Wednesday, August 13, 2025
Homeರಾಜ್ಯಬಾಲ್ಯ ವಿವಾಹ ತಡೆಗೆ ಅಕ್ಕ ಪಡೆ ಆರಂಭ : ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌

ಬಾಲ್ಯ ವಿವಾಹ ತಡೆಗೆ ಅಕ್ಕ ಪಡೆ ಆರಂಭ : ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌

Akka Pade to prevent child marriage: Minister Lakshmi Hebbalkar

ಬೆಂಗಳೂರು,ಆ.13- ಬಾಲ್ಯ ವಿವಾಹ ತಡೆಯಲು ಆ.15ರಿಂದ ಅಕ್ಕ ಪಡೆಯನ್ನು ಪ್ರಾರಂಭಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಆರ್‌.ಹೆಬ್ಬಾಳ್ಕರ್‌ ಇಂದು ವಿಧಾನಸಭೆಗೆ ತಿಳಿಸಿದರು.

ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್‌‍ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್‌ ಬಾಬು ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಆ.15ರಂದು ಮೈಸೂರು, ಬೆಳಗಾವಿ, ಮಂಗಳೂರಿನಲ್ಲಿ ಅಕ್ಕ ಪಡೆಯನ್ನು ಪ್ರಾರಂಭಿಸಲಾಗುವುದು. ಇದರಲ್ಲಿ ಮಹಿಳಾ ಪೊಲೀಸ್‌‍ ಸಿಬ್ಬಂದಿ, ಎನ್‌ಸಿಸಿ ಹಿರಿಯ ಕೇಡರ್‌ನವರು ಇರುತ್ತಾರೆ. ನಮ ಇಲಾಖೆಯಿಂದ ವಾಹನವನ್ನು ಕೊಡುತ್ತೇವೆ. ಕಾಲೇಜುಗಳಿಗೆ ಹೋಗಿ ಕಾಲೇಜು ಬಿಟ್ಟವರ ಮಾಹಿತಿ ಪಡೆಯುತ್ತಾರೆ ಎಂದು ತಿಳಿಸಿದರು.

ಬಾಲ್ಯವಿವಾಹಗಳನ್ನು ಕಡಿಮೆ ಮಾಡುವುದು ಇದರ ಉದ್ದೇಶ. ಪರಿಣಾಮಕಾರಿಯಾಗಿ ಬಾಲ್ಯ ವಿವಾಹ ತಡೆಯಲು ಹತ್ತು ಇಲಾಖೆಗಳನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗಿದೆ. ಇದೊಂದು ಸಾಮಾಜಿಕ ಪಿಡುಗಾಗಿದ್ದು, ಬೇರು ಮಟ್ಟದಿಂದ ಕಿತ್ತೊಗೆಯ್ಯಬೇಕು. ಇದಕ್ಕಾಗಿ ಬಾಲ್ಯ ವಿವಾಹ ತಡೆ ತಿದ್ದುಪಡಿ ವಿಧೇಯಕವನ್ನು ತರುತ್ತಿದ್ದೇವೆ ಎಂದು ಹೇಳಿದರು.

ರಾಜ್ಯದಲ್ಲಿ 2022-23ರಲ್ಲಿ 405, 2023-24ರಲ್ಲಿ 709, 2024-25ರಲ್ಲಿ 685 ಬಾಲ ಗರ್ಭಿಣಿ ಪ್ರಕರಣಗಳು ಸರ್ಕಾರದ ಗಮನಕ್ಕೆ ಬಂದಿದೆ ಎಂದು ತಿಳಿಸಿದರು. ಜಿಲ್ಲೆಗೊಂದು ಮಕ್ಕಳಾ ರಕ್ಷಣಾ ಸಮಿತಿ ಇರುತ್ತದೆ. ಇದರ ಮಾಹಿತಿ ಪ್ರಕಾರ ಈ ಪ್ರಮಾಣದ ಬಾಲ ಗರ್ಭಿಣಿ ಪ್ರಕರಣಗಳು ಕಂಡುಬಂದಿವೆ. ಶಾಸಕರು ರಾಜ್ಯದಲ್ಲಿ 26 ಸಾವಿರ ಬಾಲ ಗರ್ಭಿಣಿಯರಿದ್ದಾರೆ, ಇದು ತಪ್ಪು ಮಾಹಿತಿ. ಸಾಮಾಜಿಕ ಮಾಧ್ಯಮಕ್ಕೂ ಕಡಿವಾಣ ಹಾಕಬೇಕು. ಕೆಲವು ಸಮುದಾಯಗಳು ಬಾಲ್ಯ ವಿವಾಹ ಆಚರಣೆಯಲ್ಲಿದೆ. ಅದಕ್ಕೂ ಕಡಿವಾಣ ಹಾಕುತ್ತಿದ್ದೇವೆ ಎಂದು ಮಾಹಿತಿ ನೀಡಿದರು.

