ಬೆಂಗಳೂರು, ಆ.13- ಕೊಪ್ಪಳದ ಗವಿ ಸಿದ್ದಪ್ಪ ಕೊಲೆ ಪ್ರಕರಣವನ್ನು ವಿಧಾನಸಭೆಯಲ್ಲಿಂದು ಪ್ರಸ್ತಾಪಿಸಿದ ಬಿಜೆಪಿಯ ಸದಸ್ಯರು, ರಾಜ್ಯದ ಕಾಂಗ್ರೆಸ್ ಸರ್ಕಾರ ಹಿಂದೂ ಕಾರ್ಯಕರ್ತನ ಹತ್ಯೆಯನ್ನು ಹಗುರವಾಗಿ ಪರಿಗಣಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಧಾನಸಭೆಯ ಶೂನ್ಯ ವೇಳೆಯಲ್ಲಿ ಬಿಜೆಪಿಯ ರಾಜ್ಯಾಧ್ಯಕ್ಷರೂ ಆಗಿರುವ ಬಿ.ವೈ. ವಿಜಯೇಂದ್ರ, ವಿಷಯ ಪ್ರಸ್ತಾಪಿಸಿ ಅನ್ಯ ಧರ್ಮದ ಯುವತಿಯನ್ನು ಪ್ರೀತಿಸಿದ್ದಾನೆ ಎಂಬ ಕಾರಣಕ್ಕಾಗಿ, ಹಿಂದೂ ಕಾರ್ಯಕರ್ತನಾಗಿದ್ದ ವಾಲೀಕಿ ಸಮುದಾಯದ ಗವಿಸಿದ್ದಪ್ಪ ಎಂಬ ಯುವಕನನ್ನು ಅನ್ಯ ಸಮುದಾಯದ ಸೈಯದ್ ಎಂಬ ವ್ಯಕ್ತಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಕೊಲೆಗೆ ಹಿಂದಿನ ದಿನ ಸೈಯದ್ ಮಚ್ಚು ಹಿಡಿದುಕೊಂಡು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಾಕಿದ್ದ, ಪೊಲೀಸರು ಮುಂಜಾಗ್ರತೆಯಾಗಿ ಆರೋಪಿಯ ವಿರುದ್ಧ ಕ್ರಮ ಕೈಗೊಂಡಿದ್ದರೆ ಹತ್ಯೆಯನ್ನು ತಪ್ಪಿಸಬಹುದಿತ್ತು ಎಂದು ಹೇಳಿದರು.
ಕೊಲೆಯನ್ನು ಖಂಡಿಸಿ ಹಿಂದೂ ಸಂಘಟನೆಗಳು ಕೊಪ್ಪಳ ಬಂದ್ ನಡೆಸಿ ಪ್ರತಿಭಟಿಸಿದ ಬಳಿಕ ಪೊಲೀಸರು ಮೂರ್ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಗವಿಸಿದ್ದಪ್ಪ ಅವರ ತಂದೆ ನಿಂಗಪ್ಪ ದೂರು ನೀಡಿದ್ದಾರೆ ಎಂದು ವಿವರಿಸಿದರು.
ಗವಿಸಿದ್ದಪ್ಪ ಬಡ ಕುಟುಂಬದವರಾಗಿದ್ದು ಅವರ ಕುಟುಂಬಕ್ಕೆ ರಾಜ್ಯ ಸರ್ಕಾರ 50 ಲಕ್ಷ ರೂ.ಗಳ ಪರಿಹಾರ, ಎರಡು ಎಕರೆ ಭೂಮಿ ಹಾಗೂ ಕುಟುಂಬದ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡಬೇಕು. ಇದು ಸುಹಾಸ್‌ಶೆಟ್ಟಿ ಮಾದರಿಯಲ್ಲೇ ನಡೆದಿರುವ ಕೊಲೆಯಾಗಿದ್ದು, ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಐ)ಕ್ಕೆ ಒಪ್ಪಿಸಬೇಕು. ಸ್ಥಳೀಯ ಪೊಲೀಸರ ಮೇಲೆ ಜನ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದರು.
