆ ತಿಳಿಸುತ್ತಾರೆ ಎಂದರು.ಸುರೇಶ್ ಕುಮಾರ್ ಮಾತನಾಡಿ, ಸಚಿವರು ಸದನದಲ್ಲಿ ಇದ್ದಾರೆ, ಅವರೇ ಸ್ಪಷ್ಟಪಡಿಸಲಿ ಎಂದರು.ಸುನೀಲ್ ಕುಮಾರ್ ಸೇರಿದಂತೆ ಹಲವು ಸದಸ್ಯರು ದನಿಗೂಡಿಸಿ ಮಾತನಾಡಿದರು.

ಮಾತು ಮುಂದುವರೆಸಿದ ಅಶೋಕ್ ಅವರು ರಾಜಣ್ಣ ಅವರು ರಾಜೀನಾಮೆ ಕೊಟ್ಟಿದ್ದಾರೆ. ಇಲ್ಲವೆಂದರೆ ನನ್ನನ್ನು ಒಂದು ವರ್ಷ ಅಮಾನತ್ತು ಮಾಡಿ. ರಾಜೀನಾಮೆ ಕೊಟ್ಟು ಎರಡು ಗಂಟೆಯಾಗಿದೆ ಎಂದರು.
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್ ಬಾಬು ಮಾತನಾಡಿ, ಸಚಿವರ ರಾಜೀನಾಮೆ ವಿಚಾರದಲ್ಲಿ ವದಂತಿ ಇದೆ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.ಕಂದಾಯ ಸಚಿವ ಕೃಷ್ಣಬೈರೇಗೌಡ ಮಾತನಾಡಿ, ಕಾನೂನು ಸಚಿವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಪ್ರಾಸ್ತಪಿಸುತ್ತಿದ್ದಾರೆ ಎಂದು ಆರೋಪಿಸಿದಾಗ ವಾಗ್ವಾದ ನಡೆಯಿತು.ಹೆಚ್.ಕೆ.ಪಾಟೀಲ್ ಮಾತನಾಡಿ ಪರಮೇಶ್ವರ್, ಕೃಷ್ಣ ಬೈರೇಗೌಡ, ವೆಂಕಟೇಶ್, ನಾನು ಸಚಿವರಾಗಿರುವಂತೆ ರಾಜಣ್ಣ ಅವರು ಸಚಿವರಾಗಿದ್ದಾರೆ ಎಂದು ಹೇಳಿದರು.

ಕೆ.ಎನ್.ರಾಜಣ್ಣ ರಾಜೀನಾಮೆಯನ್ನು ಸ್ಪಷ್ಟಡಿಸಿದ ಮುಖ್ಯಮಂತ್ರಿ ಕಚೇರಿ :
ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜಣ್ಣ ಅವರು ರಾಜೀನಾಮೆ ಪತ್ರ ನೀಡಿರುವುದನ್ನು ಮುಖ್ಯಮಂತ್ರಿ ಕಚೇರಿ ಮೂಲಗಳು ಸ್ಪಷ್ಟಡಿಸಿವೆ.

ಮುಖ್ಯಮಂತ್ರಿಗಳು ರಾಜಣ್ಣ ಅವರು ಸಲ್ಲಿಸಿದ ರಾಜೀನಾಮೆಯನ್ನು ಸ್ವೀಕರಿಸಿದ್ದು, ರಾಜೀನಾಮೆ ಅಂಗೀಕಾರಕ್ಕಾಗಿ ರಾಜ್ಯಪಾಲರಿಗೆ ಶಿಫಾರಸ್ಸು ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಬೆಂಗಳೂರಿನಲ್ಲಿ ಭಾರತೀಯ ಚುನಾವಣಾ ಆಯೋಗದ ವಿರುದ್ಧ ಮತಗಳವು ಆರೋಪ ಮಾಡಿ ಪ್ರತಿಭಟನೆ ಮಾಡಿದ್ದರು.

ಆದರೆ, ರಾಜಣ್ಣ ಅವರು ಮತಗಳವು ಆರೋಪದ ವಿಚಾರದಲ್ಲಿ ರಾಹುಲ್ಗಾಂಧಿ ಅವರ ನಿಲುವಿಗೆ ವ್ಯಕ್ತಿರಿಕ್ತ ಹೇಳಿಕೆ ನೀಡಿ ಪಕ್ಷಕ್ಕೆ ಹಾಗೂ ಹೈಕಮಾಂಡ್ಗೆ ಕೋಪಕ್ಕೆ ಗುರಿಯಾಗಿದ್ದರು ಎನ್ನಲಾಗಿದೆ.
ರಾಜಣ್ಣ ಅವರು ಹೇಳಿಕೆ ನೀಡಿದ ನಂತರ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಗರಂ ಆಗಿದ್ದು, ಕ್ರಮ ಕೈಗೊಳ್ಳಲು ರಾಜ್ಯ ನಾಯಕರಿಗೆ ಸೂಚಿತ್ತು. ಆ ಕಾರಣಕ್ಕಾಗಿ ರಾಜಣ್ಣ ಅವರು ಸಚಿವ ಸ್ಥಾ ನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಸಚಿವ ಸ್ಥಾನಕ್ಕೆ ರಾಜಣ್ಣ ನೀಡಿರುವ ರಾಜೀನಾಮೆ ಅಂಗೀಕಾರವಾದರೆ, ಕಾಂಗ್ರೆಸ್ ಸರ್ಕಾರದಲ್ಲಿ ಎರಡನೇ ಸಚಿವರ ತಲೆದಂಡವಾದಂತಾಗಲಿದೆ. ಈ ಹಿಂದೆ ಕ್ರೀಡಾ ಸಚಿವರಾಗಿದ್ದ ನಾಗೇಂದ್ರ ಅವರು ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಮಾಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

RELATED ARTICLES

Latest News