ಮಕ್ಕಳ ಸಹಾಯವಾಣಿ 1098, ವಾರದ 7 ದಿನ 24 ಗಂಟೆಯೂ ಮಕ್ಕಳ ಸುರಕ್ಷತೆಯಲ್ಲಿ ಕಾರ್ಯ ನಿರ್ವಹಿಸಲಿದೆ. ಸಂಕಷ್ಟದಲ್ಲಿರುವ ಮಕ್ಕಳು ಅಥವಾ ಸಂತ್ರಸ್ತರು ಯಾವುದೇ ಸಮಯದಲ್ಲಿ ಕರೆ ಮಾಡಿದರೂ ಮಕ್ಕಳನ್ನು ರಕ್ಷಿಸುತ್ತಾರೆ ಎಂದು ತಿಳಿಸಿದರು. ರಾಜ್ಯದಲ್ಲಿ 26 ಸಾವಿರ ಬಾಲ ಗರ್ಭಿಣಿಯರ ಮಾಹಿತಿ ಇದೆ. 4 ತಿಂಗಳಲ್ಲಿ 900ಕ್ಕೂ ಹೆಚ್ಚು ಬಾಲಕಿಯರ ಮೇಲೆ ಅತ್ಯಾಚಾರವಾಗಿದೆ. ಆರೋಗ್ಯ, ಪೊಲೀಸ್‌‍, ಶಿಕ್ಷಣ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಸಮನ್ವಯತೆಯಿಂದ ನಿಯಂತ್ರಿಸಬೇಕು. ಪ್ರೌಢಶಾಲಾ ಮಟ್ಟದಲ್ಲಿ ಲೈಂಗಿಕ ಶಿಕ್ಷಣವನ್ನು ನೀಡಬೇಕೆಂದು ಸಲಹೆ ಮಾಡಿದರು.

ಹಸ್ತಕ್ಷೇಪವಿಲ್ಲ :
ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ನೇಮಕ, ವರ್ಗಾವಣೆ/ಸ್ಥಾನಪಲ್ಲಟಕ್ಕೆ ಸಂಬಂಧಪಟ್ಟಂತೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿರುವ ಆಯ್ಕೆ ಸಮಿತಿ ನೇಮಕ ಮಾಡುತ್ತದೆ. ಇದರಲ್ಲಿ ಸರ್ಕಾರ ಅಥವಾ ಸಚಿವರ ಯಾವ ಹಸ್ತಕ್ಷೇಪ ಇಲ್ಲ ಎಂದು ಸಚಿವರು, ಶಾಸಕ ಕಿರಣ್‌ಕುಮಾರ್‌ ಕೊಡ್ಗಿ ಅವರ ಪ್ರಶ್ನೆಗೆ ಉತ್ತರಿಸಿದರು.

ಗುಡ್ಡಗಾಡು ಜಿಲ್ಲೆಗಳಲ್ಲಿ ವರ್ಗಾವಣೆಗೆ ಸಂಬಂಧಿಸಿದಂತೆ ನಿಯಮ ಸಡಿಲಿಕೆ ಮಾಡಿದ್ದೇವೆ. ಉಡುಪಿ ಜಿಲ್ಲೆಯಲ್ಲಿ 52 ಅಂಗನವಾಡಿ ಕಾರ್ಯಕರ್ತೆಯರನ್ನು ನೇಮಕ ಮಾಡಲಾಗಿದೆ. ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗುತ್ತಿದೆ. ವಿದ್ಯಾ ಗೋವಿಂದ ಪೂಜಾರಿ ಎಂಬುವರನ್ನು ಗೌರವಧನದ ಆಧಾರದ ಮೇಲೆ ನೇಮಕ ಮಾಡಲಾಗಿದೆ. ನೇಮಕಾತಿಯಾದ ಮರುದಿನವೇ ನಿಯೋಜನೆ ಮಾಡಬಹುದು ಎಂದರು.

ಮಧ್ಯಪ್ರವೇಶಿಸಿದ ಸಭಾಧ್ಯಕ್ಷ ಯು.ಟಿ.ಖಾದರ್‌ ಅವರು ಮಾರ್ಗಸೂಚಿ ಪ್ರಕಾರ ನೇಮಕಾತಿ ಆಗದಿದ್ದರೆ ಲಿಖಿತವಾಗಿ ಸಚಿವರ ಗಮನಕ್ಕೆ ತಂದರೆ ಸರಿಪಡಿಸಿ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದರು.

RELATED ARTICLES

Latest News