Thursday, August 14, 2025
Homeರಾಜ್ಯಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಇನ್ನೂ ಒಂದು ವಾರ ಮುಂದುವರಿಯಲಿದೆ ಮಳೆ

ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಇನ್ನೂ ಒಂದು ವಾರ ಮುಂದುವರಿಯಲಿದೆ ಮಳೆ

Rains to continue in the state including Bangalore for another week

ಬೆಂಗಳೂರು,ಆ.13– ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮಳೆ ಮುಂದುವರೆದಿದ್ದು, ಇನ್ನು ಒಂದು ವಾರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ , ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ದಾವಣಗೆರೆ, ರಾಯಚೂರು, ಧಾರವಾಡ, ಹುಬ್ಬಳ್ಳಿ, ಹಾಸನ, ಚಿಕ್ಕಮಗಳೂರು ಸೇರಿದಂತೆ ಮತ್ತಿತರ ಜಿಲ್ಲೆಗಳಲ್ಲಿ ಮಳೆಯಾಗುತ್ತಿದ್ದು, ಇನ್ನು ಒಂದು ವಾರ ಇದೇ ರೀತಿ ಮಳೆ ಚುರುಕು ಪಡೆಯಲಿದೆ.

ಈ ಹಿನ್ನೆಲೆಯಲ್ಲಿ ಕರಾವಳಿ ಹೊರತುಪಡಿಸಿ ಎಲ್ಲಾ ಜಿಲ್ಲೆಗಳಲ್ಲೂ ಯೆಲ್ಲೋ ಅಲರ್ಟ್‌ ಘೋಷಿಸಲಾಗಿದೆ. ಮನೆ ಕುಸಿತ: ಧಾರವಾಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ನವಲಗುಂದದಲ್ಲಿ ಮನೆಯೊಂದು ಕುಸಿದಿದ್ದು, ಸದ್ಯಕ್ಕೆ ಯಾವುದೇ ಪ್ರಾಣಾಹಾನಿ ಸಂಭವಿಸಿಲ್ಲ.
ಹಳ್ಳದ ಓಣಿಯಲ್ಲಿರುವ ಮಕ್ತುಮುಬಿ ಎಂಬುವರಿಗೆ ಸೇರಿದ ಮನೆ ಕುಸಿದು ಬಿದ್ದಿದೆ. ಕುಟುಂಬ ಬೀದಿಪಾಲಾಗಿದ್ದು, ಆಶ್ರಯಕ್ಕಾಗಿ ಪರದಾಡುವಂತಾಗಿದೆ.

ಬೆಳ್ಳಂಬೆಳಗ್ಗೆ ತುಂತುರು ಮಳೆ: ರಾಜಧಾನಿ ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆಯೇ ತುಂತುರು ಮಳೆಯಾಗುತ್ತಿದ್ದು, ಕೆಲಸಕಾರ್ಯಗಳಿಗೆ ಹೋಗುವ ಉದ್ಯೋಗಿಗಳು, ಶಾಲಾಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಪರದಾಡುವಂತಾಗಿತ್ತು. ಮಳೆಯಿಂದಾಗಿ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿ ಹೆಚ್ಚು ಜನರು ಮೆಟ್ರೊದಲ್ಲಿ ಪ್ರಯಾಣಿಸಿದ ದೃಶ್ಯಗಳು ಕಂಡುಬಂದವು.

ಬೆಂಗಳೂರಿನಲ್ಲಿ ಮುಂದಿನ ಒಂದು ವಾರ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯ ಮೂಲಗಳು ತಿಳಿಸಿವೆ. ಕೊಚ್ಚಿಹೋದ ರೈತ: ರಾಯಚೂರು ಜಿಲ್ಲೆಯಲ್ಲಿ ಮಳೆ ಆರ್ಭಟ ಜೋರಾಗಿದ್ದು, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದೆ. ರಭಸವಾಗಿ ಹರಿಯುತ್ತಿದ್ದ ಹಳ್ಳವನ್ನು ದಾಟಲು ಹೋದ ರೈತನೊಬ್ಬ ಎತ್ತಿನಬಂಡಿ ಸಮೇತ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ.

ಅದೃಷ್ಟವಶಾತ್‌ ರೈತ ಮತ್ತು ಒಂದು ಎತ್ತು ಈಜಿಕೊಂಡು ದಡ ಸೇರಿದರೆ ಮತ್ತೊಂದು ಎತ್ತು ಹಾಗೂ ನಾಲ್ಕು ಟಗರುಗಳು ನೀರುಪಾಲಾಗಿವೆ. ಮಸ್ಕಿ ಪಟ್ಟಣದ ಹಿರೇಹಳ್ಳದಲ್ಲಿ ರಭಸವಾಗಿ ನೀರು ಹರಿಯುತ್ತಿದ್ದು, ಇದನ್ನು ಲೆಕ್ಕಿಸದೆ ರೈತ ಹಳ್ಳ ದಾಟಲು ಮುಂದಾಗಿ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದು, ಮರದ ಕೊಂಬೆಯನ್ನು ಹಿಡಿದು ದಡ ಸೇರಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

RELATED ARTICLES

Latest News