ಮಧುಗಿರಿ, ಆ.12- ಸಂಪುಟದಿಂದ ಕೆ.ಎನ್.ರಾಜಣ್ಣ ಅವರನ್ನು ವಜಾಗೊಳಿಸಿರುವುದನ್ನು ಖಂಡಿಸಿ ಕೆರಳಿದ ಬೆಂಬಲಿಗರು ಪಟ್ಟಣದಲ್ಲಿಂದು ಬಂದ್ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಕೆಎನ್‌ಆರ್ ಅವರ ವಜಾದಿಂದ ತುಮಕೂರು ಜಿಲ್ಲೆಗೆ ದೊಡ್ಡ ಅನ್ಯಾಯ ವಾಗಿದೆ.
ಕೂಡಲೇ ಮುಖ್ಯಮಂತ್ರಿಗಳು ಮರು ಪರಿಶೀಲಿಸಿ ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ಆಗ್ರಹಿಸಿದ ಅಭಿಮಾನಿಗಳು, ಕಾರ್ಯಕರ್ತರು, ಬೆಂಬಲಿಗರು ಪಟ್ಟಣದಲ್ಲಿ ಬಂದ್ ನಡೆಸಿದರು. ಕಾರ್ಯಕರ್ತರು, ಬೆಂಬಲಿಗರು ಒಂದೆಡೆ ಸೇರಿ ಸಭೆ ನಡೆಸಿದ ಬಳಿಕ ರಾಜಣ್ಣ ಅವರ ಭಾವಚಿತ್ರಗಳನ್ನಿಡಿದು ರಸ್ತೆಗಿಳಿದು ಅಂಗಡಿಗಳನ್ನು ಬಂದ್ ಮಾಡಿಸಿ ಪ್ರತಿಭಟನೆ ನಡೆಸಿದರು.
ಮಧುಗಿರಿ ಕ್ಷೇತ್ರವನ್ನು ಬಹಳಷ್ಟು ಅಭಿವೃದ್ಧಿ ಮಾಡಿದ್ದಾರೆ. ಜತೆಗೆ ಸಹಕಾರ ಕ್ಷೇತ್ರದಲ್ಲೂ ಸಹ ಉತ್ತಮ ಸೇವೆ ಮಾಡಿದ್ದು, ಇಂತಹ ನೇರ, ನಿಷ್ಠುರ, ಜನಸ್ನೇಹಿ ರಾಜಕಾರಣಿಯನ್ನು ಏಕಾಏಕಿ ಸಚಿವ ಸಂಪುಟದಿಂದ ವಜಾಗೊಳಿಸಿರುವುದು ಎಷ್ಟರ ಮಟ್ಟಿಗೆ ಸರಿ? ಹಿರಿಯ ರಾಜಕೀಯ ಧುರೀಣರಾದ ರಾಜಣ್ಣ ಅವರ ಸೇವೆ ಜಿಲ್ಲೆಗೆ ಸಾಕಷ್ಟಿದೆ. ಪಕ್ಷವನ್ನೂ ಸಹ ಸಂಘಟಿಸಿ ಅಧಿಕಾರಕ್ಕೆ ತರುವಲ್ಲಿ ಶ್ರಮಿಸಿದ್ದಾರೆ. ಇಂತಹ ರಾಜಕಾರಣಿಯನ್ನು ಕಾಂಗ್ರೆಸ್ ಸರ್ಕಾರ ಸಂಪುಟದಿಂದ ವಜಾಗೊಳಿಸಿರುವುದು ಸರಿಯಲ್ಲ ಎಂದು ಕಿಡಿಕಾರಿದರು.
ನಗರದ ಪ್ರಮುಖ ವೃತ್ತಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜಮಾವಣೆಗೊಂಡ ಬೆಂಬಲಿಗರು ಕೆಎನ್‌ಆರ್ ಪರ ಘೋಷಣೆಗಳನ್ನು ಕೂಗುತ್ತ ಅಂಗಡಿ ಮಾಲೀಕರು ಸ್ವಯಂಪ್ರೇರಿತರಾಗಿ ಅಂಗಡಿಗಳನ್ನು ಬಂದ್ ಮಾಡಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಿ ಎಂದು ಕರೆ ನೀಡಿದರು. ಸಂಪುಟಕ್ಕೆ ಪುನಃ ಸೇರ್ಪಡೆಗೊಳಿಸುವಂತೆ ಬೆಂಬಲಿಗರು ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಸಹ ಯತ್ನಿಸಿದರು. ಕ್ಷಣ ಕ್ಷಣಕ್ಕೂ ಮಧುಗಿರಿಯಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗುತ್ತಿದ್ದು, ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.
ಮಧುಗಿರಿ, ತುಮಕೂರು ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಬಸ್‌ಗಳನ್ನು ತಡೆದರು. ಪೊಲೀಸರು ಮಧ್ಯ ಪ್ರವೇಶಿಸಿ ಪ್ರತಿಭಟನಾಕಾರರನ್ನು ಮನವೊಲಿಸಲು ಎಷ್ಟೇ ಪ್ರಯತ್ನ ಪಟ್ಟರೂ ಬೆಂಬಲಿಗರು ಮಾತ್ರ ಪಟ್ಟು ಬಿಡದೆ ಪ್ರತಿಭಟನೆ ನಡೆಸಿದರು. ಇದು ಬರೀ ಆರಂಭವಷ್ಟೇ. ಒಂದು ವೇಳೆ ಸಂಪುಟಕ್ಕೆ ಪುನಃ ಸೇರ್ಪಡೆಗೊಳಿಸಿಕೊಳ್ಳದಿದ್ದರೆ ಮುಂದೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.