ಈ ಹಂತದಲ್ಲಿ ಕೊಪ್ಪಳ ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ಶಿವರಾಜ ತಂಗಡಗಿ ಸ್ಪಷ್ಟನೆ ನೀಡಲು ಮುಂದಾದರು. ಪಕ್ಷದ ಶಾಸಕ ರಾಘವೇಂದ್ರ ಹಿಟ್ನಾಳ್ ಸ್ಪಷ್ಟನೆ ನೀಡಲು ಮುಂದಾದರು. ಅದಕ್ಕೆ ಬಿಜೆಪಿಯ ಶಾಸಕರು ಅವಕಾಶ ನೀಡಲಿಲ್ಲ. ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಶಾಸಕರಾದ ಡಾ.ಸಿ.ಎನ್.ಅಶ್ವತ್‌್ಥನಾರಾಯಣ ಸೇರಿದಂತೆ ಬಿಜೆಪಿ, ಜೆಡಿಎಸ್‌ನ ಎಲ್ಲರೂ ಎದ್ದುನಿಂತು ವಿರೋಧ ವ್ಯಕ್ತಪಡಿಸಿದರು. ಕೊಲೆಯಾದ ಮೂರು ದಿನಗಳ ನಂತರ ಆರೋಪಿಗಳನ್ನು ಬಂಧಿಸಲಾಗಿದೆ, ಬೇಜವಾಬ್ದಾರಿ ವರ್ತನೆ ಪ್ರದರ್ಶಿಸಿದ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ಕಿಡಿಕಾರಿದರು.
ಈ ಸಂದರ್ಭದಲ್ಲಿ ಸಚಿವರಾದ ಪ್ರಿಯಾಂಕ ಖರ್ಗೆ, ಚೆಲುವರಾಯಸ್ವಾಮಿ, ಎಂ.ಬಿ .ಪಾಟೀಲ್ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತಿತರರು ವಿರೋಧ ಪಕ್ಷಗಳ ಸದಸ್ಯರ ಜೊತೆ ವಾಗ್ವಾದ ನಡೆಸಿದರು.
ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ಗದ್ದಲದಿಂದ ಯಾರು ಏನು ಹೇಳುತ್ತಿದ್ದಾರೆ ಎಂದು ಕೇಳಿಸದರಾಯಿತು. ಸಭಾಧ್ಯಕ್ಷ ಯು.ಟಿ .ಖಾದರ್ ಮಧ್ಯ ಪ್ರವೇಶ ಮಾಡಿ ಗಂಭೀರ ಪ್ರಕರಣಗಳನ್ನು ಚರ್ಚೆ ಮಾಡಲು ನಿಲುವಳಿ ಸೂಚನೆ ಹಾಗೂ ಇತರ ನಿಯಮಾವಳಿಗಳಲ್ಲಿ ಅವಕಾಶ ಇದೆ. ಶೂನ್ಯ ವೇಳೆಯಲ್ಲಿ ಚರ್ಚೆಗೆ ಅವಕಾಶ ಇಲ್ಲ. ಸರ್ಕಾರ ಇದ್ದರೆ ಇಂದು ಅಥವಾ ನಾಳೆ ಚರ್ಚೆಗೆ ಉತ್ತರ ನೀಡುತ್ತದೆ ಎಂದರು.
ಸರ್ಕಾರ ಇದ್ದರೆ ಎಂದು ಸಭಾಧ್ಯಕ್ಷರು ಅನುಮಾನ ವ್ಯಕ್ತಪಡಿಸುತ್ತಿರುವುದೇಕೆ ಎಂದು ಬಿಜೆಪಿಯ ಸುರೇಶ್ ಕುಮಾರ್ ಅರಗ ಜ್ಞಾನೇಂದ್ರ ಇತರರು ಛೇಡಿಸಿದರು. ನನ್ನ ಕನ್ನಡ ಸರಿಯಾಗಿಲ್ಲ ನೀವು ಅರ್ಥ ಮಾಡಿಕೊಳ್ಳಬೇಕು ಎಂದು ಸಭಾಧ್ಯಕ್ಷರು ಸ್ಪಷ್ಟನೆ ನೀಡಿದರು. ನಿಮ ಕನ್ನಡ ಸರಿ ಇದೆ ಸರ್ಕಾರ ಇಲ್ಲ ಎಂಬ ಅಭಿಪ್ರಾಯವೂ ಸರಿ ಎಂದು ವಿರೋಧ ಪಕ್ಷಗಳ ಸದಸ್ಯರು ಛೇಡಿಸಿದರು.