Thursday, August 14, 2025
Homeಬೆಂಗಳೂರುಬೆಂಗಳೂರಲ್ಲಿ ಶಾಲಾ ಬಸ್‌‍ಗೆ ಬೆಂಕಿಬಿದ್ದು ಅಪರಿಚಿತ ವ್ಯಕ್ತಿ ಸಜೀವ ದಹನ

ಬೆಂಗಳೂರಲ್ಲಿ ಶಾಲಾ ಬಸ್‌‍ಗೆ ಬೆಂಕಿಬಿದ್ದು ಅಪರಿಚಿತ ವ್ಯಕ್ತಿ ಸಜೀವ ದಹನ

Unidentified person burnt alive after school bus catches fire in Bengaluru

ಬೆಂಗಳೂರು,ಆ.13- ಶಾಲಾ ಬಸ್‌‍ನಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿಕೊಂಡ ಪರಿಣಾಮ ಅದರೊಳಗೆ ಮಲಗಿದ್ದ ಅಪರಿಚಿತ ವ್ಯಕ್ತಿ ಸಜೀವ ದಹನವಾಗಿದ್ದು ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ.ಈ ಬಸ್‌‍ನೊಳಗೆ ಮಲಗಿದ್ದ ಸುಮಾರು 40 ವರ್ಷದಂತೆ ಕಾಣುವ ಈ ವ್ಯಕ್ತಿಯ ಹೆಸರು, ವಿಳಾಸ ಸದ್ಯಕ್ಕೆ ತಿಳಿದುಬಂದಿಲ್ಲ.

ಸಜೀವ ದಹನವಾಗಿರುವ ವ್ಯಕ್ತಿ ಚಿಂದಿ ಆಯುವವನಂತೆ ಕಾಣುತ್ತಿದ್ದು ಈ ವ್ಯಕ್ತಿಯ ಗುರುತು ಪತ್ತೆಗೆ ಸ್ಥಳೀಯ ನಿವಾಸಿಗಳಿಂದ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.ರಾಮಮೂರ್ತಿನಗರ ಪೊಲೀಸ್‌‍ ಠಾಣೆ ವ್ಯಾಪ್ತಿಯ ಓಎಂಆರ್‌ ಲೇಔಟ್‌, ಶ್ರೀನಿಧಿ ಲೇಔಟ್‌ನ ರಸ್ತೆ ಬದಿ ಶಾಲಾ ವಾಹನ ನಿಲ್ಲಿಸಲಾಗಿತ್ತು.ರಾತ್ರಿ ಈ ವಾಹನದೊಳಗೆ ಹೋಗಿ ಅಪರಿಚಿತ ವ್ಯಕ್ತಿ ಮಲಗಿದ್ದಾನೆ. ಇದು ಯಾರ ಗಮನಕ್ಕೂ ಬಂದಿಲ್ಲ.

ರಾತ್ರಿ 10.15 ರ ಸುಮಾರಿನಲ್ಲಿ ಬಸ್‌‍ನಲ್ಲಿ ಬೆಂಕಿ ಕಾಣಿಸಿಕೊಂಡು ಬೆಂಕಿಯ ಕೆನ್ನಾಲಿಗೆ ಬಸ್‌‍ ಪೂರ್ತಿ ಆವರಿಸಿಕೊಂಡು ಉರಿಯುತ್ತಿತ್ತು.ಇದನ್ನು ಗಮನಿಸಿದ ದಾರಿಹೋಕರು ತಕ್ಷಣ ಅಗ್ನಿ ಶಾಮಕ ದಳ ಹಾಗೂ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸುದ್ದಿ ತಿಳಿದು ಸಿಬ್ಬಂದಿ ಅಗ್ನಿ ಶಾಮಕ ವಾಹನಗಳೊಂದಿಗೆ ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ.

ಪೊಲೀಸರು ಬಸ್‌‍ನ್ನು ಪರಿಶೀಲಿಸಿದಾಗ ಬಸ್‌‍ನೊಳಗೆ ಅಪರಿಚಿತ ವ್ಯಕ್ತಿ ಸಜೀವ ದಹನವಾಗಿರುವುದು ಕಂಡು ಬಂದಿದೆ.ಬಸ್‌‍ ಒಳಗೆ ಬೀಡಿ ತುಂಡುಗಳು ಬಿದ್ದಿರುವುದು ಕಂಡು ಬಂದಿದೆ. ಬಹುಶಃ ಈ ವ್ಯಕ್ತಿ ಬೀಡಿ ಸೇದಿ ಬಿಸಾಡಿ ನಿದ್ರೆಗೆ ಜಾರಿದಾಗ ಬೀಡಿ ಕಿಡಿಯಿಂದ ಬೆಂಕಿ ಬಸ್‌‍ಗೆ ತಾಗಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಖಾಸಗಿ ಶಾಲೆಯ ಈ ಬಸ್‌‍ ಅರುಣ್‌ ಎಂಬುವವರಿಗೆ ಸೇರಿದೆ. ಈ ಬಸ್‌‍ ಸುಮಾರು 3 ತಿಂಗಳಿನಿಂದ ಕೆಟ್ಟು ಈ ಜಾಗದಲ್ಲಿ ನಿಲ್ಲಿಸಲಾಗಿತ್ತು.ನಿನ್ನೆ ಸಂಜೆ ಸಹ ಅರುಣ್‌ ಅವರು ಈ ಜಾಗಕ್ಕೆ ಬಂದು ಬಸ್‌‍ ನೋಡಿಕೊಂಡು ಹೋಗಿದ್ದರು.

ಬಸ್‌‍ನ ಡೋರ್‌ ಸರಿಯಾಗಿ ಲಾಕ್‌ ಆಗುತ್ತಿರಲಿಲ್ಲ. ಹಾಗಾಗಿ ಅಪರಿಚಿತ ವ್ಯಕ್ತಿ ಹೋಗಿ ಮಲಗಿದ್ದಾಗ ಈ ಘಟನೆ ಸಂಭವಿಸಿದೆ ಎಂಬುವುದು ಮೇಲ್ನೋಟಕ್ಕೆ ಕಂಡುಬಂದಿದೆ.ಮೃತದೇಹವನ್ನು ಅಂಬೇಡ್ಕರ್‌ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬೆಂಕಿ ಅವಘಡಕ್ಕೆ ಕಾರಣವೇನೆಂಬ ಬಗ್ಗೆ ತನಿಖೆ ಕೈಗೊಂಡಿದ್ದಾರೆ.

ಬೀಡಿ ಕಿಡಿಯಿಂದ ಬೆಂಕಿ ಹೊತ್ತಿಕೊಂಡಿದೆಯೋ ಅಥವಾ ಬೇರೆ ಯಾರಾದರೂ ಬೆಂಕಿ ಹಚ್ಚಿ ವ್ಯಕ್ತಿಯನ್ನು ಕೊಲೆ ಮಾಡಿದ್ದಾರೆಯೇ ಎಂಬ ಬಗ್ಗೆಯೂ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದು ಘಟನಾ ಸ್ಥಳದ ಸುತ್ತಮುತ್ತಲಿನ ರಸ್ತೆಗಳಲ್ಲಿರುವ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿದ್ದಾರೆ.

RELATED ARTICLES

Latest News