Wednesday, August 13, 2025
Homeರಾಷ್ಟ್ರೀಯ | Nationalಸ್ವಾತಂತ್ರ್ಯೋತ್ಸವದಂದು ಮಾಂಸದಂಗಡಿ, ಕಸಾಯಿಖಾನೆ ಮುಚ್ಚಲು ಆದೇಶ : ಭುಗಿಲೆದ್ದ ವಿವಾದ

ಸ್ವಾತಂತ್ರ್ಯೋತ್ಸವದಂದು ಮಾಂಸದಂಗಡಿ, ಕಸಾಯಿಖಾನೆ ಮುಚ್ಚಲು ಆದೇಶ : ಭುಗಿಲೆದ್ದ ವಿವಾದ

Meat Ban orders on Independence Day spark political row

ನವದೆಹಲಿ,ಆ.13– ಸ್ವಾತಂತ್ರ್ಯ ದಿನಾಚರಣೆಯಂದು ಮಾಂಸದ ಅಂಗಡಿಗಳು ಮತ್ತು ಕಸಾಯಿಖಾನೆಗಳು ಮುಚ್ಚಲ್ಪಡಬೇಕೆಂದು ದೇಶದ ಹಲವಾರು ಸ್ಥಳೀಯ ಸಂಸ್ಥೆಗಳು ಆದೇಶಿಸಿದ ನಂತರ ರಾಜಕೀಯ ವಿವಾದ ಭುಗಿಲೆದ್ದಿದೆ. ಪಕ್ಷಗಳನ್ನು ಮೀರಿ ಹಲವಾರು ರಾಜಕಾರಣಿಗಳು ಈ ನಿಷೇಧವನ್ನು ಜನರ ಆಹಾರ ಪದ್ಧತಿಯ ಮೇಲಿನ ದಮನಕಾರಿ ಕ್ರಮ ಎಂದು ಕಿಡಿಕಾರಿದ್ದು, ದೇಶವು ತನ್ನ ಸ್ವಾತಂತ್ರ್ಯವನ್ನು ಆಚರಿಸುತ್ತಿರುವಾಗ ಸ್ವಾತಂತ್ರ್ಯವನ್ನು ಉಲ್ಲಂಘಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಆಗಸ್ಟ್‌ 15 ಮತ್ತು 16ರಂದು ಸ್ವಾತಂತ್ರ್ಯ ದಿನಾಚರಣೆ ಮತ್ತು ಜನಾಷ್ಟಮಿಯಂದು ಕಸಾಯಿಖಾನೆಗಳು ಮತ್ತು ಮಾಂಸದ ಅಂಗಡಿಗಳನ್ನು ಮುಚ್ಚುವಂತೆ ಗ್ರೇಟರ್‌ ಹೈದರಾಬಾದ್‌ ಮುನ್ಸಿಪಲ್‌ ಕಾರ್ಪೊರೇಷನ್‌ ಹೊರಡಿಸಿರುವ ಆದೇಶವನ್ನು ಹೈದರಾಬಾದ್‌ ಸಂಸದ ಮತ್ತು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ ಟೀಕಿಸಿದ್ದಾರೆ.

ಭಾರತದಾದ್ಯಂತ ಅನೇಕ ಪುರಸಭೆಗಳು ಆಗಸ್ಟ್‌ 15 ರಂದು ಕಸಾಯಿಖಾನೆಗಳು ಮತ್ತು ಮಾಂಸದ ಅಂಗಡಿಗಳನ್ನು ಮುಚ್ಚಬೇಕೆಂದು ಆದೇಶಿಸಿದಂತೆ ಕಾಣುತ್ತದೆ. ಇದು ನಿರ್ದಯ ಮತ್ತು ಸಂವಿಧಾನಬಾಹಿರ. ಮಾಂಸ ತಿನ್ನುವುದಕ್ಕೂ ಸ್ವಾತಂತ್ರ್ಯ ದಿನ ಆಚರಿಸುವುದಕ್ಕೂ ಏನು ಸಂಬಂಧ? ತೆಲಂಗಾಣದ 99% ಜನರು ಮಾಂಸ ತಿನ್ನುತ್ತಾರೆ. ಈ ಮಾಂಸ ನಿಷೇಧಗಳು ಜನರ ಸ್ವಾತಂತ್ರ್ಯ, ಗೌಪ್ಯತೆ, ಜೀವನೋಪಾಯ, ಸಂಸ್ಕೃತಿ, ಪೋಷಣೆ ಮತ್ತು ಧರ್ಮದ ಹಕ್ಕನ್ನು ಉಲ್ಲಂಘಿಸುತ್ತವೆ ಎಂದು ಆಕ್ಷೇಪ ವ್ಯಕ್ತವಾಗಿದೆ.

ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ಇದೇ ರೀತಿಯ ಮಾಂಸ ನಿಷೇಧ ಆದೇಶಕ್ಕೆ ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇಂತಹ ನಿಷೇಧ ಹೇರುವುದು ತಪ್ಪು. ಪ್ರಮುಖ ನಗರಗಳಲ್ಲಿ, ವಿವಿಧ ಜಾತಿ ಮತ್ತು ಧರ್ಮದ ಜನರು ವಾಸಿಸುತ್ತಾರೆ. ಇದು ಭಾವನಾತಕ ವಿಷಯವಾಗಿದ್ದರೆ, ಜನರು ಅದನ್ನು ಒಂದು ದಿನದ ಮಟ್ಟಿಗೆ (ನಿಷೇಧ) ಸ್ವೀಕರಿಸುತ್ತಾರೆ. ಆದರೆ ನೀವು ಮಹಾರಾಷ್ಟ್ರ ದಿನ, ಸ್ವಾತಂತ್ರ್ಯ ದಿನ ಮತ್ತು ಗಣರಾಜ್ಯೋತ್ಸವದಂದು ಅಂತಹ ಆದೇಶಗಳನ್ನು ಜಾರಿಗೊಳಿಸಿದರೆ ಅದು ಕಷ್ಟ ಎಂದು ಆಕ್ಷೇಪಿಸಿದ್ದಾರೆ.

ಮುಂಬೈ ಬಳಿಯ ಥಾಣೆಯಲ್ಲಿರುವ ಕಲ್ಯಾಣ್‌ ಡೊಂಬಿವಲಿ ಮುನ್ಸಿಪಲ್‌ ಕಾರ್ಪೊರೇಷನ್‌ ಕೂಡ ಇದೇ ರೀತಿಯ ನಿರ್ದೇಶನ ನೀಡಿದೆ. ಶಿವಸೇನೆ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ, ಪುರಸಭೆ ಆಯುಕ್ತರನ್ನು ಅಮಾನತುಗೊಳಿಸಬೇಕು ಮತ್ತು ಯಾರು ಏನು ತಿನ್ನಬೇಕು ಎಂದು ನಿರ್ಧರಿಸುವುದು ಅವರ ಕೆಲಸವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸ್ವಾತಂತ್ರ್ಯ ದಿನದಂದು ನಾವು ಏನು ತಿನ್ನುತ್ತೇವೆ ಎಂಬುದು ನಮ ಹಕ್ಕು, ನಮ ಸ್ವಾತಂತ್ರ್ಯ. ನಮ ಮನೆಯಲ್ಲಿ, ನವರಾತ್ರಿಯ ಸಮಯದಲ್ಲಿಯೂ ಸಹ, ನಮ ಪ್ರಸಾದದಲ್ಲಿ ಸೀಗಡಿ ಮತ್ತು ಮೀನು ಇರುತ್ತದೆ ಏಕೆಂದರೆ ಇದು ನಮ ಸಂಪ್ರದಾಯ. ಇದು ನಮ ಹಿಂದುತ್ವ. ತಿನ್ನಬಾರದೆಂದು ನಮಗೆ ಹೇಳಲು ಸಾಧ್ಯವಿಲ್ಲ. ನೀವು ನಮ ಮನೆಗಳಿಗೆ ಏಕೆ ಪ್ರವೇಶಿಸುತ್ತಿದ್ದೀರಿ? ಪುರಸಭೆಯು ರಸ್ತೆಗಳಲ್ಲಿನ ಗುಂಡಿಗಳಂತಹ ಸಮಸ್ಯೆಗಳ ಬಗ್ಗೆ ಗಮನಹರಿಸಬೇಕು ಎಂದು ಆಕ್ರೋಶಗೊಂಡಿದ್ದಾರೆ.

ಮಹಾರಾಷ್ಟ್ರದ ಬಿಜೆಪಿ-ಸೇನಾ-ಎನ್‌ಸಿಪಿ ಸರ್ಕಾರವು ಮಾಂಸ ನಿಷೇಧವನ್ನು ಅನುಮೋದಿಸಿಲ್ಲ ಎಂದು ಏಕನಾಥ್‌ ಶಿಂಧೆ ನೇತೃತ್ವದ ಶಿವಸೇನೆಯ ವಕ್ತಾರ ಅರುಣ್‌ ಸಾವಂತ್‌ ಹೇಳೀದ್ದು, ವಿರೋಧ ಪಕ್ಷವು ರಾಜ್ಯ ಸರ್ಕಾರದ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸುತ್ತಿದೆ ಮತ್ತು ಅದನ್ನು ಕೆಡಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.

RELATED ARTICLES

Latest News